ಜಿ. ಕೆ. ರವೀಂದ್ರಕುಮಾರ್
ಜಿ. ಕೆ. ರವೀಂದ್ರಕುಮಾರ್
ಸಾಯುವ ನಿನ್ನ ಸಂಕಟ |
ತುಳಿದ ಕಾಲಿಗೆ ತಿಳಿಯದು |
(ನಾನು ಮತ್ತು ಇರುವೆ)
ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು |
ಇರುವೆಗಳಿಗೆ ದಾರಿ ಹೇಳಿತು |
ಇದು ಸಾವಿನ ಅರಮನೆ |
(ದಾರಿಯಲ್ಲಿ ದೊರೆತ ಪದ್ಯಗಳು)
ಇದು ಜಿ. ಕೆ. ರವೀಂದ್ರಕುಮಾರ್ ಅವರ ಸಾಲುಗಳು. ಅವರು 2019ರ ಅಕ್ಟೋಬರ್ 9ರಂದು ಈ ಲೋಕವನ್ನಗಲಿದ್ದರು. ವರ್ಷಗಳು ಓಡೋಡಿ ಮುಗಿದುಹೋಗುತ್ತೆ. ಕೆಲವೊಂದು ಕ್ರಿಯಾಶೀಲ ಬದುಕುಗಳು ಕೂಡಾ.
ಜಿ.ಕೆ.ರವೀಂದ್ರಕುಮಾರ್ ಜಿ.ಕೆ.ರವೀಂದ್ರ ಕುಮಾರ್ 1961ರ ಜೂನ್ 24ರಂದು ಜನಿಸಿದರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆ ತಾಲ್ಲೋಕಿನ ಗುಂಜಿಗನೂರು ಅವರ ಊರು. ತಂದೆ ಜಿ.ಎಸ್.ಕೃಷ್ಣಮೂರ್ತಿ ಅಧ್ಯಾಪಕರು. ತಾಯಿ ಪದ್ಮಾವತಿ. ಸಾಂಸ್ಕೃತಿಕ ಪರಿಸರದಲ್ಲಿಯೇ ಬೆಳೆದ ರವೀಂದ್ರ ಕುಮಾರ್ ಅವರಿಗೆ ಪಿಯುಸಿ ಓದುವ ದಿನಗಳಲ್ಲಿ ಕವಿಗಳಾದ ಚಂದ್ರಶೇಖರ ತಾಳ್ಯ ಅಧ್ಯಾಪಕರಾಗಿ ದೊರೆತರು. ಅದು ಅವರ ಕಾವ್ಯರಚನೆಗೆ ಇಂಬು ನೀಡಿತು. ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಕಾಲದಲ್ಲಿಯೇ ಅವರ ಕವಿತೆ ಆಗಿನ ಪ್ರತಿಷ್ಟಿತ ಪ್ರಜಾವಾಣಿ ಪತ್ರಿಕೆಯ ಸಾಪ್ತಹಿಕ ಪುರವಣಿಯಲ್ಲಿ ಪ್ರಕಟವಾಯಿತು. ಅದು ಅವರು ನಾಡಿನ ಕಾವ್ಯಾಸಕ್ತರನ್ನೆಲ್ಲಾ ಸೆಳೆಯಲು ಕಾರಣವಾಯಿತು.
