ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀನಿವಾಸಾಚಾರ್


 ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್


ಇಂದು ನಮ್ಮ ತಂದೆ ತಿರು ಶ್ರೀನಿವಾಸಾಚಾರ್ಯ (1910-1989) ಅವರ ಸಂಸ್ಮರಣಾ ದಿನ.‍

ನಮ್ಮ ತಂದೆ ತಿರು ಶ್ರೀನಿವಾಸಾಚಾರ್ಯರು (1910-1989) ಹಾಸನ, ವಿದ್ಯಾನಗರ, ಬೆಂಗಳೂರು, ಮೈಸೂರು, ಆಯನೂರು ಮೊದಲಾದ ಕಡೆಗಳಲ್ಲಿ ಶಿಕ್ಷಕ ತರಬೇತಿ ವಿದ್ಯಾಲಯಗಳಲ್ಲೂ, ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲೂ ದೀರ್ಘಕಾಲ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದವರು.  ನಿವೃತ್ತಿಯ ನಂತರವೂ ಮೈಸೂರಿನ ಶಾರದಾವಿಲಾಸ, ಸಿದ್ಧಾರ್ಥ ಹೈಸ್ಕೂಲು, ಶ್ರೀ ರಾಮಕೃಷ್ಣ ವಿದ್ಯಾಲಯ ಮೊದಲಾದ ಖಾಸಗಿ ಪ್ರೌಢಶಾಲೆಗಳಲ್ಲಿ ಹಲವು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ನಮ್ಮಪ್ಪನ ಕುರಿತು ನನಗೆ ಎರಡು ವಿಚಾರದಲ್ಲಿ ತುಂಬಾ ಸಂತೋಷವಿದೆ.  ಮೊದಲನೆಯದು ಅವರು ಆಸ್ತಿ ಮಾಡದೆ ಇದ್ದದ್ದಕ್ಕೆ. ಹೀಗಾಗಿ ಅವರ ಮಕ್ಕಳಾದ ನಮ್ಮಲ್ಲಿ ಯಾವುದೇ ವಿವಾದಗಳಿಗಾಸ್ಪದವಿಲ್ಲದ ಅನ್ಯೋನ್ಯತೆಯಿದೆ. ನಮ್ಮ ತಂದೆಯವರ ಕುರಿತಾದ ನನ್ನಲ್ಲಿರುವ ಮತ್ತೊಂದು  ಸಂತೋಷವೆಂದರೆ ಅವರು  ಸದಾ ‘ಸಂಸ್ಕೃತಿ’ ಕುರಿತು  ಕ್ರಿಯಾಶೀಲರಾಗಿದ್ದದ್ದು.  ಈ ಕುರಿತಾದ ಜಾಗೃತಿ ಅವರು ನಮಗೆ ಕೊಟ್ಟ ಬಹು ಅಮೂಲ್ಯ ಆಸ್ತಿ.  

ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು, ಶ್ರೀರಾಮ ದೇಗುಲಗಳಲ್ಲಿ ಪುರಾಣ, ಗಮಕ, ಸಂಗೀತ, ಸಾಹಿತ್ಯ, ಕಲೆ ಮುಂತಾದ ಸಾಂಸ್ಕೃತಿಕ ಉತ್ಸವಗಳ ಸಂಚಾಲಕರಾಗಿ ತಮ್ಮ ಶಿಕ್ಷಕ ವೃತ್ತಿಯ ಹೊರಗಿನ ವೇಳೆಯನ್ನು ಬಹುತೇಕವಾಗಿ ಅದಕ್ಕಾಗಿ ಧಾರೆ ಎರೆದಿದ್ದರು.  ನಮ್ಮಮ್ಮ ಸೀತಮ್ಮ ಮನೆಯಲ್ಲಿ ತಮಿಳಿದ್ದು, ತೆಲುಗು ನೆಲದಿದಂದ ಬಂದರೂ ಕನ್ನಡವನ್ನು ಸಮರ್ಪಕವಾಗಿ ಕಲಿತು ಕನ್ನಡ, ತೆಲುಗು ಮತ್ತು ತಮಿಳು ಮೂರೂ ಭಾಷೆಗಳಲ್ಲಿ  ಜ್ಞಾನಿಯಾಗಿ ಸಮುದಾಯದಲ್ಲಿ ಕ್ರಿಯಾಶೀಲೆಯಾಗಿದ್ದರು.

