ಮನು ಚಕ್ರವರ್ತಿ
ಎನ್. ಮನು ಚಕ್ರವರ್ತಿ
ಪ್ರೊ. ಎನ್. ಮನು ಚಕ್ರವರ್ತಿಯವರು ಶಿಕ್ಷಕರಾಗಿ, ಸಾಹಿತ್ಯ, ಸಂಸ್ಕೃತಿ ಮತ್ತು ಸಿನಿಮಾ ವಿಮರ್ಶಕರಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರು. ಇಂದು ಅವರ ಹುಟ್ಟುಹಬ್ಬ ಎಂದು ಕೆಲವರು ತಿಳಿಸಿದ್ದಾರೆ.
ಮನು ಚಕ್ರವರ್ತಿಯವರು 2011ರ ಸಾಲಿನ ಅತ್ಯುತ್ತಮ ಚಲನಚಿತ್ರ ವಿಮರ್ಶೆಗಾಗಿ ಸ್ವರ್ಣಕಮಲ ರಾಷ್ಟ್ರೀಯ ಚಲನಪ್ರಶಸ್ತಿ ಪಡೆದು ಕರ್ನಾಟಕಕ್ಕೆ ಗೌರವ ತಂದವರು. ಈ ಪ್ರಶಸ್ತಿಯನ್ನು ಅವರಿಗೆ ನೀಡುವಲ್ಲಿ ಅವರ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿನ ಚಲನಚಿತ್ರ ವಿಮರ್ಶೆ, ವಿಶ್ಲೇಷಣೆ, ಸಂಕೀರ್ಣವಾದ ಚಿಂತನೆಯ ಫಲವಾದ ಬರಹಗಳ ಮೂಲಕ ಸಿನೆಮಾ ಮೀಮಾಂಸೆಗೆ ಅವರು ನೀಡಿರುವ ಕೊಡುಗೆಯನ್ನು ಸಮಗ್ರವಾಗಿ ಗುರುತಿಸಲಾಗಿದೆ.
ಬೆಂಗಳೂರಿನ ಎನ್ ಎಮ್ ಕೆ ಆರ್ ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಎನ್. ಮನು ಚಕ್ರವರ್ತಿಯವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಗಣ್ಯ ವಿಮರ್ಶಕರು. ಸಂಗೀತ, ಸಿನೆಮಾಗಳಲ್ಲೂ ತೀವ್ರ ಆಸಕ್ತಿ ಹೊಂದಿರುವ ಇವರ ಚಿಂತನೆ ಮತ್ತು ಬರಹಗಳು ಸಂಸ್ಕೃತಿ ವಿಮರ್ಶೆಯ ವಿಶಾಲ ಹರಹನ್ನು ಪಡೆದುಕೊಂಡಿವೆ.
ಚಲನಚಿತ್ರಗಳೊಡನೆ ಮನು ಚಕ್ರವರ್ತಿಯವರ ನಂಟು ಚಿಕ್ಕಂದಿನಿಂದ ಸ್ವಾಭಾವಿಕವಾಗಿ ಬೆಳೆಯಿತು. ಅವರು ಬೆಂಗಳೂರಿಗೆ ರಜೆಗೆಂದು ಬಂದಾಗ ಅವರ ಸೋದರಮಾವಂದಿರು ಆಂಗ್ಲ ಚಿತ್ರಗಳಿಗೆ ಕರೆದುಕೊಂಡುಹೋಗುತ್ತಿದ್ದರು. ಮೈಸೂರಿನಲ್ಲಿದ್ದ ಕೆಲವೇ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದ ವಿವಿಧ ಭಾಷೆಗಳ ಚಿತ್ರಗಳನ್ನು ವಾರಕ್ಕೆ ಹಲವೆಂಬಂತೆ ಅತೀವ ಆಸಕ್ತಿಯಿಂದ ನೋಡಿತ್ತಿದ್ದರು. ದಸರಾ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರಗಳ ಪರಿಚಯವಾಯಿತು.
ಮನು ಅವರು ಅನೇಕ ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ನಡೆಸಿದ್ದಾರೆ, ಪ್ರಬಂಧಗಳನ್ನು ಮಂಡಿಸಿದ್ದಾರೆ, ಸಂವಾದಗಳನ್ನು ನಡೆಸಿದ್ದಾರೆ ಮತ್ತು ಸಿನೆಮಾದ ಬಗ್ಗೆ ಗಂಭೀರವಾದ ಚಿಂತನೆಯಿಂದ ಹೊಮ್ಮಿದ ಬರಹಗಳನ್ನು ನೀಡಿದ್ದಾರೆ. ಚಲನಚಿತ್ರಗಳಿಗೆ ತಾತ್ವಿಕ ನೆಲೆಯನ್ನು ಒದಗಿಸುವಲ್ಲಿ ನಿರ್ದೇಶಕರ ಜೊತೆ ಸಹಭಾಗಿತ್ವವನ್ನು ವಹಿಸಿದ್ದಾರೆ.
