ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ವಿ. ರಾಧಾ



 ಬಿ. ವಿ. ರಾಧಾ


ಕನ್ನಡ ಚಿತ್ರರಂಗದ ಪ್ರವರ್ಧಮಾನ ವರ್ಷಗಳಿಂದ ಮೊದಲ್ಗೊಂಡು ಇಂದಿನ ಯುಗದ ಕಿರುತೆರೆಯ ಧಾರಾವಾಹಿಗಳವರೆಗೆ ವ್ಯಾಪಿಸಿದ್ದ ಕಲಾವಿದೆ ಬಿ. ವಿ. ರಾಧಾ. ಇಂದು ಅವರ ಸಂಸ್ಮರಣಾ ದಿನ. 

ಹಸನಾದ ತೇಜಸ್ವಿ ಕಳೆಯ ಬಿ.ವಿ.ರಾಧಾ ಅವರು ನಾಯಕಿಯಾಗಿ, ಪೋಷಕ ಪಾತ್ರಧಾರಿಯಾಗಿ, ಹಾಸ್ಯ ನಟಿಯಾಗಿ, ರಾಷ್ಟ್ರಮಟ್ಟದಲ್ಲಿ ಚಿತ್ರಗಳ ನಿರ್ಮಾಪಕಿಯಾಗಿ ಮತ್ತು ಕನ್ನಡ ಚಲನಚಿತ್ರದ ಮಹಾನ್ ನಿರ್ಮಾಪಕ, ನಿರ್ದೇಶಕರ ಸಾಲಿನಲ್ಲಿ ಪ್ರತಿಷ್ಟಿತರಾದ ಕೆ.ಎಸ್.ಎಲ್. ಸ್ವಾಮಿ (ರವಿ) ಅವರ ಜೀವನ ಸಂಗಾತಿಯಾಗಿ - ಅವರ ಸೃಜನಶೀಲತೆಯ ಸಹಚಾರಿಣಿಯಾಗಿ ಚಲನಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮಹನೀಯೆ. ಅವರು ವೃತ್ತಿ ರಂಗಭೂಮಿ ಕಲಾವಿದೆಯಾಗಿಯೂ ಸೇವೆ ಸಲ್ಲಿಸಿದ್ದವರು.

1948ರ ವರ್ಷದ ಆಗಸ್ಟ್ ಮಾಸದಲ್ಲಿ ಬೆಂಗಳೂರಿನ ಒಂದು ರೈತ ಕುಟುಂಬದಲ್ಲಿ ಜನಿಸಿದ ರಾಜಲಕ್ಷ್ಮಿ ಎಂಬ ಹೆಸರಿನ ಈ ಹುಡುಗಿಗೆ ಕಲಿಕೆಯ ದಿನಗಳಲ್ಲೇ ಚಲನಚಿತ್ರಗಳ ಆಕರ್ಷಣೆ ಹುಟ್ಟಿತು. 1960ರ ‘ರಣಧೀರ ಕಂಠೀರವ’ ಚಿತ್ರದಲ್ಲಿ ಮೊದಲು ಮುಖ ತೋರಿದ ಈಕೆ, 1964ವರ್ಷ ‘ನವಕೋಟಿ ನಾರಾಯಣ’ ಚಿತ್ರದಲ್ಲಿ ನಟಿಸುವಾಗ ತಮ್ಮ ಹೆಸರನ್ನು ಬೆಂಗಳೂರು ವಿಜಯ ರಾಧಾ ಎಂದು ಬದಲಿಸಿಕೊಂಡು ಮುಂದೆ ಬಿ.ವಿ. ರಾಧಾ ಎಂದು ಎಲ್ಲೆಡೆ ಹೆಸರಾದರು. 

