ಸ್ಮಿತಾ ಪಾಟೀಲ್
ಸ್ಮಿತಾ ಪಾಟೀಲ್
ಭಾರತೀಯ ಚಿತ್ರರಂಗ ಕಂಡ ಅಮೋಘ ಪ್ರತಿಭೆ ಸ್ಮಿತಾ ಪಾಟೀಲ್.
ಸ್ಮಿತಾ, ಪಾಟೀಲ್ ಅವರು 1955ರ ಅಕ್ಟೋಬರ್ 17ರಂದು ಪುಣೆಯಲ್ಲಿ ಜನಿಸಿದರು. ತಂದೆ ಮಹಾರಾಷ್ಟ್ರದ ಸಚಿವರಾಗಿದ್ದ ಶಿವಾಜಿರಾವ್ ಪಾಟೀಲ್. ತಾಯಿ ವಿದ್ಯಾಪಾಟೀಲ್. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು, ಸಮಾಜವಾದೀ ಪಕ್ಷದಲ್ಲಿದ್ದವರು. ಸ್ಮಿತಾ ಕಲಿತದ್ದು ಪುಣೆಯ ಭಾವೆ ಶಾಲೆ, ಫರ್ಗ್ಯೂಸನ್ ಕಾಲೇಜು, ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜು ಮತ್ತು ಸೇಂಟ್ ಕ್ಸೇವಿಯರ್ ಕಾಲೇಜುಗಳಲ್ಲಿ.
ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಕಲಿಯುವ ಆಸೆ ಹೊತ್ತಿದ್ದ ಸ್ಮಿತಾ ಪಾಟೀಲ್ ದೂರದರ್ಶನದಲ್ಲಿ ವಾರ್ತಾವಾಚಕಿಯಾಗಿದ್ದಾಗ ಶಾಮ್ ಬೆನಗಲ್ ಅವರ ಕಣ್ಣಿಗೆ ಬಿದ್ದರು. ಹೀಗೆ ಅವರು ಪದವೀಧರರಾಗುವ ಮುಂಚೆಯೇ ಚಿತ್ರರಂಗಕ್ಕೆ ಕಾಲಿಟ್ಟರು, ಮತ್ತೆ ಹಿಂದಿರುಗಿ ನೋಡಲಿಲ್ಲ.
ಸ್ಮಿತಾ ಪಾಟೀಲರು ನಟಿಸಿದ ಮೊದಲ ಚಿತ್ರ ಸಾಮ್ನಾ. ಆಗಿನ್ನೂ ಇವರಿಗೆ 17ವರ್ಷ. ಮೊದಲ ಕಮರ್ಶಿಯಲ್ ಚಿತ್ರ 'ಶಕ್ತಿ'. ಸತ್ಯಜಿತ್ ರೇ ಅವರ 'ಸದ್ಗತಿ' ಚಿತ್ರದಲ್ಲಿ ಅವಕಾಶ ಪಡೆದ ಇವರು ರೇ ಅವರ ದೂರದರ್ಶನ ಧಾರವಾಹಿಯಾದ 'ಅಭಿನೇತ್ರಿ 'ಯಲ್ಲೂ ಅಭಿನಯಿಸಿದರು. ಕನ್ನಡದ 'ಅನ್ವೇಷಣೆ' ಚಿತ್ರವೂ ಸೇರಿದಂತೆ ಹಿಂದಿ, ಗುಜರಾತಿ, ತೆಲುಗು, ಬಂಗಾಲಿ, ಮರಾಠಿ, ಮಲಯಾಳಮ್ ಮುಂತಾದ ಭಾಷೆಗಳ ಸುಮಾರು 50 ಚಿತ್ರಗಳಲ್ಲಿ ಅವರು ನಟಿಸಿದರು. ಆಗಾಗ ಮರಾಠಿ ನಾಟಕಗಳಲ್ಲೂ ಪಾತ್ರವಹಿಸುತ್ತಿದ್ದರು. ಭೂಮಿಕಾ, ಮಂಥನ್ ಚಿತ್ರಗಳು ಇವರಿಗೆ ಕೀರ್ತಿ ತಂದವು.
ಚರಣ್‍ದಾಸ್ ಚೋರ್; ನಿಶಾಂತ್; ಜೈತ್ ರೇ ಜೈತ್, ದಿ ನಕ್ಸಲೈಟ್ಸ್, ಆಕ್ರೋಶ್, ಆಲ್ಬರ್ಟ್ ಪಿಂಟೋ ಕೋ ಗುಸ್ಸಾ ಕ್ಯೂಂ ಆತಾ ಹೈ, ಸದ್ಗತಿ, ಬಜಾರ್, ಸುಬಹ್, ಶಕ್ತಿ, ಅರ್ಥ್, ದರ್ದ್ ಕಾ ರಿಷ್ತಾ, ಮಂಡಿ, ಅರ್ಧಸತ್ಯ, ತರಂಗ್, ಸಿತಂ ಮುಂತಾದವು ಇವರ ಇತರ ಯಶಸ್ವೀ ಚಿತ್ರಗಳು. ಇವರ ಕೊನೆಯ ಚಿತ್ರ ಅಂಗಾರೇ. ಕಲಾತ್ಮಕ ಚಿತ್ರಗಳಲ್ಲಾಗಲೀ, ಮನರಂಜನಾತ್ಮಕ ಚಿತ್ರಗಳಲ್ಲಾಗಲೀ ಅವರು ತಂದ ವೈವಿಧ್ಯ ಅಸಾಮಾನ್ಯವಾದುದು.
