ವಿ. ಎಂ. ಇನಾಂದಾರ್
ವಿ. ಎಂ. ಇನಾಂದಾರ್
ವಿ. ಎಂ. ಇನಾಂದಾರ್ ಕಾದಂಬರಿಕಾರರಾಗಿ, ವಿಮರ್ಶಕರಾಗಿ ಮತ್ತು ಬಹುಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ.
ವೆಂಕಟೇಶ ಮಧ್ವರಾವ್ ಇನಾಂದಾರ್ ಅವರು 1912ರ ಅಕ್ಟೋಬರ್ 1ರಂದು ಬೆಳಗಾವಿ ಜಿಲ್ಲೆಯ ಹುದಲಿ ಎಂಬಲ್ಲಿ ಜನಿಸಿದರು. ತಂದೆ ಮಧ್ವರಾವ್ ಇನಾಂದಾರ್‌ರವರು ವೃತ್ತಿಯಿಂದ ಪೋಸ್ಟ್‌ಮಾಸ್ಟರ್ ಆಗಿದ್ದರೂ ಪ್ರವೃತ್ತಿಯಿಂದ ಸಂಶೋಧನಾಸಕ್ತರಾಗಿದ್ದರು. ತಾಯಿ ಕಮಲಾಬಾಯಿ.
ವೆಂಕಟೇಶ ಇನಾಂದಾರ್ ಅವರ ಪ್ರಾರಂಭಿಕ ಶಿಕ್ಷಣ ಹುದಲಿಯಲ್ಲಿ ಮತ್ತು ಹೈಸ್ಕೂಲು ಶಿಕ್ಷಣ ಬೆಳಗಾವಿ, ಅಥಣಿ ಮತ್ತು ವಿಜಾಪುರಗಳಲ್ಲಿ ನಡೆಯಿತು. ಮೆಟ್ರಿಕ್ಯುಲೇಷನ್‌ನಲ್ಲಿ ರ‍್ಯಾಂಕ್ ವಿಜೇತರಾದರು. ಮುಂಬಯಿ ವಿಶ್ವವಿದ್ಯಾಲಯದಿಂದ ಸುವರ್ಣ ಪದಕದೊಡನೆ ಬಿ.ಎ. ಪದವಿ (ಇಂಗ್ಲಿಷ್) ಮತ್ತು ಎಂ.ಎ. ಪದವಿಗಳನ್ನು ಗಳಿಸಿದರು. ‘ಸಂಸ್ಕೃತದ ಕಾವ್ಯಗಳಲ್ಲಿ ನಾಯಿಕಾ ಪಾತ್ರಗಳು’ ಎಂಬ ಪ್ರೌಢ ಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಮಾಂಡಲೀಕ ಪಾರಿತೋಷಕ ಗಳಿಸಿದರು. ಪಾರಿತೋಷಕದ ಒಂದು ಸಾವಿರ ರೂಪಾಯಿಗೆ ಒಂದು ಬೀರು ತುಂಬುವಷ್ಟು ಇಂಗ್ಲಿಷ್ ಸಾಹಿತ್ಯ ಕೃತಿಗಳನ್ನು ಕೊಂಡರಂತೆ. ಇದು ಸಾಹಿತ್ಯದ ಬಗ್ಗೆ ಅವರಿಗಿದ್ದ ಅಕ್ಕರೆ.
ವೆಂಕಟೇಶ ಇನಾಂದಾರ್ ಅವರು ಜಿಲ್ಲಾ ನ್ಯಾಯಾಲಯದಲ್ಲಿ ದೊರೆತ ಗುಮಾಸ್ತೆ ಹುದ್ದೆಯನ್ನು ತೊರೆದು ಎಂ.ಎ. ಪದವಿ ಪಡೆದ ನಂತರ ಸೋಫಿಯಾ ವಾಡಿಯಾ ಅವರು ಪ್ರಕಟಿಸುತ್ತಿದ್ದ ‘ಆರ್ಯನ್ ಪಾಥ್’ ಮತ್ತು ‘ಇಂಡಿಯನ್ ಪೆನ್’ (PEN) ಪತ್ರಿಕೆಗೆ ಕನ್ನಡ ಪುಸ್ತಕಗಳ ವಿಮರ್ಶಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ನಂತರ ಇಂಗ್ಲಿಷ್ ಅಧ್ಯಾಪಕರಾಗಿ ಮುಂಬಯಿಯ ಸೀಡೇನ್ ಹ್ಯಾಂ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಗುಜರಾತಿನ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರಾಗಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ವೈಸ್‌ಪ್ರಿನ್ಸಿಪಾಲರಾಗಿ, ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಯು.ಜಿ.ಸಿ ಗೌರವ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು.
