ಬೊಂಬೆ ಸಿಂಹಾಸನ
ಬೊಂಬೆಗಳ ಮೆಟ್ಟಿಲ ಸಿಂಹಾಸನದ ಕಥೆ
ತನ್ನ ಮೈಮೇಲಿನ ಅರಿಶಿನ – ಚಂದನದಿಂದ ಒಂದು ಮುದ್ದು ಬೊಂಬೆ ಮಾಡಿ ಅದಕೆ ಜೀವ ತುಂಬಿ ಮುದ್ದಿಸಿ, ತನ್ನ ಕಾವಲಿಗೆ ನಿಲ್ಲಿಸಿದಳು ದೇವಿ ಪಾರ್ವತಿ. ಬೊಂಬೆ, ಮಗನಾದ; ಬೊಂಬೆ, ವಿನಾಯಕನಾದ; ಬೊಂಬೆ, ದೇವನಾದ. ಈ ಗಣೇಶನೇ ಪ್ರಾಯಶಃ ಜಗತ್ತಿನ ಮೊದಲ ಬೊಂಬೆ.
ಅಕ್ಕರೆಯ ಅನುಭೂತಿಯಿಂದ ಉದ್ಭವಿಸಿದ ಬೊಂಬೆ ಬಿಂಬಗಳು ಸಹಚಾರಿಗಳಾಗಿ ಯುಗಗಳೇ ಕಳೆದಿವೆ. ಸಮಾಧಾನ ಸೂಸುವ ಈ ಶಾಂತಚಿತ್ತಮೂರ್ತಿಗಳ ಪ್ರೀತಿಪೂರ್ವಕ ಆರಾಧನೆಗೆ ಹತ್ತಾರು ಸಂದರ್ಭಗಳು, ಹಲವಾರು ಕಾರಣ ಪ್ರಾಂತ್ಯಗಳು, ಕಾರಣಗಳು ವಿಭಿನ್ನವಾದಂತೆ ಬೊಂಬೆ ಸಂಪ್ರದಾಯಗಳೂ ಹತ್ತು ಹಲವು ರೀತಿಗಳಲ್ಲಿ ಬೆಳೆದಿವೆ. ಹೀಗೆ ಬೆಳೆದು ಬಂದಿರುವ ಮೈಸೂರಿನ ಬೊಂಬೆ ಪೂಜೆಗೊಂದು ರೋಚಕ ಇತಿಹಾಸವೇ ಇದೆ.
ಹಿಂದೆ ಒಮ್ಮೆ ರಾಜ ಭೋಜನಿಗೆ ಒಂದು ಸೋಜಿಗ ಸನ್ನಿವೇಶ ಒದಗಿಬಂತು. ಸಾಮಾನ್ಯ ಧನಗಾಹಿ ಹುಡುಗನೊಬ್ಬನಲ್ಲಿ ಮೋಡಿಯೋ ಎನ್ನುವಂತೆ, ಆತ ಸಣ್ಣ ಮಣ್ಣದಿಣ್ಣೆಯ ಮೇಲೆ ಕುಳಿತಾಕ್ಷಣ ಆತನಲ್ಲಿ ಅಸಹಜ ಮೇಧಾವಿತನ, ನ್ಯಾಯಪರತೆ ಹೊರಹೊಮ್ಮುತ್ತಿತ್ತು. ಅದರ ಕಥೆ ಹೀಗಿದೆ:
ಭೋಜ ರಾಜ ಅತ್ಯಂತ ಜನಪ್ರಿಯ ಚಕ್ರವರ್ತಿಯಾಗಿದ್ದ. ಅವನ ಧೀರತೆ, ಪ್ರಜಾಪರತೆ, ನ್ಯಾಯನಿಷ್ಠುರತೆಗಳು ಅವನನ್ನು ಬದುಕಿರುವಾಗಲೇ ದಂತಕಥೆಯನ್ನಾಗಿ ಮಾಡಿದ್ದವು. ಅವನು ನೀಡಿದ ನ್ಯಾಯ ಎಲ್ಲರಿಗೂ ಒಪ್ಪಿತವಾಗಿರುವಂತಿದ್ದವು.
