ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೋಭಾ


 ಶೋಭಾ


"ಸವಿ ನೆನಪುಗಳು ಬೇಕು ಸವಿಯಲೀ ಬದುಕು" ಎಂದು ಕಾಶೀನಾಥರ 'ಅಪರಿಚಿತ' ಚಿತ್ರದಲ್ಲಿ ಬದುಕನ್ನು ಅರಸುತ್ತಾ ಭಯಭೀತಳಾಗಿ ಅಭಿನಯಿಸಿದ ಶೋಭಾ ನನ್ನನ್ನು ಅಪಾರವಾಗಿ ಆವರಿಸಿದ ಕಲಾವಿದೆ. 'ಸ್ವೀಟ್ ಸ್ಯಾಡ್ ಫೇಸ್' ಎಂಬುದು ನನಗೆ ಕಾಡಿದ ನಾಣ್ಣುಡಿ.  ಅದಕ್ಕೆ ಶೋಭಾ ಅಷ್ಟು ಶೋಭೆಯಾದ ವ್ಯಕ್ತಿ ಮತ್ತೊಬ್ಬರಿಲ್ಲ.

ನಟಿ ಶೋಭಾ 1962ರ ಸೆಪ್ಟೆಂಬರ್ 23ರಂದು ಜನಿಸಿದರು.  ಆಕೆಯ ಮನೆಯ ಹೆಸರು ಮಹಾಲಕ್ಷ್ಮಿ ಮೆನನ್. ತಂದೆ ಕೆ. ಪಿ. ಮೆನನ್.  ತಾಯಿ ಪ್ರೇಮಾ ಮೆನನ್ 1950ರ ದಶಕದಲ್ಲಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು.

ಮಹಾಲಕ್ಷ್ಮಿ ಮೆನನ್ 1966ರ ವರ್ಷದಲ್ಲಿ 'ತಟ್ಟುಂಗಳ್ ತಿರಕ್ಕಪ್ಪಡುಮ್' ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದರು. ಮುಂದಿನ ವರ್ಷ ಮಲಯಾಳಂನ 'ಉದ್ಯೋಗಸ್ಥ' ಚಿತ್ರದಲ್ಲಿ ನಟಿಸಿದಾಗ ಅವರ ಹೆಸರು 'ಬೇಬಿ ಶೋಭಾ' ಎಂದಾಯಿತು. ಈ ಚಿತ್ರ ಬಹು ಯಶಸ್ವಿಯಾಗಿ ಶೋಭಾಗೂ ಖ್ಯಾತಿ ತಂದಿತು.

ತಮಿಳು ಮತ್ತು ಮಲಯಾಳಂನಲ್ಲಿ ಶೋಭಾ ನಿರಂತರವಾಗಿ ಬಾಲನಟಿಯಾಗಿ ಹಾಗೂ ಸುಮಾರು 14ರ ವಯಸ್ಸಿನಲ್ಲೇ ಅನೇಕ ಚಿತ್ರಗಳಲ್ಲಿನ ನಾಯಕಿಯಾಗಿ ಅಭಿನಯಿಸಿದರು.  ಕನ್ನಡದ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ 'ಕೋಕಿಲಾ' ಚಿತ್ರದಲ್ಲಿ ಶೋಭಾ 1977ರಲ್ಲಿ ಅಭಿನಯಿಸಿದರು.  ಬಾಲು ಮಹೇಂದ್ರ ನಿರ್ದೇಶಿಸಿದ ಈ ಚಿತ್ರ ಶೋಭಾ ಅವರ ಜೊತೆಗೆ ಕಮಲಹಾಸನ್, ಕೋಕಿಲಾ ಮೋಹನ್ ಮತ್ತು ರೋಜಾರಮಣಿ ಅಂತಹ ಪ್ರತಿಭೆಗಳೊಂದಿಗೆ ಹೊಸತನವನ್ನು ತಂದ ಸೊಗಸಾದ ಚಿತ್ರ.

