ಈಶ್ವರಚಂದ್ರ
ಈಶ್ವರಚಂದ್ರ ವಿದ್ಯಾಸಾಗರ
ಈಶ್ವರಚಂದ್ರರು ಬರಹಗಾರರಾಗಿ, ಸಮಾಜ ಸುಧಾರಕರಾಗಿ, ಪ್ರಾಧ್ಯಾಪಕರಾಗಿ ಪ್ರಸಿದ್ಧರಾದವರು. ಕಲ್ಕತ್ತ ಸಂಸ್ಕೃತ ಕಾಲೇಜು ಅವರಿಗೆ ನೀಡಿದ ವಿದ್ಯಾಸಾಗರ ಬಿರುದು ಸೇರಿ ‘ಈಶ್ವರ ಚಂದ್ರ ವಿದ್ಯಾಸಾಗರ’ ಎಂಬ ಹೆಸರು ಬಳಕೆಗೆ ಬಂತು.
ಈಶ್ವರಚಂದ್ರರ ವಿನಯಪೂರ್ಣ ನಡವಳಿಕೆ ಬಹಳ ಪ್ರಸಿದ್ಧವಾದುದು. 1820ರಿಂದ 1891ರವರೆಗೆ ಜೀವಿಸಿದ್ದ ವಿದ್ಯಾಸಾಗರರು ರಾಮಕೃಷ್ಣ ಪರಮಹಂಸರಿಗೆ ಪ್ರಿಯರಾಗಿದ್ದರು. ಪರಮಹಂಸರ ಜನ್ಮಭೂಮಿ ಹೂಗ್ಲಿ ಜಿಲ್ಲೆಯಲ್ಲಿರುವ ಕಾಮಾರಕಪುರ. ಅದರ ಹತ್ತಿರದಲ್ಲಿರುವ ವೀರಸಿಂಗ್ ಎಂಬ ಗ್ರಾಮದಲ್ಲೇ ಈಶ್ವರಚಂದ್ರ ವಿದ್ಯಾಸಾಗರರು 1820ರ ಸೆಪ್ಬೆಂಬರ್ 26ರಂದು ಜನ್ಮತಳೆದರು.
ಶ್ರೀರಾಮಕೃಷ್ಣ ‘ವಚನವೇದ’ದಲ್ಲಿ ಸ್ವಯಂ ಶ್ರೀರಾಮಕೃಷ್ಣ ಪರಮಹಂಸರೇ ಈಶ್ವರಚಂದ್ರ ವಿದ್ಯಾಸಾಗರರನ್ನು ಕಾಣಬೇಕೆಂದು ಇಚ್ಛೆಪಟ್ಟು ಅವರ ಮನೆಗೆ ಹೋಗಿ ಸಂಭಾಷಿಸಿದ ಘಟನೆಗಳ ವರ್ಣನೆ ಇದೆ. ಈಶ್ವರಚಂದ್ರರನ್ನು ಕಂಡೊಡನೆಯೇ ಶ್ರೀರಾಮಕೃಷ್ಣರು ನುಡಿಯುತ್ತಾರೆ: “ಆಹಾ! ಇಂದು ಸಾಗರಕ್ಕೆ ಬಂದು ಸೇರಿಬಿಟ್ಟಿದ್ದೇನೆ. ಇಲ್ಲಿಯವರೆಗೆ ಕಾಲುವೆ, ಜೌಗು ಭೂಮಿ, ಅತಿ ಹೆಚ್ಚೆಂದರೆ ನದಿ ಇವನ್ನು ನೋಡಿದ್ದೆ. ಆದರೆ ಇಂದು ಸಾಗರವೇ ನನ್ನ ಕಣ್ಣೆದುರಿಗೆ!”. ಶ್ರೀರಾಮಕೃಷ್ಣರೊಡನೆ ಅವರ ಮಾತುಕತೆಗಳು ಅಧ್ಯಾತ್ಮದ ಆಳದ ಜೊತೆಗೆ ವಿನೋದಪೂರ್ಣವಾಗಿಯೂ, ವಿದ್ವತ್ಪೂರ್ಣವಾಗಿಯೂ ಇವೆ.
