ಶ್ರೀರಂಗ
ಶ್ರೀರಂಗ
'ಶ್ರೀರಂಗ' ಎಂಬ ಕಾವ್ಯನಾಮಾಂಕಿತರಾದ ಆದ್ಯ ರಂಗಾಚಾರ್ಯರು ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ನಾಟಕಕಾರರು, ಸಾಹಿತಿಗಳು ಮತ್ತು ಶ್ರೇಷ್ಠ ವಿದ್ವಾಂಸರು. ಇಂದು ಅವರ ಸಂಸ್ಮರಣಾ ದಿನ.
ಆದ್ಯ ರಂಗಾಚಾರ್ಯರು 1904ರ ಸೆಪ್ಟಂಬರ್ 26ರಂದು ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು. ಅಂದಿನ ದಿನದಲ್ಲಿ ಅವರ ಹೆಸರು ಆರ್.ವಿ. ಜಾಗೀರದಾರ ಆಗಿತ್ತು. ಪುಣೆಯಲ್ಲಿ ಬಿ.ಎ ವಿದ್ಯಾಭ್ಯಾಸದ ನಂತರ, ಲಿಂಕನ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಕರ್ನಾಟಕ ಏಕೀಕರಣದಲ್ಲಿ ಶ್ರೀರಂಗರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದರು. 1944ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. ಶ್ರೀರಂಗರು ಪ್ರಧಾನಮಂತ್ರಿ ಜವಾಹರಲಾಲ ನೆಹರೂರನ್ನು ಭೆಟ್ಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವನ್ನು ಸೇರ್ಪಡಿಸುವ ನಿರ್ಣಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಆದರೆ ಸ್ವಾತಂತ್ರ್ಯ ದೊರೆತ ಬಳಿಕ ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು ಧಾರವಾಡದಿಂದಲೇ ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು 1948ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು. ‘ಆರ್.ವಿ. ಜಾಗೀರದಾರ’ ಆಗಿದ್ದವರು ‘ಆದ್ಯ ರಂಗಾಚಾರ್ಯ’ ಆದರು. ಆನಂತರದಲ್ಲಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಬೆಂಗಳೂರು ಆಕಾಶವಾಣಿ ನಾಟಕ ವಿಭಾಗದ ನಿರ್ದೇಶಕರಾಗಿ ಸಹಾ ಕಾರ್ಯ ನಿರ್ವಹಿಸಿದರು.
“ತಲೆ ತುಂಬ ವಿಚಾರ ಹೊಟ್ಟೆ ತುಂಬಾ ನಗೆ” ಎಂಬ ಮಾತು ಶ್ರೀರಂಗರ ನಾಟಕಗಳ ಸಂಗ್ರಹವಾದ ‘ಕಾಮ ದಹನ’ ಪುಸ್ತಕದ ಮೇಲೆ ಮುದ್ರಿತವಾಗಿದೆ. ಅಂತೆಯೇ ಅವರ ಬದುಕಿನ ಚಿಂತನೆ ಮತ್ತು ಕೃತಿಗಳು ಇವೆರಡನ್ನೂ ಸಮರ್ಥವಾಗಿ ಮೇಳೈಸಿಕೊಂಡಿವೆ. ಜೊತೆಗೆ ರಂಗ ಪ್ರಯೋಗಕ್ಕೆ ಬೇಕಾದ ಖಚಿತ ಕಲ್ಪನೆಗಳನ್ನೂ ಅವು ಹೊರಸೂಸುವಂತಹದ್ದಾಗಿವೆ. ಸ್ವತಃ ತಾವೇ ನಾಟಕಗಳನ್ನೂ ನಿರ್ಮಿಸಿ, ಧಾರವಾಡ ನಾಟ್ಯ ವಿಲಾಸಿ ಸಂಘವನ್ನು ಸ್ಥಾಪಿಸಿ ಎರಡು ದಶಕಳಿಗೂ ಹೆಚ್ಚು ಕಾಲ ಉರೂರಿಗೂ ತಿರುಗಿ ನಾಟಕ ಪ್ರಯೋಗಗಳನ್ನು ಮಾಡಿದರು.