ಒಂದು ದಿನ ಒಬ್ಬ ವ್ಯಕ್ತಿ ಬಂದು ರಾಜನ ಮುಂದೆ ದೂರು ನೀಡಿದ.
"ಸ್ವಾಮೀ, ನಾನೊಬ್ಬ ವ್ಯಾಪಾರಿ. ನನಗೊಬ್ಬ ಮಡದಿ ಮತ್ತು ಸಣ್ಣವಯಸ್ಸಿನ ಮಗ ಇದ್ದಾರೆ.
ಇತ್ತೀಚೆಗೆ ನಾನು ವ್ಯಾಪಾರಕ್ಕೆಂದು ದೂರ ಪ್ರದೇಶಗಳಿಗೆ ಹೋಗಬೇಕಾಯಿತು. ನನ್ನ ಹತ್ತಿರ ನಾಲ್ಕು ಅತ್ಯಮೂಲ್ಯವಾದ ಮಣಿಗಳಿದ್ದವು. ಅಷ್ಟು ಬೆಲೆಬಾಳುವ ವಸ್ತುಗಳನ್ನು ಕೇವಲ ನನ್ನ ಹೆಂಡತಿಯ ರಕ್ಷಣೆಯಲ್ಲಿ ಬಿಡುವುದು ಉಚಿತವಲ್ಲವೆಂದುಕೊಂಡು ನನ್ನ ನೆರೆಮನೆಯ ವ್ಯಾಪಾರಿಗೆ ಅವುಗಳನ್ನು ಕೊಟ್ಟು ನಾನು ಪ್ರವಾಸದಿಂದ ಬಂದ ಮೇಲೆ ತೆಗೆದುಕೊಳ್ಳುವುದಾಗಿ ಹೇಳಿ ಹೊರಟೆ.
ಮರಳಿ ಬಂದ ಮೇಲೆ ಕೇಳಿದರೆ ಆತ ಅವುಗಳನ್ನು ಕೆಲದಿನಗಳ ಹಿಂದೆ ನನ್ನ ಮಡದಿಗೆ ಮರಳಿ ಕೊಟ್ಟಿರುವುದಾಗಿ ಸುಳ್ಳು ವಾದಿಸುತ್ತಾನೆ. ಪ್ರಭು, ಆ ಮಣಿಗಳು ನನ್ನ ಅನೇಕ ವರ್ಷಗಳ ಪರಿಶ್ರಮದ ಹಣ ಹಾಕಿ ಪಡೆದ ವಸ್ತುಗಳು. ದಯವಿಟ್ಟು ನನಗೆ ನ್ಯಾಯ ನೀಡಿ" ಎಂದು ಬೇಡಿಕೊಂಡ.
ರಾಜಾ ಭೋಜ ನೆರೆಮನೆಯ ವ್ಯಾಪಾರಿ ಕರೆಸಿ ಕೇಳಿದ, ಆತ, "ಮಹಾಪ್ರಭು, ನಾನೇಕೆ ಸುಳ್ಳು ಹೇಳಲಿ, ನನಗೆ ಭಗವಂತ ಬೇಕಾದಷ್ಟು ಕೊಟ್ಟಿದ್ದಾನೆ. ಒಂದು ದಿನ ಈತನ ಹೆಂಡತಿ ಮಣಿಗಳನ್ನು ಮರಳಿಕೊಡಿ ಎಂದಳು. ತಕ್ಷಣವೇ ಅವುಗಳನ್ನು ನಮ್ಮ ಸಮಾಜದ ನಾಯಕ ಮತ್ತು ಪಂಚಾಯ್ತಿ ಮುಖ್ಯಸ್ಥರ ಸಮ್ಮುಖದಲ್ಲಿ ಮರಳಿಕೊಟ್ಟುಬಿಟ್ಟೆ. ಪರರ ವಸ್ತು ನಮಗೇಕೆ ಸ್ವಾಮಿ" ಎಂದ.
