ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆರೂರು ವಾಸುದೇವಾಚಾರ್ಯ


 ಕೆರೂರು ವಾಸುದೇವಾಚಾರ್ಯ


ಹೊಸಗನ್ನಡ ಸಾಹಿತ್ಯದ ಮೊದಲ ಹಂತ 1870ರಿಂದ 1920ರವರಗೆ ಎಂದು ಗುರುತಿಸಲಾಗುತ್ತದೆ.  ಈ ಪ್ರಥಮ ಹಂತದ ಕಾಲಾವಧಿಯಲ್ಲಿಯೇ ಸಾಹಿತ್ಯಕವಾಗಿ ಅನೇಕ ಮುಖವಾಗಿ ಕಾರ್ಯ ಮಾಡಿದ ಕೆರೂರು ವಾಸುದೇವಾಚಾರ್ಯರು (1866-1921) ಒಬ್ಬ ಮಹತ್ವದ ಲೇಖಕರಾಗಿ ಕಾಣುತ್ತಾರೆ.  ಕತೆ, ಕಾದಂಬರಿ, ನಾಟಕ ಈ ಮೂರೂ ಪ್ರಕಾರಗಳಲ್ಲಿ ಕೆರೂರರು ಶ್ರದ್ಧೆಯಿಂದ ಕೆಲಸ ಮಾಡಿದ್ದು, ಸಂಸ್ಕೃತ ಮತ್ತು ಇಂಗ್ಲೀಷ್ ಸಾಹಿತ್ಯಗಳ ಪ್ರಭಾವಕ್ಕೆ ಒಳಗಾಗಿಯೂ ತಮ್ಮ ಸ್ವಂತಿಕೆ ತೋರಿಸಿಕೊಟ್ಟಿದ್ದು ಒಂದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ.

ಕೆರೂರು ವಾಸುದೇವಾಚಾರ್ಯರು 1866ರ ಅಕ್ಟೋಬರ್ 15ರಂದು ಬಾಗಲಕೋಟೆಯಲ್ಲಿ ಜನಿಸಿದರು.   ತಂದೆ ಶ್ರೀನಿವಾಸಾಚಾರ್ಯರು.  ಬಾದಾಮಿ ತಾಲ್ಲೂಕಿನ ಕೆರೂರು ಅವರ ಪೂರ್ವಜರು ವಾಸವಾಗಿದ್ದ ಒಂದು ಊರು. ಬಾಗಲಕೋಟೆ, ಬಾದಾಮಿಗಳಲ್ಲಿ ಅವರ ಬಾಲ್ಯ, ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುತ್ತದೆ. ಮಾಧ್ಯಮಿಕ ಶಿಕ್ಷಣ ಬೆಳಗಾವಿ ಮತ್ತು ಧಾರವಾಡಗಳಲ್ಲಿ, ಕಾಲೇಜು ಶಿಕ್ಷಣ ಪುಣೆಯಲ್ಲಿ ಕಳೆಯುತ್ತದೆ.  1899ರಲ್ಲಿ ವಕೀಲಿ ಪರೀಕ್ಷೆ ಪಾಸು ಮಾಡಿ ಆ ವೃತ್ತಿಯನ್ನು ಕೈಕೊಳ್ಳುತ್ತಾರೆ.

ವಾಸುದೇವಾಚಾರ್ಯರು ಸಾಹಿತ್ಯ ಮತ್ತು ಪತ್ರಿಕೊದ್ಯಮದೆಡೆಗೆ ಹೊರಳಿದರು.  ಅತಿ ಮುಖ್ಯವಾದದ್ದು ಅವರ ಸಾಹಿತ್ಯಕ ಕೊಡುಗೆ.  1915ರ ಮಧ್ಯಂತರ ಕಾಲದಲ್ಲಿ ಕೆರೂರರು ಸಾಹಿತಿಗಳಾಗಿ ರೂಪುಗೊಳ್ಳುತ್ತಿರುವುದು, ಬೆಳೆಯುತ್ತಿರುವುದು ಕಂಡುಬರುತ್ತದೆ.  ‘ನಳದಮಯಂತಿ’ ನಾಟಕವನ್ನು ಬರೆದು ಆಡಿಸಿದ್ದು, ಈ ಅವಧಿಯಲ್ಲಿಯೇ.  ಅವರ ಸ್ವತಂತ್ರ ಸಾಮಾಜಿಕ ಕಾದಂಬರಿ ‘ಇಂದಿರಾ’ ಪ್ರಕಟವಾದದ್ದು ಇದೇ ಕಾಲದಲ್ಲಿಯೇ.  1921 ಜನವರಿ 21ರಂದು ನಿಧನ ಹೊಂದಿದ ವಾಸುದೇವಾಚಾರ್ಯರು ತಮ್ಮ ಜೀವಿತದ ಕೊನೆಯ ಗಳಿಗೆಯವರೆಗೂ ಸಾಹಿತ್ಯ ನಿರ್ಮಿತಿಯಲ್ಲಿ ತೊಡಗಿದ್ದುದು ನೆನಪಿಡತಕ್ಕ ಮಾತಾಗಿದೆ.

