ಆರ್. ಕೆ. ಪದ್ಮನಾಭ
ಆರ್. ಕೆ. ಪದ್ಮನಾಭ
ಕರ್ನಾಟಕ ಸಂಗೀತದ ಪ್ರಮುಖ ಪ್ರವರ್ತಕರಲ್ಲೊಬ್ಬರಾದ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ಮಹಾನ್ ಸಂಗೀತ ವಿದ್ವಾಂಸರುಗಳಿಗೆ ಹೆಸರಾಗಿರುವ ಕಾವೇರಿ ನದಿ ತೀರದ ರುದ್ರಪಟ್ಟಣಕ್ಕೆ ಸೇರಿದವರು.
ಪದ್ಮನಾಭ ಅವರು 1949ರ ಸೆಪ್ಟೆಂಬರ್ 26ರಂದು ಜನಿಸಿದರು. ತಂದೆ ಕೃಷ್ಣ ದೀಕ್ಷಿತರು ಮತ್ತು ತಾಯಿ ಶಾರದಮ್ಮನವರು. ವಿದ್ವಾನ್ ನಂಜುಂಡಸ್ವಾಮಿ ಹಾಗೂ ವಿದ್ವಾನ್ ಸೀತಾರಾಮಶಾಸ್ತ್ರಿ ಅವರುಗಳಿಂದ ಸಂಗೀತದ ಪ್ರಾರಂಭಿಕ ಶಿಕ್ಷಣ ಪಡೆದ ಪದ್ಮನಾಭ ಅವರು ಮುಂದೆ ಎಚ್.ವಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಉನ್ನತ ಸಂಗೀತದ ಸಾಧನೆ ನಡೆಸಿದರು.
ಸಂಗೀತದಲ್ಲಿನ ವಿಶಿಷ್ಟ ವಿದ್ವತ್ಪೂರ್ಣ ಸಾಧನೆ, ಶ್ರೇಷ್ಠ ಮಟ್ಟದ ಗಾಯನ ಸಾಮರ್ಥ್ಯ, ವಾಗ್ಗೇಯಕಾರಿಕೆ, ಸಂಗೀತ ಮಾರ್ಗದರ್ಶನ, ಪ್ರವಾಚಿಕೆ, ಉಪನ್ಯಾಸ, ಗೋಷ್ಠಿಗಾಯನ ಪದ್ಧತಿಗೆ ತಂದ ವ್ಯಾಪಕ ಕಳೆ, ಪ್ರಕಟಣೆಗಳು, ರುದ್ರಪಟ್ಟಣ ಮತ್ತು ಇನ್ನಿತರ ಕಡೆಗಳಲ್ಲಿ ವಿಶಿಷ್ಟ ರೀತಿಯ ಸಂಘಟನಾತ್ಮಕ ಪರಿಶ್ರಮಗಳ ಮೂಲಕ ವಿಶಿಷ್ಟ ಕಲಾತ್ಮಕ ಮತ್ತು ಸಾಂಸ್ಕೃತಿಕ ಸ್ಥಾವರ ಮತ್ತು ವೇದಿಕೆಗಳ ಹುಟ್ಟು ಮತ್ತು ಪ್ರಗತಿಗೆ ಕಾರಣಕರ್ತ..... ಹೀಗೆ ಹಲವು ದೆಸೆಗಳಲ್ಲಿ ಆರ್. ಕೆ. ಪದ್ಮನಾಭ ಅವರ ಕೊಡುಗೆ ನಿರಂತರವಾಗಿ ಸಾಗುತ್ತಾ ಬಂದಿದೆ. ವಿಜ್ಞಾನದಲ್ಲಿ ಪದವಿ ಪಡೆದು ಪ್ರತಿಷ್ಟಿತ ಬ್ಯಾಂಕ್ ಒಂದರಲ್ಲಿ ಅಧಿಕಾರಿಗಳ ಸ್ಥಾನದವರೆಗೆ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಪದ್ಮನಾಭ ಅವರು ಕ್ರೀಡೆ, ರಂಗಭೂಮಿ ಮತ್ತು ಸಿನಿಮಾದಲ್ಲಿ ಸಂಗೀತಜ್ಞರಾಗಿ ಅಭಿನಯ ಹೀಗೆ ಹಲವು ನಿಟ್ಟಿನಲ್ಲಿ ಸಹಾ ತಮ್ಮ ಬಹುಮುಖಿ ಪ್ರತಿಭೆಯನ್ನು ಅಭಿವ್ಯಕ್ತಿಸಿದವರಾಗಿದ್ದಾರೆ.
