ಉಪೇಂದ್ರ
ಉಪೇಂದ್ರ
ಉಪೇಂದ್ರ ಕನ್ನಡ ಚಿತ್ರರಂಗದ ವಿಶಿಷ್ಟ ಚಿಂತಕ, ಹಲವು ವಿಭಿನ್ನ ಮುಖ, ವಿಭಿನ್ನ ನಿಲುವುಗಳ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಇಷ್ಟು ಮಾತ್ರವಲ್ಲ, ಚಲನಚಿತ್ರವು ಸಾಮಾನ್ಯನ ಮಾಧ್ಯಮ ಎಂಬ ದೃಷ್ಟಿಯಲ್ಲಿ ಒಬ್ಬ ಸೃಜನಶೀಲ ಚಿತ್ರಕಥಾ ಲೇಖಕ, ಹಾಡು ಬರಹಗಾರ.... ಹೀಗೆ ಉಪೇಂದ್ರರ ಬಗ್ಗೆ ಹಲವಾರು ವರ್ಣನೆಗಳಿವೆ. ಒಂದು ರೀತಿಯಲ್ಲಿ ಉಪೇಂದ್ರ ‘ಹುಚ್ಚು ಮನಸ್ಸಿನ ನೂರಾರು ಮುಖ’ಗಳನ್ನು ತೆರೆಯಮೇಲೆ ಸಾಮಾನ್ಯನಿಗೆ ರುಚಿಸುವ ಹಾಗೆ ತೆರೆದಿಟ್ಟವರು.
ಕುಂದಾಪುರದ ಬಳಿಯ ಕೋಟೇಶ್ವರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ‘ಕೋಟೇಶ್ವರ’ ಈಗ ಉಪೇಂದ್ರನಾಗಿ ಭಾರತದಲ್ಲಿ ಒಬ್ಬ ಜನಪ್ರಿಯ ಕಲಾವಿದ. ಕನ್ನಡದ ನಿರ್ಮಾಪಕರೆಲ್ಲಾ ತಮಿಳು, ತೆಲುಗು, ಮಲಯಾಳ ಚಿತ್ರಗಳು ಯಾವುದು ಬಿಡುಗಡೆಯಾಗುತ್ತದೆ ಎಂದು ರೀಮೇಕ್ ಮಾಡಲು ಕಾಯುತ್ತಿದ್ದರೆ, ಅಲ್ಲಿನ ನಿರ್ಮಾಪಕರೆಲ್ಲಾ ಉಪೇಂದ್ರರ ಚಿತ್ರಗಳನ್ನು ತಮ್ಮ ಭಾಷೆಗಳಲ್ಲಿ ಡಬ್ ಮಾಡಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಕಾತರತೆ ತೋರುತ್ತಾರೆ.
‘ಅನಂತನ ಅವಾಂತರ’ ಚಿತ್ರಕ್ಕೆ ನಿರ್ದೇಶಕ ಕಾಶಿನಾಥ್ ಅವರಿಗೆ ಸಹಾಯಕರಾಗಿ ಚಿತ್ರೋದ್ಯಮದಲ್ಲಿ ಸಣ್ಣ ರೀತಿಯಲ್ಲಿ ಆಗಮಿಸಿದ ಉಪೇಂದ್ರ, ಇಂದು ಚಿತ್ರೋದ್ಯಮದಲ್ಲಿ ತ್ರಿವಿಕ್ರಮನಾಗಿ ಬೆಳೆದು ನಿಂತಿದ್ದಾರೆ. ಸಹಾಯಕ ನಿರ್ದೇಶಕನಾಗಿದ್ದವರು ಸಂಭಾಷಣೆ ಮತ್ತು ಹಾಡುಗಳನ್ನು ಬರೆಯಲಾರಭಿಸಿದರು. ಹಲವು ಚಿತ್ರಗಳ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕೂಡಾ ಬಂದು ಹೋದರು. ಒಂದು ದಿನ ‘ತರ್ಲೆ ನನ್ಮಗ’ ಚಿತ್ರವನ್ನು ನಿರ್ದೇಶಿಸಿ ನಮ್ಮ ‘ಜಗ್ಗೇಶ್’ರನ್ನು ನಾಯಕನಟನನ್ನಾಗಿಸಿದರು. ಅವರ "ಶ್!" ಚಿತ್ರದಿಂದ ಕನ್ನಡಕ್ಕೆ ದೊರೆತ ಕಲಾವಿದರು ಹಲವಾರು. ಈ ಎರಡೂ ಚಿತ್ರಗಳೂ ತಾರಾಮೌಲ್ಯವಿಲ್ಲದಿದ್ದರೂ ಯಶಸ್ಸು ಗಳಿಸಿದ್ದು ಉಪೇಂದ್ರರ ಹೊಸತನದ ನಿರೂಪಣೆಯಿಂದ.