ಈಶ್ವರಚಂದ್ರ ವಿದ್ಯಾಸಾಗರರು ದೊಡ್ಡ ವಿದ್ಯಾವಂತರು, ಶಿಕ್ಷಣ ಸಮರ್ಥರು, ಬರಹಗಾರರು, ಪರೋಪಕಾರಿ ಮುಂತಾದಾಗಿ ಪ್ರಸಿದ್ಧಿ ಪಡೆದಿದ್ದವರು. ಆಧುನಿಕ ಬಂಗಾಳಿಯನ್ನು ಪೋಷಿಸಿದವರಲ್ಲಿ ಅವರು ಪ್ರಮುಖರು. ಸಂಸ್ಕೃತ ವ್ಯಾಕರಣದಲ್ಲಿ ಮತ್ತು ಪದ್ಯಕಾವ್ಯದಲ್ಲಿ ಮಹಾಪಂಡಿತರು. ಬೇತಾಳ್ ಪಂಚಬಿನ್ಸತಿ, ಬಂಗಾಲ-ರ ಇತಿಹಾಸ್, ಜೀಬನ್ ಚರಿತ್, ಬೋಧಡೋಯ್, ಉಪಕ್ರಮಣಿಕ, ಶಾಕುಂತಲ, ಬಿಧಬಾ ಬಿಧಬಾ ಬಿಷಾಯಕ್ ಪ್ರೋಸ್ತಾಬ್, ಬಾಮಾ ಪರಿಚಯ್, ಋಜುಪತ್, ಸಂಸ್ಕೃತ ವ್ಯಾಕರಣ ಉಪಕ್ರಮಣಿಕ, ವ್ಯಾಕರಣ ಕೌಮುದಿ ಮುಂತಾದ ಅನೇಕ ವಿದ್ವತ್ಪೂರ್ಣ ಕೃತಿಗಳನ್ನು ಅವರು ರಚಿಸಿದ್ದರು.
ಈಶ್ವರಚಂದ್ರ ವಿದ್ಯಾಸಾಗರರು ವಿಧವಾವಿವಾಹಗಳನ್ನು ಪ್ರೋತ್ಸಾಹಿಸಿದರು. ಹಿಂದೂ ಧರ್ಮದಲ್ಲಿ ಅನಿರ್ಬಂಧಿತ ಬಹುಪತ್ನಿತ್ವವು ಶಾಸ್ತ್ರಸಮ್ಮತವಾದದ್ದು ಎಂಬ ನಂಬಿಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಜನರಲ್ಲಿ ಆ ಕುರಿತಾಗಿ ಮನೆಮಾಡಿದ್ದ ಮೂಢನಂಬಿಕೆಗಳ ಬಗ್ಗೆ ತಿಳುವಳಿಕೆ ನೀಡಲು ಶ್ರಮಿಸಿದರು.
ಈಶ್ವರಚಂದ್ರರ ಔದಾರ್ಯ ಅವರ ಹೆಸರನ್ನು ಮನೆಮಾತಾಗಿಸಿಬಿಟ್ಟಿಸಿತ್ತು. ಅವರ ಆದಾಯದ ಬಹುಭಾಗ ವಿಧವೆಯರ, ಅನಾಥರ, ದಿಕ್ಕಿಲ್ಲದವರ, ದರಿದ್ರರ, ಇನ್ನೂ ಬೇರೆ ಬೇರೆ ಕಷ್ಟದಲ್ಲಿರುವವರ ಕಣ್ಣೀರು ಒರೆಸಲು ಹೋಗುತ್ತಿತ್ತು. ಅವರ ಸಹಾನುಭೂತಿ ಮಾನವ ಕುಲದ ಎಲ್ಲೆಯೊಳಗೇ ನಿಂತಿರಲಿಲ್ಲ. ಕರುಗಳಿಗೆ ಹಾಲು ದೊರಕಲಿ ಎಂದು ಅನೇಕ ವರ್ಷಗಳ ಕಾಲ ಅವರು ಹಾಲನ್ನೇ ಕುಡಿಯಲಿಲ್ಲ. ಕುದುರೆಗಳಿಗೆ ಕಷ್ಟಕೊಡಬೇಕಾಗುತ್ತದೆಂದು ಗಾಡಿಯನ್ನೇ ಹತ್ತುತ್ತಿರಲಿಲ್ಲ. ಅವರು ಸ್ವಾತಂತ್ರ್ಯಪ್ರೇಮಿ; ಮೇಲಧಿಕಾರಿಗಳೊಡನೆ ಭಿನ್ನಾಭಿಪ್ರಾಯ ಬೆಳೆದುದರಿಂದ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲ್ ಪದವಿಯನ್ನೇ ತ್ಯಾಗಮಾಡಿಬಿಟ್ಟರು. ತಮ್ಮ ತಾಯನ್ನು ಕಂಡರೆ ಅವರಿಗೆ ಬಹಳ ಪ್ರೀತಿ. ತಾನು ತಮ್ಮ ತಮ್ಮನ ವಿವಾಹ ಸಮಯದಲ್ಲಿ ಹಾಜರಿರುವೆನೆಂದು ತಾಯಿಗೆ ವಾಗ್ದಾನ ಮಾಡಿದ್ದುದರಿಂದ ಯಾವ ಪ್ರಾಣಾಪಾಯಕ್ಕೂ ಹೆದರದೆ, ದೋಣಿ ಸಿಕ್ಕದೆ ಹೋದುದರಿಂದ ಹುಚ್ಚುಪ್ರವಾಹ ಬಂದಿದ್ದ ದಾಮೋದರಾ ನದಿಯನ್ನೇ ಈಜಿ ದಾಟಿ ತಮ್ಮ ಮಾತನ್ನು ಉಳಿಸಿಕೊಂಡರು. ಆತ ಸರಳತೆಯ ಮೂರ್ತಿಯೇ ಆಗಿದ್ದರು. ವಿದ್ಯಾಸಾಗರ ಎಂಬ ಹೆಸರಿಗೆ ತಕ್ಕಂತೆ ಅವರು ವಿದ್ಯೆಯ ಸಾಗರವೇ ಆಗಿದ್ದರು.