ಬಹುಭಾಷಾ ಪಂಡಿತರಾಗಿದ್ದ ಇನಾಂದಾರರು ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಸಂಸ್ಕೃತ, ಮುಂತಾದ ಭಾಷೆಗಳಲ್ಲಿ ಸಮಾನ ಪಾಂಡಿತ್ಯ ಪಡೆದಿದ್ದರು. ಇವರ ಮೊಟ್ಟ ಮೊದಲ ಕಾದಂಬರಿ ವಿ.ಎಸ್. ಖಾಂಡೇಕರರ ಎರಡು ಧ್ರುವ (ಮರಾಠಿ – ದೋನಧ್ರುವ) ಕೃತಿಯ ಅನುವಾದ(1937). ನಂತರ ಬರೆದ ಸ್ವತಂತ್ರ ಕಾದಂಬರಿ ಮೂರಾಬಟ್ಟೆ (1946). ಇವರ ಆರಂಭದ ಕಾದಂಬರಿಗಳು ಕಥಾಪ್ರಧಾನವಾಗಿದ್ದು ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ವಿಶ್ಲೇಷಣೆಗಳಿಂದ ಕೂಡಿದೆ. ಗಾಲ್ಸ್‌ವರ್ದಿ ಇವರ ಮೆಚ್ಚಿನ ಕಾದಂಬರಿಕಾರರು. ವಿ.ಎಸ್. ಖಾಂಡೇಕರರ ಮತ್ತೊಂದು ಕಾದಂಬರಿಯ ಅನುವಾದ ‘ಯಯಾತಿ’. ಚಂದ್ರವಂಶದ ದೊರೆ, ನಹುಷ ಚಕ್ರವರ್ತಿಯ ಮಗ. ವಿಧವಿಧವಾದ ಸುಖಗಳು ಕೈಗೆ ಸಿಕ್ಕರೂ ಸದಾಕಾಲ ಅತೃಪ್ತನಾಗಿಯೇ ವಿಷಯಾಲಾಭಿಲಾಷೆಯಿಂದ ಹೊಸಹೊಸ ಸುಖಗಳ ಹಿಂದೆ ಕುರುಡಾಗಿ ಧಾವಿಸುವ ಚಕ್ರವರ್ತಿಯ ಕತೆ. ಇದೊಂದು ಸಮರ್ಥ ಅನುವಾದದ ಮಹೋನ್ನತ ಕಾದಂಬರಿ. ನಂತರ ಇವರು ಬರೆದ ಕಾದಂಬರಿಗಳು ಕನಸಿನ ಮನೆ, ವಿಜಯಯಾತ್ರೆ, ಶಾಪ, ಸ್ವರ್ಗದ ಬಾಗಿಲು, ಈ ಪರಿಯ ಸೊಬಗು, ತ್ರಿಶಂಕು, ಊರ್ವಶಿ, ಚಿತ್ರಲೇಖ ಮುಂತಾದ 18 ಕಾದಂಬರಿಗಳು. ಇದರಲ್ಲಿ ನವಿಲು ನೌಕೆ ಕಾದಂಬರಿ ಮತ್ತು ಕಾಲ್ಪನಿಕ ಪ್ರವಾಸ ಕಥನ ಮಂಗಲ್ಯಾಂಡಿನಲ್ಲಿ ಮೂರುವಾರ ಧಾರಾವಾಹಿಯಾಗಿ 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಕಟಗೊಂಡಿತು. ವಿಹಾರಿ ಎಂಬ ಹೆಸರಿನಿಂದ ಲಘು ಪ್ರಬಂಧಗಳನ್ನು ಇದೇ ಪತ್ರಿಕೆಗೆ 1968-72ರ ಸಮಯದಲ್ಲಿ ಬರೆದಿದ್ದು ಇವು ‘ಕಪ್ಪು ಚೆಲುವೆ ಮತ್ತು ಇತರ ಪ್ರಬಂಧಗಳು’ ಮತ್ತು ‘ಮನವೆಂಬ ಮರ್ಕಟ ಮತ್ತು ಇತರ ಪ್ರಬಂಧಗಳು’ ಎಂಬ ಹೆಸರಿನಿಂದ 2005ರಲ್ಲಿ ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿವೆ. ‘ಶಾಪ’ ಕಾದಂಬರಿಯು ಚಲನಚಿತ್ರವಾಗಿಯೂ ಮೂಡಿಬಂತು.