ಭಾರತೀಯ ಚಿತ್ರಮಾಧ್ಯಮದ ವಿಕಾಸ ಹಾಗೂ ಹೊಸ ಪ್ರವೃತ್ತಿಗಳ ಬೆಳೆವಣಿಗೆಯಲ್ಲಿ ಸ್ಮಿತಾ ಪಾಟೀಲ್ ಪಾತ್ರ ಹಿರಿದಾದುದು. ಗಂಭೀರ ಹಾಗೂ ಕಲಾತ್ಮಕ ಪಾತ್ರಗಳಲ್ಲಿ ತೇಜಸ್ವೀ ನಟಿಯಾಗಿ ಬೆಳಗಿದ ಇವರಿಗೆ ಸಮನಾಗಿ ನಿಂತವರು ವಿರಳ ಎನ್ನಬೇಕು. ಬಹುಮುಖ ಪ್ರತಿಭೆಯ ಈ ನಟಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಮಿಂಚಿದರು. ಹಲವು ವೇಳೆ ಇವರ ಅಭಿನಯ ಅನನುಕರಣೀಯ ಎನ್ನುವ ಮಟ್ಟಕ್ಕೆ ಏರಿದುದನ್ನು ಕಾಣಬಹುದು.
ಸ್ತ್ರೀಶೋಷಣೆ, ಲೈಂಗಿಕ ಅಸಮಾನತೆ ಬಗೆಗೆ ಭಾರತೀಯ ಚಿತ್ರಜಗತ್ತಿನಲ್ಲಿ ಬೆಳೆಯುತ್ತಿರುವ ಜಾಗೃತಿಯೊಂದಿಗೆ ಸಹಜವಾಗಿಯೇ ಇವರ ಖ್ಯಾತಿ ಹೊಂದಿಕೊಂಡಿತು.
ಸ್ಮಿತಾರದು ಸೂಕ್ಷ್ಮ ಮನಸ್ಸು. ದೇಶದ ಕೆಲವು ಮಹಿಳಾ ಸಂಘಟನೆಗಳು ಮತ್ತು ಸವಾಲುಗಳೊಂದಿಗೆ ಇವರು ತಮ್ಮನ್ನು ಆಳವಾಗಿ ತೊಡಗಿಸಿ ಕೊಂಡಿದ್ದರು. ಫ್ರಾನ್ಸ್ ದೇಶದಲ್ಲಿ ತಮ್ಮ ಚಿತ್ರಗಳಿಗೆ ಪೂರ್ವಾನ್ವಯವಾಗುವಂತೆ ಸನ್ಮಾನಿತರಾದ ಏಷ್ಯದ ಮೊದಲ ನಟಿ ಇವರು. ಮಾಂಟ್ರಿಯಲ್ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರ ಮಂಡಳಿಯ ಸದಸ್ಯತ್ವ, ಭೂಮಿಕಾ ಮತ್ತು ಚಕ್ರ ಚಿತ್ರಗಳಲ್ಲಿ ಉತ್ತಮ ನಟನೆಗಾಗಿ ರಾಷ್ಟ್ರೀಯಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ(1985) ಇವರಿಗೆ ಸಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪುರಸ್ಕಾರಗಳು.
ಸ್ಮಿತಾ ಅವರ ಪತಿ ಚಿತ್ರನಟ ರಾಜ್‍ಬಬ್ಬರ್. ಇವರಿಬ್ಬರೂ ನಿರ್ಮಿಸಿ ನಟಿಸಿದ ಚಿತ್ರ ಪ್ಯಾರ್ ಪೀಟ್ ಔರ್ ಪಾಪ್‍ನ ಕಥೆಯ ಹಾಗೇ ಇವರ ಬಾಳೂ ಆದದ್ದು ವಿಧಿಯ ಒಂದು ಕ್ರೂರ ವ್ಯಂಗ್ಯ. 1986ರ ಡಿಸೆಂಬರ್ 13ರಂದು ಮಗುವಿಗೆ ಜನ್ಮನೀಡುವ ಸಂದರ್ಭದಲ್ಲಿ ವಿಪರೀತ ರಕ್ತಸ್ರಾವದಿಂದ ಅಕಾಲ ಮರಣಕ್ಕೆ ತುತ್ತಾದರು. 1987ರಲ್ಲಿ ಬೆಂಗಳೂರಿನಲ್ಲಿ ಸ್ಮಿತಾ ಸ್ಮರಣಾರ್ಥ ಚಿತ್ರೋತ್ಸವವೊಂದು ನಡೆದು, ಸ್ಮರಣಸಂಚಿಕೆಯೊಂದು ಬಿಡುಗಡೆಯಾಯಿತು.
ಕೆಲವು ಕಲಾವಿದರು ಬಾಳಿದ ಕೆಲವೇ ವರ್ಷಗಳಲ್ಲಿ ಉಳಿಸಿಹೋದ ನೆನಪು ಮತ್ತು ಆಪ್ತಭಾವ ಅಳಿಯದ್ದು. ಅಂತಹ ಅಮರ ನೆನಪುಗಳಲ್ಲಿ ಸ್ಮಿತಾ ಪಾಟೀಲ್ ಪ್ರಮುಖರು.
On the birth anniversary of great actress Smitha Patil
ಕಾಮೆಂಟ್‌ಗಳು