ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮಿತಾಬ್ ಬಚ್ಚನ್


ಅಮಿತಾಬ್ ಬಚ್ಚನ್


ಅಮಿತಾಬ್ ಬಚ್ಚನ್ ಚಿತ್ರರಂಗದ ಸುದೀರ್ಘ ಕಾಲದ ಸೂಪರ್ ಸ್ಟಾರ್. ಚಿತ್ರರಂಗದ ಜೀವನದಲ್ಲಿನ  ಹಲವು ಕಠಿಣ ಪರೀಕ್ಷೆಗಳ ಏಳುಬೀಳಿನಲ್ಲಿ ಬಚಾವಾದ ಬಚ್ಚನ್ನನಾಗಿ ವಿಜ್ರಂಭಿಸುತ್ತಿರುವ, ಸುದೀರ್ಘ ಕಾಲದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ನರು ನಮ್ಮ ಕಾಲಮಾನದ ಮಹತ್ವದ ವ್ಯಕ್ತಿಗಳಲ್ಲೊಬ್ಬರು ಎಂಬುದು ನಿರ್ವಿವಾದದ ಸಂಗತಿ.  

“ಬದುಕಿನಲ್ಲಿ ಒಬ್ಬ ವ್ಯಕ್ತಿ ಹೇಗೆ ಜಯ ಗಳಿಸಿದ ಎಂಬುದು ಆತನ ಬಗ್ಗೆ ಕಿಂಚಿತ್ತು ಮಾತ್ರ ಹೇಳುತ್ತದಂತೆ.  ಆದರೆ ಆತನ ಸೋಲು ಆತನ ಬಗ್ಗೆ ಬಹಳಷ್ಟು ಹೇಳುತ್ತದಂತೆ”.  ಅಮಿತಾಬರು ಬದುಕಿನಲ್ಲಿ ಸೋತು ಗೆದ್ದವರು, ಗೆದ್ದು ಸೋತು, ಪುನಃ ಪುನಹ ಮೇಲೆದ್ದವರು.  

ಅಮಿತಾಬ್ ಬಚ್ಚನ್ನರು 1942ರ ಅಕ್ಟೋಬರ್ 11ರಂದು ಅಲಹಾಬಾದಿನಲ್ಲಿ ಜನಿಸಿದರು.  ಅಮಿತಾಬರ ತಂದೆ ಹರಿವಂಶರಾಯ್ ಬಚ್ಚನ್ ಭಾರತೀಯ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠದ ಅಲಂಕೃತ ಕವಿಯಾಗಿ ಅಜರಾಮರರು.  ತಾಯಿ ತೇಜಿ ಬಚ್ಚನ್ ಕಲಾಹೃದಯಿ.  ಹಿಂದೂ ಮತ್ತು ಸಿಖ್ ಕುಟುಂಬಗಳ ಸಂಮಿಳಿತದ ಈ ದಾಂಪತ್ಯದಲ್ಲಿ ಜನಿಸಿದ ಅಮಿತಾಬ್ ಮೊದಲು ನೈನಿತಾಲಿನಲ್ಲಿ ಕಲೆಯಲ್ಲಿ ಪದವಿ ಪಡೆಯಹೋಗಿ ವಾಪಸ್ಸು ದೆಹಲಿಗೆ ಬಂದು ವಿಜ್ಞಾನದ ಪದವಿ ಪಡೆದರು.  ಕೆಲವು ದಿನ ಶಿಪ್ಪಿಂಗ್ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸಿ, ಹೆಚ್ಚು ದಿನ ಅದಕ್ಕೆ ಒಗ್ಗಿಕೊಳ್ಳದೆ ಚಿತ್ರರಂಗದಲ್ಲಿ ಅದೃಷ್ಟ ಅರಸಿಬಂದರು.  