ಜಿ.ಕೆ.ರವೀಂದ್ರಕುಮಾರ್ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಸ್ನಾತಕೋತ್ತರ ಶಿಕ್ಷಣ ಮುಗಿಸಿದ ಮೇಲೆ ಕೆಲ ಕಾಲ ಚಿಕ್ಕಮಂಗಳೂರಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ ರವೀಂದ್ರ ಕುಮಾರ್ ಆಕಾಶವಾಣಿಯ ಭದ್ರಾವತಿ, ಧಾರವಾಡ, ಕಾರವಾರ, ಮಡಿಕೇರಿ, ಮೈಸೂರು ಕೇಂದ್ರಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
ರವೀಂದ್ರಕುಮಾರ್ 'ಸಿಕಾಡ', 'ಪ್ಯಾಂಜಿಯ', 'ಕದವಿಲ್ಲದ ಊರಲ್ಲಿ', 'ಒಂದುನೂಲಿನ ಜಾಡು' ಹಾಗು 'ಮರವನಪ್ಪಿದ ಬಳ್ಳಿ' ಕವನ ಸಂಕಲನಗಳನ್ನು ಪ್ರಕಟಿಸಿದ್ದರು. 'ಇದಕ್ಕೊಂದು ಪದವ ತೊಡಿಸು' ಎಂಬ ಅವರ ಸಮಗ್ರ ಕವಿತೆಗಳ ಸಂಕಲನ ಬಿಡುಗಡೆಗಂಡಿದೆ. ವಾರಣಾಸಿಯಲ್ಲಿ ಜರುಗಿದ ಆಕಾಶವಾಣಿ ಸರ್ವಭಾಷಾ ಕವಿಸಮೇಳನದಲ್ಲಿ (2011) ಕನ್ನಡವನ್ನು ಪ್ರತಿನಿಧಿಸಿದ್ದರು.ಅವರ ಹಲವು ಕವಿತೆಗಳು ಹಿಂದಿ, ಇಂಗ್ಲೀಷ್, ತೆಲುಗು, ಮುಂತಾದ ಭಾಷೆಗಳಿಗೆ ಅನುವಾದಗೊಂಡಿವೆ.
ವಿಮರ್ಶೆ, ಲಲಿತ ಪ್ರಬಂಧ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿಯೂ ಬರೆದಿದ್ದ ರವೀಂದ್ರಕುಮಾರ್ ಅವರ ಗದ್ಯಕೃತಿಗಳಲ್ಲಿ ‘ಸುಪ್ತಸ್ವರ' (ಲೇಖನಗಳು), ‘ಪುನರ್ಭವ' (ವಿಮರ್ಶೆ), 'ಜುಗಲ್ ಬಂದಿ ಚಿಂತಕ ಯು.ಆರ್. ಅನಂತಮೂರ್ತಿ' (ಬದುಕು ಬರಹ), 'ಜ್ಞಾನದೇವನ ಬೋಧನೆ' (ಅನುವಾದ), 'ಡಾ.ಎಚ್ಚೆಸ್ಕೆ' (ಬದುಕು ಬರಹ), 'ಕವಿತೆ 2001' (ಸಂಪಾದನೆ), ಲಲಿತ ಪ್ರಬಂಧಗಳ ಸಂಕಲನ 'ತಾರಸಿ ಮಲ್ಹಾರ್' (2018) ಮುಂತಾದವು ಸೇರಿವೆ.
ರವೀಂದ್ರ ಕುಮಾರ್ ಆಕಾಶವಾಣಿಯಲ್ಲಿ ತಾವು ರೂಪಿಸಿದ ಸೃಜನಶೀಲ ರೂಪಕಗಳಿಗಾಗಿ ನಾಲ್ಕು ಬಾರಿ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರಲ್ಲದೆ, ಎಂಟು ಬಾರಿ ರಾಜ್ಯ ಬಾನುಲಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೇ ಅಲ್ಲದೆ ಅನೇಕ ಪ್ರತಿಷ್ಟಿತ ಸಂಘ ಸಂಸ್ಥೆಗಳ ಗೌರವಗಳು ಸಂದಿದ್ದವು.
ರವೀಂದ್ರ ಕುಮಾರ್ ಇನ್ನೂ 58ರ ವಯಸ್ಸಿನಲ್ಲೇ 2019ರ ಅಕ್ಟೋಬರ್ 9ರಂದು ಈ ಲೋಕವನ್ನು ತೊರೆದ ಸೃಜನಶೀಲ ಮನದ ಆತ್ಮೀಯ ಜೀವ. ನಲ್ಮೆಯ ನೆನಪಿನ ನಮನ.
On Remembrance Day of G.K. Ravindrakumar
ಕಾಮೆಂಟ್‌ಗಳು