ಬೆಳ್ಳಾವೆ ನರಹರಿ ಶಾಸ್ತ್ರಿ
ಬೆಳ್ಳಾವೆ ನರಹರಿ ಶಾಸ್ತ್ರಿ
ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಂಗಭೂಮಿಯ ಮಹಾನ್ ನಾಟಕ ರಚನೆಗಾರರು ಮತ್ತು ಕನ್ನಡದ ಪ್ರಥಮ ಚಿತ್ರ ಸಾಹಿತಿಗಳು. ಅಂದಿನ ರಂಗಭೂಮಿ ಮತ್ತು ಚಿತ್ರರಂಗದ ಸಾಹಿತಿಗಳಲ್ಲಿ ಅವರು ಅಗ್ರಗಣ್ಯರಾಗಿದ್ದರು. ಕೆಲವೊಂದು ಚಲನಚಿತ್ರಗಳಲ್ಲಿ ಅಭಿನಯಕ್ಕೂ ಸೈ ಎಂದಿದ್ದವರು. ಅಷ್ಟೇ ಅಲ್ಲ, ಆದರ್ಶ ಅಧ್ಯಾಪಕ, ಕರ್ನಾಟಕ ಕವಿ ಕೇಸರಿ, ನಾಟಕ ರಚನಾ ಕುಶಲ, ಆಶುಕವಿ, ಆಸ್ಥಾನ ವಿದ್ವಾನ್, ಅಷ್ಟಾವದಾನಿ ಇವೆಲ್ಲವೂ ಆಗಿದ್ದ ಅಪ್ರತಿಮ ಪ್ರತಿಭಾವಂತರು. ಸಂಗೀತ, ಪಿಟೀಲು ವಾದನ, ಗಾಯನ, ಚಿತ್ರಕಲೆಯಲ್ಲೂ ಅವರಿಗೆ ಪರಿಶ್ರಮವಿತ್ತು.
ನರಹರಿ ಶಾಸ್ತ್ರಿ ಅವರು 1882ರ ಸೆಪ್ಟೆಂಬರ್ 21ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ನರಹರಿ ಶಾಸ್ತ್ರಿಯವರು ಕನ್ನಡ ಮತ್ತು ಸಂಸ್ಕೃತದಲ್ಲಿ ಹೆಚ್ಚಿನ ಪಾಂಡಿತ್ಯ ಪಡೆದಿದ್ದರು. ಶಾಸ್ತ್ರಿಗಳು ಶಿಕ್ಷಕರಿಗೆ ಉಪಯೋಗವಾಗುವ ‘ದಿ ಸ್ಕೂಲ್ ಆರ್ಗನೈಸೇಷನ್’, ‘ದಿ ಸ್ಕೂಲ್ ಡಿಸಿಪ್ಲಿನ್’ ಪುಸ್ತಕಗಳನ್ನು ರಚಿಸಿದ್ದರು. ಅವರ ‘ಶ್ರೀಕೃಷ್ಣ ಪಾರಿಜಾತ’ ನಾಟಕವು ಅಂದಿನ ಮದ್ರಾಸ್ ವಿಶ್ವವಿದ್ಯಾಲಯದ ಬಿ.ಎ ತರಗತಿಗಳ ಪಠ್ಯ ಪುಸ್ತಕವಾಗಿತ್ತು. ‘ರಾಜಭಕ್ತಿ ಕಾವ್ಯ’ ಕಲ್ಕತ್ತ ವಿಶ್ವವಿದ್ಯಾಲಯದ ಬಿ.ಎ ತರಗತಿಗಳ ಪಠ್ಯ ಪುಸ್ತಕವಾಗಿತ್ತು.