ಹಲವು ದಿನಗಳ ಹಿಂದೆ ಅಮಿತಾಬರ ಬ್ಲಾಗ್ ಓದುತ್ತಿದ್ದೆ.  ಆಗಿನ ದಿನಗಳಲ್ಲಿ ಶಶಿಕಫೂರ್ ನಾಯಕನಾಗಿದ್ದ ಒಂದು ಚಿತ್ರದಲ್ಲಿ ಅಮಿತಾಬ್ ಒಬ್ಬ ಚಿಲ್ಲರೆ ನಟನಾಗಿ ಪಾತ್ರ ಸಿಕ್ಕಿತಲ್ಲಾ ಎಂಬ ಸಂತೋಷದಿಂದ ಒಪ್ಪಿಕೊಂಡರು.  ಆ ಪಾತ್ರ ಯಾವುದು ಗೊತ್ತೆ?  ಹೆಣ ಹೊರುವ ನಾಲ್ಕು ಜನರಲ್ಲಿ ಈತ ಒಬ್ಬ.  ಆ ಚಿತ್ರೀಕರಣ ನಡೆಯುತ್ತಿದ್ದ ಕೆಲಹೊತ್ತಿನಲ್ಲೇ ಅಲ್ಲಿಗೆ ಬಂದ ಶಶಿಕಪೂರ್ ಅಮಿತಾಬನನ್ನು ನೋಡಿ ಏನನ್ನಿಸಿತೋ ಏನೋ, “ಬಾ ಇಲ್ಲಿ, ನೀನು ತುಂಬಾ ಹಿರಿಯನಾಗುವ ಸಾಮರ್ಥ್ಯ ಇರುವವ.  ಇಂತ ಚಿಲ್ಲರೆ ಪಾತ್ರವೆಲ್ಲಾ ಮಾಡಬೇಡ” ಎಂದು ಬುದ್ಧಿವಾದ ಹೇಳಿದ್ದಲ್ಲದೆ, ನಿರ್ದೇಶಕರನ್ನು ಕರೆದು,  “ನೋಡು, ಈ ಹುಡುಗ ಮಾಡಿರುವ ಈ ದೃಶ್ಯಗಳನ್ನೆಲ್ಲಾ ಕಿತ್ತು ಹಾಕಿ ಬೇರೆ ಯಾರನ್ನಾದರೂ ಹಾಕಿಕೊಂಡು ಪುನಃ ಚಿತ್ರಿಸಿಕೋ” ಎಂದು ಖಡಾಖಂಡಿತವಾಗಿ ಆದೇಶವೆನ್ನುವಂತೆ ನುಡಿದುಬಿಟ್ಟರು.  ಮುಂದೆ ಅಮಿತಾಬ್ ಬಚ್ಚನ್ ಶಶಿಕಫೂರರ ಹಲವಾರು ಚಿತ್ರಗಳಲ್ಲಿ ನಟಿಸಿ ಶಶಿಕಫೂರರನ್ನು ಮೀರಿಸಿದ ತ್ರಿವಿಕ್ರಮನಾಗಿ ಬೆಳೆದು ನಿಂತರು.  

ಅಮಿತಾಬ್ ಬಚ್ಚನ್ನರು ಅವಕಾಶಕ್ಕಾಗಿ ಸ್ಟುಡಿಯೋ ಬಾಗಿಲು ತಟ್ಟಿ, ನಿರ್ಮಾಪಕ, ನಿರ್ದೇಶಕರ ಮನೆ ಬಾಗಿಲನ್ನು ಕಾದದ್ದು ಎಷ್ಟೋ.  ಚಿತ್ರರಂಗದಲ್ಲಿ ಸಾರ್ವಕಾಲಿಕವಾಗಿ ಚಲನಚಿತ್ರರಂಗದ ಅಪ್ಯಾಯಮಾನ ಧ್ವನಿ ಎನಿಸಿರುವ ಅವರು ಆಕಾಶವಾಣಿಯಲ್ಲಿ ಅನೌನ್ಸರ್ ಹುದ್ದೆಗೆ ಕೂಡಾ ಪರಿಗಣಿಸಲ್ಪಡದೆ ತಿರಸ್ಕೃತರಾದವರು.  ನಿನ್ನಂತವನಿಗೆ ನಟನೆಯೇ, ಬೇರೆ ಕೆಲಸ ನೋಡು ಎಂದವರು ಎಷ್ಟೋ ಜನ.