ನಾನು ನನ್ನ ಹುಟ್ಟು ಮತ್ತು ನಾಲ್ಕನೇ ತರಗತಿಯವರೆಗಿನ ಬಾಲ್ಯ ಕಳೆದದ್ದು ಹಾಸನದಲ್ಲಿ.  ಅಂದಿನ ದಿನಗಳಲ್ಲಿ ಅಲ್ಲಿನ 'ನಾರ್ಥರನ್ ಎಕ್ಸ್ಟೆನ್ಷನ್' ಎಂಬ ಬಡಾವಣೆ ಊರಿನ ಬಸ್  ನಿಲ್ದಾಣದಿಂದ ಉದ್ಯಾನವನವನ್ನು ದಾಟಿ ಬಂದರೆ ಸಿಗುತ್ತಿತ್ತು.  ಆ ಬಡಾವಣೆಯ ಪ್ರವೇಶದಲ್ಲಿ ಒಂದು ಸುಂದರ ಆಂಜನೇಯನ ಗುಡಿ ಇತ್ತು.  ಆ ದೇಗುಲದ ಪ್ರಾಕಾರ ತುಂಬಾ ಸುಂದರವಾದದ್ದಾಗಿತ್ತು.   (ಇದು ಟೀಕೆ ಅಂತ ಅಲ್ಲ. ಕೆಲವು ವರ್ಷದ ಹಿಂದೆ ಅದನ್ನು ನೋಡುವ ಆಸೆಯಿಂದ ಆ ದೇಗುಲಕ್ಕೆ ಹೋದಾಗ, ಅಲ್ಲಿ ಇಂಚಿಂಚೂ ದೇವರುಗಳ  ಗೂಡುಗಳನ್ನು ಕಟ್ಟಿರುವುದರಿಂದ ಅಲ್ಲಿ ಹಳೆಯ ಸೌಂದರ್ಯದ   ಭಾವ ಪೂರ್ತಿ ಕಳೆದುಹೋಗಿದೆ ಅನಿಸಿತು.)