ಉಪೇಂದ್ರರ ‘ಓಂ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಕರ್ನಾಟಕದಲ್ಲಿನ ಭೂಗತ ಚಟುವಟಿಕೆಗಳ ಆಳವನ್ನು ಗುರುತಿಸುವ ಆ ಚಿತ್ರ ಪ್ರೇಕ್ಷಕರ ಮೈ ಜುಮ್ಮೆನಿಸುವಂತೆ ಮಾಡಿದವು. ಹಿಂದೆ ‘ಅಂತ’ದಲ್ಲಿ ಯಶಸ್ವಿಯಾದ ಅಂಬರೀಶ್ ಉಪೇಂದ್ರರ ಮೂಲಕ ‘ಆಪರೇಷನ್ ಅಂತ’ದಲ್ಲಿ ಮೂಡಿದರು.
ಬುದ್ಧಿವಂತರಿಗೆ ಮಾತ್ರ ಎಂದು ಮೂಡಿ ಬಂದ ‘ಎ’ ಎಂಬ ಚಿತ್ರ, ಅದರ ಪ್ರಚಾರದ ರೀತಿಯಿಂದ ಹಿಡಿದು ಚಿತ್ರಕಥೆ, ನಿರೂಪಣೆ, ನಿರ್ದೇಶನ ಇವುಗಳೆಲ್ಲದರಲ್ಲಿ ಹೊಸತನ ತುಂಬಿಕೊಂಡಿತ್ತು. ಜೊತೆಗೆ 'ಬುದ್ಧಿವಂತರಿಗೆ ಮಾತ್ರ' ಎಂಬ ಪ್ರಚಾರ ತಂತ್ರ ಮತ್ತು ಚಿತ್ರದಲ್ಲಿದ್ದ ಹೊಸತನ, ಎಲ್ಲೋ ಒಂದು ಕಡೆ ಕನ್ನಡಿಗನಲ್ಲಿ, ಈ ಚಿತ್ರ ನೋಡದಿದ್ದರೆ ನಾನು ಬುದ್ಧಿವಂತನೇ ಅಲ್ಲ ಎಂಬ ಸುಪ್ತ ಅಹಂ ಅನ್ನು ಕೆರಳಿಸಿ ಅವರನ್ನು ಹಲವಾರು ಬಾರಿ ಚಿತ್ರಮಂದಿರಕ್ಕೆ ಬರುವಂತೆ ಮಾಡಿತ್ತು.