1969ರಲ್ಲಿ ಧ್ವನಿ ನಿರೂಪಕನಾಗಿ ಮೃಣಾಲ್ ಸೇನರ ರಾಷ್ತ್ರೀಯ ಪ್ರಶಸ್ತಿ ವಿಜೇತ ಚಿತ್ರ ‘ಭುವನ್ ಶೋಮ್’ದಿಂದ ಅಮಿತಾಬರ ಚಿತ್ರಜಗತ್ತಿನ ಜೀವನ ಪ್ರಾರಂಭಗೊಂಡಿತು.  ಸಾತ್ ಹಿಂದೂಸ್ಥಾನಿ ಚಿತ್ರದಲ್ಲಿ ಏಳು ಜನ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ಅಮಿತಾಬ್ ರಾಷ್ಟ್ರೀಯ ಪ್ರಶಸ್ತಿ ಪಡೆದರು.  ರಾಜೇಶ್ ಖನ್ನ ಜೊತೆಗಿನ ಆನಂದ್ ಚಿತ್ರದಲ್ಲಿನ ಪಾತ್ರ ವಿಮರ್ಶಕರ ಮೆಚ್ಚುಗೆ ಪಡೆಯಿತು.  ‘ಪರ್ವಾನ’ ಚಿತ್ರದಲ್ಲಿ ಅವರು ವಿಭಿನ್ನ ರೀತಿಯ ಖಳ ಪಾತ್ರ ವಹಿಸಿದ್ದರು.  ‘ರೇಶ್ಮಾ ಔರ್ ಶೇರಾ’ ಎಂಬ ಚಿತ್ರ, ಜಯಾ ಬಾಧುರಿ ಅಭಿನಯದ  ‘ಗುಡ್ಡಿ’ ಯಂತಹ ಹಲವು ಚಿತ್ರಗಳಲ್ಲಿನ ಕಿರು ಪಾತ್ರಗಳು,  ‘ಬಾವರ್ಚಿ’ಯಲ್ಲಿನ ನಿರೂಪಕ, ಕನ್ನಡಿಗ ಎಸ್ ರಾಮನಾಥನ್ ಅವರ ‘ಬಾಂಬೆ ಟು ಗೋವಾ’ ಚಿತ್ರದಲ್ಲಿನ ಅಭಿನಯ ಇವು  ಅಮಿತಾಬರ ಪ್ರಾರಂಭಿಕ ಚಿತ್ರ ಜೀವನದ ಕೆಲವು ಮಜಲುಗಳು.  

ಪ್ರಕಾಶ್ ಮೆಹ್ರಾ ಅವರ ‘ಜಂಜೀರ್’ ಚಿತ್ರ ನಾಯಕರಾಗಿ  ಅಮಿತಾಬರ ಬದುಕಿಗೆ ತಿರುವು ಕೊಟ್ಟ ಗಣನೀಯ ಚಿತ್ರ.  ಅಭಿಮಾನ್, ನಮಕ್ ಹರಾಮ್, ಕುಂವಾರಾ ಬಾಪ್, ದೋಸ್ತ್, ರೋಟಿ ಕಪಡಾ ಔರ್ ಮಕಾನ್,  ಮಜ್ಬೂರ್, ಚುಪ್ಕೆ ಚುಪ್ಕೆ,  ಮಿಲಿ, ಫರಾರ್ ಮುಂತಾದ ಚಿತ್ರಗಳ ನಂತರದಲ್ಲಿ ಮೂಡಿಬಂದ ಯಶ್ ಚೋಪ್ರಾ ಅವರ ‘ದೀವಾರ್’ ಅಮಿತಾಬರನ್ನು ಹಿಂದೀ ಚಿತ್ರರಂಗದ ಉತ್ತುಂಗಕ್ಕೇರಿಸಿಬಿಟ್ಟಿತು.  ಹೊರ ಸೌಮ್ಯಮುಖಿಯಾಗಿ,  ಗಾಂಭೀರ್ಯ ಮತ್ತು   ರೋಷಯುಕ್ತ ಸಂಗಮಗಳ ಯುವಕನಾಗಿ  ಅಭಿವ್ಯಕ್ತಿಸಿದ ಅಮಿತಾಬರ ಪಾತ್ರನಿರ್ವಹಣೆ ಚಿತ್ರರಸಿಕರಿಗೆ ಹುಚ್ಚುಹಿಡಿಸಿತ್ತು.  ಇಂದೂ ‘ದೀವಾರ್’ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಿತ್ರಗಳಲ್ಲಿ ಒಂದೆನಿಸಿದೆ.  ಇತ್ತೀಚೆಗೆ ಮಾಡಿದ ವಿಮಾನಪ್ರಯಾಣದಲ್ಲಿ ಕೂಡಾ ಈ ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಿದಾಗಲೂ ಎಲ್ಲೂ ಹಳತದ್ದು ಎಂಬ ಭಾವ ನೀಡಲಿಲ್ಲ.

