ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಾಲ ವಾಜಪೇಯಿ


 ಗೋಪಾಲ ವಾಜಪೇಯಿ


ಹೇಳೀರಿ, ನಿಮ್ಮನ್ನ ನಾ ಹ್ಯಾಂಗ ಮರೆಯಲೀ... ಹರಸಿರಿ 🙏 ಓ ಗೋಪಾಲ ವಾಜಪೇಯಿ ಸಾರ್, ನಿಮ್ಮ ಆತ್ಮೀಯ ಕರೆಗಳು, ಪ್ರೀತಿ, ಮಹಾನ್ ಪ್ರತಿಭೆ, ಸಾಧನೆ ಎಲ್ಲವೂ ಸವಿ ನೆನಪೇ, ನೀವು 2016 ವರ್ಷ ಈ ದಿನ ನಮ್ಮನ್ನಗಲಿದ್ದು ಬಿಟ್ಟು.
ಆ  ಪ್ರೀತಿ,  ವಿಶ್ವಾಸ,  ಆಳವಾದ  ಪರಿಜ್ಞಾನ  ಇವನ್ನೆಲ್ಲಾ  ಇನ್ನೆಲ್ಲಿ ತಾನೇ  ಹುಡುಕೋದು?

ನನಗೆ ಗೋಪಾಲ ವಾಜಪೇಯಿ ಅಂದರೆ ಅಚ್ಚುಮೆಚ್ಚು.  ಅವರ ‘ಈ ಹಸಿರ ಸಿರಿಯಲಿ ಮನಸು ಮೆರೆಯಲಿ ನವಿಲೇ ನವಿಲೇ, ನಿನ್ನಂತೆಯೇ ನಲಿವೆ, ನಿನ್ಹಾಗೆಯೇ ಕುಣಿವೆ ನವಿಲೇ, ನವಿಲೇ’ – ‘ನಾಗಮಂಡಲ’ ಚಿತ್ರದ ಈ ಗೀತೆಯನ್ನು ಕೇಳಿದಾಗಲೆಲ್ಲಾ ನನ್ನ ದೇಹಕ್ಕೆ ಕುಣಿದು ಅಭ್ಯಾಸವಿಲ್ಲದಿದ್ದರೂ ನನ್ನ ಮನ ನನ್ನ ದೇಹದಿಂದ ಬೇರ್ಪಟ್ಟಂತೆ ತನಗೆ ತಾನೇ ಕುಣಿಯತೊಡಗುತ್ತದೆ.  

ಕಳೆದ ದಶಕದಲ್ಲಿ ವಾಜಪೇಯಿಯವರು ಫೇಸ್ಬುಕ್ಕಿನ ಮೂಲಕ ನನ್ನ   ಆತ್ಮೀಯ ಗೆಳೆಯರಾಗಿಬಿಟ್ಟಿದ್ದರು.   ಅವರ ಹಿರಿತನ, ಸಾಧನೆ ವರ್ಚಸ್ಸು ಇವು ಯಾವುವೂ ನನ್ನಂತಹ ಸಾಧಾರಣನ ಜೊತೆಗೆ ಅವರ ಆತ್ಮೀಯತೆಗೆ ಅಡ್ಡ ಬಂದಿರಲಿಲ್ಲ.  ಅವರ ಸರಳತನ ಕೂಡಾ ನವಿಲು ಸ್ವಯಂ ಸ್ವಾಭಾವಿಕವಾಗಿ  ರೆಕ್ಕೆಬಿಚ್ಚಿ ನೃತ್ಯರೂಪಕ ಮೂಡಿಸುವಂತಹ  ಸಹಜತೆಯಂತಿತ್ತು.    

