ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಿತ್ರಾ

ಸುಮಿತ್ರಾ 


ಸುಮಿತ್ರಾ ಉತ್ತಮ ಕಲಾವಿದೆ.  ಅವರ ಅಭಿನಯವನ್ನು ಮಕ್ಕಳ ಸೈನ್ಯ, ಕರ್ಣ, ರಾಮಾಚಾರಿ ಮುಂತಾದ ಅನೇಕ ಕನ್ನಡ ಚಿತ್ರಗಳಲ್ಲಿ ಅಲ್ಲದೆ, ಕೆಲವು ತಮಿಳು ಚಿತ್ರಗಳಲ್ಲೂ ಕಂಡು ಇಷ್ಟಪಟ್ಟಿದ್ದೇನೆ.

ಸುಮಿತ್ರಾ 1953ರಲ್ಲಿ ತ್ರಿಚೂರಿನಲ್ಲಿ ಜನಿಸಿದರು.  ತಂದೆ ರಾಘವನ್ ನಾಯರ್. ತಾಯಿ ಜಾನಕಿ. ಸುಮಿತ್ರಾ ಬಾಲ್ಯದಲ್ಲಿ ಮುರುಗಪ್ಪನ್ ಅವರಲ್ಲಿ ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿದ್ದರು.

ಸುಮಿತ್ರಾ 1972ರಲ್ಲಿ ಮಲಯಾಳಂ ಚಿತ್ರ ‘ನಿರ್ತಸಾಲ’ ಮೂಲಕ ಚಿತ್ರರಂಗ ಪ್ರವೇಶಿಸಿದರು.  ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಲಯಾಳಂನ ನಿರ್ಮಾಲ್ಯಂ (1973). ಪ್ರಖ್ಯಾತ ಸಾಹಿತಿ ಎಂ. ಟಿ. ವಾಸುದೇವನ್ ನಾಯರ್ ಅವರು ತಮ್ಮ ಕಿರುಗಥೆಯನ್ನು ಆಧರಿಸಿ ನಿರ್ಮಿಸಿ ನಿರ್ದೇಶಿಸಿದ ಈ ಹೊಸ ಅಲೆಯ ಚಿತ್ರದಲ್ಲಿ ಸುಮಿತ್ರಾ ನೀಡಿದ ನೈಜ ಅಭಿನಯ ಚಿತ್ರಪಂಡಿತರ ಗಮನ ಸೆಳೆಯಿತು. ಈ ಚಿತ್ರ 1973ನೇ ಸಾಲಿನ ಅತ್ತ್ಯುತ್ತಮ ಚಿತ್ರವಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿತ್ತು.  ಸುಮಿತ್ರಾ ಅಭಿನಯದ ಮೊದಲ ತಮಿಳು ಚಿತ್ರ ‘ಅವಳುಂ ಪೆಣ್ ದಾನೆ’. ಈ ಚಿತ್ರದಲ್ಲಿ ಅವಿಸ್ಮರಣೀಯ ಅಭಿನಯ ನೀಡಿದ ಸುಮಿತ್ರಾ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದರು. ಶಿವಾಜಿ ಗಣೇಶನ್ ಅವರೊಂದಿಗೆ 'ಅಣ್ಣನ್ ಒರು ಕೋಯಿಲ್'  ಮತ್ತು ರಜನೀಕಾಂತ್ - ಶಿವಕುಮಾರ್ ಅವರೊಂದಿಗೆ 'ಭುವನ ಒರು ಕೇಳ್ವಿಕುರಿ'  ಚಿತ್ರಗಳಲ್ಲಿಯೂ ಅವರ ಅಭಿನಯ ಹೆಸರಾಯಿತು. ಹೀಗೆ ಅನೇಕ ಚಿತ್ರಗಳಲ್ಲಿ ಪ್ರಭಾವಶಾಲಿ ಪಾತ್ರಗಳನ್ನು  ನಿರ್ವಹಿಸಿದ ಸುಮಿತ್ರಾ ಕೆ.ಬಾಲಚಂದರ್ ನಿರ್ದೇಶನದಲ್ಲಿ ಕಮಲ್ ಹಾಸನ್ ಅವರಿಗೆ ನಾಯಕಿಯಾಗಿ 'ನಿಳಲ್ ನಿಜಮಾಗಿರದು' ಚಿತ್ರದಲ್ಲಿ ಅಭಿನಯಿಸಿ  ಹೆಸರಾದರು.  ಮುಂದೆ ಸಹಾ ಅನೇಕ ತಮಿಳು ಮತ್ತು ಮಲಯಾಳದ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದರು. 

ಸುಮಿತ್ರಾ ಅವರು ತಮ್ಮ ಪ್ರಸಿದ್ಧ ತಮಿಳು ಚಿತ್ರವಾದ 'ಅವಳುಂ ಪೆಣ್ ದಾನೆ’. ಅವತರಣಿಕೆಯಾದ 'ಮುಗಿಯದ ಕಥೆ' ಮೂಲಕ 1976ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಮಿತ್ರಾ ವಿಷ್ಣುವರ್ಧನ್ ಅವರೊಂದಿಗೆ ಮಕ್ಕಳ ಸೈನ್ಯ ಮತ್ತು ಸತ್ಯಂ ಶಿವಂ ಸುಂದರಂ ಚಿತ್ರಗಳಲ್ಲಿ ಉತ್ತಮ  ಅಭಿನಯ ನೀಡಿದರು. ಮುಂದೆ ಪೋಷಕ ಪಾತ್ರಗಳಿಗೆ ಬಂದ  ಸುಮಿತ್ರಾ ರಾಮಾಚಾರಿ, ಕರ್ಣ, ಒಂದಾಗಿ ಬಾಳು, ಗೋಪಿ ಕೃಷ್ಣ, ಶ್ರೀರಾಮಚಂದ್ರ, ಕುರುಬನ ರಾಣಿ, ಅಪ್ಪು, ಅಭಿ, ಮಿಲನ, ಜಾಕಿ, ಮೈನಾ ಮಂತಾದ ಅನೇಕ ಕನ್ನಡ ಚಿತ್ರಗಳಲ್ಲದೆ ಅನೇಕ ಇತರ ಭಾಷಾ ಚಿತ್ರಗಳಲ್ಲೂ  ನಟಿಸಿ ಹೆಸರಾಗಿದ್ದಾರೆ 

ಸುಮಿತ್ರಾ ಕನ್ನಡದ ಜನಪ್ರಿಯ ನಿರ್ದೇಶಕ ದಿವಂಗತ ಡಿ.ರಾಜೇಂದ್ರ ಬಾಬು ಅವರ ಪತ್ನಿ.  ಇವರ ಪುತ್ರಿಯರಾದ ಉಮಾಶಂಕರಿ ಮತ್ತು ನಕ್ಷತ್ರಾ ಕೂಡ ಅಭಿನಯದಲ್ಲಿ ಹೆಸರಾಗಿದ್ದಾರೆ.

ಸುಮಿತ್ರಾ  ಅವರಿಗೆ ತಮಿಳುನಾಡಿನ ಕಲೈಮಾಮಣಿ  ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿವೆ.

Actress Sumithra

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