ಆರ್.ಕೆ. ಪದ್ಮನಾಭ ಅವರ ಗಾಯನ ಕಛೇರಿಗಳು ಶೃತಿನಾದ ಸೌಖ್ಯ, ಭಾವೋತ್ಪೂರ್ಣ ಸ್ಪಷ್ಟೋಚ್ಚಾರ, ಕ್ಲಿಷ್ಟ ಗಮಕಗಳ ಸುಲಲಿತ ಸಂಚಾರ, ಲಯದ ಮೇಲಿನ ಪ್ರಭುತ್ವ, ನವೀನ ಪ್ರಯೋಗಶೀಲತೆ, ಆಕರ್ಷಕ ಶೈಲಿ ಹೀಗೆ ವಿವಿಧ ರೀತಿಯ ಗುಣಗಳಿಂದ ಪ್ರಸಿದ್ಧಿಗೊಂಡಿರುವಂತದ್ದು. ಅಂತೆಯೇ ಹಿರಿಯ ಕಿರಿಯರೆಲ್ಲರೊಂದಿಗೆ ಒಂದಾಗಿ ಬೆರೆಯುವ ಅವರ ಸರಳ ಸದ್ಗುಣಗಳು ಕೂಡಾ ಆದರ್ಶಪ್ರಾಯವಾದುದು. ನಾಡಿನಾದ್ಯಂತವಲ್ಲದೆ ವಿದೇಶಗಳಲ್ಲೂ ಅವರ ಸಂಗೀತಸ್ವಾದ ಅಭಿಮಾನಿಗಳನ್ನು ತಣಿಸುತ್ತಾ ಬಂದಿವೆ.
ಆರ್.ಕೆ. ಪದ್ಮನಾಭ ಅವರು 1990ರ ವರ್ಷದಲ್ಲಿ ಸ್ಥಾಪಿಸಿದ 'ಶಾರದಾ ಕಲಾಕೇಂದ್ರ ಸಂಗೀತ ಸಂಸ್ಥೆ’ ಮೂಲಕ ಅನೇಕ ಯಶಸ್ವೀ ಸಂಗೀತಕಾರರನ್ನು ತಯಾರು ಮಾಡಿದ್ದಾರೆ. ಅವರ ವಿದ್ಯಾರ್ಥಿಗಳಿಗೆ 'ಗಾನಚಕ್ರ'ವೆಂಬ ಸಂಗೀತ ಪ್ರವಾಸ ಕಾರ್ಯಕ್ರಮಗಳು ಆಗ್ಗಿಂದಾಗ್ಗೆ ನಡೆಯುತ್ತಿವೆ. ಸಂಗೀತಾಸಕ್ತರ ಈ ಪ್ರವಾಸಗಳಲ್ಲಿ ಶಿಷ್ಯರು ತಮ್ಮ ಜ್ಞಾನಾರ್ಜನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಸಂಗೀತ ಪ್ರದರ್ಶನಗಳನ್ನು ಕೊಟ್ಟು, ಕೇಳಿ ಸವಿಯುವ ವಿಸ್ತೃತ ಸೌಭಾಗ್ಯಕ್ಕೆ ಆಸ್ಪದ ಉಂಟು. ಈ ಮೂಲಕ ಉತ್ತಮ ಕಲಾವಿದರೂ, ಶ್ರೋತೃಗಳೂ, ಸಂಘಟಕರೂ, ಗುಣಮಟ್ಟದ ನಾಯಕರೂ ಆಗುವ ವಿಶಿಷ್ಟ ವ್ಯವಸ್ಥೆ ಇಲ್ಲಿದೆ.