ಗೋಪಾಲ ವಾಜಪೇಯಿಯವರು 1951ರ ಜೂನ್ 1ರಂದು ಜನಿಸಿದರು.  ಪತ್ರಿಕಾ ಸಂಪಾದಕರಾಗಿ,  ಕವಿಯಾಗಿ, ನಾಟಕ ರಚನಕಾರರಾಗಿ, ದೂರದರ್ಶನ ಕಾರ್ಯಕ್ರಮ ಸಂಯೋಜಕರಾಗಿ, ಚಿತ್ರ ಸಂಭಾಷಣಕಾರರಾಗಿ, ಗೀತ ರಚನೆಕಾರರಾಗಿ, ಅಂಕಣಕಾರರಾಗಿ,  ರಂಗನಟರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ, ಆಕಾಶವಾಣಿ, ಕಿರುತೆರೆ, ಜಾಹಿರಾತು ಕ್ಷೇತ್ರ, ಸಿನಿಮಾ ಹೀಗೆ ಎಲ್ಲೆಡೆ ತಮ್ಮ ಮಹತ್ವದ ಕಾಯಕ ನಡೆಸಿದ ಗೋಪಾಲ ವಾಜಪೇಯಿ ಅವರದು ಬಹುಮುಖೀ ವ್ಯಕ್ತಿತ್ವದ ಅಗಾಧ ಪ್ರತಿಭೆ.

ಗೋಪಾಲ ವಾಜಪೇಯಿ ಅವರ ಹುಟ್ಟೂರು ಪಂಪನ ಪುಲಿಗೆರೆ ಎಂದೆನಿಸಿದ ಲಕ್ಷ್ಮೇಶ್ವರ.  ನಾಲ್ಕರ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು, ಕಂಡವರ ಕೂಸಾಗಿ ಹತ್ತು ಊರುಗಳಲ್ಲಿ ಬೆಳೆದವರು ಅವರು.  ಚಿಕ್ಕಂದಿನಿಂದಲೇ ವಾಜಪೇಯಿಯವರಿಗೆ ಕಥೆ-ಕವನ-ಲೇಖನಗಳನ್ನು ಬರೆಯುವ ಹವ್ಯಾಸ ಕೂಡಿಬಂದಿತ್ತು.  ಇಪ್ಪತ್ತರ ವಯಸ್ಸಿನಲ್ಲಿ ಬದುಕಿನ ಅನಿವಾರ್ಯತೆಗಾಗಿ ಓದಿಗೆ ಮುಕ್ತಾಯ ಹೇಳಿ ದುಡಿತಕ್ಕೆ ಬಂದ ವಾಜಪೇಯಿಯವರ ಮನ ಸೆಳೆದದ್ದು ಪತ್ರಿಕೋದ್ಯಮ.  ಪ್ರಾರಂಭದಲ್ಲಿ ಗದಗಿನ ‘ವಾಸವಿ’ ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು.  ನಂತರ 1971ರಲ್ಲಿ ಕೆ. ಎಚ್. ಪಾಟೀಲರ ‘ವಿಶಾಲ ಕರ್ನಾಟಕ’  ದೈನಿಕ ಸೇರಿಕೊಂಡರು.  ಮರುವರ್ಷದಲ್ಲೇ ‘ಸಂಯುಕ್ತ ಕರ್ನಾಟಕ’ ಬಳಗದ ‘ಕರ್ಮವೀರ’ ವಾರಪತ್ರಿಕೆಯ ಉಪಸಂಪಾದಕರಾಗಿ ನೇಮಕಗೊಂಡರು.  ಪತ್ರಿಕಾರಂಗದ ದಿಗ್ಗಜರುಗಳಾದ ಪಾ.ವೆಂ. ಆಚಾರ್ಯ, ಖಾದ್ರಿ ಶಾಮಣ್ಣ, ಸುರೇಂದ್ರ ದಾನಿ ಮುಂತಾದವರ ನಿಕಟ ಸಂಪರ್ಕ ಮತ್ತು ಮಾರ್ಗದರ್ಶನ ಗೋಪಾಲ ವಾಜಪೇಯಿ ಅವರಿಗೆ ಲಭಿಸಿತು.  

‘ಕರ್ಮವೀರ’ ಪತ್ರಿಕೆಯಲ್ಲಿ ವಾಜಪೇಯಿಯವರು ಬರೆಯುತ್ತಿದ್ದ ವ್ಯಕ್ತಿಚಿತ್ರಗಳು ಜನಪ್ರಿಯಗೊಂಡವು.  1978ರ ವರ್ಷದಲ್ಲಿ ವಾಜಪೇಯಿ ಅವರು ಕನ್ನಡದ ‘ರೀಡರ್ ಡೈಜೆಸ್ಟ್’ ಎಂದು ಪ್ರಖ್ಯಾತವಾದ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕೀಯಕ್ಕೆ ವರ್ಗಾವಣೆಗೊಂಡರು.  “ಮೊಹರೆ ಮತ್ತು ಪಾವೆಂ ಅವರು ಬೆಳೆಸಿದ ಆ ಧೀಮಂತ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವುದೇ ಒಂದು ಅನನ್ಯ ಅನುಭವ” ಎನ್ನುತ್ತಿದ್ದರು ವಾಜಪೇಯಿ.

