ಹೇಮಮಾಲಿನಿ
ಹೇಮಮಾಲಿನಿ
ಹೇಮಮಾಲಿನಿ ಭಾರತೀಯ ಸಾಂಸ್ಕೃತಿಕ ರೂಪದಲ್ಲಿ ಗೋಚರಿಸುವ ರೂಪವತಿ ಅಭಿನೇತ್ರಿ, ನೃತ್ಯ ಕಲಾವಿದೆ ಮತ್ತು ರಾಜಕಾರಣಿ. ಹೇಮಮಾಲಿನಿ ತಮ್ಮಹಿಂದಿನ ತಲೆಮಾರಿನ ರಾಗಿಣಿ, ಪದ್ಮಿನಿ, ವೈಜಯಂತಿ ಮಾಲಾ ಮಾದರಿಯಲ್ಲಿ ಸಿನಿಮಾ ಲೋಕದಲ್ಲಿ ಶೋಭಿಸುತ್ತಾ ನಡೆದವರು.
ತೇಜಸ್ವೀ ರೂಪವತಿಯಾದ ಹೇಮಮಾಲಿನಿ ಅವರದ್ದು ಸುಂದರ ಕಣ್ಣು ಮತ್ತು ಸುಂದರ ಕೆನ್ನೆ. ಒಮ್ಮೆ ಲಾಲೂ ಪ್ರಸಾದ್ ಯಾದವ್ ‘ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯ ಕೆನ್ನೆಗಳನ್ನಾಗಿ ಪರಿವರ್ತಿಸುತ್ತೇನೆ’ ಎಂದು ಹೇಳಿದ್ದರು. ಆದರೆ ಲಾಲೂ ಆಡಿದ್ದು ಆಗಲಿಲ್ಲ. ಹೇಮಮಾಲಿನಿಗೆ ವಯಸ್ಸಾದರೂ ಅವರ ಕೆನ್ನೆಗೆ ನೆರಿಗೆ ಬಿದ್ದಿಲ್ಲ. ಹೇಮಾ ಅಪರೂಪದ ಲಾವಣ್ಯವತಿ.
ಹೇಮಮಾಲಿನಿ ತಮಿಳುನಾಡಿನ ತಂಜಾವೂರು ಜಿಲ್ಲೆಯ ಅಮ್ಮನಕುಡಿ ಎಂಬಲ್ಲಿ 1948ರ ಅಕ್ಟೋಬರ್ 16ರಂದು ಜನಿಸಿದರು. ತಂದೆ ವಿ.ಎಸ್.ಆರ್. ಚಕ್ರವರ್ತಿ ಮತ್ತು ತಾಯಿ ಜಯಾಚಕ್ರವರ್ತಿ. ಚೆನ್ನೈನಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು. 1961ರಲ್ಲಿ ಅವರು ತೆಲುಗಿನ 'ಪಾಂಡವ ವನವಾಸಮು' ಚಿತ್ರದಲ್ಲಿ ನರ್ತಕಿಯಾಗಿ ಚಿಕ್ಕ ಪಾತ್ರವನ್ನು ನಿರ್ವಹಿಸಿದರು. 1963ರಲ್ಲಿ 'ಇದು ಸತ್ಯಿಯಮ್' ಎಂಬ ತಮಿಳು ಚಿತ್ರದಲ್ಲಿ ನಟಿಸಿದರು. ಪ್ರಾರಂಭದಲ್ಲಿ ಅವರು ಅವಕಾಶಗಳನ್ನು ಅರಸಿದಾಗ ತಮಿಳು ನಿರ್ದೇಶಕ ಶ್ರೀಧರ್ ಆಕೆಗೆ ತಾರೆಯಾಗುವ ಆಕರ್ಷಣೆ ಇಲ್ಲ ಎಂದರಂತೆ. ಕನ್ನಡದಲ್ಲಿ ಅವಕಾಶ ಅರಸಿದಾಗ ಬಿ. ಆರ್. ಪಂತುಲು ಅವರು ಆಕೆ ಚಿತ್ರರಂಗಕ್ಕೆ ತುಂಬಾ ಸಣ್ಣ ಅಂದರಂತೆ. ಹೀಗಾಗಿ ಹಿಂದಿಗೆ ಹೊರಟರು. ಹೇಮಮಾಲಿನಿ ಅವರ ತಾಯಿಗೆ ತನ್ನ ಮಗಳನ್ನು ಚಿತ್ರತಾರೆ ಆಗಿಸಲೇಬೇಕು ಎಂದು ಛಲವಿತ್ತು.
1968ರಲ್ಲಿ 'ಸಪನೋಂಕ ಸೌದಾಘರ್'ನಲ್ಲಿ ನಟ ರಾಜ್‍ಕಪೂರ್ ಜೊತೆ ಅಭಿನಯಿಸಿದರು. ದೇವಾನಂದರ ಜೊತೆ 'ಜಾನಿ ಮೇರಾ ನಾಮ್', 'ತೇರೆ ಮೇರೆ ಸಪನೇ' ಗಳಲ್ಲಿ ಅವಕಾಶ ಲಭಿಸಿತು.