ಮನು ಚಕ್ರವರ್ತಿಯವರು ಡೀಪ್ ಫೋಕಸ್ ಎಂಬ ಸಿನೆಮಾದ ಪತ್ರಿಕೆ, ಹಲವು ದಿನಪತ್ರಿಕೆಗಳು, ನಿಯತಕಾಲಿಕೆಗಳು, ಸಂಕಲನಗಳಲ್ಲಿ ಸಿನೆಮಾದ ವಿವಿಧ ವಿಭಾಗಗಳನ್ನು ಕುರಿತು ಬರಹಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಸಿನೆಮಾದ ವಿವಿಧ ಹಂತಗಳು, ವ್ಯಕ್ತಿಗಳು, ಇರಾನಿಯನ್ ಸಿನೆಮಾ, ಗಿರೀಶ್ ಕಾಸರವಳ್ಳಿಯವರ ಚಲನಚಿತ್ರಗಳ ವಿಶ್ಲೇಷಣೆ, ಸಮಕಾಲೀನ ಭಾರತೀಯ ಸಿನೆಮಾದ ಕಾಳಜಿಗಳು, ಗುಣಲಕ್ಷಣಗಳು, ಚಲನಚಿತ್ರಗಳಲ್ಲಿ ದಮನಿತರ ಚಿತ್ರಣದ ಸ್ವರೂಪ, ಜಪಾನಿ ಸಿನೆಮಾದ ಪರಂಪರೆ ಹೀಗೆ ಸಿನೆಮಾದ ಹಲವು ಅಂಶಗಳ ಬಗ್ಗೆ ಅನನ್ಯ ದೃಷ್ಟಿಕೋನ ಮತ್ತು ಸಂಕೀರ್ಣ ನೆಲೆಗಟ್ಟಿನ ಬರಹಗಳನ್ನು ನೀಡಿದ್ದಾರೆ. ‘ಮಾಧ್ಯಮ-ಮಾರ್ಗ’, ‘ಕಲ್ಚರಿಂಗ್ ರಿಯಲಿಸಂ’, ‘ಫ್ರೇಮಿಂಗ್ ದಿ ನ್ಯೂ ವೇವ್ (ಕನ್ನಡದ ಶ್ರೇಷ್ಠ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಕುರಿತ ಪುಸ್ತಕ)’, ‘ಭಾರತೀಯ ಸ್ತ್ರೀವಾದ’ ಇವರು ಪ್ರಕಟಿಸಿರುವ ಪುಸ್ತಕಗಳಲ್ಲಿ ಹಲವು. ಯು ಆರ್ ಅನಂತಮೂರ್ತಿ ಅವರ ಕೃತಿಗಳನ್ನು Omnibus, Rujuvathu, Bharatipura ಮುಂತಾಗಿ ಇಂಗ್ಲಿಷಿನಲ್ಲಿ ಮೂಡಿಸಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿಯೇ ಅಲ್ಲದೆ ಗೋವಿಂದ ಪೈ ಸ್ಮಾರಕ ಪ್ರತಿಷ್ಠಾನ ಸ್ಥಾಪಿಸಿರುವ ವಿ. ಎಮ್. ಇನಾಂದಾರ್ ಕಾವ್ಯ ವಿಮರ್ಶಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಕೂಡಾ ಮನು ಚಕ್ರವರ್ತಿ ಅವರಿಗೆ ಸಂದಿದೆ.
“ನಮ್ಮ ಅತ್ಯುತ್ತಮ ಮೇಧಾವೀ ಮನಸ್ಸುಗಳು ಆಡಳಿತ ಪ್ರವೀಣಗೊಳ್ಳುತ್ತಿವೆಯೇ ವಿನಃ ಶಿಕ್ಷಣ ಕ್ಷೇತ್ರಕ್ಕೆ ದಕ್ಕುತ್ತಿಲ್ಲ” ಎಂಬುದು ಶಿಕ್ಷಣ ಕ್ಷೇತ್ರದ ಬಗ್ಗೆ ಮನು ಚಕ್ರವರ್ತಿಯವರ ಕಾಳಜಿಯುಕ್ತ ಚಿಂತನೆಯಾಗಿದೆ. ತಮ್ಮ ಓದಿನ ದಿನಗಳಲ್ಲಿ ತಮಗೆ ಉಪಾಧ್ಯಾಯರಾಗಿ ವಿವಿಧ ರೀತಿಗಳಲ್ಲಿ ಪ್ರೇರಕರಾದ ನೀಡಿದ ಪ್ರೊ. ಸಿ. ಡಿ. ನರಸಿಂಹಯ್ಯ, ಪ್ರೊ. ಯು. ಆರ್. ಅನಂತಮೂರ್ತಿ ಮತ್ತು ಪ್ರೊ. ಬಿ. ದಾಮೋದರ ರಾವ್ ಅಂತಹ ಮಹನೀಯರ ಕೊಡುಗೆಯನ್ನು ಮನು ಚಕ್ರವರ್ತಿ ಆತ್ಮೀಯವಾಗಿ ಸ್ಮರಿಸುತ್ತಾರೆ.
Manu Chakravarthy
ಕಾಮೆಂಟ್‌ಗಳು