1996ರಲ್ಲಿ ಮತ್ತೆ ‘ಕರ್ಮವೀರ’ ಪತ್ರಿಕೆಯ ಸಹಸಂಪಾದಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡ ವಾಜಪೇಯಿ ಅವರು  ಆ ಪತ್ರಿಕೆಗೆ ಹಲವಾರು ಆಕರ್ಷಣೆಗಳನ್ನು ಮೂಡಿಸುವಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದರು.  ನಂತರ ‘ಸಂಯುಕ್ತ ಕರ್ನಾಟಕ’ ದೈನಿಕದ ಗ್ರಾಮಾಂತರ ಸುದ್ಧಿ ವಿಭಾಗವನ್ನೂ, ‘ಸಾಪ್ತಾಹಿಕ ಪುರವಣಿ’ ವಿಭಾಗವನ್ನೂ ಕೆಲವು ಕಾಲ ವಾಜಪೇಯಿ ನಿರ್ವಹಿಸಿದರು.  ಪತ್ರಿಕೋದ್ಯಮದಲ್ಲಿನ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ವಾಜಪೇಯಿ ‘ಗೋವಾ’, ‘ವೃಷಭೇಂದ್ರಯ್ಯ’ ಮುಂತಾದ ಕಾವ್ಯನಾಮಗಳಲ್ಲಿ, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಲೇಖನಗಳ ಗಾತ್ರ ಸಾವಿರಾರು ಪುಟಗಳ ವ್ಯಾಪ್ತಿಯನ್ನು ದಾಟಿದ್ದು.

1999ರ ವರ್ಷದಲ್ಲಿ ಪತ್ರಿಕಾ ಕ್ಷೇತ್ರದಿಂದ ಸ್ವಯಂನಿವೃತ್ತಿ ಪಡೆದ ವಾಜಪೇಯಿಯವರು 2006ರ ವರ್ಷದವರೆಗೆ  ಕಿರುತೆರೆಯ ರಂಗದಲ್ಲಿ  ‘ಈ ಟಿ ವಿ ಕನ್ನಡ ವಾಹಿನಿ’ಯ ಕಥಾವಿಭಾಗದ ಸಂಯೋಜಕರಾಗಿ ಕಾರ್ಯನಿರ್ವಹಿಸಿ ನಂತರದಲ್ಲಿ  ಪೂರ್ಣ ನಿವೃತ್ತಿ ಪಡೆದರು.

ಗೋಪಾಲ ವಾಜಪೇಯಿ ಅವರದು ವೈವಿಧ್ಯಪೂರ್ಣ ಪ್ರತಿಭೆ.  ಪತ್ರಿಕಾ ಕ್ಷೇತ್ರವಲ್ಲದೆ ಆಕಾಶವಾಣಿ, ರಂಗಭೂಮಿ, ಚಲನಚಿತ್ರ, ಕಿರುತೆರೆ ಕ್ಷೇತ್ರಗಳಲ್ಲೂ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದರು.  ಆಕಾಶವಾಣಿಯ ನಾಟಕ ವಿಭಾಗದ ‘ಎ’ ಗ್ರೇಡ್ ಕಲಾವಿದರಾಗಿ ಎಪ್ಪತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಮುಖ್ಯ ಪಾತ್ರ ವಹಿಸಿದ ಗೋಪಾಲ ವಾಜಪೇಯಿಯವರು ಪ್ರಖ್ಯಾತ ಬಾನುಲಿ ನಾಟಕ ರಚನೆಕಾರರೂ ಆಗಿದ್ದರು.  

