ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾ. ರಾ. ಗೋಪಾಲ್


 ಬಾ. ರಾ. ಗೋಪಾಲ್


ಡಾ. ಬಾ.ರಾ. ಗೋಪಾಲ್  ಇತಿಹಾಸತಜ್ಞರಾಗಿ ಮತ್ತು ಶಿಲಾಶಾಸನ ತಜ್ಞರಾಗಿ ಸ್ಮರಣೀಯರಾಗಿದ್ದಾರೆ.

ಡಾ. ಬಾ.ರಾ. ಗೋಪಾಲ್‌ರವರು  1920ರ ಅಕ್ಟೋಬರ್ 21ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ಬಾಲಕೃಷ್ಣನ್ ಮತ್ತು ತಾಯಿ ಜಾನಕಿ.  ಪ್ರಾರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪೂರೈಸಿದ ಗೋಪಾಲರು ತುಮಕೂರಿನಲ್ಲಿ  ಇಂಟರ್ ಮೀಡಿಯೆಟ್,  ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್) ಹಾಗೂ 1953ರಲ್ಲಿ ಎಂ.ಎ. ಪದವಿ ಪಡೆದರು.   ಮುಂದೆ ಮದರಾಸಿನಲ್ಲಿ ಕಾನೂನು  ಕಾಲೇಜಿಗೆ ಸೇರಿದರೂ ಇತಿಹಾಸ, ಶಾಸನ ಶಾಸ್ತ್ರದತ್ತ ಅವರ  ಒಲವು ಹೆಚ್ಚಿತ್ತು. ಎಂ.ಶೇಷಾದ್ರಿಯವರ ಮಾರ್ಗದರ್ಶನದಲ್ಲಿ 1964ರಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ “ಕಲ್ಯಾಣ ಚಾಲುಕ್ಯರು ಮತ್ತು ಕಲಚೂರಿಗಳು” (ಇಂಗ್ಲಿಷ್‌ನಲ್ಲಿ) ಮಹಾಪ್ರಬಂಧ ಮಂಡಿಸಿ  ಪಿಎಚ್.ಡಿ ಪದವಿ ಗಳಿಸಿದರು.  

ಬಾ ರಾ ಗೋಪಾಲರು ಕನ್ನಡ, ತೆಲುಗು, ತಮಿಳು, ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದರು. ಆಂಧ್ರ, ತಮಿಳುನಾಡು, ಕರ್ನಾಟಕದ ಶಿಲಾಶಾಸನಗಳ ಅಧ್ಯಯನ ಅವರ ಪ್ರಮುಖ ಕಾರ್ಯಕ್ಷೇತ್ರವಾಯಿತು.  ಮೈಸೂರಿನ ಇತಿಹಾಸ ಸಂಶೋಧನಾ ಕೇಂದ್ರದಲ್ಲಿ ಸಂಪಾದಕರ ಹೊಣೆ ಹೊತ್ತರು. ಆ ಸಂದರ್ಭದಲ್ಲಿ   ಎಪಿಗ್ರಾಫಿಯಾ ಕರ್ನಾಟಕದ ಎಂಟು ಸಂಪುಟಗಳ ಪ್ರಕಟಣೆ ಮಾಡಿದ್ದು ಅವರ ಕಾರ್ಯಸಾಮರ್ಥ್ಯಕ್ಕೆ ಪ್ರಮುಖ ಸಾಕ್ಷಿಯಾಗಿವೆ.  ಅವು  ಇಂದಿಗೂ ಆಕರ ಗ್ರಂಥಗಳಾಗಿವೆ.

1979ರಲ್ಲಿ ಬಾ. ರಾ. ಗೋಪಾಲರು ಮೈಸೂರು ವಿಶ್ವವಿದ್ಯಾಲಯದಲ್ಲಿ  ಸ್ಥಾಪಿಸಿದ ದಕ್ಷಿಣ ಭಾರತ ಇತಿಹಾಸ ಸಂಶೋಧನಾ ಕೇಂದ್ರದಲ್ಲಿ ರೀಡರ್ ಆಗಿ ಹಾಗೂ ಶಿಲಾಶಾಸನ ತಜ್ಞರಾಗಿ ನೇಮಕಗೊಂಡರು.  ಮುಂದೆ  ಇತಿಹಾಸ ವಿಭಾಗದ ಪ್ರೊಫೆಸರರಾಗಿ, ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಪಡೆದು, ನಂತರ ಅನಂತಪುರದ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು.   ಅಲ್ಲಿ 1990ರಲ್ಲಿ ನಿವೃತ್ತರಾಗುವವರೆವಿಗೂ  ಸೇವೆ ಸಲ್ಲಿಸಿದರು.

