ಗುರುಕಿರಣ್
ಗುರುಕಿರಣ್
ಗುರುಕಿರಣ್ ಕನ್ನಡದ ಯಶಸ್ವೀ ಚಲನಚಿತ್ರ ಸಂಗೀತ ನಿರ್ದೇಶಕರು. ಅಕ್ಟೋಬರ್ 28 ಗುರುಕಿರಣ್ ಅವರ ಜನ್ಮದಿನ.
ಗುರುಕಿರಣ್ ಶೆಟ್ಟಿ ಮಂಗಳೂರು ಮೂಲದವರು. ಎಪ್ಪತ್ತರ ದಶಕದಲ್ಲಿ ಸೈಂಟ್ ಅಲೋಷಿಯಸ್ ಪ್ರೈಮರಿ ಶಾಲೆಯಲ್ಲಿ ಓದುವಾಗಲೇ ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮಂಗಳೂರಿನಲ್ಲಿ ವಾಣಿಜ್ಯ ಪದವಿ ಪಡೆದ ನಂತರದಲ್ಲಿ ಅವರು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾದ್ಯಗೋಷ್ಠಿಗಳಲ್ಲಿ ಗಾಯಕರಾಗಿ ಮತ್ತು ಕೀಬೋರ್ಡ್ ನುಡಿಸುವವರಾಗಿ ಕಾರ್ಯನಿರ್ವಹಿಸಿದರು. 1994ರಲ್ಲಿ ಗುರುಕಿರಣ್ ಅವರು ಸಂಗೀತ ನಿರ್ದೇಶಕ ಮತ್ತು ಗೀತರಚನಕಾರರಾದ ವಿ. ಮನೋಹರ್ ಅವರ ಸಹಾಯಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು.
ಸುರದ್ರೂಪಿಗಳಾದ ಗುರುಕಿರಣ್ ಚಿತ್ರರಂಗದಲ್ಲಿ ನಟರಾಗಲು ಆಶಿಸಿದ್ದರು. ಅವರು ನಟಿಸಿದ ಮೊದಲ ಚಿತ್ರ ತುಳು ಭಾಷೆಯ 'ಬದ್ಕೊಂಜಿ ಕಬಿತೆ'. ಮುಂದೆ ಅವರು ಕನ್ನಡದಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರ 'ನಿಷ್ಕರ್ಷ' ಚಿತ್ರದಲ್ಲಿ ನಟಿಸಿದರು.
ಮುಂದೆ ಗುರುಕಿರಣ್ ಅವರಿಗೆ ಉಪೇಂದ್ರ ನಿರ್ದೇಶನದ ಪ್ರಸಿದ್ಧ ಚಿತ್ರ 'ಎ'ದಲ್ಲಿ ಸಂಗೀತ ನಿರ್ದೇಶನಕ್ಕೆ ಅವಕಾಶ ಬಂತು. ತಮಗೆ ದೊರೆತ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹಗಲಿರುಳೂ ಶ್ರಮಿಸಿ ಅತ್ಯುತ್ತಮ ಗೀತೆಗಳನ್ನು ನೀಡಿದರು. ಮುಂದೆ ಪಿ. ವಾಸು ಅವರ ನಿರ್ದೇಶನದ ಪ್ರಸಿದ್ಧ ಚಿತ್ರ 'ಆಪ್ತಮಿತ್ರ' ಅವರ ಸಾಮರ್ಥ್ಯವನ್ನು ಮತ್ತೊಂದು ರೀತಿ ಹೊರತಂದಿತು. 2005ರಲ್ಲಿ ಮೂಡಿಬಂದ 'ಜೋಗಿ' ಚಿತ್ರಕ್ಕೆ ಅವರು ನೀಡಿದ ಜಾನಪದ ರೀತಿಯ ಸಂಗೀತ ಮತ್ತೊಂದು ರೀತಿಯ ಮೆರುಗಿನದು. ಹೀಗೆ ಎಲ್ಲ ರೀತಿಯ ವೈವಿಧ್ಯಗಳಲ್ಲಿ ಅವರು ನೀಡಿದ ವಿಭಿನ್ನ ಶೈಲಿಯ ಸಂಗೀತಗಳು ಅವರನ್ನು ಪ್ರಸಿದ್ಧ ಸಂಗೀತ ನಿರ್ದೇಶಕರನ್ನಾಗಿಸಿವೆ. ಇತರ ಭಾಷೆಯ ಕೆಲವು ಚಿತ್ರಗಳಿಗೂ ಅವರು ಸಂಗೀತ ನೀಡಿದ್ದಾರೆ. ತಮಗಿರುವ ಯಶಸ್ಸಿನ ಹಿನ್ನೆಲೆಯಲ್ಲಿ ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಳ್ಳದೆ ಒಂದು ಮಿತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ತೆರದಲ್ಲಿ ಗುರುಕಿರಣ್ ತಮ್ಮ ಚಲನಚಿತ್ರ ಉದ್ಯಮದಲ್ಲಿನ ವೃತ್ತಿಯನ್ನು ನಿಯಂತ್ರಣದಲ್ಲಿ ಸಾಗಿಸುತ್ತಿದ್ದಾರೆ.
ಗುರುಕಿರಣ್ ಕಿರುತೆರೆಯಲ್ಲಿ 'ಕಾನ್ಪಿಡೆಂಟ್ ಸ್ಟಾರ್ ಸಿಂಗರ್' ಸ್ಪರ್ಧೆಯ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಾಡುಗಾರರಾಗಿ ಮತ್ತು ಗೀತರಚನಕಾರರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ಮೆಲ್ಕಂಡ ಚಿತ್ರಗಳಲ್ಲದೆ ಉಪೇಂದ್ರ, ಅಪ್ಪು, ಕರಿಯ, ಕುಟುಂಬ, ರಾಮ ಶಾಮ ಭಾಮ, ಅರಮನೆ ಮುಂತಾದ ಪ್ರಸಿದ್ಧ ಚಿತ್ರಗಳಿಗೂ ಗುರುಕಿರಣ್ ಅವರ ಸಂಗೀತವಿದೆ. 'ಮೈಲಾರಿ' ಚಿತ್ರದ ಸಂಗೀತಕ್ಕೆ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿತು. ಇದಲ್ಲದೆ 'ಚಿತ್ರ', 'ಧಮ್' ಮತ್ತು 'ಆಪ್ತಮಿತ್ರ' ಚಿತ್ರಗಳ ಸಂಗೀತಕ್ಕೆ ಫಿಲಂಫೇರ್ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಗುರುಕಿರಣ್ ಅವರಿಗೆ ಸಂದಿವೆ.
ಪ್ರತಿಭಾವಂತ ಗುರುಕಿರಣ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our popular music director Gurukiran
ಕಾಮೆಂಟ್‌ಗಳು