ರಾಜ ಇಬ್ಬರೂ ಸಾಕ್ಷಿಗಳನ್ನು ಕರೆಸಿ ಕೇಳಿದಾಗ ಅವರು ತಮ್ಮ ಎದುರಿನಲ್ಲೇ ಮಣಿಗಳನ್ನು ಮರಳಿಕೊಟ್ಟದ್ದು ಸರಿಯೆಂದು ತಿಳಿಸಿದರು. ಆಗ ರಾಜ ವ್ಯಾಪಾರಿಗೆ ಹೇಳಿದ, "ಅವನು ಮರಳಿ ಕೊಟ್ಟಿದ್ದಕ್ಕೆ ಸಾಕ್ಷಿ ಇದೆ. ಆದ್ದರಿಂದ ನೀನು ದುರಾಸೆಯಿಂದ ಈ ರೀತಿಯ ಆಪಾದನೆ ಮಾಡುತ್ತಿದ್ದೀ ಎಂದಾಯಿತು. ಇದುವರೆಗೂ ನಿನ್ನ ನಡತೆ ಚೆನ್ನಾಗಿದ್ದುದರಿಂದ ನಿನ್ನನ್ನು ಬಿಡುಗಡೆ ಮಾಡುತ್ತಿದ್ದೇನೆ, ಇಲ್ಲವಾದರೆ ನಿನಗೆ ಕಠಿಣವಾದ ಶಿಕ್ಷೆ ನೀಡುತ್ತಿದ್ದೆ" ಎಂದ.
ಆಗ ವ್ಯಾಪಾರಿ ದುಃಖದಿಂದ, "ನೀವು ನ್ಯಾಯಪರರು ಎಂದು ನಿಮ್ಮಲ್ಲಿಗೆ ಬಂದೆ. ಆದರೆ ಈಗ ಅದು ಸುಳ್ಳೆಂದು ಗೊತ್ತಾಗುತ್ತದೆ. ನಿಮಗಿಂತ ಆ ದಿನ್ನೆಯ ಮೇಲೆ ಕುಳಿತ ಬಾಲಕನ ನ್ಯಾಯವೇ ಒಳ್ಳೆಯದು" ಎಂದ.
ಅವನಾವ ಬಾಲಕ ದಿನ್ನೆಯ ಮೇಲೆ ಕುಳಿತು ನ್ಯಾಯ ನೀಡುವವನು ಎಂಬುದನ್ನು ಕೇಳಿ ರಾಜ ವ್ಯಾಪಾರಿಯ ಜೊತೆಗೆ ಅಲ್ಲಿಗೆ ಹೋದ. ಹುಡುಗ ದಿನ್ನೆಯ ಮೇಲೆ ಕುಳಿತು ಎಲ್ಲರನ್ನೂ ಕರೆದ. ಇಬ್ಬರೂ ಸಾಕ್ಷಿಗಳನ್ನು ದೂರ ದೂರ ಕುಳ್ಳರಿಸಿದ.
ರಾಜಾಭೋಜನನ್ನು ಮಾತ್ರ ಹತ್ತಿರ ಕೂಡ್ರಿಸಿಕೊಂಡು ಪ್ರಥಮ ಸಾಕ್ಷಿಯಾದ ಸಮಾಜದ ನಾಯಕನನ್ನು ಕರೆದು "ಆ ಮಣಿಗಳು ಹೇಗಿದ್ದವು" ಎಂದು ಕೇಳಿದ. ಆತ, "ಅವು ಫಳಫಳನೇ ಹೊಳೆಯುವ ನೀಲಿ ಮಣಿಗಳು. ಒಂದೊಂದೂ ನಿಂಬೆಹಣ್ಣಿನ ಗಾತ್ರದ್ದಿದ್ದವು" ಎಂದ.
ನಂತರ ಪಂಚಾಯತಿ ಅಧ್ಯಕ್ಷನನ್ನು ಬೇರೆಯಾಗಿ ಕರೆದು ಮಣಿಗಳ ಬಗ್ಗೆ ಕೇಳಿದ. ಆತ, "ಅವು ಚಿಕ್ಕಚಿಕ್ಕ ಮಣಿಗಳು, ಕೆಂಪುಬಣ್ಣದ್ದಾಗಿದ್ದವು" ಎಂದ. ಆಗ ಆ ಬಾಲಕ ಕರೆದು, "ಇವರಿಬ್ಬರೂ ಸುಳ್ಳು ಸಾಕ್ಷಿಗಳು. ಇವರು ನೆರೆಮನೆಯ ವ್ಯಾಪಾರಿಯೊಂದಿಗೆ ಶಾಮೀಲಾಗಿ ಮೊದಲನೆಯವನಿಗೆ ಮೋಸಮಾಡಿದ್ದಾರೆ" ಎಂದು ತೀರ್ಪಿತ್ತ.
