ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣ ಕೊಲ್ಹಾರ ಕುಲಕರ್ಣಿ


ಕೃಷ್ಣ ಕೊಲ್ಹಾರ ಕುಲಕರ್ಣಿ


ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಸಂಶೋಧಕರಾಗಿ, ಇತಿಹಾಸಜ್ಞರಾಗಿ, ಸೃಜನಾತ್ಮಕ ಬರಹಗಾರರಾಗಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಪ್ರಸಿದ್ಧರು.

ಕುಲಕರ್ಣಿಯವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೊಲ್ಹಾರದಲ್ಲಿ 1940ರ ಅಕ್ಟೋಬರ್ 16ರಂದು ಜನಿಸಿದರು. ತಂದೆ ಹನುಮಂತರಾಯರು.  ತಾಯಿ ಗಂಗಾಬಾಯಿ. ಅವರ ಶಿಕ್ಷಣ ಕೊಲ್ಹಾರ,  ವಿಜಾಪುರಗಳಲ್ಲಿ ನಡೆಯಿತು. ತಂದೆಯವರ ಅಕಾಲಿಕ ಮರಣದಿಂದ ಎಸ್ಎಸ್‌ಎಲ್‌ಸಿಗೆ ಓದು ನಿಂತಿತು.

ಕೃಷ್ಣ ಕುಲಕರ್ಣಿಯವರು ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಉದ್ಯೋಗಕ್ಕೆ 
ಸೇರಿದರು. ಮುಂಬಯಿ, ರಾಯಚೂರು, ಬೆಳಗಾವಿ, ಮೈಸೂರು, ವಿಜಾಪುರ, ಹಾಸನ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿ 1992ರಲ್ಲಿ ಸ್ವಇಚ್ಛೆಯಿಂದ ನಿವೃತ್ತಿ ಪಡೆದರು.

ಮೈಸೂರಿನಲ್ಲಿದ್ದಾಗ ಮುಕ್ತವಿಶ್ವವಿದ್ಯಾಲಯದಿಂದ ಆಕರ್ಷಿತರಾಗಿ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕೃತಿ ಚರಿತ್ರೆಯಲ್ಲಿ ಎಂ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾ.ಕೃಷ್ಣಮೂರ್ತಿ ಕಿತ್ತೂರರ ಮಾರ್ಗದರ್ಶನದಲ್ಲಿ ‘ಕಾಖಂಡಕಿ ಶ್ರೀಮಹಿಪತಿದಾಸರು’ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್‌.ಡಿ ಗಳಿಸಿದರು. ಹೊಸದಿಲ್ಲಿಯ ಭಾರತೀಯ ಇತಿಹಾಸ ಅನುಸಂಧಾನದ ಹಿರಿಯ ಶಿಷ್ಯವೇತನದಲ್ಲಿ ಅದಿಲ್‌ಶಾಹಿ ಕಾಲದ ಹಿಂದು-ಮುಸ್ಲಿಂ ಸಂಬಂಧ ಕುರಿತು ಸಂಶೋಧನಾ ಪ್ರಬಂಧ ರಚಿಸಿದರು.  1995-97 ಅವಧಿಯಲ್ಲಿ ಬಿಜಾಪುರದ ವಿದ್ಯಾವರ್ಧಕ ಸಂಘದ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಕಾಲ ಸೇವೆ ಸಲ್ಲಿಸಿದರು. 