ಅಂದಿನ ಆ ದೇಗುಲದ ಆವರಣದಲ್ಲಿ ಅತ್ಯಂತ ಶ್ರೇಷ್ಠ ಮಾದರಿಯ ಸಾಂಸ್ಕೃತಿಕ ವಾತಾವರಣ ಇತ್ತು. ಕನ್ನಡ ವಿದ್ವಾಂಸರಾಗಿದ್ದ ನಮ್ಮ ತಂದೆ ಅವರಲ್ಲದೆ,  ಸಂಸ್ಕೃತ ಮತ್ತು ಕನ್ನಡ ವಿದ್ವಾಂಸರಾದ ಶ್ರೀನಿವಾಸ ದೇಶಿಕಾಚಾರ್, ಸುಶ್ರಾವ್ಯ ಗಮಕದ ಜಯಮ್ಮ ,  ಗೊರೂರು  ರಾಮಸ್ವಾಮಿ ಅಯ್ಯಂಗಾರ್ ಅವರ ಸಹೋದರ ನರಸಿಂಹ ಅಯ್ಯಂಗಾರ್, ಶ್ರೀನಿವಾಸ ಅಯ್ಯಂಗಾರ್, ದೇಗುಲವನ್ನ ಶುಚಿಯಿಂದ ನೋಡಿಕೊಳ್ಳುತ್ತಿದ್ದ ಸಂಸ್ಕೃತ ವಿದ್ವಾಂಸ ರಾಮಚಂದ್ರಾಚಾರ್, ಹಾಸನದ  ಮುನಿಸಿಪಲ್ ಆಡಳಿತ ಅಧಿಕಾರಿಗಳಾಗಿದ್ದ ಕೃಷ್ಣಪ್ಪ, ಮುಂದೆ  ಆ ದೇಗುಲಕ್ಕೆ ಶ್ರಮಿಸಿದ ಅಂದಿನ ಯುವಕ ಶ್ರೀಕಂಠಯ್ಯ, ತಬಲಾ ತಿಮ್ಮಪ್ಪಯ್ಯ ಎಂದು ಹೆಸರಾದ ಸಂಗೀತ ಮತ್ತು ಚಿತ್ರ ಕಲಾವಿದ, ಹೀಗೆ  ಕೆಲವು ಪ್ರಮುಖ ಹೆಸರುಗಳು ನೆನಪಾಗುತ್ತಿವೆ.  (ಇವೆಲ್ಲ ನನ್ನ ಬಾಲ್ಯದ ೫ ರಿಂದ ೮ ವಯಸ್ಸಿನ ನೆನಪುಗಳಾಗಿರುವುದರಿಂದ ಇದಕ್ಕಿಂತ ಹೆಚ್ಚು ಹೆಸರುಗಳನ್ನು ಹೇಳುವುದು ಕಷ್ಟ. ) ಆ ದೇಗುಲದ ಪ್ರಾಕಾರದಲ್ಲಿ ದಿನನಿತ್ಯ ಸಂಸ್ಕೃತ ಪಾಠ ನಡೆಯುತ್ತಿತ್ತು.  ಶ್ರೀನಿವಾಸ ದೇಶಿಕಾಚಾರ್ ಅವರಿಂದ ಪುರಾಣ, ಜಯಮ್ಮ ಅವರ ಗಮಕ ವಾಚನ, ವಿದ್ವಾನ್ ಲಕ್ಷ್ಮಣ ಶಾಸ್ತ್ರಿ ಅವರ ಸಂಗೀತ ಇವೆಲ್ಲವೂ ದಿನನಿತ್ಯದ ಕಾರ್ಯಕ್ರಮಗಳಂತಿದ್ದರೆ, ವಿದ್ವಾನ್ ಬಿ. ಎಸ್. ರಾಜ ಅಯ್ಯಂಗಾರ್ ಅವರ ಸಂಗೀತ, ಹಲವು ದಿನಗಳವರೆಗೆ ಹರಿಕಥಾ ವಿದ್ವಾನ್ ವಿಮಲಾನಂದ ದಾಸರಿಂದ ಹರಿಕಥೆ ಮುಂತಾದ ಕಾರ್ಯಕ್ರಮಗಳು ಜರುಗಿದ್ದು ನೆನಪಾಗುತ್ತವೆ.  ಈ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಿರ್ವಹಣೆಯನ್ನು ಸಂಚಾಲಕರಾಗಿದ್ದ ನಮ್ಮ ತಂದೆ ಪಂಡಿತ ಶ್ರೀನಿವಾಸಾಚಾರ್ಯರು ನಿರ್ವಹಿಸುತ್ತಿದ್ದರು.  