ಮೊದಲನೆಯವನು ಒಪ್ಪಿಕೊಂಡು ಮಣಿಗಳನ್ನು ಹಿಂತಿರುಗಿಸಿದ. ರಾಜಾಭೋಜ ಆಶ್ಚರ್ಯದಿಂದ "ನಿನಗೆ ಈ ನ್ಯಾಯ ನೀಡುವ ಶಕ್ತಿ ಹೇಗೆ ಬಂತು" ಎಂದಾಗ ಆತ "ನನಗೆ ಈ ದಿನ್ನೆಯ ಮೇಲೆ ಕುಳಿತಾಗ ಮಾತ್ರ ಇದು ಸಾಧ್ಯ" ಎಂದ.
ಕುತೂಹಲದಿಂದ ದಿನ್ನೆ ಅಗೆದಾಗ ಅದರ ಅಡಿ ಮೂವತ್ತೆರಡು ಮೆಟ್ಟಿಲುಗಳಿದ್ದ ಭಾರಿ ಚಿನ್ನದ ಸಿಂಹಾಸನ ಕಂಡಿತು. ಬಾಲಕ ಅದರ ಮೇಲೆ ಕುಳಿತಿದ್ದರಿಂದ ಬುದ್ಧಿವಂತಿಕೆಯ ನ್ಯಾಯ ನೀಡುವುದು ಸಾಧ್ಯವಾಗಿತ್ತು. ಅದು ಪಂಚಪಾಂಡವರ ಧರ್ಮನಿಷ್ಠೆ ಹಾಗೂ ರಾಜಾ ವಿಕ್ರಮಾದಿತ್ಯನ ಪೌರುಷ ಮೆರೆದ ನೃಪಾಸನವಾಗಿದ್ದು, ಮೂವತ್ತೆರಡು ಅಪ್ಸರ-ಬೊಂಬೆಗಳಿಂದ ಅಲಂಕೃತಗೊಂಡ ಸೋಪಾನಮಯ ಸಿಂಹಾಸನವಾಗಿತ್ತು.
ಭೋಜ ತನಗೆ ದೊರೆತ ಈ ಸಿಂಹಾಸನದ ಮೇಲೇರಲು ಉದ್ಯುಕ್ತನಾದ. ಸುಮೂಹೂರ್ತದಲ್ಲಿ ಅದರ ಮೊದಲ ಮೆಟ್ಟಿಲು ಏರಿದ. ಮರುಕ್ಷಣವೇ ಸಿಂಹಾಸನದ ಬೊಂಬೆಗಳು ಜೀವ ತಳೆದು, ಆತನನ್ನು ತಡೆದವು. ಆ ದಿವ್ಯ ಸಿಂಹಾಸನದ ಮೇಲೆ ಕೂರಲು ಯೋಗ್ಯ ರಾಜನ ಲಕ್ಷಣಗಳನ್ನು ತಿಳಿಸಿದವು. ಕ್ಷಮತೆ ಧೀಮಂತಿಕೆ, ದಕ್ಷತೆ, ವೀರತ್ವ, ಔದಾರ್ಯ, ಬುದ್ಧಿವಂತಿಕೆ, ನ್ಯಾಯಪರತೆ, ಸತ್ಯನಿಷ್ಠೆ, ಧಾರ್ಮಿಕತೆ, ವಿವೇಚನೆ, ಕೌಶಲ್ಯ, ಜ್ಞಾನ ಮುಂತಾದವುಗಳ ಬಗ್ಗೆ ಒಂದೊಂದು ಬೊಂಬೆಯೂ ಒಂದೊಂದು ಕಥೆಯ ಮೂಲಕ ತಿಳಿಹೇಳಿ ಹಾರಿಹೋದವು.