ಆರ್.ಕೆ. ಪದ್ಮನಾಭ ಅವರು, ತಮ್ಮ ಮೇಲೆ ವಾದಿರಾಜರ ಕೃಪಾಶೀರ್ವಾದ ಹರಿದಿದೆ ಎಂದು ಭಕ್ತಿಭಾವ ತುಂಬಿಕೊಂಡವರು. ವಾದಿರಾಜರ ಅನೇಕ ಕೃತಿಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಪದ್ಮನಾಭ ಅವರದ್ದು. ಹಲವು ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ 'ಹುಳಿಮಾವು' ಪ್ರದೇಶದಲ್ಲಿ ನಿರ್ಮಿತಗೊಂಡಿರುವ 'ವಾದಿರಾಜ ಕಲಾ ಭವನ' ಸಂಗೀತಕ್ಕಾಗಿಯೇ ಮುಡಿಪುಗೊಂಡಿರುವ ಏಕೈಕ ಭವನ. 1999ರ ವರ್ಷದಲ್ಲಿ 'ಶ್ರೀ ಮಧ್ವಾಧಿರಾಜ ಆರಾಧನಾ ಟ್ರಸ್ಟ್' ಮೂಲಕ ಉದ್ಘಾಟನೆಗೊಂಡ ಈ ಸ್ಥಾವರ ಈಗ ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಆರ್. ಕೆ ಪದ್ಮನಾಭ ಅವರ ಕ್ರಿಯಾಶೀಲತೆಯ ಮೂಲಕ 'ರುದ್ರಪಟ್ಟಣ'ದಲ್ಲಿ 'ನಾದಲೋಕ' ವೆಂಬ ವಿನೂತನ ಬಡಾವಣೆ ನಿರ್ಮಿತವಾಗಿದ್ದು, 'ಸರಸ್ವತಿ', 'ಸುಪ್ರದೀಪ', 'ಬಿಂದುಮಾಲಿನಿ', ಮುಂತಾದ ರಾಗಗಳ ಪ್ಲಾಟ್ಗಳು ಎದ್ದು ನಿಂತಿವೆ. ಮುಖ್ಯರಸ್ತೆಯಲ್ಲಿ ಸಂಗೀತ ಶಾಸ್ತ್ರವನ್ನು ಬಿಂಬಿಸುವಂತಹ 'ಮೇಳ ಮಾಲಾವೃತ್ತ' ರಚನೆಯಾಗಿದೆ. ಸಂಗೀತದೇವತೆ ಸರಸ್ವತಿಯೊಂದಿಗೆ 6 ವಾಗ್ಗೇಯಕಾರರ ವಿಗ್ರಹಗಳನ್ನೊಳಗೊಂಡ ಆಧುನಿಕ ವಿಶಿಷ್ಠ ತಾಂತ್ರಿಕ ವ್ಯವಸ್ಥೆಯಿರುವ ತಂಬೂರಿ ಆಕಾರದ 60 ಅಡಿ ಎತ್ತರದ ದೇಗುಲ ಸ್ಥಾಪನೆಯಾಗಿದೆ.