1934ರಲ್ಲಿ ಪ್ರಕಟಗೊಂಡ ಅವರ ‘ಹರಿಜನ್ವಾರ’ವು ಬ್ರಾಹ್ಮಣರ ಕೇರಿಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇಲ್ಲಿ ಅವರ ನಾಟಕದ ಹೆಸರಿನ ಸೊಗಸನ್ನೂ ನೆನೆಯಬೇಕು. ಅದು ಒಂದು ರೀತಿಯಲ್ಲಿ ‘ಹರಿಜನ ವಾರ’ ಮತ್ತೊಂದು ರೀತಿಯಲ್ಲಿ ‘ಹರಿ, ಜನಿವಾರ’. ‘ಹರಿಜನ್ವಾರ’, ‘ಯಮನ ಸೋಲು’, ‘ಸರ್ಕಸ್ಸಿನ ಸರಸ್ವತಿ’ ಈ ನಾಟಕಗಳಲ್ಲಿ ವಿಡಂಭನೆ ಹಾಸ್ಯದ ಹೊನಲಾಗಿ ಉಕ್ಕುತ್ತದೆ.
ಶ್ರೀರಂಗರ ನಾಟಕಗಳ ಹಲವಾರು ಶೀರ್ಷಿಕೆಗಳು ದಾಸರ ಕೀರ್ತನೆಗಳ, ಶರಣರ ವಚನಗಳ ಸಾಲುಗಳಿಂದ ಆಕರ್ಷಕವೆನಿಸುತ್ತವೆ. ತಮ್ಮ ನೌಕರಿ, ಸ್ವಾಭಿಮಾನಕ್ಕೆ ಚ್ಯುತಿ ಬರುತ್ತಿದೆಯೆಂಬ ಭಾವದ ಹಿನ್ನಲೆಯಲ್ಲಿ ‘ಉದರ ವೈರಾಗ್ಯ’ ನಾಟಕ ನಿರ್ಮಾಣಗೊಂಡಿತು. ವರಾನ್ವೇಷಣೆಗಾಗಿ ನಡೆಯುವ ಒದ್ದಾಟಗಳ ವಿಡಂಭಾನಾತ್ಮಕ ಪ್ರಯೋಗ ‘ಅಶ್ವಮೇಧ’ ನಾಟಕ. ‘ಸಂಸಾರಿಗ ಕಂಸ’ ಸಂತಾನ ನಿರೋಧದ ಮೇಲೆ ಬೆಳಕು ಚೆಲ್ಲುವ ನಾಟಕ. ‘ದೇಶದ ಪ್ರಗತಿಯ ಬಗ್ಗೆ ಮೂಡುವ ನಿರಾಸೆ ಮತ್ತು ಭವಿಷ್ಯದ ಬಗೆಗಿನ ಕಾಳಜಿ’ ಇವೆರಡರ ನಡುವಿನ ಸಂದಿಗ್ಧತೆ ‘ಜರಾಸಂಧಿ’ಯಲ್ಲಿ ಮೂಡುತ್ತದೆ.
ಶ್ರೀರಂಗರು ವಿದೇಶದಿಂದ ಹಿಂದಿರುಗಿ ಮುಂಬಯಿಯಲ್ಲಿ ನೌಕರಿ ಅರಸುತ್ತಿದ್ದ ದಿನಗಳಲ್ಲಿ ಯಾವುದೋ ನಿಟ್ಟಿನಿಂದ ಸಂಗೀತ ಸೂಸಿಬರುತ್ತಿದ್ದ ಸಂಗೀತದ ಜಾಡು ಹಿಡಿದು ಹೋದಾಗ ಸಂಧಿಸಿದ ವೇಶ್ಯೆ ಒಬ್ಬಳು ಈ ತರುಣನನ್ನು ಸ್ವಾಗತಿಸುತ್ತ, “ನಾವು ಬೀದಿಯ ವೇಶ್ಯೆಯರಲ್ಲ, ಕಲಾವಂತರು" ಎಂದಳಂತೆ. ‘ನನ್ನ ವಿದ್ಯೆಯ ವ್ಯಭಿಚಾರ ಮಾಡುತ್ತಿರುವ ನಾನೇ ವೇಶ್ಯೆ’ ಎಂದು ಅವರಿಗನಿಸಿತಂತೆ. ಇದೇ ಸಂವೇದನೆಯಲ್ಲಿ ‘ಮುಕ್ಕಣ್ಣ, ವಿರಾಟ ಪುರುಷರನ್ನು’ ಮೂಡಿಸಿದರು.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ, ಕಣ್ಣೀರು ತುಂಬಿದ ಬಸುರಿಯೋರ್ವಳ ಕಂಡಾಗ, ವಿದೇಶದಲ್ಲಿ ಭಾರತೀಯ ಯುವಕನೊಬ್ಬನಿಂದ ವಂಚಿತಳಾದ ತರುಣಿಯೊಬ್ಬಳು ನೆನಪಾದಳು. ತರುಣಿಯರನ್ನು ವಂಚಿಸುವ ಯುವಕರನ್ನು ಅಧಿಕಮಾಸವೆಂಬ ಪ್ರತ್ಯೇಕ ತಿಂಗಳಲ್ಲಿ ಹಿಡಿದು ತಂದು ಮದುವೆ ಮಾಡಿಸಬೇಕು ಎಂಬ ವಿಚಾರ ಹುಟ್ಟಿ ‘ಅಧಿಕ ಮಾಸ’ ನಾಟಕ ಸೃಷ್ಟಿಸಿದರು.