ರಾಜಧರ್ಮನೀತಿ ಅರುಹಿದ ಬೊಂಬೆಗಳಿಂದ ಸಾಲಂಕೃತವಾದ ಈ ಆಸನವೇ ಮುಂದೆ ವಿಜಯನಗರದ ರಾಯರಿಂದ ಸೇವಿತಗೊಂಡು ಮುಂದೆ ಮೈಸೂರಿನ ಒಡೆಯರಿಗೆ ಕರ್ನಾಟಕ ರತ್ನ ಸಿಂಹಾಸನವಾಗಿ ಲಭಿಸಿತು ಎಂಬ ನಂಬಿಕೆ ಇದೆ. ಅದರ ಸತ್ಯಾಸತ್ಯತೆ ಏನೇ ಇರಲಿ ಮೈಸೂರಿನಲ್ಲಿರುವ ರತ್ನಖಚಿತ ಸಿಂಹಾಸನವಂತೂ ಮೈಸೂರಿನ ಮುಕುಟಮಣಿ ಎಂಬ ಬಗ್ಗೆ ಎರಡು ಮಾತಿಲ್ಲ. ಈ ಸಿಂಹಾಸನ ದಸರೆಯ ‘ಬೊಂಬೆ ಆರಾಧನೆ’ ಹಾಗೂ ‘ಬೊಂಬೆ ಹಬ್ಬ’ದ ಹುಟ್ಟಿಗೆ ಮೂಲ ಎಂದು ಭಾವಿಸಲಾಗಿದೆ.
ದ್ವಾಪರಯುಗದ ಬೊಂಬೆಮಯ ರತ್ನಸಿಂಹಾಸನದ ಪ್ರತಿರೂಪವೇ ದಸರೆಯಂದು ಮೈಸೂರಿನ ಮನೆಮನೆಗಳಲ್ಲಿ ಕಾಣುವ ಬೊಂಬೆ ಮೆಟ್ಟಿಲು. ಪಾಂಡವರ ಸಿಂಹಾಸನವನ್ನು ಹೋಲುವಂತೆ ಮೆಟ್ಟಿಲ ಆಸನವನ್ನು ಜೋಡಿಸಿ ಅವುಗಳ ಮೇಲೆ ಬೊಂಬೆಗಳನ್ನಿಟ್ಟು, ಮೇಲ್ ಸ್ತರದಲ್ಲಿ ರಾಜರಾಣಿಯರ ಬಿಂಬವನ್ನು ಬಿಜಯಿಸುವುದು ಮೈಸೂರಿನ ಶರನ್ನವರಾತ್ರಿಯ ಬೊಂಬೆ ಹಬ್ಬದ ವಿಶೇಷತೆ. ಇದು ಪಾಂಡು ನಂದನರ ಗುಣಾಢ್ಯತೆ, ಧೀಮಂತಿಕೆ ಸಾರುವ ಬೊಂಬೆ ಸೋಪಾನ. ಅಂದು ಭೋಜರಾಜನಿಗೆ ನೀತಿ ಹೇಳಿದ ದಿವ್ಯಬೊಂಬೆಗಳು ಈಗ ಪ್ರತಿ ಮನೆಯಲ್ಲಿ ಹಲವಾರು ರೂಪ ತಳೆದು ಬೊಂಬೆ ಮೆಟ್ಟಿಲುಗಳಲ್ಲಿ ರಾರಾಜಿಸಿ ನಾಡಿನ ಕಲಿ-ಕುವರರಿಗೆಲ್ಲಾ ಉಪದೇಶಿಸುತ್ತಿವೆ. ಸನ್ಮಾರ್ಗ ತೋರುವ, ಧೈರ್ಯ ತುಂಬುವ, ಜಾಣ್ಮೆ ಬೆಳೆಸುವ ಈ ಬೊಂಬೆಗಳು ಪೂಜಾರ್ಹವೆನಿಸಿವೆ.
ನಮಗೂ ಆಲಿಸುವ ಆಂತರ್ಯದ ಕಿವಿಗಳಿದ್ದರೆ ದಸರಾ ಬೊಂಬೆಗಳು ಹೇಳುವ ಒಂದೊಂದು ಕಥೆಯೂ ಕೇಳೀತು.
Story of the toys and the throne
ಕಾಮೆಂಟ್‌ಗಳು