ಶೋಲೆ ಚಿತ್ರವಂತೂ ಅಮಿತಾಬ್, ಧರ್ಮೇಂದ್ರ, ಹೇಮಾಮಾಲಿನಿ, ಸಂಜೀವ್ ಕುಮಾರ್, ಜಯಾಬಾಧುರಿ, ಅಮ್ಜಾದ್ ಖಾನ್ ಅಂತಹ ಮಹಾನ್ ಪ್ರತಿಭೆಗಳ ಸಮಸ್ತ ಸಾಮರ್ಥ್ಯವನ್ನು ಹೊರತಂದ, ಸುಮಧುರ ಸಂಗೀತ, ಸಾಹಸ, ಕಥಾನಕ, ಚಿತ್ರಣಗಳ ಅಪೂರ್ವ ಚಿತ್ರ.  ಅಂತದ್ದೇ ಕಥೆಗಳನ್ನು  ಇಂಗ್ಲಿಷಿನಲ್ಲಿ 'Magnificient Seven',  ಹಿಂದಿಯಲ್ಲಿ 'ಮೇರಾ ದೇಶ್ ಮೇರಾ ಗಾಂವ್' ಅಂಥಹ ಪ್ರಸಿದ್ಧ ಚಿತ್ರಗಳಲ್ಲಿ ಕಂಡಿದ್ದರೂ ಅವೆಲ್ಲವೂ ‘ಶೋಲೆ’ ಮುಂದೆ ಸಾಮಾನ್ಯ ಎನಿಸುವಂತೆ ಭಾವ ಹುಟ್ಟಿಸಿಬಿಟ್ಟವು.  ಈ ಚಿತ್ರದಲ್ಲಿನ  ಅಮಿತಾಬರ ಅಭಿನಯವಂತೂ ರೋಷ, ಪ್ರೀತಿ, ಹಾಸ್ಯ, ನಲ್ಮೆ  ಇವೆಲ್ಲವುಗಳ ಸುಂದರ ಸಂಯೋಗ.  

ಅಮರ್ ಅಕ್ಬರ್ ಅಂತೋನಿಯ ಹಾಸ್ಯ, ಕಭೀ ಕಭೀ ಚಿತ್ರದ ಪ್ರೇಮಿ, ಶರಾಭಿಯ ಕುಡುಕ,  ಡಾನ್ ಚಿತ್ರದ ವಿಭಿನ್ನತೆಯ  ದ್ವಿಪಾತ್ರ, ಶಕ್ತಿ ಚಿತ್ರದಲ್ಲಿ ದಿಲೀಪ್ ಕುಮಾರ್ ಎದುರಿನ ಶ್ರೇಷ್ಟತೆಯ ಮೇರು ಶಿಖರದ ಮುಂದೆ ನಾವೀನ್ಯತೆಯ ಬೆಡಗು, ಹಲವು ಚಿತ್ರಗಳಲ್ಲಿ ಕೂಲಿಯಾಗಿ, ಪ್ರೇಮಿಯಾಗಿ, ಕ್ರಾಂತಿಕಾರನಾಗಿ, ಸಾಧಕನಾಗಿ, ಸೂಪರ್ ಹೀರೋ ಆಗಿ ಮೆರೆದ ಅಮಿತಾಬರ ಪಾತ್ರನಿರ್ವಹಣೆ ಆ ಪಾತ್ರಗಳ ಕಾಲ್ಪನಿಕತೆ ಅದೆಂತದ್ದೇ ಇರಲಿ ಜನರನ್ನು ಇನ್ನಿಲ್ಲದಂತೆ ಚಿತ್ರಮಂದಿರಗಳಿಗೆ ಕರೆತಂದವು ಎಂಬ ಬಗ್ಗೆ ಎರಡು ಮಾತಿಲ್ಲ.

