ನಾಗ ಐತಾಳ
ನಾಗ ಐತಾಳ
ಡಾ. ನಾಗ ಐತಾಳರು ಹಿರಿಯ ವಿಜ್ಞಾನಿಯಾಗಿ ಅಮೆರಿಕದಲ್ಲಿ ನೆಲೆಸಿದ್ದ ಕನ್ನಡದ ಬರಹಗಾರರಾಗಿ ಮತ್ತು ನಮ್ಮೆಲರ ಕನ್ನಡ ಆಸಕ್ತಿಗಳಿಗೆ ನಿರಂತರ ಬೆಂಬಲಿಗರಾಗಿದ್ದವರು.
ಡಾ. ನಾಗ ಐತಾಳರು ಜೀವ ರಸಾಯನ ವಿಜ್ಞಾನ ಶಾಸ್ತ್ರದಲ್ಲಿ ಮಹತ್ವದ ಸಾಧನೆ ಮಾಡಿ, ಶಿಕಾಗೋ ವಿಶ್ವವಿದ್ಯಾಲಯದಲ್ಲೇ 27 ವರ್ಷಗಳ ಸುದೀರ್ಘ ಅವಧಿಯವರೆಗೆ ಪ್ರಾಧ್ಯಾಪನ ನಡೆಸಿದವರು. ವಿಶ್ವದ ಪ್ರಮುಖ ವಿಜ್ಞಾನ ಪತ್ರಿಕೆಗಳಲ್ಲಿ ಅವರ 42ಕ್ಕೂ ಹೆಚ್ಚು ವಿಜ್ಞಾನ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿದ್ದವು. ಜೊತೆಗೆ ಅವರು ತಮ್ಮ ವಿಶ್ರಾಂತ ಜೀವನದಲ್ಲಿ ಕನ್ನಡದಲ್ಲಿ ಪ್ರೀತಿಯಿಂದ ಮಾಡಿದ ಸಾಧನೆಯೂ ಅಪಾರವಾದದ್ದು. ಅವರು ಕನ್ನಡದಲ್ಲಿ 9 ಮಹತ್ವದ ಸಂಪಾದಿತ ಕೃತಿಗಳನ್ನೂ ಮತ್ತು 9 ಸೃಜನಶೀಲ ಕೃತಿಗಳನ್ನೂ ರಚಿಸಿದವರು.
ನಾಗ ಐತಾಳರು 1932ರ ಅಕ್ಟೋಬರ್ 5ರಂದು ಕೋಟದಲ್ಲಿ ಜನಿಸಿದರು. ತಂದೆ-ತಾಯಂದಿರು, ಇವರ ಅಜ್ಜನ ಹೆಸರಾದ "ನಾಗಪ್ಪಯ್ಯ" ಎಂಬ ನಾಮಕರಣ ಮಾಡಿದ್ದರು. ಶಾಲೆಗೆ ಸೇರಿದಾಗ "ನಾಗಪ್ಪ ಐತಾಳ" ಎಂದು ಕೊಂಚ ಬದಲಾವಣೆಯಾಗಿತ್ತು. ಮುಂದೆ ಅವರು ಅಮೆರಿಕಕ್ಕೆ ವಲಸೆ ಬಂದಾಗ, "ನಾಗ ಐತಾಳ" ಎಂದು ಚುಟುಕು ಆಕಾರ ತಳೆಯಿತು.
ನಾಗ ಐತಾಳರಿಗೆ ಕೋಟದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದರು. ಅಂತೆಯೇ ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ
ಪಿಎಚ್.ಡಿ ವರೆಗೆ ಅಧ್ಯಯನ ಸಾಗಿತು.
ಮುಂದೆ ಬಯೋಕೆಮಿಸ್ಟ್ರಿ ಸಂಶೋಧನಾ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು, ಅಮೆರಿಕಕ್ಕೆ ಬಂದರು. ಶಿಕಾಗೋ, ಲಾಸ್ ಏಂಜಲಿಸ್ ಮುಂತಾದೆಡೆ ಅವರ ಬದುಕು ಸಾಗಿತು. 42ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ವಿವಿಧ ವಿಜ್ಞಾನ ಪತ್ರಿಕಗಳಲ್ಲಿ ಪ್ರಕಟಿಸಿದರು.