ಅಂದಿನ ಆ ಸುಂದರ ಆಂಜನೇಯನ ಗರ್ಭಗುಡಿಯಲ್ಲಿ, ಆಂಜನೇಯನ ವಿಗ್ರಹದ  ಹಿಂದೆ ಅದಕ್ಕೆ ಹೊಂದಿಕೊಂಡ ಹಾಗೆ ಸೀತಾರಾಮ ಲಕ್ಶ್ಮಣರಿಗಾಗಿಯೇ ಮಾಡಿಸಿದ್ದಂತ ಎತ್ತರದ ಪೀಠ ಇತ್ತು.  ಆದರೆ  ಹಾಗೆ ಅಂತಹ ಶಿಲಾ ವಿಗ್ರಹಗಳನ್ನು ಮಾಡಿಸುವುದು ಅಂದಿನ ಹಣಕಾಸಿನ ಬಡತನದ ಯುಗದಲ್ಲಿ ಹರಸಾಹಸವಾಗಿತ್ತು.  ಒಂದು, ಎರಡು, ಮೂರು, ಐದು  ಪೈಸೆಗಳು ಚಲಾವಣೆ ಇದ್ದ ಆ ಕಾಲದಲ್ಲಿ, ಹತ್ತು ಪೈಸೆ ಮಂಗಳಾರತಿ ತಟ್ಟೆಗೆ ಬೀಳುವುದೇ ಹೆಚ್ಚಿತ್ತು.  ಇಂತಹ ಕಾಲದಲ್ಲಿ  ಆಂಜನೇಯನ ಬಳಿಗೆ ಸೀತಾ, ರಾಮಲಕ್ಷ್ಮಣರನ್ನು ಕರೆತರುವ ಭಗೀರಥ ಪ್ರಯತ್ನದ ಒಂದು ಅಂಗ ನಮ್ಮ ತಂದೆಯವರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿ.  ಈ ಕೃತಿಯನ್ನು ಪುಟಾಣಿ ಆಕಾರದಲ್ಲಿ ಪುಸ್ತಕವನ್ನಾಗಿ ಮುದ್ರಿಸಿ ಅದನ್ನು ಎಲ್ಲರಿಗೆ ನಾಲ್ಕಾಣೆಗೆ ಮಾರಿ ಬಂದ  ಹಣವನ್ನು ವಿಗ್ರಹಸ್ಥಾಪನೆ ಯೋಜನೆಗೆ ಬಳಸಲಾಯ್ತು.  ಈ ಕೃತಿ ಮಾರಾಟಮಾಡಲು ಹಾಸನದ ವಸ್ತುಪ್ರದರ್ಶನ ಸಮಯದಲ್ಲಿ ಒಂದು ಮಳಿಗೆಯನ್ನು ಸ್ಥಾಪಿಸಿ ಅಲ್ಲಿ ಸುಂದರ ಶ್ರೀ ರಾಮ, ಸೀತೆ, ಲಕ್ಷ್ಮಣ, ಆಂಜನೇಯರ ಮಣ್ಣಿನ ವಿಗ್ರಹಗಳನ್ನು  ದೇವಸ್ಥಾನದಲ್ಲಿ ನಿರ್ಮಾಣ ಮಾಡುವ ಕಲ್ಲಿನ ವಿಗ್ರಹಗಳ ಮಾದರಿಯಾಗಿ   ಇರಿಸಲಾಗಿತ್ತು.  ಆ ವಿಗ್ರಹಗಳು ಎಷ್ಟು ಸುಂದರವಾಗಿದ್ದವೆಂದರೆ ಎಲ್ಲ ಪ್ರಸಿದ್ಧ ರಾಮೋತ್ಸವಗಳಲ್ಲೂ  ಅದನ್ನು ಕೊಂಡೊಯ್ದು ಪೂಜೆಗೆ ಬಳಸಲಾಗುತ್ತಿತ್ತು.  ಮುಂದೆ ನಾವು ಮೈಸೂರಿಗೆ ವಾಸ್ತವ್ಯ ಬದಲಿಸಿದಾಗ ಚಾಮರಾಜಪುರದ ಪ್ರಸಿದ್ಧ ಅರಳಿಕಟ್ಟೆ ರಾಮೋತ್ಸವ ಸಂಗೀತ ಕಾರ್ಯಕ್ರಮಗಳ ಮಂಟಪಕ್ಕೆ ಸಹಾ ನಮ್ಮ ಮನೆಯ ಈ ವಿಗ್ರಹಗಳು ಪ್ರತಿವರ್ಷ ಹೋಗುತ್ತಿದ್ದವು.

ಈ ಎಲ್ಲ ಪ್ರಯತ್ನಗಳ ದೆಸೆಯಿಂದ, ಅಂದು ರಾಜಕೀಯದಲ್ಲಿದ್ದ  ಜ್ವಾಲನ್ನಯ್ಯ ಅವರೂ ಸೇರಿದಂತೆ ಹಲವರ ಬೆಂಬಲ ಮತ್ತು 'ಸಂಗ್ರಹ ರಾಮಾಯಣ' ಪುಸ್ತಕ ಕೊಂಡು ಬೆಂಬಲಿಸಿದ ಹೃದಯಗಳ ಬೆಂಬಲದಿಂದ ಆಂಜನೇಯ ದೇಗುಲ ಶ್ರೀ ಸೀತಾರಾಮಾಂಜನೇಯ ದೇಗುಲವಾಗಿ ಕಂಗೊಳಿಸಿ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಯ್ತು.