ಸ್ವಯಂ ವಾಗ್ಗೇಯಕಾರರಾದ ಆರ್.ಕೆ.ಪದ್ಮನಾಭ ಅವರು ಪುರಂದರದಾಸ, ವಿಜಯದಾಸ, ಗೋಪಾಲದಾಸ ಹೀಗೆ ಹಲವಾರು ದಾಸವರೇಣ್ಯರ ಏಕವ್ಯಕ್ತಿ ವಾಗ್ಗೇಯಕಾರರ ಕೃತಿಗಳನ್ನಾಧರಿಸಿ, ಸಂಪೂರ್ಣ ಕಛೇರಿಗಳನ್ನು ತಾವೂ ನಡೆಸಿಕೊಟ್ಟು, ಶಿಷ್ಯರಿಂದಲೂ ನಡೆಯುವಂತೆ ಮಾಡಿದ್ದಾರೆ. 'ಪದ್ಮನಾಭದಾಸ' ಎಂಬ ಮುದ್ರೆಯಿಂದ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 'ಹಯಾಸ್ಯೇ', 'ಮಾನಸೋಲ್ಲಾಸಿನೀ', 'ಪ್ರಭಾಮಣಿ', 'ರಾಮಸುಧ' ಮುಂತಾದ ಹೊಸರಾಗಗಳನ್ನು ಸೃಷ್ಟಿಸಿ ಕರ್ನಾಟಕ ಸಂಗೀತಕ್ಕೆ ವಿಶೇಷ ಕೊಡುಗೆ ಸಲ್ಲಿಸಿದ್ದಾರೆ. ಪ್ರತಿವರ್ಷವೂ ವಾದಿರಾಜ ಕಲಾಭವನದಲ್ಲಿ 4 ದಿನಗಳ ಉಚಿತ ಶಿಬಿರವನ್ನು ಆರಂಭಿಕ ಹಂತದ ವಿದ್ಯಾರ್ಥಿಗಳಿಗೆ ಹಾಗೂ ಉದಯೋನ್ಮುಖ ಕಲಾವಿದರ ಉಪಯೋಗಕ್ಕಾಗಿ ಆಯೋಜಿಸುತ್ತಾ ಬಂದಿದ್ದಾರೆ. ರುದ್ರಪಟ್ಟಣ, ಹಾಗೂ ರಾಜ್ಯದ ಅನೇಕ ಕಡೆಗಳಲ್ಲಿ ನಿರಂತರ ಸಂಗೀತ ಶಿಕ್ಷಣ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ.
ಆರ್. ಕೆ. ಪದ್ಮನಾಭ ಅವರು ಸಾಮೂಹಿಕವಾಗಿ ಹಾಡುವ ಕಲೆ, 'ಅದ್ವರ್ಯು' ಗೋಷ್ಟಿಯಲ್ಲಿ, ನೂರಾರು ಕೃತಿಗಳನ್ನು ಬೋಧಿಸಿ, ಸಹಸ್ರ ಕಂಠಗಳಲ್ಲಿ ಹಾಡಿಸಿದ್ದಾರೆ. ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು, ನವಗ್ರಹ ಕೃತಿಗಳು, ಚತುರ್ದಶ ರಾಗಮಾಲಿಕಾ, ತ್ಯಾಗರಾಜರ ಘನ ಪಂಚರತ್ನ ಕೀರ್ತನಗಳು, ವಾದಿರಾಜ ಸ್ವಾಮಿಗಳ ಲಕ್ಷ್ಮೀ ಶೋಭಾನೆ, ಪುರಂದರ ದಾಸರ ನವರತ್ನ ಕೀರ್ತನಗಳು, ಶ್ಯಾಮಾಶಾಸ್ತ್ರಿಗಳ ಸ್ವರಜತಿಗಳು, ಮುಂತಾದ ಕ್ಲಿಷ್ಟ ಪಾಠಗಳನ್ನು ಸಾವಿರಾರು ಕಂಠಗಳಲ್ಲಿ ಒಟ್ಟಾಗಿ ಮೊಳಗುವಂತೆ ಮಾಡಿದ್ದಾರೆ.