ಬಾ. ರಾ. ಗೋಪಾಲರು ಇಂಗ್ಲಿಷ್, ಕನ್ನಡದಲ್ಲಿ ಸುಮಾರು 50 ಕೃತಿಗಳನ್ನು ರಚಿಸಿದರು.  ಅಧ್ಯಕ್ಷೀಯ ಭಾಷಣಗಳು, ಶಿಲಾಶಾಸನಗಳ ಇತಿಹಾಸ, ರಾಜ ವಂಶಾವಳಿ, ಸಾಹಿತ್ಯ, ಸಂಸ್ಕೃತಿ ಮೊದಲಾದ ವಿಷಯಗಳ ಮೇಲೆ ನಿಯತ ಕಾಲಿಕೆಗಳಿಗೆ  300ಕ್ಕೂ ಹೆಚ್ಚು ಲೇಖನಗಳನ್ನು ಬರೆದರು. ಕನ್ನಡ ಕೃತಿಗಳು-ಕನ್ನಡ ನಾಡಿನ ಐತಿಹಾಸಿಕ ಮಹಾಪುರುಷರು, ಬಾದಾಮಿ ಚಾಲುಕ್ಯರು, ಐಹೊಳೆ, ಬನವಾಸಿ, ಹೊರನಾಡಿನಲ್ಲಿ ಆಳಿದ ರಾಜವಂಶಗಳು, ಕಲ್ಯಾಣದ ಚಾಲುಕ್ಯರು, ವಿಜಯನಗರದ ವಾಸ್ತುಶಿಲ್ಪ  ಅವರ ಬರಹಗಳಲ್ಲಿ ಪ್ರಮುಖವಾದುವು.

ಗೋಪಾಲ್ ಅವರಿಗೆ ಹಲವಾರು ಇತಿಹಾಸ ಸಂಸ್ಥೆಗಳಿಂದ ಗೌರವ ಸಂದಿತು. ಭುವನೇಶ್ವರದಲ್ಲಿ ನಡೆದ 38ನೇ ಇತಿಹಾಸ ಕಾಂಗ್ರೆಸ್ ಸಮ್ಮೇಳನ, 1980ರಲ್ಲಿ ಆಂಧ್ರದಲ್ಲಿ ನಡೆದ ಇತಿಹಾಸ ಸಮ್ಮೇಳನ, ತಮಿಳುನಾಡಿನ ಈರೋಡಿನ ಸಮ್ಮೇಳನ, ಚಿತ್ರದುರ್ಗದಲ್ಲಿ ನಡೆದ 5ನೇ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಭಾರತ ಹಿಸ್ಟರಿ ಕಾಂಗ್ರೆಸ್, ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಇತಿಹಾಸ ವಿದ್ವಾಂಸರೆಂಬ ಗೌರವ, ಎಪಿಗ್ರಾಫಿ ಸೊಸೈಟಿ ಆಫ್ ಇಂಡಿಯಾದಿಂದ ತಾಮ್ರಪತ್ರ ಮತ್ತು ಪ್ರಶಸ್ತಿ ಮುಂತಾದ ಗೌರವಗಳು ಇವುಗಳಲ್ಲಿ ಸೇರಿವೆ.

ಬಾ. ರಾ. ಗೋಪಾಲರು 1997ರ  ಜೂನ್ 16ರಂದು ಈ ಲೋಕವನ್ನಗಲಿದರು.ಅವರ   ಹೆಸರಿನಲ್ಲಿ ಇತಿಹಾಸ ತಜ್ಞರಿಗೆ ಪ್ರತಿವರ್ಷ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

On the birth anniversary of great historian and scholar Dr. B. R. Gopal 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