ಎಂ. ಜಯಶ್ರೀ
ಎಂ. ಜಯಶ್ರೀ
ಎಂ. ಜಯಶ್ರೀ ಚಲನಚಿತ್ರರಂಗವನ್ನು ಬೆಳಗಿದ ಕಲಾವಿದೆ. ಅವರು ಸುಮಾರು 500 ಚಿತ್ರಗಳಲ್ಲಿ ನಟಿಸಿದರೂ ಬಡತನದಲ್ಲೆ ಬದುಕು ಕಳೆದವರು. ಇಂದು ಅವರ ಸಂಸ್ಮರಣಾ ದಿನ.
ಮೂಲತಃ ಮೈಸೂರಿನವರಾದ ಜಯಶ್ರೀ ಬಡತನವೇ ತುಂಬಿದ್ದ ಕುಟುಂಬದಲ್ಲಿ ಜನಿಸಿದ ಹಿರಿಯ ಮಗಳು. ತಂದೆಯ ಆಕಸ್ಮಿಕ ಮರಣ ಜಯಶ್ರೀಗೆ ಬರಸಿಡಿಲಿನಂತೆ ಬಂದೆರಗಿತ್ತು. ಜಯಶ್ರೀ ಕಷ್ಟಕ್ಕೆ ಅಂಜಲಿಲ್ಲ. ತಮಿಳುನಾಡಿನ ಪಕ್ಷಿರಾಜ ಸ್ಟುಡಿಯೋದ ಮಾಲೀಕರ ಸಹೋದರಿ ದೇವಿ ಎಂಬ ಹೆಣ್ಣು ಮಗಳು ಸ್ನೇಹಿತೆಯಾಗಿ ಜಯಶ್ರೀಗೆ ಸಿಕ್ಕಿದರು. ಅದೇ ಇವರ ಮುಂದಿನ ಬದುಕಿಗೆ ದಾರಿದೀಪವಾಗಿತ್ತು. ಯಾವುದೋ ಕಾಯಿಲೆಗೆ ಸಂಬಂಧಿಸಿದಂತೆ ಆಪರೇಷನ್ ಮಾಡಿಸಿಕೊಳ್ಳಲು ಮೈಸೂರಿಗೆ ಬಂದಿದ್ದ ದೇವಿಗೆ ಜಯಶ್ರೀಯ ಗುಣ ಬಹಳ ಹಿಡಿಸಿ ಕಷ್ಟದಲ್ಲಿದ್ದ ಜಯಶ್ರೀ ಕುಟುಂಬವನ್ನು ತಮಿಳುನಾಡಿಗೆ ಕರೆದುಕೊಂಡು ಹೋದರು.
ಜಯಶ್ರೀ ಧೈರ್ಯದಿಂದ ಮದ್ರಾಸಿನ ಪಕ್ಷಿರಾಜ ಸ್ಟುಡಿಯೋದಲ್ಲಿ ಮೊಟ್ಟಮೊದಲಿಗೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಲ್ಲುವಂತಾಯ್ತು. ಹೀಗೆ ಜಯಶ್ರೀ ಅಭಿನಯಿಸಿದ ಪ್ರಥಮ ಚಿತ್ರ “ವಾಳವಿಲೊ ತಿರುನಾಳ್”. ಅಲ್ಲಿಂದ ಜಯಶ್ರೀ ಅವರ ಬಣ್ಣದ ಬದುಕು ಆರಂಭವಾಯ್ತು. ಒಂದರ ಹಿಂದೆ ಒಂದು ಸಿನಿಮಾ ಅವಕಾಶಗಳು ಅವರತ್ತ ಬರತೊಡಗಿದವು.
ಸುಂದರಿಯಾಗಿದ್ದ ಜಯಶ್ರೀ ಆ ಕಾಲದಲ್ಲಿ ಬಹುಬೇಗ ಚಿತ್ರಲೋಕದಲ್ಲಿ ಪ್ರಸಿದ್ಧಿ ಪಡೆದರು. ಅಚ್ಚಕನ್ನಡತಿ ಜಯಶ್ರೀ ತಮಿಳು ಚಿತ್ರಗಳಲ್ಲಿ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಕನ್ನಡ ಚಿತ್ರರಂಗವೂ ಅವರತ್ತ ದೃಷ್ಟಿಹರಿಸಿತು. ಆಗ ಅಂದಿನ ಖ್ಯಾತನಟ ಹೊನ್ನಪ್ಪ ಭಾಗವತರು ತಾವು ನಾಯಕನಟರಾಗಿದ್ದ “ಭಕ್ತಕುಂಬಾರ” ಚಿತ್ರದ ನಾಯಕಿಯಾಗಿ 1942ರಲ್ಲಿ ಜಯಶ್ರೀ ಅವರನ್ನು ಮತ್ತೆ ಕನ್ನಡನಾಡಿಗೆ ಕರೆತಂದರು. ಆನಂತರ ಅವರು ತನ್ನ ತವರು ನೆಲದಲ್ಲೇ ಅಭಿನಯವನ್ನು ಮುಂದುವರಿಸಿದರು.