‘ಕೂಲಿ’ ಚಿತ್ರದ ಸಮಯದಲ್ಲಿ ಮಾರಣಾಂತಿಕವಾದ ಅಪಘಾತದಲ್ಲಿ ಬದುಕುಳಿದು ದೈಹಿಕವಾಗಿ ಮಾನಸಿಕವಾಗಿ ಸ್ಥೈರ್ಯ ಕುಂದಿದ  ಅಮಿತಾಬರನ್ನು ರಾಜೀವ್ ಗಾಂಧಿಯ ಸ್ನೇಹ  ಪ್ರೇರಣೆಗಳು  ರಾಜಕೀಯದತ್ತ ಬರಲು ಪ್ರೇರೇಪಿಸಿದವು.  ಶೇಕಡಾ 62ರಷ್ಟು  ಮತಗಳಿಕೆಯ ದಾಖಲೆಯ ವಿಜಯದೊಂದಿಗೆ ಲೋಕಸಭೆಯನ್ನು  ಪ್ರವೇಶಿಸಿದ ಅಮಿತಾಬರಿಗೆ ಅಲ್ಲಿ ಏನು ಮಾಡಬೇಕು ಎಂದು ತೋಚಲಿಲ್ಲ,  ಹೇಗೆ ಈಜಬೇಕು ಎಂದು ಗೊತ್ತಿರಲೂ ಇಲ್ಲ.  ಕಡೆಗೊಂದು ದಿನ ಇದೊಂದು ‘ರೊಚ್ಚೆಗುಂಡಿ’ ಎಂದು ಹೇಳುತ್ತಾ ಹತಾಶೆಗೊಂಡು ಹೊರಬಂದರು.  ಬೋಫೋರ್ಸ್ ಹಗರಣದ ಕೆಸರನ್ನು ಅಮಿತಾಬರ ಮೇಲೂ ಎರಚಲಾಯಿತು.  ಅವರ ಸಿನಿಮಾ ನಿರ್ಮಾಣದ ಪ್ರಯತ್ನಗಳು ಭಯಂಕಾರವಾಗಿ ಸೋತವು.  ವಿಶ್ವಸುಂದರಿಯರ ಸ್ಪರ್ಧೆ ನಡೆಸಿ ಕೋಟಿ ಕೋಟಿಗಳು ಕೈಬಿಟ್ಟು ಹೋದವು.  ಎಬಿಸಿಎಲ್ ಸೋತು ಸುಣ್ಣವಾಗಿ ಮನೆ ಮಾರಲು ಹೋದರೆ, ಕೋರ್ಟು ಸಾಲ ಇರುವ ಆಸ್ಥಿಯನ್ನು ಮಾರುವ ಹಾಗಿಲ್ಲ ಎಂದು ಅಡ್ಡಗಾಲು ಹಾಕಿತು.  ಮಗ ಅಭಿಷೇಕ್ ಅಪ್ಪನಿಗೆ ಮಾನಸಿಕವಾಗಿ ಬೆಂಬಲವಾಗಿರಲು ವಿದೇಶದಲ್ಲಿ ನಡೆಸುತ್ತಿದ್ದ ಓದನ್ನು ನಿಲ್ಲಿಸಿ ಮನೆಗೆ ಹಿಂದಿರುಗಿ  ಬಂದ.