ಶ್ರೀರಂಗರ ಆಧುನಿಕ ಮಹಾಭಾರತದ ಚಿತ್ರಮೂಡಿಸುವ ‘ರಂಗಭಾರತ’ದ ಬಗ್ಗೆ ಅವರ ವಿಶ್ಲೇಷಣೆ ಗಮನಾರ್ಹವಾದದ್ದು. ‘ಕಾಮ-ಲೋಭ-ಮದ-ಮೋಹ-ಮತ್ಸರಗಳ’ ಸಂಕೇತಗಳಾಗಬಹುದಾದ ಐದು ಮಹಾಭಾರತ ಘಟನೆಗಳನ್ನು ಆಯ್ದುಕೊಂಡು ಕಾಲಸೂತ್ರದಲ್ಲಿ ಭೂತ ವರ್ತಮಾನಗಳನ್ನು ಹೆಣೆದಿದ್ದೇನೆ ಎನ್ನುತ್ತಾರೆ.
‘ಇದು ಭಾಗ್ಯ, ಇದು ಭಾಗ್ಯ’, ‘ನೀ ಮಾಯೇಯೊಳಗೊ’ ಮೊದಲಾದ ನಾಟಕಗಳಲ್ಲಿ ಲೈಂಗಿಕ ವಿಚಾರವನ್ನು ಸಹಾ ರಂಗಭೂಮಿಯಲ್ಲಿ ಬಹಿರಂಗವಾಗಿ ಚರ್ಚಿಸಿದ್ದಾರೆ. ಕಾಮ ಪ್ರೇಮವಾಗಿ ಮಾರ್ಪಡಬೇಕಾದ ಸದುದ್ದೇಶ ಅಲ್ಲಿದೆ. ‘ಗೆಳೆಯ ನೀನು ಗೆಳೆಯ’, ‘ಸಂಜೀವಿನಿ’, ‘ಸಾವಿತ್ರಿ’ ನಾಟಕಗಳಲ್ಲಿ ಸಹಾ ಪ್ರೇಮದ ಉದಾತ್ತೀಕರಣದ ಚಿತ್ರಣವಿದೆ.
ಶ್ರೀರಂಗರು 47 ದೊಡ್ಡ ನಾಟಕಗಳು, 68 ಏಕಾಂಕ ನಾಟಕಗಳಲ್ಲದೆ 10 ಕಾದಂಬರಿಗಳನ್ನು, 120 ಹಾಸ್ಯ ಪ್ರಬಂಧಗಳನ್ನು ಹಾಗು 9 ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. ಧಾರವಾಡದ ಪ್ರಸಿದ್ಧ ನಿಯತಕಾಲಿಕ "ಜಯಂತಿ"ಗೆ ಸತತ 3 ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ಭರತನ ನಾಟ್ಯಶಾಸ್ತ್ರ ಇವರ ಪ್ರಸಿಧ್ಧ ಕೃತಿ.