1972ರಲ್ಲಿ 'ಸೀತಾ ಔರ್ ಗೀತಾ'ದಲ್ಲಿ ಧರ್ಮೇಂದ್ರ ಮತ್ತು ಸಂಜೀವ್ ಕುಮಾರ್ ಜೊತೆ ದ್ವಿಪಾತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಗಳಿಸಿದರು. 'ಕನಸಿನ ಕನ್ಯೆ' ಎಂಬ ಖ್ಯಾತಿಗಳಿಸಿದ ಹೇಮಮಾಲಿನಿ ಅವರ ಈ ಪ್ರಸಿದ್ಧಿಯನ್ನು ಬಳಸಿ 1977ರಲ್ಲಿ 'ಡ್ರೀಮ್‍ಗರ್ಲ್' ಎಂಬ ಚಿತ್ರವೂ ಮೂಡಿಬಂತು.
ಹೇಮಮಾಲಿನಿ ಅವರು ಶೋಲೆ, ಚರಸ್, ಆಸ್ ಪಾಸ್, ಜುಗ್ನು , ಸೀತಾ ಔರ್ ಗೀತಾ , ದಿ ಬರ್ನಿಂಗ್ ಟ್ರೈನ್, ತ್ರಿಶೂಲ್, ಜೋಶೀಲ, ಲಾಲ್ ಪತ್ತರ್, ಮೀರಾ, ಸತ್ತೆ ಪೆ ಸತ್ತ, ಅಮೀರ್ ಗರೀಬ್, ಪ್ರೇಮ್ ನಗರ್, ಸಂನ್ಯಾಸಿ, ಮೆಹಬೂಬ, ಕಿನಾರ, ನಸೀಬ್, ರಿಹಾಯಿ, ಅಂಧಾ ಕಾನೂನ್ ಮುಂತಾದ ಅನೇಕ ಯಶಸ್ವೀ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹಿರಿತನದ ಪಾತ್ರದಲ್ಲಿ ‘ಭಾಗ್ಬಾನ್’ನಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ ಪಾತ್ರಗಳವರೆಗೆ ಅವರು ಕ್ರಮಿಸಿದ ದಾರಿ ವಿಶಿಷ್ಟವಾದದ್ದು. ಹಾಸ್ಯ, ಹೊಡೆದಾಟ, ಗ್ರಾಮೀಣ, ಕೌಟುಂಬಿಕ, ಕಲಾವಂತಿಕೆ, ಪೋಷಕ ಪಾತ್ರ ಹೀಗೆ ವಿವಿಧ ಭಾವಗಳಲ್ಲಿನ ಅನೇಕ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ.
ಹೇಮಮಾಲಿನಿ ಭರತನಾಟ್ಯ ಕಲಾವಿದೆಯಾಗಿಯೂ ಪ್ರಸಿದ್ಧರು. ಅವರ ಪುತ್ರಿಯರಾದ ಈಶ ಮತ್ತು ಅಹನಾ ಒಡಿಸ್ಸಿ ನೃತ್ಯಸಾಧಕರು. ಈ ಮೂವರೂ ಸಹಾಯಾರ್ಥ ಪ್ರದರ್ಶನಗಳಿಗಾಗಿ 'ಪರಂಪರ'ಎಂಬ ನೃತ್ಯರೂಪಕವನ್ನು ಪ್ರಸ್ತುತಪಡಿಸಿದ್ದಾರೆ. ಹೇಮಮಾಲಿನಿ ಅವರು ಕುಚಿಪುಡಿ, ಮೋಹಿನಿಯಾಟ್ಟಂ ನೃತ್ಯಪ್ರಕಾರಗಳನ್ನೂ ಶಾಸ್ತ್ರೀಯವಾಗಿ ಅಭ್ಯಾಸಮಾಡಿದ್ದಾರೆ. ಅವರ ನೃತ್ಯಕಾರ್ಯಕ್ರಮಗಳು ವಿಶ್ವದಾದ್ಯಂತ ನಡೆದಿವೆ. ಅವರು 'ನಾಟ್ಯವಿಹಾರ ಕಲಾಕೇಂದ್ರ' ಎಂಬ ನೃತ್ಯಶಾಲೆಯನ್ನೂ ನಿರ್ವಹಿಸುತ್ತಿದ್ದಾರೆ.
ಪದ್ಮಶ್ರೀ ಪ್ರಶಸ್ತಿ, ಅನೇಕ ಫಿಲಂಫೇರ್ ಪ್ರಶಸ್ತಿಗಳು ಮತ್ತು ಅನೇಕ ಗೌರವಗಳು ಹೇಮಮಾಲಿನಿ ಅವರಿಗೆ ಸಂದಿವೆ. ಭಾರತೀಯ ಜನತಾಪಕ್ಷದಿಂದ ರಾಜ್ಯಸಭಾ ಸದಸ್ಯತ್ವ, ಲೋಕಸಭಾ ಸದಸ್ಯತ್ವಗಳನ್ನು ನಿರ್ವಹಿಸುತ್ತಾ ಬಂದಿರುವ ಹೇಮಮಾಲಿನಿ ರಾಜಕಾರಣ, ಸಮಾಜಸೇವೆ ಮತ್ತು ವಿವಿಧ ಕಲಾಮಾಧ್ಯಮಗಳು ಹೀಗೆ ನಾನಾ ರೀತಿಯಲ್ಲಿ ಸಕ್ರಿಯರಾಗಿದ್ದಾರೆ.
On the birth day of Dream Girl of Indian Cinema Hema Malini
ಕಾಮೆಂಟ್‌ಗಳು