ಮೈಸೂರು ವಾಸುದೇವಾಚಾರ್ಯರ ಸಮಗ್ರ ಕೃತಿ, ವರ್ಣ, ತಿಲ್ಲಾನ, ಚಾವಳಿಗಳನ್ನೊಳಗೊಂಡ 21 ಸಂಪುಟಗಳ ದ್ವನಿಸುರುಳಿಗಳನ್ನೂ, ಆಚಾರ್ಯರ ಮೊಮ್ಮಗ, ಕರ್ನಾಟಕ ಕಲಾಶ್ರೀ ಬಿರುದಾಂಕಿತ ಶ್ರೀಯುತ ಎಸ್. ಕೃಷ್ಣಮೂರ್ತಿ ಅವರ ನೆರವಿನೊಂದಿಗೆ 24 ಪುಸ್ತಕಗಳನ್ನೂ ಹೊರತಂದು ಆಚಾರ್ಯರ ಸಮಗ್ರ ಕೊಡುಗೆ ಸಂಗೀತಾಸಕ್ತರಿಗೆ ತಲುಪುವಂತೆ ಮಾಡಿದ್ದಾರೆ. ಕರ್ನಾಟಕದ ಪ್ರಸಿದ್ಧ ವಿದ್ವಾಂಸರುಗಳಲ್ಲಿ ಅನೇಕರು ಈ ದ್ವನಿಸುರುಳಿಗಳಲ್ಲಿ ಹಾಡಿದ್ದಾರೆ. ಇದಲ್ಲದೆ ಮೇಲೆ ಹೆಸರಿಸಿದ ಸಂಗೀತ ಶ್ರೇಷ್ಠ ತಪಸ್ವಿಗಳು ಮತ್ತು ದಾಸವರೇಣ್ಯರುಗಳ ಅನೇಕಾನೇಕ ಕೃತಿಗಳೂ ಧ್ವನಿಸುರುಳಿಗಳಾಗಿ ಬೆಳಕಾಗಲು ಶ್ರಮವಹಿಸಿದ್ದಾರೆ.
ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಸದಸ್ಯರಾಗಿ ಸಹಾ ಸೇವೆ ಸಲ್ಲಿಸಿರುವ ಆರ್.ಕೆ. ಪದ್ಮನಾಭ ಅವರು ತಮ್ಮ ಕಾರ್ಯಾವಧಿಯಲ್ಲಿ ನಾಡಿನಾದ್ಯಂತ ಸಂಗೀತ ಸುಧೆ ಹರಿಯಲು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಕೀರ್ತಿಗೂ ಪಾತ್ರರಾಗಿದ್ದಾರೆ.
ಈ ಮಹತ್ವದ ಸಾಧಕರಾದ ಪದ್ಮನಾಭರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೇ ಅಲ್ಲದೆ, ನಾಡಿನಾದ್ಯಂತ ಅನೇಕ ಪ್ರಮುಖ ವೇದಿಕೆಗಳಿಂದ ಬಿರುದು ಸನ್ಮಾನಗಳನ್ನೊಳಗೊಂಡ ಗೌರವಗಳು ನಿರಂತರವಾಗಿ ಜೊತೆ ಸಾಗುತ್ತಲೇ ಇವೆ. ಇವೆಲ್ಲವನ್ನೂ ಮೀರಿದಂತೆ ಅವರ ಸಂಗೀತ ಮತ್ತು ಸಾಂಸ್ಕೃತಿಕ ಸೇವೆ ಮತ್ತು ರಾಯಭಾರಿತ್ವ ಕೂಡಾ. ಈ ಮಹಾನುಭಾವರ ಹಿರಿತನದ ಬದುಕು ಸುಖ, ಸಂತಸ, ಸಮೃದ್ಧಿಗಳೊಂದಿಗೆ ಬೆಳಗುವುದರೊಂದಿಗೆ, ಕಲಾ ಲೋಕಕ್ಕೆ ಮಾರ್ಗದರ್ಶಕವಾಗಿ ಸಹಾ ಸಾಗುತ್ತಿರಲಿ ಎಂದು ಆಶಿಸುತ್ತಾ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಸಲ್ಲಿಸೋಣ.
On the birth day of great musician Vidwan R K Padmanabha Sir
ಕಾಮೆಂಟ್‌ಗಳು