ಮುಂದೆ ಬಂದ ‘ಉಪೇಂದ್ರ’ ಚಿತ್ರ ಕೂಡಾ ಮನೋಜ್ಞ ನಿರೂಪಣೆಯದು. ಒಂದು ಸಾಮಾನ್ಯ ಮನರಂಜನೆಯ ಕಥೆಯನ್ನು ಇಟ್ಟುಕೊಂಡು ಎಲ್ಲೋ ಒಂದು ರೀತಿಯ ಆಧ್ಯಾತ್ಮದ ಅಂಶಗಳಾದ ‘ನಾನು’ ಎಂಬುದನ್ನು ಒಂದು ಪಾತ್ರ ಮತ್ತು ಅಂತರ್ಮುಖದಲ್ಲಿ ಹುಡುಕುತ್ತ ಹಲವು ದ್ವಂದ್ವಗಳಲ್ಲಿ ಸಿಲುಕಿಸಿ ಯಾವುದು ಒಳಿತು, ಯಾವುದು ಅಲ್ಲ ಎಂಬಂತಹ ನೆಲೆಯಲ್ಲಿ ಸರಾಗವಾಗಿ ಹರಿಸಿ ಪ್ರೇಕ್ಷಕನಿಗೆ ಮುದ ನೀಡುವ ಎಲ್ಲ ರೀತಿಯ ಮನರಂಜನೆಗಳನ್ನೂ ಇಟ್ಟ ಅವರ ಚಾಕಚಕ್ಯತೆ ಅಸಾಮಾನ್ಯವಾದುದು. 2015 ವರ್ಷ ತೆರೆಗೆ ಬಂದು ಅಪಾರ ಜನಪ್ರಿಯತೆ ಗಳಿಸಿದ ಉಪೇಂದ್ರರ ‘ಉಪ್ಪಿ-2’ ಚಿತ್ರ ‘ನಾನು’ ಎಂಬ ಚಿಂತನೆಯಿಂದ ‘ನೀನು ಅಂದರೆ ‘ಏನು’ ಎಂಬ ಚಿಂತನೆಯ ಕಡೆಗೆ ತಿರುಗಿತ್ತು. ಜೊತೆಗೆ ‘ಈ ಕ್ಷಣದಲ್ಲಿ ಇದ್ದದ್ದನ್ನು ಇದ್ದ ಹಾಗೆ ನೋಡುವುದು, ಮನಸ್ಸನ್ನು ವರ್ತಮಾನದ ಜಾಗೃತಿಯಲ್ಲಿರಿಸಿಕೊಂಡಿರುವುದು’ ಮುಂತಾದ ಅಂಶಗಳ ಕಡೆಗೆ ಕೂಡಾ ಮನರಂಜನಾತ್ಮಕವಾಗಿ ನೋಟ ಬೀರಿತ್ತು. ಇಂತಹ ಆಧ್ಯಾತ್ಮ ಅಥವಾ ಅರಿವಿನ ಶ್ರೇಷ್ಠತಮ ಚಿಂತನೆಗಳನ್ನು ಸಾಮಾನ್ಯನ ಮಟ್ಟಕ್ಕೆ ತಂದು ಅದನ್ನು ಪ್ರೇಕ್ಷಕನಿಗೆ ಅರ್ಥವಾಗಿಸುವ ಇಲ್ಲವೇ, ಆ ಮೂಲಕ ಇದೇನೋ ನನಗರ್ಥವಾಗುತ್ತಿಲ್ಲವಲ್ಲ ಎಂದೆನಿಸಿದರೂ ಇಲ್ಲೇನೋ ಆಕರ್ಷಣೆಯಂತೂ ಇದೆ ಎಂದು ಪ್ರೇಕ್ಷಕನಿಗೆ ಮೋಡಿ ಮಾಡುವ ಉಪೇಂದ್ರರ ಸಿನಿಮಾ ಮಾಧ್ಯಮದಲ್ಲಿನ ಹಿಡಿತ ಅಚ್ಚರಿ ಮೂಡಿಸುವಂತದ್ದು.