ಗುಬ್ಬಿ ಕಂಪನಿಯಲ್ಲಿ ನಾಟಕ ರಚಿಸಿ ತರಬೇತಿ ನೀಡುತ್ತಿದ್ದ ಶಾಸ್ತ್ರಿಗಳು ಯಾವುದೇ ವಸ್ತುವಿನ ಕುರಿತಾದರೂ ಅತ್ಯಲ್ಪ ಸಮಯದಲ್ಲೇ ಸೊಗಸಾದ ನಾಟಕ ರಚಿಸಬಲ್ಲವರೆಂದು ಪ್ರಸಿದ್ದರಾಗಿದ್ದರು. ಗುಬ್ಬಿ ವೀರಣ್ಣ ಮತ್ತು ಬೆಳ್ಳಾವೆಯವರು ಭೋಜರಾಜ ಮತ್ತು ಕಾಳಿದಾಸರಂತೆ ಜೋಡಿಯಾಗಿದ್ದರು. ಖ್ಯಾತ ರಂಗನಟ ಮಹಮ್ಮದ್ ಪೀರ್ ಅವರಿಗಾಗಿ ಒಂದೇ ರಾತ್ರಿಯಲ್ಲಿ ಭಕ್ತ ಮಾರ್ಕಂಡೇಯ ನಾಟಕ ರಚಿಸಿಕೊಟ್ಟಿದ್ದರು. ಇದರಿಂದಾಗಿ ಸತಿ ಸುಲೋಚನ ಚಿತ್ರ ನಿರ್ಮಾಣ ಸಂದರ್ಭದಲ್ಲಿ ಇವರಿಗೆ ಅವಕಾಶ ಒದಗಿ ಬಂತು. ಕೃಷ್ಣ ರುಕ್ಮಿಣಿ ಸತ್ಯಭಾಮ, ಮಹಾಸತಿ ಅನಸೂಯ, ಆಂಗ್ಲ ನಾಟಕ ಕಥಾವಳಿ ಅವರ ಪ್ರಸಿದ್ಧ ನಾಟಕ ರಚನೆಗಳು. ಬೆಳ್ಳಾವೆ ಪ್ರಕಾಶನವನ್ನು ಸ್ಥಾಪಿಸಿ ಪುಸ್ತಕ ಪ್ರಕಟಣೆಗಳ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರು. ಸುಮಾರು 51 ನಾಟಕಗಳನ್ನು ರಚಿಸಿದ್ದರು. ಅವರ ನಾಟಕಗಳಾದ ಸತ್ಯ ಹರಿಶ್ಚಂದ್ರ, ಭಕ್ತ ಪ್ರಹ್ಲಾದ, ಶನಿ ಪ್ರಭಾವ, ಮಹಾ ಸತಿ ಅನಸೂಯ, ಮಹಾತ್ಮ ಬಸವೇಶ್ವರ ನಾಟಕಗಳು ಇಂದೂ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.
1934ರಲ್ಲಿ ಬಿಡುಗಡೆ ಕಂಡ 'ಸತಿ ಸುಲೋಚನ' ಚಿತ್ರದ ಚಿತ್ರಕಥೆ, ಸಂಭಾಷಣೆ, ಮತ್ತು ಚಿತ್ರಗೀತೆಗಳು ಹೀಗೆ ಎಲ್ಲಾ ಸಾಹಿತ್ಯಿಕ ಅಂಗಗಳನ್ನೂ ನರಸಿಂಹ ಶಾಸ್ತ್ರಿಯವರು ನಿರ್ವಹಿಸಿದರು. ನಾಟಕದ ಚೌಕಟ್ಟಿಗೆ ಅನುಗುಣವಾಗಿಯೇ ಶಾಸ್ತ್ರಿಗಳು ಈ ಚಿತ್ರಕ್ಕೆ ರಾಮಾಯಣದ ಇಂದ್ರಜಿತು - ಸುಲೋಚನೆಯರ ಕತೆಯನ್ನು ಆಯ್ದುಕೊಂಡು ಚಿತ್ರಕತೆ ರಚಿಸಿದರು ಮತ್ತು 15ಹಾಡುಗಳನ್ನು ರಚಿಸಿದರು. ಅವುಗಳ ಪೈಕಿ "ಭಲೆ ಭಲೆ ಪಾರ್ವತಿ ಬಲು ಚತುರೆ ಭಲೆ ಭಲೆ" ಎಂಬ ಹಾಡು ಅತ್ಯಂತ ಜನಪ್ರಿಯವಾಗಿತ್ತು.
1930ರ ದಶಕದಲ್ಲಿ ಬಂದಿದ್ದ ಆ ಚಿತ್ರದ ಕಾಲದಲ್ಲಿ ಹಿನ್ನೆಲೆ ಗಾಯನ ಪದ್ದತಿ ಇರಲಿಲ್ಲ. ನಟನಟಿಯರೇ ಹಾಡಿಕೊಂಡು ಅಭಿನಯಿಸಬೇಕಿತ್ತು. ಶಾಸ್ತ್ರಿಗಳು ಈ ಅಂಶವನ್ನು ಗಮನಿಸಿ ಗೀತೆಗಳನ್ನು ರಚಿಸಿದರು. ಈ ಚಿತ್ರದಲ್ಲಿ ರಾಕ್ಷಸ ಸೈನ್ಯ ಮತ್ತು ಕಪಿ ಸೈನ್ಯದ ನಡುವಿನ ಕಾಳಗವನ್ನು, ಸುಲೋಚನೆಯ ಬೊಗಸೆಯಲ್ಲಿ ಇಂದ್ರಜಿತುವಿನ ರುಂಡ ಬೀಳುವಂತೆ ಮಾಡುವ ಚಾಕಚಕ್ಯತೆಯ ದೃಶ್ಯಾವಳಿಗಳನ್ನು ಶಾಸ್ತ್ರಿಗಳು ರೂಪಿಸಿದ್ದರು. ಈ ಚಿತ್ರದ ಯಶಸ್ಸಿನ ನಂತರ ಅವರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಲಭಿಸಿದರೂ, ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದರು.
