ಹಂಪ ನಾಗರಾಜಯ್ಯ
ಹಂಪ ನಾಗರಾಜಯ್ಯ
ಹಂಪ ನಾಗರಾಜಯ್ಯನವರು ಭಾಷಾ ವಿಜ್ಞಾನಿಗಳಾಗಿ, ಗ್ರಂಥ ಸಂಪಾದಕರಾಗಿ, ಶ್ರೇಷ್ಠವಾಗ್ಮಿಗಳಾಗಿ, ಅಧ್ಯಾಪಕರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ ಹೆಸರಾದವರು.
'ಹಂಪನಾ’ ಎಂದೇ ಪ್ರಸಿದ್ಧರಾದ ನಾಗರಾಜಯ್ಯನವರು 1936ರ ಅಕ್ಟೋಬರ್ 7ರಂದು ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದಲ್ಲಿ ಜನಿಸಿದರು. ತಂದೆ ಪದ್ಮನಾಭಯ್ಯನವರು. ತಾಯಿ ಪದ್ಮಾವತಮ್ಮನವರು. ನಾಗರಾಜಯ್ಯನವರ ಪ್ರಾರಂಭಿಕ ಶಿಕ್ಷಣ ಗೌರಿಬಿದನೂರು, ಮಧುಗಿರಿಗಳಲ್ಲಾಯಿತು. ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದ ಅವರು ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಮತ್ತು ಎಂ.ಎ ಪದವಿಗಳನ್ನು ಪಡೆದರು. ವಡ್ಡಾರಾಧನೆಯ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಅವರಿಗೆ ಪಿಎಚ್.ಡಿ ಪದವಿ ಸಂದಿತು.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಹಂಪ ನಾಗರಾಜಯ್ಯನವರು ಮಂಡ್ಯ, ದಾವಣಗೆರೆ, ಶಿವಮೊಗ್ಗ ಸರಕಾರಿ ಕಾಲೇಜುಗಳಲ್ಲಿ ಕಾರ‍್ಯ ನಿರ್ವಹಿಸಿದ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಬಂದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ ಹಂಪ ನಾಗರಾಜಯ್ಯನವರು, 1966-74 ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಗಳಾಗಿ, 1978-86 ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1977-79ರ ಅವಧಿಯಲ್ಲಿ ಅವರು ಜೈನ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಜವಾಬ್ದಾರಿ ನಿರ್ವಹಿಸಿದರು.
ಹಂಪ ನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪರಿಷತ್ತಿನ ಚಟುವಟಿಕೆಗಳ ವಿಕೇಂದ್ರಿಕರಣ, ಗಡಿನಾಡು - ಹೊರನಾಡುಗಳಲ್ಲಿ ಪರಿಷತ್ತಿನ ಚಟುವಟಿಕೆ, ವಜ್ರ ಮಹೋತ್ಸವ ಕಟ್ಟಡ ನಿರ್ಮಾಣ, ಜಾನಪದ ವೈದ್ಯಕೋಶ, ಜಾನಪದ ವಿಶ್ವಕೋಶ, ಬೆಳ್ಳಿ ಬಿಟ್ಟ ಬಳ್ಳಿ ಮಾಲೆ, ಮಕ್ಕಳ ಪುಸ್ತಕಮಾಲೆ ಮುಂತಾದ ಕಾರ‍್ಯಕ್ರಮಗಳನ್ನು ಜಾರಿಗೊಳಿಸಿದರು. ಮಾಸ್ತಿಯವರ ‘ಜೀವನ’ ಪತ್ರಿಕೆಯ ಸಂಪಾದಕತ್ವವನ್ನು ಹಲವಾರು ವರ್ಷ ನಿರ್ವಹಿಸಿದರು.