ಉಪೇಂದ್ರರು ಮೇಲ್ಕಂಡ ಚಿತ್ರಗಳಲ್ಲಿ ನಡೆದ ದಾರಿ ವಿಭಿನ್ನವಾದದ್ದು. ಸಾಮಾನ್ಯವಾಗಿ ಜನಪ್ರಿಯತಾರೆಯರು ತಾವು ಬದುಕಿನಲ್ಲಿ ಹೇಗಿದ್ದರೂ, ತೆರೆಯ ಮೇಲೆ ಮಾತ್ರ ತಮ್ಮನ್ನು ಬಿಟ್ಟರೆ ಇಲ್ಲ ಎಂಬಂಥಹ ಆದರ್ಶಪುರುಷ ಪಾತ್ರಗಳಲ್ಲಿ ಬಿಂಬಿಸಿ ಇಷ್ಟಪಟ್ಟುಕೊಂಡಿದ್ದೇ ಹೆಚ್ಚು. ಉಪೇಂದ್ರರಲ್ಲಿ ಅಡಗಿರುವ ನಾಯಕನಾದರೋ ಒಳಿತು, ಕೆಡಕುಗಳ ಮಧ್ಯೆ ತನ್ನನ್ನು ತಾನೇ ಅರಸಿಕೊಳ್ಳುವವ. ಮತ್ತೊಂದು ರೀತಿಯಲ್ಲಿ ನೋಡುವುದಾದರೆ ಒಂದೆಡೆ 'knock out' ಮದ್ಯಪಾನೀಯ ಮಾಡಿ ಎಂದು ಹೇಳುತ್ತಾ, ಮತ್ತೊಂದೆಡೆಯಲ್ಲಿ ನಂದಿನಿ ಹಾಲು ಕುಡಿಯಿರಿ ಎಂದು ಹೇಳುವ ಅವರ ಜಾಹೀರಾತುಗಳಷ್ಟೇ ವಿಭಿನ್ನರು ಮತ್ತು ಅರ್ಥವಾಗದವರು!
ಉಪೇಂದ್ರರು ತಮ್ಮನ್ನು ಚಲಾವಣೆಯ ನಟರಾಗಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಕೇಳರಿಯದಂತಹ ಅಪಾರ ಯಶಸ್ಸನ್ನು ತಮ್ಮ ಅಭಿನಯದ ಬಹುತೇಕ ಚಿತ್ರಗಳಿಗೆ ಪಡೆದರು. ಅವರು ಸಂಭಾಷಣೆ ಹೇಳುವ ಪರಿ ಅವರ ಇತರ ಮೈನಸ್ ಪಾಯಿಂಟುಗಳನ್ನು ಬಿಟ್ಹಾಕು, ಬಿಟ್ಹಾಕು ಎನಿಸುವಂತೆ ಮಾಡಿ ನಮಗರಿವಿಲ್ಲದಂತೆ ಅವರಲ್ಲಿ ಅಭಿಮಾನ ಮೂಡಿಸುತ್ತದೆ. ಇಂಥಹ ಆಕರ್ಷಣೀಯ ವ್ಯಕ್ತಿತ್ವವನ್ನು ಚಲನಚಿತ್ರರಂಗದಲ್ಲಿ ಮೂಡಿಸಿದ ನಟರುಗಳು ತುಂಬಾ ಅಪರೂಪ. ಈ ನಿಟ್ಟಿನಲ್ಲಿ ಮೇಲೆ ಹೆಸರಿಸಿದ ಚಿತ್ರಗಳೇ ಅಲ್ಲದೆ, ‘ಪ್ರೀತ್ಸೇ ಪ್ರೀತ್ಸೇ’, ‘ಉಪ್ಪಿ ದಾದಾ ಎಂಬಿಬಿಎಸ್’, ‘ಐಶ್ವರ್ಯ’, ‘ರಕ್ತಕಣ್ಣೀರು’, ‘ಕುಟುಂಬ’, ‘ಸೂಪರ್ ಸ್ಟಾರ್’, ಬುದ್ಧಿವಂತ, ಟೋಪೀವಾಲ, ಕಲ್ಪನ ಮುಂತಾದ ಅನೇಕ ಚಿತ್ರಗಳನ್ನು ಹೆಸರಿಸಬಹುದು. ಅವರು ತಮಿಳು, ತಲುಗು ಚಿತ್ರಗಳಲ್ಲೂ ಅಪೇಕ್ಷಿತರು. ಅವರ ‘ಗಾಡ್ ಫಾದರ್’ ಚಿತ್ರಕ್ಕೆ ಸ್ವಯಂ ಎ. ಆರ್. ರೆಹಮಾನ್ ಅವರೇ ಬಂದು ಸಂಗೀತ ನೀಡಿ ಹೋಗಿದ್ದರು.