1978ರಲ್ಲಿ ಶೋಭಾ, ಕಾಶೀನಾಥ್ ಅವರ  ಪ್ರಸಿದ್ಧ 'ಅಪರಿಚಿತ' ಚಿತ್ರದಲ್ಲಿ ಅಭಿನಯಿಸಿದರು. ಆ ಚಿತ್ರದಲ್ಲಿನ ಶೋಭಾ ಮಾಡಿದ ಮೋಡಿಯನ್ನು ಪ್ರಾರಂಭದಲ್ಲೇ ಹೇಳಿದೆ. ಶೋಭಾ ಅವರ ಮರಣದ ನಂತರ  'ಅಮರ ಮಧುರ ಪ್ರೇಮ' ಬಂತು.

1979ರಲ್ಲಿ ಬಂದ ತಮಿಳಿನ 'ಪಸಿ' (ಹಸಿವು) ಎಂಬ ಚಿತ್ರದ ಅಭಿನಯಕ್ಕೆ ಶೋಭಾ'ಗೆ ರಾಷ್ಟ್ರೀಯ ಪ್ರಶಸ್ತಿ ಬಂತು.  ಶೋಭಾ ಅಭಿನಯಿಸಿದ ಕನ್ನಡ ಚಿತ್ರಗಳು, ತಮಿಳಿನ ಪಸಿ, ನಿಳಲ್ ನಿಜಮಾಗಿರದು, ಮುಳ್ಳುಂ ಮಲರುಂ, ಅಳಿಯಾದ ಕೋಲಂಗಳ್, ಮೂಡುಪನಿ, ಮಲಯಾಳದ 'ದ್ವೀಪ್' ಮುಂತಾದ ಅನೇಕ ಚಿತ್ರಗಳಲ್ಲಿ ನಾನು ಶೋಭಾ ಅವರ ಅಭಿನಯವನ್ನು ನೋಡಿ ಸಂತೋಷಿಸಿದ್ದೆ.  ನೋವು, ಹೆದರಿಕೆ, ಬಡತನದ ಬಳಲಿಕೆ ಇತ್ಯಾದಿಗಳ ಅಭಿನಯದ ಭಾವದ ನಡುವೆ ಆಕೆ ಚಿಮ್ಮಿಸಿದ ಕಿರುನಗೆಯ ಮುಖಭಾವ ಅಪ್ಯಾಯಮಾನವಾದ್ದು.

ರಾಷ್ಟ್ರಪ್ರಶಸ್ತಿ ಅಲ್ಲದೆ 'ಅಪರಿಚಿತ' ಚಿತ್ರದ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ, ಹಲವು ಚಲನಚಿತ್ರಗಳ ಅಭಿನಯಕ್ಕೆ ಕೇರಳ ರಾಜ್ಯದ ಪ್ರಶಸ್ತಿಗಳನ್ನು  ಶೋಭಾ ಗಳಿಸಿದ್ದರು.

ಇಂತಹ ಅದ್ಭುತ ನಟಿ ಇನ್ನೂ 16ರ ಹರಯದಲ್ಲೇ ಪ್ರಸಿದ್ಧ ನಿರ್ದೇಶಕ ಮತ್ತು ತಂತ್ರಜ್ಞ ಬಾಲು ಮಹೇಂದ್ರ ಅವರನ್ನು ವರಿಸಿದ್ದರು. 1980ರ ಮೇ 1ರಂದು,  17ರ ವಯಸ್ಸಿನಲ್ಲೇ ಅತ್ಮಹತ್ಯೆ ಕೂಡಾ ಮಾಡಿಕೊಂಡುಬಿಟ್ಟರು.  ಆ ವೇಳೆಗಾಗಲೇ ಅವರು ಸುಮಾರು 75 ಚಿತ್ರಗಳಲ್ಲಿ ನಟಿಸಿದ್ದು ಕಾಣಬರುತ್ತೆ.  

ಇಂಥಹ ಅಸಮಾನ್ಯ ಪ್ರತಿಭೆ ಹೀಗೆ ಆತ್ಮಹತ್ಯೆಗೆ ಬದುಕು ಕಳೆದುಕೊಂಡರೆ ಏನೆನ್ನಬೇಕು?  ಸಾಧಾರಣಳಂತಿದ್ದ ಈ ಹುಡುಗಿ ಚಲನಚಿತ್ರರಂಗದಲ್ಲಿ ಉಳಿಸಿಹೋದ ಪ್ರತಿಭೆ ಮರೆಯಲಾಗದ್ದು.

On the birth anniversary of unlimited talent of very limited life, unforgettable Shobha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