ಬಿ. ವಿ. ರಾಧಾ ಕನ್ನಡವಲ್ಲದೆ ದಕ್ಷಿಣ ಭಾರತೀಯ ತಮಿಳು, ತೆಲುಗು, ಹಿಂದಿ, ತುಳು ಚಿತ್ರಗಳಲ್ಲೂ ಪಾತ್ರವಹಿಸಿದ್ದರು. ಒಟ್ಟು ಐದೂವರೆ ದಶಕಗಳಲ್ಲಿ 250ಕ್ಕೂ ಚಿತ್ರಗಳಲ್ಲಿ ಎಲ್ಲ ತಲೆಮಾರಿನ ಕಲಾವಿದರು, ತಂತ್ರಜ್ಞರು ಮತ್ತು ನಿರ್ದೇಶಕರೊಡನೆ ಕೆಲಸ ಮಾಡಿದ್ದ ಬಿ.ವಿ. ರಾಧಾ, ಹಲವಾರು ದೂರದರ್ಶನದ ಧಾರಾವಾಹಿಗಳಲ್ಲೂ ತಮ್ಮ ಕಲೆಯನ್ನು ಬೆಳಗಿದ್ದರು. ಯಾವುದೇ ವೈವಿಧ್ಯ ಪಾತ್ರವೇ ಇರಲಿ ಅದರಲ್ಲಿ ಅವರು ತೊಡಗಿಕೊಳ್ಳುತ್ತಿದ್ದ ನಿಷ್ಠೆ, ಅವರ ಮೊಗದಲ್ಲಿದ್ದ ತೇಜಸ್ಸಿನಷ್ಟೇ ಎದ್ದು ಕಾಣುತ್ತಿತ್ತು. 

ಜಂಬೂಸವಾರಿ ಚಿತ್ರದ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ, ಹರಕೆಯ ಕುರಿ ಚಿತ್ರಕ್ಕೆ ರಜತ ಕಮಲ ರಾಷ್ಟ್ರೀಯ ಪ್ರಶಸ್ತಿ, ಕಲಾರಂಗದಲ್ಲಿನ ಜೀವನ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಬಿ.ವಿ. ರಾಧಾ ಅವರಿಗೆ ಸಂದಿದ್ದವು. 

ಬಿ. ವಿ. ರಾಧಾ ಅವರು 2017ರ ಸೆಪ್ಟೆಂಬರ್ 10ರಂದು ಈ ಲೋಕವನ್ನಗಲಿದರು.  ರಾಧಾ ಅವರು ನಿಧನರಾದ ಕೆಲವು ತಿಂಗಳ ಹಿಂದೆ ಅವರನ್ನು ಗಾಂಧೀಬಜಾರಿನಲ್ಲಿ ಕಂಡಾಗ, ಅವರ ಮೊಗದಲ್ಲಿದ್ದ ಎಂದಿನ ಕಳೆಯನ್ನು ಕಂಡಾಗ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದರು ಎಂದು ನನಗೆ ತಿಳಿದಿರಲಿಲ್ಲ. ಕಲಾವಂತರ ಬದುಕೇ ಹಾಗೆ. ಅವರ ಕಲೆಯ ಅಭಿವ್ಯಕ್ತಿಯಲ್ಲಿ ಅವರ ನಗುವನ್ನು ಕಂಡಾಗ ಅವರ ಬದುಕು ಸಂತಸದಿಂದ ತುಂಬಿದ್ದು ಅನಿಸುತ್ತದೆ. ಅವರ ದುಃಖದ ಅಭಿವ್ಯಕ್ತಿಯನ್ನು ಕಂಡಾಗ ಒಳ್ಳೆಯ ಅಭಿನಯ ಅನಿಸಿಬಿಡುತ್ತದೆ. ಅವರು ತಮ್ಮ ನೋವನ್ನು ಮರೆಸಿಕೊಂಡು ಕಲೆಯನ್ನು ಮೆರೆಸುವ ಅಮರರು. 

ತಮ್ಮ ದೇಹವನ್ನೂ ವೈದ್ಯಕೀಯ ಉದ್ದೇಶಕ್ಕೆ ಧಾರೆ ಎರೆದು ಹೋದ ಈ ಮಹಾನ್ ಚೇತನದ ಬದುಕು ಮರೆತುಬಿಡುವಂತದ್ದಲ್ಲ. 


Remembrance day of great artiste Late B.V. Radha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