ನಾಗ ಐತಾಳರು 2001ರಲ್ಲಿ ನಿವೃತ್ತರಾದ ಮೇಲೆ ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ತಾಳಿದರು. 9 ಸಂಪಾದಿತ ಗ್ರಂಥಗಳನ್ನೂ (ಕಾರಂತ, ಕುವೆಂಪು, ಮಾಸ್ತಿ, ಪುತಿನ, ಮೊದಲಾದವರ ಮೇಲೆ) 9 ಸ್ವಂತ ಪ್ರಕಟಣೆಗಳನ್ನೂ (ಕಥೆ, ಪ್ರಬಂಧ, ಇತ್ಯಾದಿ) ಪ್ರಕಟಿಸಿದರು.
ನಾಗ ಐತಾಳರ ಪತ್ನಿ ಲಕ್ಷ್ಮಿ. ಮಕ್ಕಳು: ಅನುರಾಧಾ ಮತ್ತು ಅರವಿಂದ. ಅನುರಾಧಾ ಮನಃಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು, ಕ್ಯಾಲಿಫೋರ್ನಿಯ ಸ್ಟೇಟ್‌ನಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ. ಅರವಿಂದ ಕಾನೂನು ಓದಿ, ನ್ಯೂಜರ್ಸಿಯಲ್ಲಿ ವಕೀಲಿ ವೃತ್ತಿಯನ್ನು ತೃಪ್ತಿಯಿಂದ ನಡೆಸುತ್ತಿದ್ದಾರೆ. ಇರಾನಿನ ಫಾರ್ಸಿ ಮಾತಾಡುವ, ಸೆಪಿಡ್ಹೆ ಅವರನ್ನು ಮದುವೆಯಾಗಿದ್ದಾರೆ. ಅಲೆಕ್ಸಾಂಡರ್ ಕೃಷ್ಣ, ಕ್ಯಾಮರಾನ್ ಕವಿನ್ ಎಂಬಿಬ್ಬರು ನಾಗ ಐತಾಳರ ಮೊಮ್ಮಕ್ಕಳು
"ಜೀವನ ಏರಿಳತಗಳಲ್ಲೇ ಸಾಗುತ್ತವೆ. ಕಷ್ಟ-ಸುಖಗಳೆರಡನ್ನು ಸಮತೋಲನದಲ್ಲಿ ಕಾಣುವ ನಿಲುವು ನಮ್ಮದಾಗಿರಬೇಕಲ್ಲವೇ?" ಎನ್ನುತ್ತಿದ್ದ ನಾಗ ಐತಾಳರು ಅವರದೇ ಈ ಸಾಲು ಹೇಳುತ್ತಿದ್ದರು:
"ವರ"ವಿನ್ನೇನು ಬೇಕು, ಇಳಿವಯಸಿನ ಈ ಗಡಿಯಲ್ಲಿ?
ಮಡದಿಯೊಬ್ಬಳು, ಭಾಗ್ಯದ ಲಕ್ಷ್ಮಿ, ಚಿನ್ನದ ಪುಟ
ಪಡೆದೆನು ಮುನ್ನಿ-ಪಾಪಣ್ಣರ ಸಂತಾನ ಸುಖ
ಬಡವಾಗದೆ ಬದುಕು ಸಾಗುತ ಬಂದಿದೆ ಈ ವರೆಗೂ
ಹಾಗೆಯೇ ಅವರ ಇನ್ನೊಂದು ಕವನದ ತುಣುಕೂ ಹೀಗಿದೆ:
ಬಾಳದಾರಿಯಲಿ ಏರು-ಪೇರುಗಳು
ಮುಳ್ಳು-ಕಲ್ಲುಗಳು ಅಲ್ಲಲ್ಲಿ
ಸಾರಿ, ಸವರಿ, ಸಮತೋಲನದ
ದಾರಿ ತುಳಿಯುವುದೇ ಬಾಳಿನ ಗೆಲುವು.