ಹೊಸಗನ್ನಡದ ಪ್ರಾರಂಭದ ಗಮನಾರ್ಹ ಕಾದಂಬರಿಕಾರರಲ್ಲಿ ಒಬ್ಬರಾದ ಕೆರೂರು ಅವರು ‘ಇಂದಿರೆ’, ‘ಯದುಮಹಾರಾಜ’, ‘ಭ್ರಾತೃ ಘಾತಕನಾದ ಔರಂಗಜೇಬ’, ‘ವಾಲ್ಮೀಕಿ ವಿಜಯ’ ಮತ್ತು ‘ಯಮನ ಸೈರಂಧ್ರಿ’ ಹೀಗೆ ಐದು ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.  ‘ಇಂದಿರೆ’ ಕನ್ನಡದಲ್ಲಿ ಬಂದ ಪ್ರಾರಂಭದ ಸಾಮಾಜಿಕ ಕಾದಂಬರಿಗಳಲ್ಲಿ ಎದ್ದು ಕಾಣುವಂತಹದು.  ಸಂಪ್ರದಾಯದ ಬೇರುಗಳು ಗಟ್ಟಿಯಾಗಿದ್ದ ಕಾಲದಲ್ಲಿ ಸ್ತ್ರೀ ಶಿಕ್ಷಣ, ಬಾಲ್ಯ ವಿವಾಹ, ವಿಧವಾ ವಿವಾಹ,  ಅಧುನಿಕ ಶಿಕ್ಷಣ ಹೊಂದಿದ ಸುಧಾರಕ ಮನೋವೃತ್ತಿಯ ಯುವಕರು-ಮುಂತಾದ ಸಂಗತಿಗಳು ಕಾದಂಬರಿಯ ವಸ್ತು ವಿನ್ಯಾಸದಲ್ಲಿ ಬೆರೆಸಿಕೊಂಡು ನವ ನವೀನ ಸಂವೆದನಾಶೀಲತೆಯನ್ನು ನೀಡುವುದು ತುಂಬ ಹೊಸ ವಿಚಾರವಾಗಿರುವಂತೆ, ಬರಹಗಾರರ ಜವಾಬ್ಧಾರಿಯ ವಿಷಯವೂ ಆಗಿತ್ತು.  ಪ್ರೇಮ ವಿವಾಹವನ್ನು ಪ್ರೋತ್ಸಾಹಿಸುವ ಆಚಾರ್ಯರು ವಿಧವಾ ವಿವಾಹಕ್ಕೂ ಆಸ್ಪದ ನೀಡಿದ್ದಾರೆ.  ಒಂದು ಸಂದರ್ಭದಲ್ಲಿ “ಶಾಸ್ತ್ರ ಸಮ್ಮತವಿರಲಿ, ಇಲ್ಲದಿರಲಿ ಪುನರ್ವಿವಾಹವು ಹಿತಕರವಾದದ್ದೆಂದೇ ನನ್ನ ಮತ” ಎಂದು ಪಾತ್ರವೊಂದರ ಮೂಲಕ ಹೇಳಿಸಿದ್ದು ಕೆರೂರು ಅವರ ಮತವೂ ಆಗಿದೆಯೆಂದು ಬೇರೆ ಊಹಿಸಬೇಕಾದುದಿಲ್ಲ.  ಹಾಸ್ಯವನ್ನು ಬರಿಸಿ ಕಥೆಯ ಆಕರ್ಷಣೆಯನ್ನು ಹೆಚ್ಚಿಸುವುದು  ಕೆರೂರು ಅವರು ಅಭಿವ್ಯಕ್ತಿಯಲ್ಲಿ ಕಂಡುಬರುವ ಇನ್ನೊಂದು ಗುಣ.  

