ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ವಿ. ರಾಮಮೂರ್ತಿ


 ಬಿ. ವಿ. ರಾಮಮೂರ್ತಿ


ಬಿ. ವಿ. ರಾಮಮೂರ್ತಿ ನಮ್ಮ ನಾಡಿನ ಪ್ರಖ್ಯಾತ ವ್ಯಂಗ್ಯ ಚಿತ್ರಕಾರರು.

ರಾಮಮೂರ್ತಿಯವರು 1933ರ ಅಕ್ಟೋಬರ್ 14ರಂದು ಬೆಂಗಳೂರಿನ ರಾಣಾಸಿಂಗ್‌ ಪೇಟೆಯಲ್ಲಿ ಜನಿಸಿದರು. ತಂದೆ ಗಿರಿಯಪ್ಪನವರು. ತಾಯಿ ಹುಚ್ಚಮ್ಮನವರು. ರಾಮಮೂರ್ತಿಯವರಿಗೆ ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ  ಆಸಕ್ತಿ ಮೊಳೆಯಿತು.  ಅವರ  ಮನೆಯ ಗೋಡೆಗಳೇ ಅವರ ಪ್ರಾರಂಭಿಕ  ಚಿತ್ರ ರಚನೆಯ ಕ್ಯಾನ್ವಾಸ್‌ ಆಗಿದ್ದವು. 

ಓದಿನಲ್ಲಿ ರಾಮಮೂರ್ತಿಯವರು ಬಿ.ಎಸ್ಸಿ ಪದವೀಧರರಾದರೂ ವ್ಯಂಗ್ಯ ಚಿತ್ರರಚನೆಯನ್ನೇ  ವೃತ್ತಿ ಬದುಕಾಗಿಸಿಕೊಂಡರು.   ಆಂಗ್ಲ ವ್ಯಂಗ್ಯಚಿತ್ರಕಾರ ಡೇವಿಡ್‌ಲೋ ಅವರು ರಾಮಮೂರ್ತಿಯವರಿಗೆ ಸ್ಫೂರ್ತಿ.  ಪ್ರಾರಂಭದಲ್ಲಿ ರಾಮಮೂರ್ತಿಯವರು ಶೇಷಪ್ಪನವರ ಕಿಡಿ ಪತ್ರಿಕೆಗಾಗಿ ರಾಜಕೀಯ ವ್ಯಂಗ್ಯ ಚಿತ್ರಗಳನ್ನು ರೂಪಿಸುತ್ತಿದ್ದರು. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಸಂಪಾದಕರಾಗಿದ್ದ ಪೋತನ್‌ ಜೋಸಫ್‌ ಅವರ ಗಮನ ಸೆಳೆದ ರಾಮಮೂರ್ತಿ ಮುಂದೆ ಡೆಕ್ಕನ್‌ ಹೆರಾಲ್ಡ್‌ ಬಳಗ ಸೇರಿ, ಡೆಕ್ಕನ್ ಹೆರಾಲ್ಡ್ ಅಲ್ಲದೆ  ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಿಗೆ  ಅಸಂಖ್ಯಾತ ವ್ಯಂಗ್ಯ ಚಿತ್ರಗಳನ್ನು ರೂಪಿಸಿದರು. 1958ರಲ್ಲಿ ಅವರು ‘As you like it’ ಎಂಬ ಶೀರ್ಷಿಕೆಯುಳ್ಳ ವ್ಯಂಗ್ಯಚಿತ್ರ ಮೂಡಿಸಲು ಪ್ರಾರಂಭಿಸಿದರು.  ಇದರಲ್ಲಿ ಮೈಸೂರು ಪೇಟ ಧರಿಸಿದ ಮಿ. ಸಿಟಿಜನ್‌ ಕಾರ್ಟೂನಿನ  ಮೂಲಕ ಮೂರ್ತಿಯವರು ಅಂದಿನ ಸ್ಥಿತಿಗತಿಗಳನ್ನು ಪರಿಣಾಮಕಾರಿಯಾಗಿ ಆನಾವರಣಗೊಳಿಸುತ್ತಿದ್ದರು. ಇದು ವ್ಯಂಗ್ಯ ಚಿತ್ರ ಪ್ರೇಮಿಗಳನ್ನು ಅಪಾರವಾಗಿ ಆಕರ್ಷಿಸಿತ್ತು. ಈ ವೃತ್ತಿಯಲ್ಲಿ 49 ವರ್ಷಗಳ ಕಾಲದ ಸೇವೆಯ ನಂತರದಲ್ಲಿ ರಾಮಮೂರ್ತಿಯವರು ನಿವೃತ್ತಿಯಲ್ಲಿ ವಿಶ್ರಮಿಸಿದರು..

ರಾಮಮೂರ್ತಿಯವರು ಕೇವಲ ವ್ಯಂಗ್ಯ ಚಿತ್ರಗಳೇ ಅಲ್ಲದೆ ತೈಲ ವರ್ಣ ಚಿತ್ರ ಕಲೆಯಲ್ಲೂ ಅಪಾರ ಸಾಧನೆ ಮಾಡಿದ್ದರು.   1974ರಲ್ಲಿ ಅವರು ತಮ್ಮ ತೈಲ ವರ್ಣ ಚಿತ್ರ ಪ್ರದರ್ಶನದಿಂದ  ಅಪಾರ ಜನ ಮೆಚ್ಚುಗೆ ಗಳಿಸಿದರು. 1978, 1982ರಲ್ಲಿ ಅವರ ವ್ಯಂಗ್ಯಚಿತ್ರಗಳು ಜರ್ಮನಿಯಲ್ಲಿ ಪ್ರದರ್ಶಿಸಲ್ಪಟ್ಟಿದ್ದವು.  ಬಾಪ್ಕೋ  ಪ್ರಕಾಶನದಿಂದ ರಾಮಮೂರ್ತಿಯವರ  ‘ಮಿ. ಸಿಟಿಜನ್‌’  ಮೂರು ಸಂಪುಟಗಳಲ್ಲಿ ಹೊರಬಂದಿದೆ.

ರಾಮಮೂರ್ತಿಯವರು ವ್ಯಂಗ್ಯಚಿತ್ರಕಾರರ ಸಂಘದ ಪ್ರಧಾನ ಪೋಷಕರಾಗಿ 25 ವರ್ಷಗಳ ಸೇವೆ ಸಲ್ಲಿಸಿದ್ದರು.  ಕರ್ನಾಟಕದಾದ್ಯಂತ ಸಂಚರಿಸಿ, ಹಲವಾರು ಕಾರ್ಯಾಗಾರಗಳನ್ನು ನಡೆಸಿಕೊಟ್ಟರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಸಂದೇಶ್‌ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡಮಿ ಪ್ರಶಸ್ತಿ ಮುಂತಾದ  ಅನೇಕ ಪ್ರಶಸ್ತಿ ಗೌರವಗಳು ಬಿ. ವಿ. ರಾಮಮೂರ್ತಿಯವರಿಗೆ ಸಂದಿದ್ದವು.

ಮಹಾನ್ ಕಲಾವಿದರಾದ ರಾಮಮೂರ್ತಿ 2004ರ ಮಾರ್ಚ್ 24ರಂದು  ಈ ಲೋಕವನ್ನಗಲಿದರು. 

On the birth anniversary of great cartoonist  B. V. Ramamurthy....

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