ದೂರದರ್ಶನದಲ್ಲಿ ಬಂದ ‘ಕೌನ್ ಬನೇಗಾ ಕ್ರೋರ್ ಪತಿ’ ಅಮಿತಾಬರ ಬದುಕಿನ ಕಾಲಚಕ್ರವನ್ನು ಮತ್ತೆ ಯಶಸ್ಸಿನತ್ತ  ತಿರುಗಿಸಿತು.  ಸಾಲ ಹಿಂದಿರುಗಿಸಿಲ್ಲ ಎಂದು ಕೋರ್ಟಿಗೆ ಹೋದವರೆಲ್ಲಾ ನಮ್ಮ ಬಾಕಿ ಚುಕ್ತಾ ಆಯಿತು ಎಂದು ತಮ್ಮ ದಾವೆಗಳನ್ನು ಹಿಂತೆಗೆದುಕೊಂಡದ್ದಲ್ಲದೆ,  ನಮ್ಮ ದುಡ್ಡನ್ನು ಕ್ಷೇಮವಾಗಿ ಹಿಂದಿರುಗಿಸಿದ ಮಹಾನುಭಾವನೀತ ಎಂದು ಹಾಡಿ ಹೊಗಳಿದರು.  ಪುನಃ ಚಿತ್ರರಂಗದಲ್ಲಿ ಹಲವಾರು ಯಶಸ್ಸುಗಳು ಅಮಿತಾಬರನ್ನು ಅರಸಿಬಂದವು.  ಜಾಹೀರಾತುದಾರರು ಮನೆಯ ಮುಂದೆ ಕ್ಯೂ ನಿಂತರು.  ಜೀವನದಲ್ಲಿ ಬರೀ ಸೋಲನ್ನೇ ಕಂಡ ಅವರ ಮಗ ಅಭಿಷೇಕನ ಚಿತ್ರಗಳೂ ಅಲ್ಲಲ್ಲಿ ಯಶಸ್ಸು ಕಾಣತೊಡಗಿದವು.  ಸೌಂದರ್ಯಯುತೆ, ಐಶ್ವರ್ಯವಂತೆ ‘ಐಶ್ವರ್ಯ’ ಮನೆ ತುಂಬಿದಳು. 

ಕೌನ್ ಬನೇಗಾ ಕ್ರೋರ್ ಪತಿಯಲ್ಲಿ ಎಷ್ಟು ಜನ ಕೋಟ್ಯಾಧಿಪತಿಗಳಾದರೋ ಬಿಟ್ಟರೋ, ಅಮಿತಾಬರಂತೂ ತಮ್ಮ ಕಳೆದು ಹೋದ ಕೋಟಿ ಕಷ್ಟ ಕಟ್ಟಲೆಗಳಿಂದ ಹೊರಬರಲು ಈ ಕಾರ್ಯಕ್ರಮ ಬೆಳಕು ತಂದಿತು.  ಅಮಿತಾಬರು ಕಾರ್ಯಕ್ರಮ ನಡೆಸುವ ರೀತಿ, ಅವರು ಸಂಭಾಷಿಸುವಲ್ಲಿ ಇರುವ ಧ್ವನಿಯ ಮೋಹಕತೆ, ಸಾಮಾನ್ಯರೊಂದಿಗೆ ಬೆರೆಯುವ ಸಹಜತೆಯ ಸೊಬಗು, ಅವರ ಶಾರೀರದಲ್ಲಿ ಇರುವ ಗಾಂಭೀರ್ಯ, ಸೌಂದರ್ಯ, ಪ್ರಸನ್ನತೆ, ಅವರ ವ್ಯಕ್ತಿತ್ವದಲ್ಲಿ ಸುಪ್ತವಾಗಿರುವ ತೇಜಸ್ಸು ಇವುಗಳನ್ನು ಅಭಿಮಾನಿಸದವರು ಇಲ್ಲವೇ ಇಲ್ಲ ಎಂದರೆ ತಪ್ಪಾಗಲಾರದು. 

‘ಪಾ’ ಚಿತ್ರದಲ್ಲಿ ಗಂಟೆಗಟ್ಟಲೆ ಮೇಕಪ್ ಹಚ್ಚಿ ಪುಟ್ಟ ಹುಡುಗನಂತೆ ತನ್ನ ಮಗನಿಗೇ ಪುಟ್ಟ ಮಗನಾಗಿ ಮೂಡಿಬಂದ ಅಮಿತಾಬರು ರಾಷ್ರೀಯ ಪ್ರಶಸ್ತಿಯ ಗೌರವದ ಜೊತೆಗೆ ಒಬ್ಬ ದೊಡ್ಡವ ಸಣ್ಣವನಾಗಿ ಹೇಗಿರಬೇಕು ಎಂಬ ಸಂದೇಶವನ್ನೂ ಸುಪ್ತವಾಗಿ ತೋರಿದ ಭಾವ ಹುಟ್ಟಿಸುತ್ತಾರೆ.  “ತನ್ನ ಶಿಶು ಸಹಜವಾದ ಮುಗ್ಧತೆಯನ್ನು ಯಾರು ಕೊನೆಯವರೆಗೆ ಉಳಿಸಿಕೊಳ್ಳುತಾನೋ, ಆತನೇ ನೈತಿಕವಾಗಿ ಹಿರಿಯನೆನಿಸಿಕೊಳ್ಳುತ್ತಾನೆ” ಎಂಬ ತತ್ವಜ್ಞಾನಿ ಮೆನ್ಸಿಯಸ್ ಅವರ ಮಾತುಗಳನ್ನು ಕೂಡಾ ನೆನಪು ಮಾಡಿಕೊಡುವಂತಿದೆ.