ಕನ್ನಡದ ಮೂರನೆಯ ವಾಕ್ಚಿತ್ರ ಸದಾರಮೆಗೆ ಕೂಡ ಸಾಹಿತ್ಯ, ಶಾಸ್ತ್ರಿ ಅವರದ್ದೇ. ಈ ಚಿತ್ರದ ಭಂಗಿ ಆನಂದವೇನೆಂಬ ಲೋಕದಿ ಎನ್ನುವ ಗೀತೆ ಪ್ರಸಿದ್ಧವಾಗಿತ್ತು.
1937ರಲ್ಲಿ ದಾಸಶ್ರೇಷ್ಠರಾದ ಪುರಂದರದಾಸರ ಕತೆಯನ್ನು ಆಧರಿಸಿದ ಚಿತ್ರವನ್ನು ದೇವಿಫಿಲಂಸ್ ನಿರ್ಮಿಸಿತು. ಅದಕ್ಕೆ ಶಾಸ್ತ್ರಿಗಳು ಸಾಹಿತ್ಯ ನೀಡಿದರು. ನಂತರ 3 ವರ್ಷ ಯಾವುದೇ ಕನ್ನಡ ಚಿತ್ರ ಬಿಡುಗಡೆಯಾಗಲಿಲ್ಲ. ಹಾಗಾಗಿ ಶಾಸ್ತ್ರಿಗಳು ಕೆಲಕಾಲ ಚಿತ್ರರಂಗದಿಂದ ದೂರವಿರುವಂತಾಯಿತು.
1942ರಲ್ಲಿ ತೆರೆಕಂಡ ಕಲೈವಾಣಿ ಫಿಲಂಸ್ ಸಂಸ್ಥೆಯ 'ಪ್ರಹ್ಲಾದ' ಚಿತ್ರಕ್ಕೆ ಶಾಸ್ತ್ರಿಗಳು ಸಾಹಿತ್ಯ ನೀಡಿದರು. ಅದು ಯಶಸ್ಸು ಕಾಣಲಿಲ್ಲ. ಇದರಿಂದಾಗಿ ಈ ಚಿತ್ರದ ನಿರ್ಮಾಪಕರು ಶಾಸ್ತ್ರಿಗಳ ಸಾಹಿತ್ಯ ಬಳಸಿಕೊಂಡು ನಿರ್ಮಿಸುತ್ತಿದ್ದ 'ಭಕ್ತ ಕನಕದಾಸ' ಚಿತ್ರ ಅರ್ಧಕ್ಕೇ ನಿಂತು ಹೋಯಿತು.
1943ರಲ್ಲಿ ಕಲೈವಾಣಿ ಸಂಸ್ಥೆ 'ಕೃಷ್ಣ ಸುಧಾಮ' ಚಿತ್ರ ನಿರ್ಮಿಸಿತು. ಈ ಚಿತ್ರಕ್ಕೆ ಶಾಸ್ತ್ರಿಗಳು ಸಾಹಿತ್ಯ ನೀಡಿದ್ದಲ್ಲದೇ ಸುಧಾಮನ ಪಾತ್ರದಲ್ಲೂ ಅಭಿನಯಿಸಿದರು. ನಿರ್ದೇಶಕ ಕೆ. ಸುಬ್ರಹ್ಮಣ್ಯಂ ತಮಿಳಿನ ಕುಚೇಲ ಚಿತ್ರದ ಕೆಲವು ದೃಶ್ಯಗಳನ್ನೂ ಈ ಚಿತ್ರದಲ್ಲಿ ಸೇರಿಸಿದ್ದರು.
ನರಹರಿ ಶಾಸ್ತ್ರಿಗಳು ಗುಬ್ಬಿ ಕಂಪನಿಗಾಗಿ 1945ರಲ್ಲಿ ಹೇಮರೆಡ್ಡಿ ಮಲ್ಲಮ್ಮ ಚಿತ್ರಕ್ಕೆ ಸಾಹಿತ್ಯ ನೀಡಿದರು. ಚಿತ್ತೂರು ವಿ.ನಾಗಯ್ಯ ಸಂಗೀತ ನಿರ್ದೇಶನದ ಗೀತೆಗಳು ಬಹಳ ಜನಪ್ರಿಯವಾದವು. ಅದರಲ್ಲೂ "ಆಸೆಯೂ ನಿರಾಸೆಯಾದುದೇ ಈಶ" ಬಹಳ ಜನಪ್ರಿಯತೆ ಗಳಿಸಿತು. ಈ ಚಿತ್ರವು ಬೆಳ್ಳಾವೆಯವರ ಕೊನೆಯ ಚಿತ್ರ.
ನರಹರಿಶಾಸ್ತ್ರಿಗಳು ತಮ್ಮ 79ನೇ ವಯಸ್ಸಿನಲ್ಲಿ 1961ರ ಜೂನ್ 21ರಂದು ನಿಧನರಾದರು.
first lyricist of our film industry and great scholar Bellave Narahari Shastri
ಕಾಮೆಂಟ್‌ಗಳು