ಇನಾಂದಾರರು ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಪಾಶ್ಚಾತ್ಯ ವಿಮರ್ಶೆ. ತರಗತಿಗಳಲ್ಲಿ ಬೋಧಿಸಿದ್ದಷ್ಟೇ ಅಲ್ಲದೆ ವಿಶ್ವವಿದ್ಯಾಲಯಗಳ ವಿಶೇಷ ಉಪನ್ಯಾಸಗಳ ಮೂಲಕ ತಾವು ವ್ಯಕ್ತಪಡಿಸಿದ ಪಾಶ್ಚಾತ್ಯ ವಿಮರ್ಶೆಯ ಅಧ್ಯಯನವನ್ನು ‘ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ’, ‘ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ’, ‘ಪಾಶ್ಚಾತ್ಯ ವಿಮರ್ಶೆಯ ಸಂಪ್ರದಾಯ ಯುಗ’, 'ಪಾಶ್ಚಾತ್ಯ ವಿಮರ್ಶೆಯ ರೊಮ್ಯಾಂಟಿಕ್ ಯುಗ’ ಮತ್ತು 'ಪಾಶ್ಚಾತ್ಯ ವಿಮರ್ಶೆಯ ಆಧುನಿಕ ಯುಗ' ಎಂದು ಐದು ಭಾಗಗಳಲ್ಲಿ ಪ್ರಕಟಿಸಿದ್ದು ಇವುಗಳ ಸಮಗ್ರ ಸಂಪುಟ ‘ಪಾಶ್ಚಾತ್ಯ ಕಾವ್ಯ ಮೀಮಾಂಸೆ’ ಗ್ರಂಥವೂ ಪ್ರಕಟವಾಗಿದೆ. ಇದು ಇನಾಂದಾರರ ಆಚಾರ್ಯ ಕೃತಿಯೆಂದೂ ವಿದ್ವಾಂಸರ ಅಭಿಪ್ರಾಯ.
ಇಂಗ್ಲಿಷ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇನಾಂದಾರರು ಇಂಗ್ಲಿಷ್ ಭಾಷೆಯಲ್ಲಿ ಕನ್ನಡೇತರರಿಗೆ ಕಾರಂತ, ಗೋವಿಂದ ಪೈಗಳನ್ನು ಪರಿಚಯಿಸಿದ್ದಾರೆ. ಗೋವಿಂದ ಪೈಗಳ ಆಳವಾದ ಅಧ್ಯಯನ, ಸಮತೂಕದ ಜೀವನ ದೃಷ್ಟಿ, ಶಿವರಾಮ ಕಾರಂತರ ಬದುಕು ಬರಹ, ಕುವೆಂಪು ಕಾದಂಬರಿಗಳು, ಶ್ರೀನಿವಾಸರ ಕಾದಂಬರಿಗಳಲ್ಲಿ ಜೀವನ ದರ್ಶನ (ಸುಬ್ಬಣ್ಣ, ಶೇಷಮ್ಮ, ಚನ್ನಬಸವನಾಯಕ ಮತ್ತು ಚಿಕ್ಕವೀರ ರಾಜೇಂದ್ರ ಕಾದಂಬರಿಗಳು), ಗೋವಿಂದ ಪೈಗಳ ಕಾವ್ಯ, ಬಿ.ಎಂ.ಶ್ರೀ ಬದುಕು – ಬರಹ ಮುಂತಾದ ದರ್ಶನಗಳ ಬಗ್ಗೆ ಇನಾಂದಾರರು ಕೃತಿ ರಚಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಶಿವರಾಮಕಾರಂತ (1973), ಗೋವಿಂದ ಪೈ (1983) ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಇಂಗ್ಲಿಷ್‌ನಲ್ಲಿ ಹಿರೋಯಿನ್ಸ್ ಇನ್ ಸ್ಯಾನಸ್ಕ್ರಿಟ್ ಡ್ರಾಮಾ, ವಿದೂಷಕ ಇನ್ ಸ್ಯಾನಸ್ಕ್ರಿಟ್ ಡ್ರಾಮಾ ಮತ್ತು ಉತ್ತರರಾಮ ಚರಿತಮ್ ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಇವಲ್ಲದೆ ದೃಷ್ಟಿಲಾಭ (ಅನುವಾದಿತ ಕತೆಗಳು), ಬಿಡುಗಡೆ (ನಾಟಕ), ಕಾಳಿದಾಸನ ಕಥಾನಕಗಳು ಮತ್ತು ಡಾ. ಅಂಬೇಡ್ಕರ್ ವ್ಯಕ್ತಿ ಮತ್ತು ವಿಚಾರ. ವಿ.ಸೀ – 75 ಸಂಪಾದಿತ ಕೃತಿಯಾದರೆ ಶರಶ್ಚಂದ್ರ – ವ್ಯಕ್ತಿ ಮತ್ತು ಕಲಾವಿದ (ಅನುವಾದ) ಮುಂತಾದ ಕೃತಿಗಳನ್ನೂ ರಚಿಸಿದ್ದರು.