ಕಳೆದ ವರ್ಷ ಅಮಿತಾಬರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ನಾಲ್ಕು ರಾಷ್ಟ್ರ ಚಲನಚಿತ್ರಪ್ರಶಸ್ತಿ, ಹದಿನೈದು ಫಿಲೊಫೇರ್ ಸೇರಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಅವರಿಗೆ ಸಂದಿವೆ.

ಇಷ್ಟು ಸಾಧಿಸಿದವರನ್ನೂ ಕೊರೊನಾ ಬಿಟ್ಟಿಲ್ಲ. ಕೊರೊನಾಗೆ ಈಡಾಗಿದ್ದ ಇವರು ಮತ್ತು ಇವರ ಕುಟುಂಬದ ಸದಸ್ಯರು ಗುಣಮುಖರಾದರು. ಅಮಿತಾಬ್ ಪುನಃ ಕಾರ್ಯೋನ್ಮುಖರಾದರು.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ “ನಿಮ್ಮನ್ನು ಈ ವಯಸ್ಸಿನಲ್ಲೂ ಪ್ರೇರೇಪಿಸುವ ಅಂಶ ಯಾವುದು?” ಎಂಬ ಪ್ರಶ್ನೆಗೆ ಅಮಿತಾಬರು ಹೇಳುತ್ತಾರೆ “ನಾನು ಮಾಡುವ ಕೆಲಸ.  ನಾನು ಮಾಡುವ ಕೆಲಸವನ್ನು ಅನೇಕ ಜನ ನೋಡುತ್ತಾರೆ.  ಅದು ಉತ್ತಮವಾಗಿರಬೇಕು.  ಆ ನಿರೀಕ್ಷೆಗಳಿಗೆ ನಾನು ಜವಾಬ್ಧಾರಿಯುತನಾಗಿರಬೇಕು ಎಂಬ ಅಂಶವೇ ನನ್ನನ್ನು ಈ ಕೆಲಸಕ್ಕೆ ಪ್ರೇರೇಪಿಸುತ್ತದೆ”.  ಎಷ್ಟೇ ಬಿಡುವಿಲ್ಲದ ಕೆಲಸದ ಮಧ್ಯದಲ್ಲೂ ಬರವಣಿಗೆ, ಓದು, ಸೌಹಾರ್ದತೆ, ಸಹಜತೆ, ಸಾಮಾನ್ಯತೆಗಳನ್ನು ಮೆರೆದು ಹಿರಿಯರಾಗಿರುವ ಅಮಿತಾಬರು ತಮ್ಮ ಹೆಸರೇ ಹೇಳುವಂತೆ ನಂದಾದೀಪದ ಬೆಳಕಾಗಿ ಪ್ರಜ್ವಲಿಸುತ್ತಲೇ ನಡೆದಿದ್ದಾರೆ.  ಈ ಹಿರಿತನದಲ್ಲಿ ಅವರಿಗೆ ಯಾವುದೇ ನೋವುಗಳೂ ಕಾಡದಿರಲಿ.  ಅವರು ಹರಡಿರುವ ಬೆಳಕು ನಿತ್ಯ ಪ್ರಕಾಶಿಸುತ್ತಿರಲಿ ಎಂದು ಆಶಿಸುತ್ತಾ ಈ ಮಹಾನ್ ಪ್ರತಿಭೆಗೆ  ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

On the birth day of great Amitabh Bachchan Sir 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