ಬಿ.ಎ.ಸಾಲೆತ್ತೂರು
ಭಾಸ್ಕರ ಆನಂದ ಸಾಲೆತ್ತೂರು
ಡಾ. ಬಿ. ಎ. ಸಾಲೆತ್ತೂರು ಕನ್ನಡ ನಾಡಿನ ಪ್ರಸಿದ್ಧ ಇತಿಹಾಸ ವಿದ್ವಾಂಸರಲ್ಲಿ ಪ್ರಮುಖರು.
ಭಾಸ್ಕರ ಆನಂದ ಸಾಲೆತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಾಲೆತ್ತೂರು ಎಂಬ ಗ್ರಾಮದಲ್ಲಿ 1900ರ ಅಕ್ಟೋಬರ್ 11ರಂದು ಜನಿಸಿದರು. ತಂದೆ ನಾರಾಯಣರಾಯರು, ತಾಯಿ ಪಾರ್ವತಿ.
ಅವರ ಶಿಕ್ಷಣ ಮಂಗಳೂರಿನ ಸಂತ ಎಲೋಷಿಯಸ್ ಹೈಸ್ಕೂಲು ಮತ್ತು ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಪದವಿವರೆಗೆ ನಡೆಯಿತು. ಮದರಾಸು ವಿಶ್ವವಿದ್ಯಾಲಯದಿಂದ ಎಲ್.ಟಿ. ಪದವಿ ಪಡೆದರು.
ಭಾಸ್ಕರ ಆನಂದ ಸಾಲೆತ್ತೂರು ಅವರು ದ. ಕನ್ನಡದ ಬೋರ್ಡ್ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕ ವೃತ್ತಿ ನಡೆಸಿದರು. ನಂತರ ಫಾದರ್ ಹೆರಾಸ್‌ರ ಮಾರ್ಗದರ್ಶನದಲ್ಲಿ ಎಂ.ಎ. ಪದವಿ ಪಡೆದರು. ಪ್ರಾಚೀನ ತುಳುನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನದ ಸಮಗ್ರ ಅಧ್ಯಯನ ನಡೆಸಿದರು. ‘ವಿಜಯನಗರ ಸಾಮ್ರಾಜ್ಯದ ಸಾಮಾಜಿಕ, ರಾಜಕೀಯ ಜೀವನ’ ಮಹಾಪ್ರಬಂಧ ಮಂಡಿಸಿ ಲಂಡನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದರು.
ಭಾಸ್ಕರ ಆನಂದ ಸಾಲೆತ್ತೂರು ಅವರಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಜರ್ಮನ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿತ್ತು. ಇವರು 1936ರಲ್ಲಿ ಪುಣೆಯ ಸರ್ ಪರಶುರಾಮ ಭಾವು ಕಾಲೇಜಿನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ನಂತರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲೂ ಕೆಲಕಾಲ ಪ್ರಾಧ್ಯಾಪಕರ ಹುದ್ದೆ ನಿರ್ವಹಿಸಿದರು. ಇವರ ವಿದ್ವತ್ತನ್ನು ಗಮನಿಸಿದ ಭಾರತ ಸರಕಾರ ಐತಿಹಾಸಿಕ ದಾಖಲೆಗಳ ಸಂಗ್ರಹಾಲಯದ ನಿರ್ದೇಶಕರಾಗಿ ನೇಮಕ (ನ್ಯಾಷನಲ್ ಆರ‍್ಕೀವ್ಸ್ ಆಫ್ ಇಂಡಿಯಾ) ಮಾಡಿತು. ತಮ್ಮ ಸೇವಾವಧಿಯ ಕಡೆಯವರೆಗೂ ಈ ಹುದ್ದೆಯನ್ನು ನಿರ್ವಹಿಸಿ ನಿವೃತ್ತಿ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕರಾಗಿ, ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಪ್ರಥಮ ದರ್ಜೆಯ ಸಂಶೋಧಕ ಮತ್ತು ಇತಿಹಾಸತಜ್ಞರಾದ ಸಾಲೆತ್ತೂರು ಅವರು ಅನೇಕ ಗ್ರಂಥಗಳನ್ನು ರಚಿಸಿದರು. ಸೋಷಿಯಲ್ ಅಂಡ್ ಪೊಲಿಟಿಕಲ್ ಲೈಫ್ ಅಂಡರ್ ವಿಜಯನಗರ್ ಎಂಪೈರ್, ಏನ್ಷಿಯಂಟ್ ಕರ್ನಾಟಕ-೧, ಹಿಸ್ಟರಿ ಆಫ್ ದಿ ತುಳುವ, ಇಂಡಿಯಾಸ್ ಡಿಪ್ಲೊಮ್ಯಾಟಿಕ್ ರಿಲೇಷನ್ಸ್ ವಿತ್ ದಿ ವೆಸ್ಟ್, ಏನ್ಷಿಯಂಟ್ ಇಂಡಿಯನ್ ಪೊಲಿಟಿಕಲ್ ಥಾಟ್ಸ್ ಆಂಡ್ ಇನ್‌ಸ್ಟಿಟ್ಯೂಷನ್ಸ್, ಮಿಡೇವಲ್ ಜೈನಿಸಂ, ವೈಲ್ಡ್ ಟ್ರೈಬ್ಸ್ ಇನ್ ಇಂಡಿಯನ್ ಹಿಸ್ಟರಿ, ದಿ ಮರಾಠ ಡೊಮಿನಿಯನ್ ಇನ್ ಕರ್ನಾಟಕ ಮುಂತಾದವು ಅವರ ಇಂಗ್ಲಿಷ್ ಕೃತಿಗಳಲ್ಲಿ ಸೇರಿವೆ. ಇವರ ಜರ್ಮನ್ ಕೃತಿ ವರ್ಟ್ ಡೆರ್ ಉಸ್ಟಿಷೆನ್ ಲೆ ಹ್ರೆನ್ ಫುರ್ ರೈ ಲೂಸಂಗ್ ಎಂಬುದು. ಇವರ ಕನ್ನಡದ ಕೃತಿ 'ಕನ್ನಡ ನಾಡಿನ ಚರಿತ್ರೆ ಸಂಪುಟ-೧’ (ದೇಸಾಯಿ ಪಾಂಡುರಂಗರಾಯರೊಡನೆ).
ಸಾಲೆತ್ತೂರು ಅವರ ನೂರಾರು ಸಂಶೋಧನಾ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಹಂಪೆಯ ವಿಜಯನಗರ ಸಾಮ್ರಾಜ್ಯದ ಆರನೆಯ ಶತಮಾನೋತ್ಸವದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಧಾರವಾಡದಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಮಹಾನ್ ಇತಿಹಾಸತಜ್ಞರಾದ ಭಾಸ್ಕರ ಆನಂದ ಸಾಲೆತ್ತೂರು ಅವರು ಧಾರವಾಡದಲ್ಲಿ 1963ರ ಡಿಸೆಂಬರ್ 18ರಂದು ಈ ಲೋಕವನ್ನಗಲಿದರು.
ಚಿತ್ರಕೃಪೆ: www.kamat.com
Great Indian Historian Dr. B. A. Saletore, ಸಾಲೆತೂರ, ಸಾಲೆತ್ತೂರ
ಕಾಮೆಂಟ್‌ಗಳು