ಹದಿನೆಂಟು ಕಾದಂಬರಿಗಳು, ಹದಿನಾರು ವಿಮರ್ಶಾ ಗ್ರಂಥಗಳು ಇತರ ಕೃತಿಗಳೂ ಸೇರಿ ಒಟ್ಟು 40 ಕ್ಕೂ ಹೆಚ್ಚು ಕೃತಿ ರಚಿಸಿದ್ದ ಇನಾಂದಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಸನ್ಮಾನ, ಕುವೆಂಪು ಕಾದಂಬರಿಗಳು ಕೃತಿಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಪ್ರಶಸ್ತಿ, ಮತ್ತು ತೀ.ನಂ.ಶ್ರೀ ಸ್ಮಾರಕ ಬಹುಮಾನ, ಪಾಶ್ಚಾತ್ಯ ಕಾವ್ಯಮೀಮಾಂಸೆಗೆ ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ತಮ್ಮಣ್ಣರಾವ ಅಮ್ಮಿನಬಾವಿ ಸ್ಮಾರಕ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು.
ಅಭಿಮಾನಿಗಳು, ಶಿಷ್ಯರು 1984ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ನವನೀತ’. ಇದಲ್ಲದೆ ಇವರ ಗೌರವಾರ್ಥ ಪ್ರಪಂಚದ 31 ಪ್ರಮುಖ ಕಾದಂಬರಿಗಳೆನಿಸಿರುವ ಟಾಲ್‌ಸ್ಟಾಯ್‌ರ ಅನ್ನಾಕರೇನಿನ, ಸರ್ವಾಂಟಿಸ್‌ನ ಡಾನ್‌ಕಿಯೋಟಿ, ಥಾಮಸ್‌ಮನ್‌ನ ಮ್ಯಾಜಿಕ್ ಮೌಂಟನ್, ಇ.ಎಂ. ಫಾರ್‌ಸ್ಟರ್ ನ ಹೋವರ್ಡ್ಸ್ ಎಂಡ್, ನೆಬೊಕೋವ್‌ನ ಲೋಲಿತ, ಕಾಪ್ಕನ ಟ್ರಯಲ್ ಮತ್ತು ಕಾಮುನ ಔಟ್‌ಸೈಡರ್ ಮುಂತಾದ ಕಾದಂಬರಿಗಳನ್ನು ಕುರಿತಂತೆ ನಾಡಿನ ಹಿರಿಯ ಕಿರಿಯ ಲೇಖಕರ ವಿಮರ್ಶಾತ್ಮಕ ಲೇಖನಗಳ ಸಂಸ್ಕರಣ ಗ್ರಂಥ ‘ಕಾದಂಬರಿ ಲೋಕ’ವನ್ನು 1990ರಲ್ಲಿ ಬಿಡುಗಡೆ ಮಾಡಲಾಯಿತು.
ವಿ.ಎಂ. ಇನಾಂದಾರರು 1986ರ ಜನವರಿ 26ರಂದು ಈ ಲೋಕವನ್ನಗಲಿದರು. ಇನಾಂದಾರರ ಹೆಸರನ್ನು ಚಿರಸ್ಥಾಯಿಯಾಗಿಸಲು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು 1987ರಿಂದ ಪ್ರತಿವರ್ಷವೂ ವಿಮರ್ಶಾ ಕೃತಿಗಳಿಗೆ ವಿ.ಎಂ. ಇನಾಂದಾರ್ ಪ್ರಶಸ್ತಿ ನೀಡುತ್ತಾ ಬಂದಿದೆ.
On the birth anniversary of great scholar and writer V. M. Inamdar 🌷🙏🌷
ಕಾಮೆಂಟ್‌ಗಳು