'ಸಂಸ್ಕೃತಿ ಸಾಹಿತ್ಯ ಸದನ'ವೆಂಬ ಪ್ರಕಾಶನವನ್ನು ಪ್ರಾರಂಭಿಸಿದ ನಮ್ಮ ತಂದೆಯವರು ತಮ್ಮ ನೆಚ್ಚಿನ ಬೋಧನಾ ವಿಷಯವಾದ ಕನ್ನಡ ವ್ಯಾಕರಣ, ಪ್ರಬಂಧಗಳೇ ಅಲ್ಲದೆ ಸಂಸ್ಕೃತಿ, ಧರ್ಮ, ಸಾಮಾಜಿಕ ಬದ್ಧತೆಗಳ ಮಹತ್ವವನ್ನು ಸಾರುವ ಹಲವು ಕೃತಿಗಳನ್ನು ರಚಿಸಿ ತಾವೇ ಪ್ರಕಟಪಡಿಸಿದರು.  ಬಹುಮುದ್ರಣಗಳನ್ನು ಕಂಡ ಪ್ರೌಢಶಾಲಾ ಕನ್ನಡ ವ್ಯಾಕರಣ ಮತ್ತು ಪ್ರಬಂಧ ಸಂಗ್ರಹ, ವ್ಯಾಕರಣ ಸಾರ, ಸ್ವಪ್ನವಾಸವದತ್ತ ನಾಟಕ ವಿಮರ್ಶೆ, ಧರ್ಮವೀರರು, ಸಂಸ್ಕೃತಿ ಪ್ರದೀಪ, ಶ್ರೀ ರಾಮಾಯಣ ಸಂಗ್ರಹ ಮೊದಲಾದವು ನಮ್ಮ ತಂದೆಯವರ ಕೃತಿಗಳಲ್ಲಿ  ಸೇರಿವೆ. ಪ್ರೌಢಶಾಲಾ ಕನ್ನಡ ವ್ಯಾಕರಣ ಗ್ರಂಥವು ಸವಿಸ್ತಾರವಾಗಿದ್ದು ಹೊಸಗನ್ನಡ ವ್ಯಾಕರಣವನ್ನು ಕುರಿತ ಮೌಲಿಕ ಗ್ರಂಥಗಳಲ್ಲಿ ಒಂದಾಗಿದೆ.

ನಮ್ಮ ತಂದೆಯವರ ಇತರ ಪುಸ್ತಕಗಳಂತೆಯೇ 'ಸಂಸ್ಕೃತಿ ಪ್ರದೀಪ' ಎಂಬ ಕಿರುಗ್ರಂಥವೂ ಅಲಭ್ಯವಾಗಿತ್ತು.  ಕೆಲವು ವರ್ಷದ ಹಿಂದೆ ನನ್ನ ಅಣ್ಣ ಪ್ರೊಫೆಸರ್ ಟಿ. ಎಸ್. ಗೋಪಾಲ್ ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯದಲ್ಲಿ ಅಲ್ಲಿನ  ಮೇಲ್ವಿಚಾರಕಾರಾದ ಶ್ರೀಮತಿ ಜಯಂತಿ ಅವರ ಮೂಲಕ ಇದನ್ನು ಕಂಡರು.  ಅಲ್ಲಿದ್ದ ಈ ಕೃತಿಯ ಎರಡು ಪ್ರತಿಗಳಲ್ಲಿ ಒಂದು ನಮ್ಮ ತಂದೆಯವರು 1955ರ ವರ್ಷದಲ್ಲಿ ಶ್ರೀಯುತ ಎ.ಎನ್. ಮೂರ್ತಿರಾಯರಿಗೆ ವಿಶ್ವಾಸಪೂರ್ವಕವಾಗಿ ಕೊಟ್ಟಿದ್ದ ಪ್ರತಿ.  ಮೂರ್ತಿರಾಯರು ತಮ್ಮ ಪುಸ್ತಕಗಳ ಸಂಗ್ರಹವನ್ನು ಸಾಹಿತ್ಯ ಪರಿಷತ್ತಿಗೆ ನೀಡಿದ  ಸಂದರ್ಭದಲ್ಲಿ ಈ ಪುಸ್ತಕವೂ ಸೇರಿದ್ದರಿಂದ ಇದನ್ನು ನಮಗೆ ಕಾಣಲು ಸಾಧ್ಯವಾಯಿತು.  ಕೆಲವು ವರ್ಷದ ಹಿಂದೆ ಅಣ್ಣ ಗೋಪಾಲ್ ಇದನ್ನು ಮೈಸೂರಿನ  ಭಾರತೀ ಪ್ರಕಾಶನದ ಮೂಲಕ ಪುನಃಪ್ರಕಟಣೆ ಮಾಡಿದರು. 