ಸ್ವಾತಂತ್ರ್ಯಾ ನಂತರದಲ್ಲಿ ಬರೆದ ನಾಟಕಗಳಲ್ಲಿ ಶ್ರೀರಂಗರು ಹೆಚ್ಚು ರಾಜಕೀಯ ವಿಚಾರಗಳನ್ನು ಬಳಸಿದ್ದಾರೆ. ಗಾಂಧೀಜಿಯವರ ಕೊಲೆಯ ಹಿನ್ನಲೆಯಲ್ಲಿ ‘ಶೋಕಚಕ್ರ’ ನಾಟಕ ಬರೆದರು. ಹಣದ ಬೆಲೆಗೆ ವ್ಯಕ್ತಿಗತ ಮೌಲ್ಯಗಳನ್ನು ಮಾರಿಕೊಂಡು, ಮಂತ್ರಿಪದ ಪಡೆಯುವುದೇ ಪುರುಷಾರ್ಥ ಎಂದು ಬದುಕುವ ಪುಡಾರಿಗಳ ಗುಣ ಚಿತ್ರಣದ ‘ಪುರುಷಾರ್ಥ’ ಕಾದಂಬರಿ ಬರೆದರು. “ಜೋಕಾಲಿ ಮುಂದೆ ಸಾಗುತ್ತದೆ, ಆದರೆ ಮತ್ತೆ ಹಿಂದೆ ಬರುತ್ತದೆ, ಪ್ರಗತಿ ಮಾತ್ರ ಶೂನ್ಯ” ಎಂದು ಬಿಂಬಿಸುವ ‘ಜೀವನ ಜೋಕಾಲಿ’ ನಿರ್ಮಿಸಿದರು. ಮನುಷ್ಯ ದೀರ್ಘಾಯುವಾದರೆ ಸಾಕೆ ಎಂಬ ಪ್ರಶ್ನೆಯಲ್ಲಿ, ‘ಶತಾಯು ಗತಾಯು’ ಬರೆದರು. ಬುದ್ಧಿ ಜೀವಿಯು ಜೀವನದ ಪ್ರವಾಹದಲ್ಲಿ ಭೀಮಕಾಯನೂ ಆಗಬೇಕು. ಆ ವೀರ ಭೀಮಸೇನನಾದರೋ ಕೇವಲ ದೇಹಶಕ್ತಿಯವನೆ? ಅವರ ಅಂತರಾತ್ಮವೇ ಕೇಳುತ್ತಿರುವಂತೆ ‘ಕೇಳು ಜನಮೇಜಯ’ ಹುಟ್ಟುತ್ತದೆ. ಕೇಂದ್ರ ಸರ್ಕಾರದ ನೌಕರನಾಗಿ ಮಾಡಬೇಕಾದ ಅವಹೇಳನಾ ದಂಧೆಗಳ ಬಗ್ಗೆ ರೋಸಿ ಹೋಗಿ ‘ಕೇಳು ಜನಮೇಜಯ’ ನಾಟಕ ನಿರ್ಮಿಸಿದರು. ಇದು ರೇಡಿಯೋ ನಾಟಕ ಕಾರ್ಯಕ್ರಮವಾಗಿ ರಾಷ್ಟ್ರ ಮಟ್ಟದಲ್ಲಿ ಪ್ರಸಾರವಾಗಿ ಇತರ ಭಾಷೆಗಳಲ್ಲೂ ಅನುವಾದಗೊಂಡಿತು.
‘ಜೀವನ, ಸಾಹಿತ್ಯಗಳ ನಡುವಿನ ಅಂತರ’ ಮತ್ತು ಆದರ್ಶಗಳನ್ನು ಕುರಿತು ಚರ್ಚಿಸುವ ‘ಕತ್ತಲೆ-ಬೆಳಕು’ ಎಂಬ ನಾಟಕ ‘ಜೀವನದ ಕತ್ತಲೆಗೆ, ಸಾಹಿತ್ಯದ ಬೆಳಕು’ ಎಂದು ಮಾರ್ದನಿಸುತ್ತದೆ. ಪ್ರಜಾಪ್ರಭುತ್ವದ ವಿಡಂಭನೆಯಾಗಿ ‘ಲೊಳಲೊಟ್ಟೆ’ , ‘ಭಾರತ ಭಾಗ್ಯ ವಿಘಾತ’ ಮೂಡಿತು. ಜನಗಣಮನ ಅಧಿನಾಯಕ ಜಯಹೇ ಭಾರತ ಭಾಗ್ಯ ವಿಧಾತ’ ಎಂದು ಹೇಳುವ ವ್ಯಕ್ತಿ ‘ಭಾರತ ಭಾಗ್ಯ ವಿಘಾತ’ ಎಂದು ತಿದ್ದುಪಡಿ ತರುತ್ತಾರೆ.
ಇಂದಿನ ವಿಜ್ಞಾನದ ಅಣ್ವಸ್ತ್ರ ಶೋಧ, ಲೋಕವನ್ನೇ ಪ್ರಳಯಗೊಳಿಸಬಹುದು. ಸಾವಿಗೆ ಬೇರೆ ಸಾಧನವೇ ಬೇಕಿಲ್ಲ ಎಂದು ಹೇಳುತ್ತದೆ, ಅವರ ‘ದಾರಿ ಯಾವುದಯ್ಯ ವೈಕುಂಠಕೆ’.