ಉಪೇಂದ್ರ ಅವರು ‘ಉಪೇಂದ್ರ’ ಚಿತ್ರದ ನಂತರದಲ್ಲಿ ಚಿತ್ರ ನಿರ್ದೇಶನಕ್ಕೆ ಕೈ ಹಾಕದೆ ಸುಮ್ಮನೆ ಕುಳಿತಿದ್ದಾಗ, ಅವರು ಹಲವಾರು ಸಂದರ್ಶನದಲ್ಲಿ ಇದಕ್ಕೆ ಹೇಳಿದ ಉತ್ತರಗಳನ್ನು ಕೇಳಿದ್ದೇನೆ. “ನಾವು ಒಂದು ಯಶಸ್ಸನ್ನು ಗಳಿಸಿದಾಗ, ಜನರ ಅಪೇಕ್ಷೆಗಳು ಬಹಳಷ್ಟು ಇರುತ್ತದೆ. ಅದಕ್ಕೆ ನಾವು ಸಾಕಷ್ಟು ಸುಸ್ಪಷ್ಟತೆಯನ್ನು ನಮ್ಮಲ್ಲಿ ಹೊಂದಿ, ನಂತರ ಪ್ರೇಕ್ಷಕನ ಮುಂದೆ ಚಿತ್ರವನ್ನಿರಿಸಬೇಕು. ನನಗೆ ಮಾಡಬೇಕೆಂಬ ಆಸೆ ಇದೆ. ಆದಷ್ಟು ಬೇಗ ಚಿತ್ರ ನಿರ್ದೇಶಿಸುತ್ತೇನೆ” ಎಂದು ಹೇಳುತ್ತಾ ಬಂದರು. ಅಂತೆಯೇ ಬಂದಾಗ ಸೂಪರ್ ಎನಿಸುವಂತಹ ಚಿತ್ರಗಳನ್ನೇ ಕೊಟ್ಟವರು. 2022 ವರ್ಷ ಅವರು 'ಯುಐ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ರಾಜಕೀಯದಲ್ಲಿ ದೊಡ್ಡ ರೀತಿಯಲ್ಲಿ ತಮ್ಮದೇ ಪಕ್ಷ ಸ್ಥಾಪಿಸುವುದರ ಮೂಲಕ ಪ್ರವೇಶಿಸಿದ್ದ ಉಪೇಂದ್ರರು ಅಲ್ಲಿ ಯಾವುದೋ ಗೊಂದಲಗಳಿಗೆ ಸಿಲುಕಿದಂತೆ ಕಂಡರು. ರಾಜಕೀಯ ಎನ್ನುವುದು ಹಾಗೆಯೇ.
ಇಂದು ರಾಜ್ ಕುಮಾರ್, ವಿಷ್ಣುವರ್ಧನ್ ಅಂತಹ ಕಲಾವಿದರು ಇಲ್ಲದ ನೆಲೆಯಲ್ಲಿ ಖಂಡಿತವಾಗಿ ಉಪೇಂದ್ರರಂತಹ ಕಲಾವಿದರ ಮೇಲೆ ಹೆಚ್ಚಿನ ಜವಾಬ್ಧಾರಿ ಇದೆ. ಹಲವು ಕಲಾವಿದರೊಂದಿಗೆ ಉತ್ತಮವಾಗಿ ಬೆರೆತು ನಟನೆ, ನಿರ್ದೇಶನ ಮಾಡಿ ಸೌಹಾರ್ದತೆ ಹೊಂದಿರುವ ಉಪೇಂದ್ರರಿಗೆ ಅದು ಸಾಧ್ಯವೂ ಹೌದು. ಅದನ್ನು ಅವರು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಲಿ ಎಂದು ಆಶಿಸುತ್ತಾ ಉಪೇಂದ್ರರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.
On the birth day of great talent Upendra
ಕಾಮೆಂಟ್‌ಗಳು