ಸಂಸ್ಕೃತಿ ಪ್ರದೀಪ ಮೊದಲು ಪ್ರಕಟವಾದದ್ದು 1954ರಲ್ಲಿ.  ಆರು ತಿಂಗಳ ಒಳಗೆ ಮೂರು ಮುದ್ರಣಗಳನ್ನು ಕಂಡಿದ್ದ ಈ ಕೃತಿ ಮುಂದಿನ ವರ್ಷಗಳಲ್ಲೂ ಹಲವು ಮುದ್ರಣಗಳನ್ನು ಕಂಡಿದ್ದಿರಬೇಕು.  ಬಡತನದಲ್ಲಿದ್ದ ನಮ್ಮ ಬೃಹತ್ ಕುಟುಂಬವನ್ನು ಸಾಗಿಸುವ ಸಾಂಸಾರಿಕ ಹಾಗೂ ವೃತ್ತಿಸಂಬಂಧಿ ಒತ್ತಡಗಳಿಂದ  ಮತ್ತು ಆರ್ಥಿಕ ಕಾರಣಗಳಿಂದ  ನಮ್ಮ ತಂದೆಯವರು ಪುಸ್ತಕ ಪ್ರಕಟಣೆಯನ್ನು ಸ್ಥಗಿತಗೊಳಿಸಿದ ಮೇಲೆ, ಕಾಲದ ಹರಿವಿನಲ್ಲಿ ಈ ಪುಸ್ತಕ ಎಲ್ಲೋ ಮರೆಯಾಗಿತ್ತು.  

ಶಾಲೆಗಳಲ್ಲಿ ನೀತಿ ಶಿಕ್ಷಣದ ಅಳವಡಿಕೆಗೆ ಅದೆಷ್ಟೋ ವರ್ಷಗಳ ಮುನ್ನವೇ ನಮ್ಮ ತಂದೆಯವರು ಅದೇ ಮಹದುದ್ದೇಶವನ್ನು ಮುಂದಿಟ್ಟುಕೊಂಡು ರಚಿಸಿದ ಈ ಕೃತಿ ಭಾರತೀಯ ತತ್ವ ಪರಂಪರೆಗಳ ಸುಜ್ಞಾನಗಳ ಪರಿಚಯವನ್ನು ಒದಗಿಸುವ ನಿಟ್ಟಿನಲ್ಲಿ ಮಾಡಿದ ಒಂದು ವಿಶಿಷ್ಟ ಯತ್ನ.  ಈ ಗ್ರಂಥವನ್ನು ಮೆಚ್ಚಿ ಅದರ  ಹೆಚ್ಚಿನ ಪ್ರಕಟಣೆಗೆ ಅಂದಿನ ಮೈಸೂರು ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಪ್ರೋತ್ಸಾಹಧನವನ್ನಿತ್ತು ಬೆಂಬಲ ನೀಡಿದ್ದರು.  