ನಲವತ್ತರ ದಶಕದಲ್ಲಿ ತಾರೆ ಜಯಶ್ರೀ ಕನ್ನಡ ಚಿತ್ರಪ್ರೇಮಿಗಳ ಕನಸಿನ ತಾರೆಯಾಗಿ ಮಿನುಗಿದ್ದರು. 1949ರಲ್ಲಿ ಬಿಡುಗಡೆಯಾದ ಅವರ “ನಾಗಕನ್ನಿಕಾ” ಚಿತ್ರವಂತೂ ಕನ್ನಡ ಚಿತ್ರಂಗದಲ್ಲೊಂದು ಹೊಸಕ್ರಾಂತಿಯನ್ನೇ ಮಾಡಿತ್ತು. ನಿರ್ಮಾಪಕರಿಗಂತೂ ಹಣದ ಮಳೆಯನ್ನೇ ಸುರಿಸಿತ್ತು. ನಂತರ ಕಲ್ಯಾಣ್‍ಕುಮಾರ್‍ಗೆ ನಾಯಕಿಯಾಗಿ “ಮುತ್ತೈದೆಭಾಗ್ಯ” ಚಿತ್ರದಲ್ಲಿ ಅಭಿನಯಿಸಿದ ಜಯಶ್ರೀ ಈ ಚಿತ್ರದ ಯಶಸ್ಸಿಗೂ ಬಹುಪಾಲು ಕಾರಣರಾಗಿದ್ದರು. ನಟಿ ಜಯಶ್ರೀ ಇದ್ದರೆ ಸಾಕು ಚಿತ್ರಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಮಾತು ನಲವತ್ತು, ಐವತ್ತರ ದಶಕದಲ್ಲಿ ಚಾಲ್ತಿಯಲ್ಲಿತ್ತು. ಹೀಗೆ ಜಯದ ಮೆಟ್ಟಿಲುಗಳೊಡನೆ ಸಾಗಿಬಂದ ಜಯಶ್ರೀ ಕ್ರಮೇಣ ವಯೋಮಾನಕ್ಕೆ ತಕ್ಕ ಹಾಗೆ ಅಮ್ಮನ ಪಾತ್ರಕ್ಕೆ ಬಡ್ತಿ ಪಡೆದರು.
ಮಂಗಳಗೌರಿ, ಮಿಸ್ ಲೀಲಾವತಿ, ಶಿವಶರಣೆ ನಂಬಿಯಕ್ಕ, ಅಮರಭಾರತಿ, ತಿಲೋತ್ತಮೆ, ಜಗನ್ಮೋಹಿನಿ, ಚಂದವಳ್ಳಿಯ ತೋಟ, ಶಿವಗಂಗೆ, ಜಗಜ್ಯೋತಿ ಬಸವೇಶ್ವರ, ನಾಗರಹಾವು, ಎರಡು ಕನಸು, ಸಾವಿರಮೆಟ್ಟಿಲು, ಸೇರಿದಂತೆ ಸುಮಾರು ಐನೂರು ಚಿತ್ರಗಳಲ್ಲಿ ಜಯಶ್ರೀ ಅಭಿನಯಿಸಿದ್ದರು! ಅನೇಕ ಚಿತ್ರಗಳಲ್ಲಿ ವರನಟ ಡಾ. ರಾಜ್‍ಕುಮಾರ್ ಅವರಿಗೆ ಅಮ್ಮನಾಗಿ ನಟಿಸಿದ್ದರು.
ಎಮ್. ಜಯಶ್ರೀ ಅವರು 2006ರ ಅಕ್ಟೋಬರ್ 29ರಂದು ಈ ಲೋಕವನ್ನಗಲಿದರು.
On Remembrance Day of actress M. Jayashree
ಕಾಮೆಂಟ್‌ಗಳು