ಗೋಪಾಲ ವಾಜಪೇಯಿ ಅವರ ‘ದೊಡ್ಡಪ್ಪ’ ಎಂಬ ಜಾನಪದ ಶೈಲಿಯ ನಾಟಕ ರಾಜ್ಯದ ಪ್ರತಿಷ್ಠಿತ ಹವ್ಯಾಸಿ ತಂಡಗಳಿಂದ 500ಕ್ಕೂ ಹೆಚ್ಚು ಪ್ರಯೋಗಳನ್ನು ಕಂಡ ಜನಪ್ರಿಯ ನಾಟಕವೆನಿಸಿದೆ.  ‘ಸಂತ್ಯಾಗ ನಿಂತಾನ ಕಬೀರ’, ‘ನಂದಭೂಪತಿ’, ‘ಧರ್ಮಪುರಿಯ ಶ್ವೇತವೃತ್ತ’ ಮುಂತಾದ ಅವರ ಇತರ ಭಾಷಾ ಪ್ರಸಿದ್ಧ ರೂಪಾಂತರ ನಾಟಕಗಳೂ ‘ರಂಗಾಯಣ’, 'ಶಿವಸಂಚಾರ’ ಮುಂತಾದ ತಂಡಗಳಿಂದ ಭಾರತಾದ್ಯಂತ ನೂರಾರು ಬಾರಿ ಪ್ರಯೋಗಿಸಲ್ಪಟ್ಟಿವೆ.

ಚಲನಚಿತ್ರರಂಗದಲ್ಲಿ ಸಂಭಾಷಣಕಾರರಾಗಿ, ಗೀತರಚನಕಾರರಾಗಿ ಗೋಪಾಲ ವಾಜಪೇಯಿ ಮಹತ್ವಪೂರ್ಣ ಕೆಲಸ ಮಾಡಿದ್ದಾರೆ.  ಸುಂದರ ಕೃಷ್ಣ ಅರಸರ ‘ಸಂಗ್ಯಾ ಬಾಳ್ಯಾ’, ನಾಗಾಭರಣರ ‘ಸಂತ ಶಿಶುನಾಳ ಶರೀಫ’, ‘ನಾಗಮಂಡಲ’, ‘ಸಿಂಗಾರೆವ್ವ’   ಹಾಗೂ ಗಿರೀಶ್ ಕಾಸರವಳ್ಳಿಯವರ ‘ತಾಯಿ ಸಾಹೇಬ’ ಚಿತ್ರಗಳಿಗೆ ಸಂಭಾಷಣೆ ಬರೆದವರು ಗೋಪಾಲ ವಾಜಪೇಯಿ.  ಜೊತೆಗೆ ‘ಸಂಗ್ಯಾ ಬಾಳ್ಯಾ’, ‘ನಾಗಮಂಡಲ’, ‘ಸಿಂಗಾರೆವ್ವ',  ‘ಭೂಮಿಗೀತ’ ಮತ್ತು    ‘ಸಂತ್ಯಾಗೆ  ನಿಂತಾನ  ಕಬೀರ’ ಮುಂತಾದ  ಚಿತ್ರಗಳಿಗೆ ವಾಜಪೇಯಿ ಗೀತರಚನೆಯನ್ನು ಮಾಡಿದ್ದರು.   ಈ ಚಿತ್ರಗಳಲ್ಲಿನ ಗೀತೆಗಳು ಅಪಾರ ಪ್ರಸಿದ್ಧಿ ಪಡೆದಿವೆ.

ಗೋಪಾಲ ವಾಜಪೇಯಿ ಅವರು ರಚಿಸಿದ ಚಿತ್ರಗೀತೆಗಳು ಮಾತ್ರವಲ್ಲದೆ, ಸಿ ಅಶ್ವಥ್ ಅವರ ರಾಗಸಂಯೋಜನೆಯಲ್ಲಿ  ‘ನಾಗಮಂಡಲ’ ರಂಗ ಗೀತೆಗಳು, ‘ಜೋಡಿ ಜೀವ’ ಜಾನಪದ ಶೈಲಿಯ ಕಥನ ಗೀತೆಗಳು, ‘ಕ್ಷೀರ ಸಂಪದ’ ಎಂಬ ಕೆ ಎಂ ಎಫ್ ಅವರಿಗಾಗಿ ರಚಿಸಿದ ಗೀತೆಗಳು; ಸಿ ಬಸವಲಿಂಗಯ್ಯ ಅವರ ‘ಸಂತ್ಯಾಗ ನಿಂತಾನ ಕಬೀರ’ ರಂಗ ಗೀತೆಗಳು; ಬಸವಲಿಂಗಯ್ಯ ಹಿರೇಮಠರ ಧ್ವನಿಯಲ್ಲಿ ‘ನಂದಭೂಪತಿ’, ‘ಧರ್ಮಪುರಿಯ ಶ್ವೇತವೃತ್ತ’ ಮುಂತಾದ ನಾಟಕಗಳ ಗೀತೆಗಳು  ಶ್ರವ್ಯ ಮಾಧ್ಯಮಗಳಲ್ಲಿ ಹೊರಬಂದಿವೆ.