ಸಂಸ್ಕೃತಿ ಅಂದರೆ ಏನು ಎಂಬ ಪ್ರಶ್ನೆಯಿಂದ ಮೊದಲ್ಗೊಂಡು, ಭಾರತೀಯ ಸಂಸ್ಕೃತಿ, ಸುಸಂಸ್ಕೃತ, ಸಂಸ್ಕೃತಿ ಸಾಧನೆಗಳು, ಮನುಷ್ಯ ಜನ್ಮದ ಶ್ರೇಷ್ಠತೆ, ವ್ಯಕ್ತಿತ್ವ, ಆದರ್ಶ ವ್ಯಕ್ತಿಗಳು, ದೇಹಬಲ, ಶುಚಿತ್ವ, ಮತ ಮತ್ತು ಸಂಸ್ಕೃತಿ, ಪವಿತ್ರ ಭಾವನೆ, ಪುರುಷಾರ್ಥ ಸಾಧನೆ, ಪರಮಾತ್ಮ, ಮೋಕ್ಷೋಪಾಯಗಳು, ಭಕ್ತಿಯೋಗ, ಅನಾಸಕ್ತಿ ಯೋಗ, ಸಾಹಿತ್ಯ ಮತ್ತು ಸಂಸ್ಕೃತಿ, ಸಂಸ್ಕೃತಿ ರೂಪಗಳು, ಸಂಸ್ಕೃತಿ ಸಭೆ, ನಮ್ಮ ಕರ್ತವ್ಯ, ಕೆಲವು ಸಲಹೆಗಳು, ಸಂಸ್ಕೃತಿ ವಾಙ್ಮಯ, ಸೂಕ್ತಿ ಸಾರಗಳು, ಸಂಜ್ಞಾ ವಿವರಣೆ, ಪ್ರಾರ್ಥನೆ ಮುಂತಾದ ವಿಸ್ತೃತ ವಿಚಾರಗಳ ಕುರಿತಾಗಿ ಈ ಕೃತಿಯಲ್ಲಿ ಸುಲಲಿತವಾಗಿ ಮನಮುಟ್ಟುವಂತಹ ವಿವರಣೆಗಳಿವೆ.  

ನಾನು ಆಗಾಗ ಈ ಪುಸ್ತಕವನ್ನು ತೆರೆದು ಕಾಣುವ ಈ ಸುಂದರ ವೈಶಾಲ್ಯಭಾವದ ಮಾತುಗಳೊಂದಿಗೆ ಈ ಬರಹಕ್ಕೆ ಮುಕ್ತಾಯ ನೀಡುತ್ತೇನೆ.

ಯಂ ಶೈವಾಸ್ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯ್ಯಾಯಿಕಾಃ 
ಅರ್ಹನ್ನಿತ್ಯಥ ಜೈನ ಶಾಸನರತಾಃ ಕರ್ಮೇತಿ ಮೀಮಾಂಸಕಾಃ
ಸೋsಯಂ ವೋ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ವಿಭುಃ

“ಯಾರನ್ನು ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮನೆಂದೂ, ಬೌದ್ಧರು ಬುದ್ಧನೆಂದೂ, ನೈಯಾಯಿಕರು ಕರ್ತನೆಂದೂ, ಜೈನರು ಅರ್ಹನ್ ಎಂದೂ, ಮೀಮಾಂಸಕರು ಕರ್ಮವೆಂದೂ ತಿಳಿದು ಪೂಜಿಸುವರೋ ಅಂತಹ ತ್ರಿಲೋಕಾಧಿಪತಿಯಾದ ಪರಮಾತ್ಮನು ನಮ್ಮ ಇಷ್ಟಾರ್ಥಗಳನ್ನು ನೆರವೇರಿಸಲಿ.”

ನಮ್ಮ ತಂದೆಯವರು ಈ ಲೋಕವನ್ನಗಲಿದ್ದು 1989ರ ಅಕ್ಟೋಬರ್ 29ರ ದೀಪಾವಳಿ ಸಂದರ್ಭದಲ್ಲಿ.  ಅವರು ತೋರಿದ ಬೆಳಕು ನಮ್ಮ ಕಾಯುತ್ತಿದೆ. 🌷🙏🌷

On Remembrance Day of our father Pandit Thiru Sreenivasachar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