ಎನ್. ಚೊಕ್ಕಮ್ಮ
ಎನ್. ಚೊಕ್ಕಮ್ಮ
ವೀಣಾ ವಾದಕರಾಗಿ ಮತ್ತು ಗಾಯಕರಾಗಿ ಪ್ರಸಿದ್ಧರಾಗಿದ್ದವರು ವಿದುಷಿ ಎನ್. ಚೊಕ್ಕಮ್ಮ.
ಚೊಕ್ಕಮ್ಮನವರು 1922ರ ಸೆಪ್ಟೆಂಬರ್ 18ರಂದು ಜನಿಸಿದರು. ತಂದೆ ನರಸಿಂಹ ಅಯ್ಯಂಗಾರ್, ತಾಯಿ ರುಕ್ಕಮ್ಮ. ಏಳನೆಯ ವಯಸ್ಸಿನಲ್ಲಿ ಹಾಡಿಕೊಂಡು ಆಟವಾಡುತ್ತಿದ್ದ ಹುಡುಗಿಯ ಕಂಠಶ್ರೀಗೆ ಮಾರುಹೋಗಿ ವಿರೂಪಾಕ್ಷ ಶಾಸ್ತ್ರಿಗಳು ಶಿಷ್ಯೆಯಾಗಿ ಸ್ವೀಕರಿಸಿ ಸಂಗೀತಪಾಠ ಹೇಳಿಕೊಟ್ಟರು. ಹದಿನಾರನೆಯ ವಯಸ್ಸಿನಲ್ಲಿ ಹಾಡಿ, ವೀಣೆ ನುಡಿಸಿ ರಸಿಕರ ರಂಜಿಸಿದ ಖ್ಯಾತಿ ಇವರದು.
ಚೊಕ್ಕಮ್ಮನವರ ಕಾರ್ಯಕ್ರಮ 1938ರಲ್ಲಿ ಗೋಪಾಲ ಸ್ವಾಮಿಯವರು ಆರಂಭಿಸಿದ ಆಕಾಶವಾಣಿಯಲ್ಲಿ ಭಿತ್ತರಗೊಂಡಿತು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತಂಜಾವೂರು ಮುಂತಾದೆಡೆಗಳಲ್ಲಿ ಇವರ ಸಂಗೀತ ಕಚೇರಿಗಳು ನಡೆದವು. ಕನ್ಯಾಕುಮಾರಿಯಲ್ಲಿ ನಡೆದ ವೀಣಾವಾದನ ಕಚೇರಿಯಲ್ಲಿ ವಿದೇಶಿ ದಂಪತಿಗಳಿಂದ ಸನ್ಮಾನ ಸಂದಿತು. ಇವರ ವೀಣಾವಾದನದಿಂದ, ಹಾಡಿನ ವೈಖರಿಯಿಂದ ಬೆರಗಾದ ಸರ್.ಸಿ.ವಿ.ರಾಮನ್ ಅವರು ಪ್ರಶಂಸೆ ಮಾಡಿದ್ದರು.
ಚೊಕ್ಕಮ್ಮನವರು ಸಂಗೀತದ ಜೊತೆಗೆ ಸಮಾಜಸೇವೆಯಲ್ಲೂ ನಿರತರಾಗಿದ್ದರು. ಗಿಣಿ, ಪಾರಿವಾಳ, ನಾಯಿ, ಹಸು, ಬೆಕ್ಕು ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕುವ ಹವ್ಯಾಸ ಅವರಿಗಿತ್ತು. ಮಲ್ಲಾಡಿಹಳ್ಳಿ ಸ್ವಾಮಿಗಳಿಂದ ಸ್ವರಕಿನ್ನರಿ, ಅಖಿಲ ಭಾರತ ಸಾಧು ಸಮಾಜದಿಂದ ವೀಣಾವಾದನ ಚತುರೆ, ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ಗಾಯನ ಸಮಾಜದ ವರ್ಷದ ಕಲಾವಿದೆ, ಸಂಗೀತನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ, ಕರ್ನಾಟಕ ಗಾಯನ ಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಚೊಕ್ಕಮ್ಮನವರಿಗೆ ಸಂದಿದ್ದವು.
ಚೊಕ್ಕಮ್ಮನವರು 2007 ವರ್ಷದಲ್ಲಿ ಈ ಲೋಕವನ್ನಗಲಿದರು.
On the birth anniversary of great musician N. Chokkamma
ಕಾಮೆಂಟ್‌ಗಳು