ಕುಲಕರ್ಣಿ ಅವರು ದಾಸಸಾಹಿತ್ಯದಲ್ಲಿ ಶ್ರೀ ಪುರಂದರದಾಸರ ನಂತರ ವಿಜಯದಾಸರ ಕಾಲ ಪ್ರಾರಂಭವಾಗುವ ತನಕ, ಸುಮಾರು 150 ವರ್ಷಗಳ ಅಜ್ಞಾತ ಕಾಲವೆಂದು ಪರಿಗಣಿತವಾಗಿದ್ದ ಕಾಲದಲ್ಲೂ ದಾಸಪಂಥದ ಚಟುವಟಿಕೆಗಳು ನಡೆಯುತ್ತಿದ್ದವೆಂದು ಪ್ರತಿಪಾದಿಸಿದ್ದಾರೆ.  ಅದಿಲ್ ಶಾಹಿ ಇತಿಹಾಸಕ್ಕೆ ಸಂಬಂಧಿಸಿದಂತೆ ‘ಕಿತಾಬ್‌ನೌರಸ್‌’, ‘ವಿಸ್ಮಯ ಇದು ಬಿಜಾಪುರ’, 'ಅದಿಲ್‌ಶಾಹಿ ಆಸ್ಥಾನ ಸಾಹಿತ್ಯ’, ‘ಬುಸಾತಿನೆ-ಸಲಾತಿನ’, ‘ಬಿಜಾಪುರದ ಅದಿಲ್‌ಶಾಹಿ’ ಮುಂತಾದ ಪುಸ್ತಕಗಳ ಪ್ರಕಟಣೆ ಮಾಡಿದ್ದಾರೆ. 

ಕುಲಕರ್ಣಿ ಕರ್ನಾಟಕ ಸರ್ಕಾರಕ್ಕಾಗಿ ‘ಬಿಜಾಪುರ ಜಿಲ್ಲಾ ಗೆಜೆಟಿಯರ್’ ಸಂಪಾದನೆಗೆ ವಿಶೇಷ ಸಲಹಾ ಸಮಿತಿ ಸದಸ್ಯರಾಗಿ, ಸಮಗ್ರ ದಾಸ ಸಾಹಿತ್ಯ ಯೋಜನೆಯ ಸಂಪಾದಕ ಸಮಿತಿ ಸದಸ್ಯರಾಗಿ,  4 ಸಂಪುಟಗಳ ಸಂಪಾದಕರಾಗಿ ದುಡಿದಿದ್ದಾರೆ. ಕೃಷ್ಣ ಕುಲಕರ್ಣಿ ಅವರಿಗೆ ಕನ್ನಡ, ಹಿಂದಿ, ಮರಾಠಿ, ದಖನಿ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪರಿಣತಿ ಇದ್ದು, ಈ ಭಾಷೆಗಳಿಂದ ಕನ್ನಡಕ್ಕೆ ಹಲವಾರು ಗ್ರಂಥಗಳ ಅನುವಾದ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಮರಾಠಿಯಿಂದ ‘ತುಕರಾಮ’, ಹಂಪಿ ವಿಶ್ವವಿದ್ಯಾಲಯಕ್ಕಾಗಿ ‘ಬುಸಾತಿನೆ-ಸಲಾತಿನ’ ಅನುವಾದಗಳ  ಜೊತೆಗೆ ಭಾರತೀಯ ವಿದ್ಯಾಭವನಕ್ಕಾಗಿ 'ಮಹಾತ್ಮಗಾಂಧಿ’  ಕೆಲವು ಸಂಪುಟಗಳ ಅನುವಾದಗಳನ್ನು ಮಾಡಿದ್ದಾರೆ.  ಇದಲ್ಲದೆ ವಿಜಯದಾಸರು, ಮಹಿಪತಿದಾಸ, ಮಹಿಪತಿದಾಸರ ಸಾಹಿತ್ಯದಲ್ಲಿ ಯೋಗದರ್ಶನ, ಮಾಧ್ವಮಠಗಳು, ಮಹಿಪತಿದಾಸರ ಕೀರ್ತನೆಗಳು, ಹರಿದಾಸರು ಕಂಡ ಉತ್ತರಾದಿಮಠ,  ಹರಿದಾಸರು ಕಂಡ ಜಯತೀರ್ಥರು ಮುಂತಾದ ಹರಿದಾಸ ಸಾಹಿತ್ಯ ಕೃತಿಗಳು; ಮನೆಮುಳುಗಿತು, ರತ್ನಾಕರ ಮೊದಲಾದ ಕಾದಂಬರಿಗಳು; ಶ್ರೀ ಸತ್ಯಧ್ಯಾನ ದರ್ಶನ, ತಿಂಮಾಯಣ, ವಿಜಯ ಪ್ರಮೋದ, ನಾ.ಶ್ರೀ. ರಾಜಪುರೋಹಿತರ ಸಂಶೋಧನ ಲೇಖನಗಳು;  ದಾಸ ಮಹಿಪತಿ, ದಾಸ ಜಗನ್ನಾಥ, ಮನುಕುಲ ಒಂದೇ (ನಾಟಕಗಳು), ಜ್ಞಾನಾರ್ಜನೆ (ಸಣ್ಣ ಕಥೆ) ಸೇರಿದಂತೆ 50ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. 

