ಶ್ರೀರಾಮ ಪಾರಾಯಣ
ಶ್ರೀರಾಮಾಯಣ ಪಾರಾಯಣ
ನಮ್ಮ ತಂದೆ ಪೂಜ್ಯ ಪಂಡಿತ ತಿರು ಶ್ರೀನಿವಾಸಾಚಾರ್ಯರು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ವಿದ್ವಾಂಸರಾಗಿದ್ದು ಅಧ್ಯಾಪನವನ್ನು ನಡೆಸುವುದರ ಜೊತೆಗೆ ಹಲವಾರು ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದರು. ಇವುಗಳಲ್ಲಿ 'ಸಂಸ್ಕೃತಿ ಪ್ರದೀಪ', 'ಸಂಗ್ರಹ ರಾಮಾಯಣ' ಮತ್ತು ಕನ್ನಡ ವ್ಯಾಕರಣದ ಕುರಿತಾದ ಹಲವು ಗ್ರಂಥಗಳು ನಮಗೆ ತಿಳಿದಿರುವುದು.
ಸಾಂಸ್ಕೃತಿಕ ವಲಯದಲ್ಲಂತೂ ನಮ್ಮ ತಂದೆ ಅವರು ಅಪಾರ ನಿಷ್ಠೆ ಮತ್ತು ಶ್ರದ್ಧೆಗಳನ್ನು ಹೊಂದಿದ್ದರು. ಹಾಸನದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಚಾಲಕರಾಗಿದ್ದುಕೊಂಡು ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸನದ ಸಾಂಸ್ಕೃತಿಕ ವಲಯದಲ್ಲಿ ಅಪೂರ್ವ ಸೇವೆ ಮಾಡುತ್ತಿದ್ದ ನಮ್ಮ ತಂದೆಯವರಿಗೆ ಶ್ರೀರಾಮಚಂದ್ರ ಪ್ರಭುವಿನ ಮೇಲೆ ಅಪಾರ ಪ್ರೀತಿ ಮತ್ತು ಭಕ್ತಿ. ಆಂಜನೇಯ ದೇವಸ್ಥಾನದಲ್ಲಿ ಸೀತಾ ರಾಮ ಲಕ್ಷಣರನ್ನೂ ಪ್ರತಿಷ್ಠಾಪಿಸಲು ಹಣ ಸಂಗ್ರಹಣೆ ಮಾಡಲು ಹೊರಟ ಅವರಿಗೆ ಸುಮ್ಮನೆ ಜನರ ಬಳಿಗೆ ಹೋಗಿ ಹಣ ಕೇಳುವುದಕ್ಕೆ ಇಷ್ಟವಾಗದೆ ಸಂಗ್ರಹ ರಾಮಾಯಣ ಕೃತಿಯನ್ನು ರಚಿಸಿ ಪ್ರಕಟಿಸಿದರು. ಅದು ಸರಿಸುಮಾರು 1966ರ ವರ್ಷವಿರಬೇಕು ಎಂಬುದು ಅಸ್ಪಷ್ಟ ನೆನಪು. ಅಂದಿನ ದಿನದಲ್ಲಿ ಆ ಪುಸ್ತಕಕ್ಕೆ ಅವರು ನಿಗದಿಪಡಿಸಿದ್ದ ಬೆಲೆ ಇಪ್ಪತ್ತೈದು ಪೈಸೆ. ಅಂದು ಈ ಪುಸ್ತಕ ಪಡೆದ ಸ್ವಾಗತ ಅಪೂರ್ವವಾದದ್ದು.
ಶ್ರೀರಾಮಾಯಣವನ್ನು ನಮ್ಮ ಹಿಂದಿನ ತಲೆಮಾರಿನವರು ದಿನನಿತ್ಯ ಪಾರಾಯಣ ಮಾಡುತ್ತಿದ್ದರು. ನವರಾತ್ರಿ ಸಮಯದಲ್ಲಿ ಶ್ರೀ ರಾಮಾಯಣವನ್ನು ಸಮುದಾಯದಲ್ಲಿನ ಎಲ್ಲರೊಂದಿಗೆ ಓದಿ ವ್ಯಾಖ್ಯಾನಿಸಿ ವಿಜಯದಶಮಿಯಂದು ಪಟ್ಟಾಭಿಷೇಕವನ್ನು ಎಲ್ಲರೊಂದಿಗೆ ಸಂಭ್ರಮದಿಂದ ನೆರವೇರಿಸುವುದು ಭಾರತೀಯರ ಸತ್ಸಂಪ್ರದಾಯ. ಈ ನಿಟ್ಟಿನಲ್ಲಿ ನಮ್ಮ ತಂದೆಯವರು ರಚಿಸಿರುವ ಸಂಗ್ರಹ ರಾಮಾಯಾಣವನ್ನು ನವರಾತ್ರಿಯ ದಿನಗಳಲ್ಲಿ ಏಳು ಕಾಂಡಗಳಲ್ಲಿ ಪ್ರತಿದಿನ ಒಂದು ಕಾಂಡದಂತೆ ಇಲ್ಲಿ ಹಂಚಿಕೊಳ್ಳುವುದು ಹಲವು ವರ್ಷಗಳಿಂದ ನನ್ನ ರೂಡಿಯಾಗಿದೆ.
ಶ್ರೀರಾಮಚಂದ್ರ ಪ್ರಭುವಿನ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ನಮಸ್ಕಾರ.
Sri Ramayana
ಕಾಮೆಂಟ್‌ಗಳು