ಗೋಪಾಲ ವಾಜಪೇಯಿ ಅವರ ‘ದೊಡ್ಡಪ್ಪ’ ನಾಟಕ ಅಕ್ಷರ ಪ್ರಕಾಶನದಿಂದ, ಯಂಡಮೂರಿ ವೀರೇಂದ್ರನಾಥರ ಅನುವಾದವಾದ ‘ಯಶಸ್ಸಿನತ್ತ ಪಯಣ’ ಸಾಹಿತ್ಯ ಭಂಡಾರದಿಂದ, ‘ಆಗಮನ’ ವಿವೇಕ  ಪ್ರಕಾಶನದಿಂದ  ಮತ್ತು ‘ಸಂತ್ಯಾಗ ನಿಂತಾನ ಕಬೀರ’ ಕೃತಿ ‘ಯಾಜಿ’  ಪ್ರಕಾಶನದಿಂದ ಪ್ರಕಟಗೊಂಡಿವೆ.  ದೊಡ್ದಪ್ಪ ನಾಟಕದ ಪುನಃಮುದ್ರಣ, ಧರ್ಮಪುರಿಯ ಶ್ವೇತವೃತ್ತ (ಚಾಕ್ ಸರ್ಕಲ್ ರೂಪಾಂತರ)  ಮತ್ತು  ನಂದ ಭೂಪತಿ (ಶೇಕ್ಸ್ ಪಿಯರನ ಕಿಂಗ್ ಲಿಯರ್ ರೂಪಾಂತರ) ಗಳೂ ಇತ್ತೀಚಿನ ವರ್ಷದಲ್ಲಿ ಹೊರಬಂದಿವೆ.   ‘ಅವಧಿ’ಯಲ್ಲಿ ಅವರ ಅಂಕಣಗಳು ನಾಡಿನ ಜನರ ಮನಗಳನ್ನು  ತಣಿಸಿವೆ.  ಈ  ಅಂಕಣಗಳಲ್ಲಿನ ಆಯ್ದ ಬರಹಗಳು  ‘ರಂಗದ ಒಳಹೊರಗೆ’  ಎಂಬ  ಕೃತಿಯಾಗಿ ಮೂಡಿಬಂದು  ಅಪಾರ  ಜನಪ್ರಿಯತೆ ಗಳಿಸಿದೆ.  ಸಂಯುಕ್ತ ಕರ್ನಾಟಕದ  ರವಿವಾರದ  ಸಾಹಿತ್ಯ ಸೌರಭದಲ್ಲಿ  ವಾಜಪೇಯಿ ಅವರ  ‘ನೆನಪಿನ ಬುತ್ತಿ’  ಅಂಕಣ ಅವರ  ಅಭಿಮಾನಿಗಳಿಗೆ  ಹೃದಯಾಪ್ತ ರಸದೌತಣವನ್ನು  ನೀಡಿವೆ.   ಫೇಸ್ಬುಕ್ಕಿನಲ್ಲಿ ಅವರ ಪ್ರಕಟಣೆಗಳಂತೂ ಫೇಸ್ಬುಕ್ಕಿನಂತಹ ನೆಟ್ವರ್ಕ್ ಮಾಧ್ಯಮಗಳ ಮೌಲ್ಯಗಳನ್ನು ಹೆಚ್ಚಿಸುತ್ತಿದ್ದಂತಹವು.  ಇಷ್ಟೊಂದು ಸಾಧಿಸಿದ್ದರೂ ಎಲ್ಲರೊಡನೆ ಒಂದಾಗಿ ತಮ್ಮನ್ನು ಸಾಮಾನ್ಯೀಕರಿಸಿಕೊಂಡು ಆತ್ಮೀಯವಾಗಿ ಅವರು  ಬೆರೆಯುತ್ತಿದ್ದ  ರೀತಿಯಂತೂ ಅತ್ಯಂತ ಆಪ್ತತೆ ಹುಟ್ಟಿಸುವಂತದಾಗಿತ್ತು.