ತಮ್ಮ ನಾಟಕಗಳು ತಿಳಿಯುವುದಿಲ್ಲ ಎಂಬ ಟೀಕೆಗೆ, “ಈ ಲೇಖಕನು ಕೊನೆಗೆ ತನಗೇ ತಿಳಿಯದ ನಾಟಕಗಳನ್ನು ಬರೆಯತೊಡಗಿದನು” ಎಂದು ಹಾಸ್ಯವಾಗಿ ಹೇಳುತ್ತ ‘ತೇಲಿಸೋ ಇಲ್ಲ ಮುಳುಗಿಸೋ’ ಎಂಬ ಪ್ರೇಕ್ಷಕರ ಪ್ರತಿಕ್ರಿಯೆಗಳ ವಸ್ತುವನ್ನೇ ನಾಟಕವಾಗಿಸಿದ್ದಾರೆ.
ಹೀಗೆ ಎಲ್ಲ ರೀತಿಯ ಸಾಧನೆಗೈದ ಶ್ರೀರಂಗರು, ವಿಲಾಸಿ ರಂಗಧಾತಾರರೆಂದು ಆದ್ಯರು. ಪ್ರಗತಿಶೀಲ ನವ್ಯ ನಾಟಕಕಾರರೆಂದೂ ಅವರು ಆದ್ಯರು. ಅಷ್ಟೆಲ್ಲ ಸಾಧನೆ ಮಾಡಿದ್ದರೂ "ನಾಟಕವನ್ನೇನೋ ಬರೆದಿದ್ದೇನೆ. ರಂಗದ ಮೇಲೆ ಪ್ರಯೋಗಿಸಿ ತೇಲಿಸಿರಿ, ಇಲ್ಲವೆ ಮುಳುಗಿಸಿರಿ, ಅದರ ಹೊಣೆ ನನ್ನದಲ್ಲ" ಎನ್ನುವ ನಿಷ್ಕಾಮ ಕರ್ಮಿ.
ರಂಗ ಶಿಬಿರಗಳನ್ನು ಮೊದ ಮೊದಲು ಪ್ರಾರಂಭಿಸಿದವರೂ ಶ್ರೀರಂಗರೇ. ಶಿಕ್ಷಕರಿಗೆ ರಂಗ ಶಿಬಿರಗಳನ್ನು ಏರ್ಪಡಿಸುವ ಮೂಲಕ ವಿಧ್ಯಾರ್ಥಿಗಳಲ್ಲಿ ರಂಗಾಸಕ್ತಿ ಮೂಡಿಸುವ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಕೆಲಸ ಮಾಡಿದರು.
ಶ್ರೀರಂಗರ 'ಕಾಳಿದಾಸ' ಎಂಬ ಕೃತಿಗೆ 1971ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು. ಹಲವು ವಿಶ್ವವಿದ್ಯಾಲಯಗಳ ಡಿ.ಲಿಟ್ ಪದವಿ, ರಾಜ್ಯ ಕೇಂದ್ರ ಅಕಾಡೆಮಿಗಳ ಫೆಲೋಶಿಪ್, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪದ್ಮಭೂಷಣ ಪ್ರಶಸ್ತಿ ಅವರನ್ನು ತಾನೇ ತಾನಾಗಿ ಅರಸಿಬಂತು.
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ಶಶಿ ದೇಶಪಾಂಡೆ ಶ್ರೀರಂಗರ ಮಗಳು.
1984ರ ವರ್ಷದ ಅಕ್ಟೋಬರ್ 17ರಂದು ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು. ಅವರು ನಿಧನರಾದ ಸಮಯದಲ್ಲಿನ ಒಂದು ಘಟನೆ ನೆನಪಿಗೆ ಬರುತ್ತಿದೆ. ಬಾಯಿಗೆ ಅಕ್ಕಿ ಕಾಳುವ ಸಂಪ್ರದಾಯದಲ್ಲಿ ಅಲ್ಲಿ ನೆರೆದಿದ್ದ ಯುವಕವಿಯೊಬ್ಬರು ನುಡಿದರು, “ಅವರು ನಮಗೂ ಧಾತರರಾಗಿದ್ದರು, ನಾವೂ ಅಕ್ಕಿಕಾಳು ಹಾಕುತ್ತೇವೆ" ಎಂದು. ಅಂತಹ ಅಪ್ರತಿಮ ಆದ್ಯರಂಗ ಆಚಾರ್ಯರಿವರು.
ಈ ಮಹಾನ್ ಚೇತನಕ್ಕೆ ನಮನ.
On Remembrance Day of our great playwright Sriranga
ಈ ನಾಟಕದ ಮೇಲಿನ ವಿಮರ್ಶೆ ಇದೆಯಾ ಇದ್ರೆ ಹೇಳಿ
ಪ್ರತ್ಯುತ್ತರಅಳಿಸಿ