ಕಲ್ಕತ್ತೆಯ ಸಂಸ್ಕೃತ ಕಾಲೇಜಿನಲ್ಲಿ ವ್ಯಾಕರಣ ಬೋಧನೆ ಮಾಡುವ ಪಂಡಿತರ ಅವಶ್ಯಕತೆ ಇತ್ತು. ಈ ಹುದ್ದೆಗೆ ಈಶ್ವರಚಂದ್ರರ ಹೆಸರನ್ನು ಸೂಚಿಸಲಾಗಿತ್ತು. ಆಗ ಅವರು ಬೇರೆ ಕಡೆ ಶಿಕ್ಷಕರಾಗಿ ತಿಂಗಳಿಗೆ 50ರೂ ವೇತನ ಪಡೆಯುತ್ತಿದ್ದರು. ಇಲ್ಲಿ ಅವರಿಗೆ 90ರೂಪಾಯಿಗಳ ಸಂಬಳ ನೀಡುವುದಾಗಿ ತಿಳಿಸಲಾಗಿತ್ತು. ಆಗಿನ ಕಾಲಕ್ಕೆ ಅದು ಉತ್ತಮ ವೇತನ. ವಿದ್ಯಾಸಾಗರರಿಗೆ ಹಣದ ಅವಶ್ಯಕತೆಯೂ ತುಂಬಾ ಇತ್ತು. ಆದರೆ ವಿದ್ಯಾಸಾಗರರು ಮಾಡಿದ್ದೇ ಬೇರೆ. ಅವರ ಪರಿಚಿತರೊಬ್ಬರು ಜೀವನದಲ್ಲಿ ತೊಂದರೆಯಲ್ಲಿದ್ದು ತಮಗಿಂತಲೂ ಹೆಚ್ಚಿನ ವ್ಯಾಸಂಗ ಮಾಡಿದ್ದವರಾದ್ದರಿಂದ ಅವರನ್ನೇ ಈ ಹುದ್ದೆಗೆ ನೇಮಕ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ಮಾಡಿದ್ದಲ್ಲದೆ, ತಮ್ಮ ಪ್ರಸ್ತಾಪಕ್ಕೆ ಆಡಳಿತ ಮಂಡಲಿಯನ್ನೂ ಒಪ್ಪಿಸಿದರು. ಸ್ನೇಹಿತನ ನಿರಹಂಕಾರ ಪ್ರವೃತ್ತಿಯನ್ನೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನೂ ನೋಡಿ ತರ್ಕವಾಚಸ್ಪತಿ ಆಶ್ಚರ್ಯಪಟ್ಟರು. ‘ವಿದ್ಯಾಸಾಗರ, ನೀನು ಮನುಷ್ಯ ಮಾತ್ರವಲ್ಲಯ್ಯ, ನೀನು ಖಂಡಿತವಾಗಿ ಮಾನವರೂಪಿ ದೇವನೇ ಹೌದು’ ಎಂದು ಉದ್ಘರಿಸಿದರು. ಕೊನೆಯವರೆಗೂ ಅವರು ವಿದ್ಯಾಸಾಗರರ ಸಹಾಯವನ್ನು ಸ್ಮರಿಸುತ್ತಾ ಉತ್ತಮ ಅಧ್ಯಾಪಕರಾಗಿ ಹೆಸರು ಗಳಿಸಿದರು. ಹೀಗೆ ಈಶ್ವರಚಂದ್ರ ವಿದ್ಯಾಸಾಗಾರರು ಅತಿ ಶ್ರೇಷ್ಠ ಗುಣಗಳನ್ನು ಈ ಭುವಿಯಲ್ಲಿ ಬಿಟ್ಟು ಹೋಗಿದ್ದಾರೆ.
ಈಶ್ವರಚಂದ್ರ ವಿದ್ಯಾಸಾಗರರು 1891ರ ಜುಲೈ 29ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On the birth anniversary of scholar and reformist Eshwar Chandra Vidya Sagar
ಕಾಮೆಂಟ್‌ಗಳು