1987ರಿಂದ  1990ರ ಅವಧಿಯವರೆಗೆ ಗೋಪಾಲ ವಾಜಪೇಯಿ ಅವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಧಾರವಾಡ ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ರಂಗಚಟುವಟಿಕೆಗಳಿಗೆ ಅಪಾರವಾಗಿ ದುಡಿದಿದ್ದರು.  ರಂಗದ ಮೇಲಷ್ಟೇ ಅಲ್ಲದೆ  ಆಯ್ದ  ಸದಭಿರುಚಿಯ  ಚಲನ ಚಿತ್ರಗಳಲ್ಲಿ  ಹಾಗೂ   ಹಲವಾರು ಜಾಹೀರಾತು ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.

ಗೋಪಾಲ ವಾಜಪೇಯಿ ಅವರ ಅನುಭವ, ಗುಣಮಟ್ಟದ ಕೆಲಸ, ವ್ಯಾಪ್ತಿಗಳನ್ನು ಕಂಡಾಗ, ನಮ್ಮಲ್ಲಿ ಉತ್ತಮ ಸಂಭಾಷಣೆಕಾರರಿಲ್ಲ, ಹಾಡು ಬರೆಯುವವರಿಲ್ಲ ಎಂದು ಗೊಣಗುತ್ತಾ ಕೆಳದರ್ಜೆಯ ಗುಣಮಟ್ಟವನ್ನು ಪ್ರದರ್ಶಿಸುತ್ತಿರುವ ನಮ್ಮ ಚಿತ್ರರಂಗದಂತಹ ಕ್ಷೇತ್ರಗಳು ಗೋಪಾಲ ವಾಜಪೇಯಿ ಅಂತಹ ಮಹಾನ್ ಪ್ರತಿಭೆಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲವಲ್ಲ  ಎಂದೆನಿಸುತ್ತದೆ. ಈಗ  ಈ  ಮಹನೀಯರೇ ಇಲ್ಲ.  

ಗೋಪಾಲ ವಾಜಪೇಯಿ ಅವರ ವೈವಿಧ್ಯಪೂರ್ಣ ಪ್ರತಿಭೆಗೆ ಸಂದಿರುವ ಪುರಸ್ಕಾರಗಳೂ ವೈವಿಧ್ಯಪೂರ್ಣವಾಗಿವೆ.  ಮಾಧ್ಯಮ ಅಕಾಡೆಮಿ ಪುರಸ್ಕಾರ, ರಾಜ್ಯಮಟ್ಟದ ಯುವನಾಟಕೋತ್ಸವ ‘ಅತ್ಯುತ್ತಮ ನಟ’ ಪ್ರಶಸ್ತಿ. ‘ದೊಡ್ಡಪ್ಪ’ ನಾಟಕ ರಚನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲೋಕ ಶಿಕ್ಷಣ ಟ್ರಸ್ಟ್ ಗೌರವಗಳೇ ಅಲ್ಲದೆ ಹಲವಾರು ಪ್ರತಿಷ್ಠಿತ ಸಂಗ ಸಂಸ್ಥೆಗಳ ಗೌರವಗಳು ಗೋಪಾಲ ವಾಜಪೇಯಿ ಅವರಿಗೆ ಸಂದಿದ್ದವು.  ಅವರ ನಿಧನಾನಂತರ ರಂಗದ ಒಳ ಹೊರಗೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಹಾ ಸಂದಿತು.  

ಈ ಮಹಾನ್ ಪ್ರತಿಭಾವಂತ, ನಮ್ಮೆಲ್ಲರ ಆತ್ಮೀಯರಾಗಿದ್ದ   ಗೋಪಾಲ ವಾಜಪೇಯಿ ಅವರು 2016ರ ಸೆಪ್ಟೆಂಬರ್ 20 ರಂದು ಈ ಲೋಕದಿಂದ ಹೊರನಡೆದರು. ಆದರೆ ನಮ್ಮಿಂದ ಮರೆಯಾಗಿಲ್ಲ.  

On Remembrance Day of our Gopal Vajapayee Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