ಸಾಧನಾ
ಸಾಧನಾ
ಸಾಧನಾ ಅಂದರೆ ಮೊದಲು ನೆನಪಾಗುವುದು ವೈಶಿಷ್ಟ್ಯಪೂರ್ಣ ಕೇಶವಿನ್ಯಾಸದ ಸೊಬಗಿನ ಮಂದಹಾಸ. ಅವರು ಸುರದ್ರೂಪಿ ಮಾತ್ರವಲ್ಲದೆ ಉತ್ತಮ ಅಭಿನೇತ್ರಿಯೂ ಆಗಿದ್ದರು.
ಸಾಧನಾ 1941ರ ಸೆಪ್ಟಂಬರ್ 2ರಂದು ಕರಾಚಿಯ ಸಿಂಧಿ ಕುಟುಂಬದಲ್ಲಿ ಜನಿಸಿದರು. ದೇಶದ ವಿಭಜನೆ ಬಳಿಕ ಈ ಕುಟುಂಬ ಕರಾಚಿಯಿಂದ ಬಂದು ಮುಂಬೈನಲ್ಲಿ ನೆಲೆಸಿತ್ತು. ಸಾಧನಾ ಬೋಸ್ ಎಂಬ ನಟಿಯ ಅಭಿಮಾನಿಯಾಗಿದ್ದ ಇವರ ತಂದೆ ಮಗಳಿಗೆ ಸಾಧನಾ ಎಂಬ ಹೆಸರನ್ನೇ ಇಟ್ಟರು.
ಚಿಕ್ಕಂದಿನಲ್ಲೇ ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದ ಸಾಧನಾ, 1955ರಲ್ಲಿ ರಾಜ್ ಕಪೂರ್ ಅವರ ‘ಶ್ರೀ 420’ ಚಿತ್ರದ ‘ಮುಡ್ಮುಡ್ಕೇನ ದೇಖ್ ಮುಡ್ಮುಡ್ಕೆ' ಗೀತೆಯಲ್ಲಿ ಹಲವು ಸಹಕಲಾವಿದೆಯರಲ್ಲಿ ಒಬ್ಬರಾಗಿ ನಟಿಸಿದ್ದರು. ನಂತರ 1958ರಲ್ಲಿ ಸಿಂಧಿ ಭಾಷೆಯ ’ಅಬಾನ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ ಪಾತ್ರ ನಿರ್ವಹಿಸಿದರು.
ಸಾಧನಾ 'ಶ್ರೀ 420' ಚಿತ್ರದಲ್ಲಿ ನಟಿಸಿದ ದ್ರಶ್ಯವನ್ನು ಸ್ರೀನ್ ಪತ್ರಿಕೆಯಲ್ಲಿ ಸೂಕ್ಷ್ಮವಾಗಿ ಕಂಡ ಅಂದಿನ ಪ್ರಸಿದ್ಧ ನಿರ್ಮಾಪಕ ಶಶಿಧರ ಮುಖರ್ಜಿ, ಆಕೆಯನ್ನು ತಮ್ಮ ಚಿತ್ರಕ್ಕೆ ನಾಯಕಿಯಾಗಿ ಆಹ್ವಾನಿಸಲು ನಿರ್ಧರಿಸಿದರು. ಹೀಗೆ ಸಾಧನಾ ಶಶಿಧರ ಮುಖರ್ಜಿ ಅವರ ಮಗ ಜಾಯ್ ಮುಖರ್ಜಿಗೆ ನಾಯಕಿಯಾಗಿ 'ಲವ್ ಇನ್ ಸಿಮ್ಲಾ'ದಲ್ಲಿ ನಟಿಸಿದರು. ಈ ಚಿತ್ರವನ್ನು ನಿರ್ದೇಶಿಸಿದ ಆರ್. ಕೆ. ನಯ್ಯರ್, ಬ್ರಿಟಿಷ್ ನಟಿ ಆಡ್ರಿ ಹೆಪ್ಬಮ್ ಅವರ ಕೇಶವಿನ್ಯಾಸದಿಂದ ಪ್ರೇರಣೆ ಪಡೆದು 'ಸಾಧನಾ ಕಟ್' ವಿಶೇಷತೆಯನ್ನು ಸಹಾ ಪ್ರಸಿದ್ಧಿಪಡಿಸಿದರು. ಈ ಚಿತ್ರ ಬಹಳ ಯಶಸ್ವಿಯಾಗಿ ಸಾಧನಾ ಇದೇ ತಂಡದೊಡನೆ 'ಏಕ್ ಮುಸಾಫಿರ್ ಏಕ್ ಹಸೀನಾ' ಚಿತ್ರದಲ್ಲಿ ನಟಿಸಿದರು.