ವಾಸುದೇವಾಚಾರ್ಯರು ಕನ್ನಡದ ಆರಂಭದ ಸಣ್ಣ ಕಥೆಗಾರರಲ್ಲಿ ಪ್ರಮುಖರು.  ‘ಪ್ರೇಮವಿಜಯ’, ‘ತೊಳೆದ ಮುತ್ತು’ ಮತ್ತು ‘ಬೆಳಗಿದ ದೀಪಗಳು’ ಇವು ಅವರ ಕಥಾ ಸಂಗ್ರಹಗಳು.  ಕೆರೂರವರ ಸಾಹಿತ್ಯ ಕೃಷಿಯಲ್ಲಿ ನಾಟಕ ಸಾಹಿತ್ಯವೂ ಗಮನಾರ್ಹವಾದದ್ದು.  ‘ನಳದಮಯಂತಿ’, ‘ವಸಂತಯಾಮಿನಿ ಸ್ವಪ್ನ ಚಮತ್ಕಾರ’, ‘ಸುರತನಗರದ ಶ್ರೇಷ್ಠಿ’ ಮತ್ತು ‘ಪತಿವಶೀಕರಣ’ ಇವು ನಾಲ್ಕು ಅವರ ಪ್ರಕಟಿತ ನಾಟಕಗಳು. 

ಕೆರೂರು ಅವರು ಧಾರವಾಡದಲ್ಲಿ ಹೊರಡುತ್ತಿದ್ದ ‘ಸಚಿತ್ರ ಭಾರತ’ ಮಾಸಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು.  ನಂತರದಲ್ಲಿ ಅವರು ಸ್ವತಂತ್ರವಾಗಿ ‘ಶುಭೋದಯ’ ಪತ್ರಿಕೆಯನ್ನು ನಡೆಸಿದ್ದರು.  ಬರವಣಿಗೆಯಲ್ಲಿ ಕನ್ನಡಿಗರಿಗೆ ಸರಿಯಾದ ತಿಳುವಳಿಕೆ ನೀಡುವ ಉದ್ದೇಶವನ್ನು ಕೆರೂರು ಅವರು ಹೊಂದಿದ್ದರು.  ಅಂದಿನ ದಿನಗಳಲ್ಲಿ ಉರ್ದು ಮತ್ತು ಮರಾಠಿ ಭಾಷೆಗಳ ಆಡಳಿತಕಾರರ ತಾತ್ಸಾರಕ್ಕೆ ಕನ್ನಡ ಭಾಷೆ ನಲುಗುತ್ತಿದ್ದ ರೀತಿ ಅವರ ತೀವ್ರ ಕಾಳಜಿಯ ವಿಷಯವಾಗಿತ್ತು.

ಕೆರೂರು ವಾಸುದೇವಾಚಾರ್ಯರು 1921ರ ಜನವರಿ 11ರಂದು ನಿಧನರಾದರು.  ಅವರು ಬದುಕಿದ್ದುದು ಐವತ್ತೈದು ವರ್ಷ ಮಾತ್ರ.  ಅವರ ಸಾಹಿತ್ಯ ಮತ್ತು ಪತ್ರಿಕಾ ಲೇಖನ ಕಾರ್ಯ ನಡೆದದ್ದು ಎರಡು ದಶಕಗಳ ಕಾಲಾವಧಿಯಲ್ಲಿ ಮಾತ್ರ.  ಸಣ್ಣಕಥೆ, ಕಾದಂಬರಿ ಮತ್ತು ನಾಟಕಗಳಲ್ಲಿ ಅವರು ಮಹತ್ವದ ಲೇಖಕರಾಗಿ ಕೊಡುಗೆ ನೀಡಿದ್ದು ಅನನ್ಯವಾದ ಸಾಧನೆಯೆಂದು ಪರಿಗಣಿಸಲಾಗಿದೆ. 

ಕೆರೂರು ವಾಸುದೇವಾಚಾರ್ಯರು ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಎಂದೆಂದೂ ಮಾಸದ ಹೆಸರು.  

On the birth anniversary of writer Kerur Vasudevacharya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