ಕುಲಕರ್ಣಿ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಅಧ್ಯಯನ ಸಮಿತಿ ಸದಸ್ಯರಾಗಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ, ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾಗಿ ಚಾರಿತ್ರಿಕ ಅವಶೇಷಗಳ ರಕ್ಷಣೆಗಾಗಿನ ಭಾರತೀಯ ಕಲೆ ಮತ್ತು ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಕುಲಕರ್ಣಿ ಅವರು ಸಂಯುಕ್ತ ಕರ್ನಾಟಕ ಮತ್ತು ಉಷಾಕಿರಣ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದಲ್ಲದೆ,  ನಾಡಿನ ಪ್ರಮುಖ ಪತ್ರಿಕೆಗಳಿಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಕೃಷ್ಣ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟೆ-ಪುನರ್ವಸತಿ ಯೋಜನೆಗಳ ಕುರಿತು ಸರಕಾರದ, ಸರಕಾರೇತರ ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ಭೀಮಾನದಿಗೆ ಕಟ್ಟಿದ ಅಣೆಕಟ್ಟೆಯಿಂದ ಕರ್ನಾಟಕಕ್ಕೆ ನೀರಿಗಾಗಿ ಆದ ತೊಂದರೆ ನೀಗಲು ಸುಪ್ರೀಂಕೋರ್ಟಿನಿಂದ ಆದೇಶ ಹೊರಡಿಸುವುದರಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಕರ್ನಾಟಕ ನೀರು-ನೀರಾವರಿ-ಪುನರ್ವಸತಿಗಳ ಬಗ್ಗೆ ಬೆಳಕು ಚೆಲ್ಲಲು ನೂರಾರು ಲೇಖನಗಳನ್ನು ಬರೆದರು. ಕನ್ನಡದ ಉಳಿವಿಗಾಗಿ ಮುಂಬಯಿಯಲ್ಲಿ ಕನ್ನಡ ಗೆಳೆಯರ ಬಳಗ ಮತ್ತು ವಾಚನಾಲಯ, ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ ಹಾಗೂ ರಾಯಚೂರಿನಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳ ಆಯೋಜಕರಾಗಿ ದುಡಿದಿದ್ದಾರೆ. 2006ರಲ್ಲಿ ಅವರು ಗಮಕ ಕಲಾ ಪರಿಷತ್ತಿಗೆ ಅಧ್ಯಕ್ಷರಾಗಿದ್ದರು.

ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಸಂಶೋಧನ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಗಳಗನಾಥ ರಾಜ ಪುರೋಹಿತ ಪ್ರತಿಷ್ಠಾನದಿಂದ ‘ರಾಜಪುರೋಹಿತ ಪ್ರಶಸ್ತಿ’, ಅನುವಾದ ಸಾಹಿತ್ಯ ಅಕಾಡಮಿಯಿಂದ ಜೀವಮಾನದ ಸಾಧನೆಗಾಗಿ ‘ಅನುವಾದ ಸಾಹಿತ್ಯ ಅಕಾಡಮಿ  ಪ್ರಶಸ್ತಿ’, ದಾಸ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಹಾಗೂ ಅನನ್ಯ ಕೊಡುಗೆಗಾಗಿ ರಾಜ್ಯ ಸರ್ಕಾರದ  'ಕನಕಶ್ರೀ ಪ್ರಶಸ್ತಿ' ಸೇರಿದಂತೆ ಅನೇಕ ಗೌರವಗಳು ಸಂದಿವೆ.

ನಾಡಿನ ಹಿರಿಯರಾದ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಶುಭಾಶಯಪೂರ್ವಕ ನಮನಗಳು.

On the birthday of Historian, scholar and writer Krishna Kolhar Kulkarni Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