ಮುಂದೆ ಸಾಧನಾ ಖ್ಯಾತ ನಿರ್ದೇಶಕ ಬಿಮಲ್ ರಾಯ್ ಅವರ ‘ಪರಖ್’ಚಿತ್ರದಲ್ಲಿ ನಟಿಸಿದರು. ಹಲವಾರು ಪ್ರಶಸ್ತಿ ಗಳಿಸಿದ ಈ ಚಿತ್ರದಲ್ಲಿನ 'ಓ ಸಜನಾ ಬರ್ಖಾ ಬಹಾರ್ ಅಯಿ' ಇಂದಿಗೂ ಜನಪ್ರಿಯ.
ಸಾಧನಾ ದೇವಾನಂದ್ ಜೊತೆ 'ಹಮ್ ದೋನೊ’ ಮತ್ತು 'ಅಸ್ಲಿ ನಕ್ಲಿ' ಚಿತ್ರಗಳಲ್ಲಿ ನಟಿಸಿದರು. 'ಅಸ್ಲಿ ನಕ್ಲಿ' ಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದರು. ರಾಜೇಂದ್ರ ಕುಮಾರ್ ಜೊತೆ ಸಾಧನಾ ನಟಿಸಿದ 'ಮೇರೆ ಮೆಹಬೂಬ್' ಬಹು ಯಶಸ್ವೀ ಚಿತ್ರ. ಮನೋಜ್ ಕುಮಾರ್ ಜೊತೆ 'ವೋಹ್ ಕೌನ್ ಥಿ' ಚಿತ್ರದಲ್ಲಿನ ಆಕೆಯ ನಗೆಯಂತೂ 'ಮೋನಾಲಿಸಾ ನಗೆಯಂತೆ' ಎಂದು ಪ್ರಸಿದ್ಧಿ. ಆ ಚಿತ್ರ ಅಪಾರ ಯಶಸ್ಸು ಕಂಡಿತು. ಆ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ 'ನೈನಾ ಬರಸೇ' ಮತ್ತು 'ಲಗ್ ಜಾ ಗಲೇ' ಇಂದಿಗೂ ಸುಶ್ರಾವ್ಯ ಗೀತೆಗಳಾಗಿ ಪ್ರಸಿದ್ಧಿಪಡೆದಿವೆ. ರಾಜ್ ಖೋಸ್ಲಾ ಅವರ ಈ ಚಿತ್ರದ ಜೊತೆಗೆ ಪುನಃ ಅವರೇ ನಿರ್ದೇಶಿಸಿದ ಅದೇ ಸ್ವರೂಪದ 'ಮೇರಾ ಸಾಯಾ' ಮತ್ತು 'ಅನಿತಾ' ಎಂಬ ಚಿತ್ರಗಳಲ್ಲಿ ನಟಿಸಿದ ಸಾಧನಾ 'ಮಿಸ್ಟರಿ ಗರ್ಲ್' ಎಂದು ಕೂಡಾ ಪ್ರಸಿದ್ಧಿ ಪಡೆದರು.
ವಕ್ತ್, ಇಂತೆಕಾಮ್, ರಾಜ್‍ಕುಮಾರ್, ಸಚಾಯಿ, ಏಕ್ ಫೂಲ್ ದೋ ಮಾಲಿ, ದಿಲ್ ದೌಲತ್ ದುನಿಯಾ, ಗೀತಾ ಮೇರಾ ನಾಮ್ ಮುಂತಾದವು ಸಾಧನಾ ನಟಿಸಿದ ಇನ್ನಿತರ ಪ್ರಖ್ಯಾತ ಚಿತ್ರಗಳು.
ಸಾಧನಾ ತಾವು ನಾಯಕಿಯಾಗಿ ನಟಿಸಿದ ಮೊದಲ ಹಿಂದೀ ಚಿತ್ರ 'ಲವ್ ಇನ್ ಸಿಮ್ಲಾ' ನಿರ್ದೇಶಕ ರಾಮ ಕೃಷ್ಣ ನಯ್ಯರ್ ಅವರನ್ನು ವರಿಸಿದ್ದರು. ಆರ್.ಕೆ. ನಯ್ಯರ್ 1995ರಲ್ಲಿ ನಿಧನರಾದರು.
ಸಾಧನಾ 2015ರ ಡಿಸಂಬರ್ 25ರಂದು ನಿಧನರಾದರು.
On the birthday of unforgettable Sadhana
ಕಾಮೆಂಟ್‌ಗಳು