ಭಾಷಾವಿಜ್ಞಾನಿಗಳಾಗಿ ಹಂಪನಾ ಅವರು ದ್ರಾವಿಡ ಭಾಷಾ ವಿಜ್ಞಾನ, ಭಾರತದ ಭಾಷಾ ಸಮಸ್ಯೆ, ಭಾಷಾ ವಿಜ್ಞಾನಿಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಪಂಪಭಾರತ ಸಂಗ್ರಹ, ಭರತೇಶ ವೈಭವ, ಧನ್ಯಕುಮಾರ ಚರಿತ್ರೆ, ನೇಮಿನಾಥ ಪುರಾಣ, ಶಾಂತಿ ಪುರಾಣ, ನಾಗಕುಮಾರ ಚರಿತೆ, ಸೌಳವ ಭಾರತ, ಚಂದ್ರಸಾಗರವರ್ಣಿಯ ಕೃತಿಗಳು, ರತ್ನಾಕರನ ಹಾಡುಗಳು, ದಾನಚಿಂತಾಮಣಿ ಅತ್ತಿಮಬ್ಬೆ ಮುಂತಾದವು ಅವರ ಸಂಪಾದನೆಗಳು. ಸಮಗ್ರ ಜೈನ ಸಾಹಿತ್ಯ ಸಂಪುಟಗಳ ಮಾಲಿಕೆಯಲ್ಲಿ ರನ್ನ, ಪೊನ್ನ, ಕಮಲ ಸಂಭವರ ಕೃತಿ ಸಂಪುಟಗಳನ್ನು ಸಂಪಾದಿಸಿದ್ದಾರೆ. ನಾಗಶ್ರೀ, ಸವ್ಯಸಾಚಿ ಪಂಪ ಅವರ ಕಾದಂಬರಿಗಳು. ಚಾರುವಸಂತ ಕಾವ್ಯ ಕೃತಿ. ಕರ್ನಾಟಕದ ಜಾತ್ರೆಗಳು, ಜಾನಪದ ಕಲಾವಿದರ ಸೂಚಿ ಅವರ ಜಾನಪದದ ಕುರಿತಾದ ಕೃತಿಗಳು. ಲಂಡನ್ ವಿಶ್ವವಿದ್ಯಾಲಯದಿಂದ ಅವರ ಬಾಹುಬಲಿ ಅಂಡ್ ಬಾದಾಮಿ ಚಾಲುಕ್ಯಾಸ್ ಕೃತಿ ಬಿಡುಗಡೆಗೊಂಡಿತು.
ಹಂಪನಾ ಅವರಿಗೆ ಕಾಸರಗೋಡು ಕನ್ನಡಿಗರ ಸಮ್ಮೇಳನಾಧ್ಯಕ್ಷತೆ, ಹೈದರಾಬಾದ್ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ, ಶ್ರವಣಬೆಳಗೊಳದ ಜೈನ ಶಾಸನ ಸಾಹಿತ್ಯ ಪ್ರಶಸ್ತಿ, ಅಮೇರಿಕಾ ಸಂಯುಕ್ತ ಸಂಸ್ಥಾನದ ಜೈನ್ ವರ್ಲ್ಡ್ ಫೌಂಡೇಷನ್ ಸಂಸ್ಥೆ ನೀಡಿರುವ ಜ್ಯೂವೆಲ್ಸ್ ಆಫ್ ಜೈನ್ ಅವಾರ್ಡ್, ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ವಿದ್ಯಾರ್ಥಿಗಳು ಮತ್ತು ಹಿತೈಷಿಗಳು ಪಚ್ಚೆತೆನೆ, ಸನ್ಮತಿ ಸೇರಿದಂತೆ ಐದು ಅಭಿನಂದನ ಗ್ರಂಥಗಳನ್ನು ಇವರಿಗೆ ಅರ್ಪಿಸಿದ್ದಾರೆ.
ಕನ್ನಡ ಸಾಹಿತ್ಯಲೋಕದ ಹಿರಿಯರಾದ ಹಂ.ಪ. ನಾಗರಾಜಯ್ಯನವರಿಗೆ ಜನ್ಮದಿನದ ಶುಭಹಾರೈಕೆಗಳು.
On the birthday of scholar Prof Hampa Nagarajaiah
ಕಾಮೆಂಟ್‌ಗಳು