ಸಾಕಿನ್ನು ನನ್ನೀ ಹಿನ್ನೋಟ. ಬದುಕಿಗೆ ಹಿನ್ನೋಟವಿಲ್ಲ. ಮುನ್ನೋಟದಲ್ಲಿ ಏನೇನು ಕಾದಿರುವುದೋ ನೋಡಬೇಕಷ್ಟೆ!
ಹೀಗೆ ಸಾಧಿಸಿ ಬದುಕು ಸಾಗಿಸಿದ್ದ ಹಿರಿಯರಾದ ಡಾ. ನಾಗ ಐತಾಳರ ಮಾತುಗಳಲ್ಲಿ ನಮ್ರತೆಯಿತ್ತು. ಜೀವನ ಪ್ರೀತಿಯಿತ್ತು, ಜೀವನದ ಬಗ್ಗೆ ಗೌರವವಿತ್ತು.
ನಾಗ ಐತಾಳರನ್ನು ನೋಡುವ ಭಾಗ್ಯ ನನಗಿರಲಿಲ್ಲ. ಅವರು ನನ್ನ ಎಲ್ಲ ಬರಹಗಳನ್ನೂ ಓದುತ್ತಿದ್ದರು. ನಾನು ದಿನಾ ಹಾಕುತ್ತಿದ್ದ ಚಿತ್ರಗಳ ಕುರಿತು ಅವರಿಗೆ ಅಪಾರ ಅಕ್ಕರೆಯಿತ್ತು. ಅವುಗಳನ್ನು ಆಪ್ತತೆಯಿಂದ ಶೇರ್ ಮಾಡುತ್ತಿದ್ದರು. ಭವ್ಯ ಅಮೆರಿಕದ ನೆಲೆಯಲ್ಲಿದ್ದ ಅವರಿಗೆ ನನ್ನ ಕುಕ್ಕರಹಳ್ಳಿ, ಲಾಲ್‍ಬಾಗು ಮತ್ತು ದುಬೈನ ಗಲ್ಲಿಗಳ ಸೂರ್ಯೋದಯ, ಹೂ, ಗಿಡ ಸೈಕಲ್ಲುಗಳ ಕುರಿತಾದ ಅಕ್ಕರೆ ಹೇಗೆ ಮೂಡಿತೊ ತಿಳಿಯೆ! ಅದು ಅವರ ಹೃದಯವಂತಿಕೆಯ ಶ್ರೀಮಂತಿಕೆಯಲ್ಲಿ ಅರಳಿದ್ದು ಎಂದೆನಿಸುತ್ತದೆ.
ನಾಗ ಐತಾಳರು 2022ರ ಅಕ್ಟೋಬರ್ ಮಾಸಾಂತ್ಯದಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. ಹಿರಿತನದಲ್ಲಿ ಸಾವೆಂಬುದು ಬಿಡುಗಡೆ. ಕಳೆದುಕೊಂಡ ಜೀವಗಳು ಸಿಗುವುದಿಲ್ಲ ಎಂಬುದು ನಿಜ. ಆದರೆ ನಾನು ಅವರ ನೋಡಿಲ್ಲ. ಅವರೊಡನೆ ಮಾತನಾಡಿಲ್ಲ. ನಾ ಕಳೆದುಕೊಂಡದ್ದಾರೂ ಏನು? ನನ್ನಲ್ಲಿ ಉತ್ತರವಿಲ್ಲ! ನಾಗ ಐತಾಳರೆ ನಾನು ನಿಮ್ಮನ್ನಾಗಲಿ, ನೀವು ನನ್ನನ್ನಾಗಲಿ, ನಾವು ಆ ಪರಮಾತ್ಮನ ಪ್ರೀತಿಯನ್ನಾಗಲಿ ಎಂದೂ ಕಳೆದುಕೊಳ್ಳುವುದಿಲ್ಲ.
On the birth anniversary scientist and writer Dr Naga Aithal Sir 🌷🙏🌷
ಕಾಮೆಂಟ್‌ಗಳು