ಅಯೋಧ್ಯಾ ಕಾಂಡ
ಶ್ರೀ ರಾಮಾಯಣ: ಅಯೋಧ್ಯಾ ಕಾಂಡ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯ ಅವರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿಯಿಂದ)
ದಶರಥನಿಗೆ ನಾಲ್ವರು ಮಕ್ಕಳ ಏಳಿಗೆಯನ್ನು ನೋಡಿ ಸಂತೋಷವಾಯಿತು. ಭರತ-ಶತ್ರುಘ್ನರು ತಂದೆಯ ಅಪ್ಪಣೆ ಪಡೆದು ಸೋದರಮಾವನೊಡನೆ ಕೇಕಯ್ಯ ರಾಜ್ಯಕ್ಕೆ ತೆರಳಿದ್ದರು. ಹೀಗಿರಲು ವಯಸ್ಸಾಗುತ್ತ ಬಂದಿದ್ದ ದಶರಥನು ತನ್ನ ಮಂತ್ರಿವರ್ಗದವರನ್ನೆಲ್ಲಾ ಕರೆಯಿಸಿ ಜ್ಯೇಷ್ಠ ಪುತ್ರನಾದ ರಾಮನಿಗೆ ಪಟ್ಟಕಟ್ಟುವ ವಿಷಯದಲ್ಲಿ ಸಮಾಲೋಚನೆ ನಡೆಸಿದನು. ಇದಕ್ಕೆ ಎಲ್ಲರೂ ಸಂತೋಷದಿಂದ ಸಮ್ಮತಿಸಿದರು. ಕುಲಗುರುಗಳಾದ ವಸಿಷ್ಠರು ಆ ವರ್ಷದ ಚೈತ್ರಮಾಸದ ಪುಷ್ಯನಕ್ಷತ್ರದ ದಿನ ಸುಮುಹೂರ್ತವೆಂದು ಸೂಚಿಸಲು ರಾಜನ ಅಪ್ಪಣೆಯಂತೆ ಅಯೋಧ್ಯೆಯೆಲ್ಲವೂ ಶೃಂಗಾರವಾಯಿತು. ಎಲ್ಲೆಲ್ಲೂ ನಡೆದ ಸಂಭ್ರಮ ಹೇಳತೀರದಾಗಿತ್ತು.
ಶ್ರೀರಾಮನ ಪಟ್ಟಾಭಿಷೇಕದ ಪ್ರಯತ್ನವನ್ನು ಕೇಳಿ ಕೈಕೇಯ ದಾಸಿಯಾದ ಮಂಥರೆಯು ಕೈಕೆಗೆ ದುರ್ಬುದ್ದಿಯನ್ನು ಹುಟ್ಟಿಸಿದಳು. ರಾಮನನ್ನು ಕಾಡಿಗೆ ಕಳುಹಿಸಿ ಭರತನಿಗೆ ಪಟ್ಟಕಟ್ಟುವಂತೆ ದಶರಥನನ್ನು ಕೇಳಿಕೊಳ್ಳುವಂತೆ ಪ್ರೇರೇಪಿಸಿದಳು. ಜ್ಯೇಷ್ಠಪುತ್ರನಿಗೆ ರಾಜ್ಯ ವಹಿಸಿಕೊಡುವ ಸಂತೋಷವಾರ್ತೆಯನ್ನು ತನ್ನ ಮುದ್ದಿನ ಮಡದಿ ಕೈಕೆಗೆ ತಿಳಿಸಲು ಬಂದ ದಶರಥನು ಕೈಕೇಯಿಯ ಕೋಪದ ಸ್ಥಿತಿಯನ್ನು ಕಂಡು ಆಶ್ಚರ್ಯಪಟ್ಟನು. ರಾಜನು ಕೈಕೇಯಿಯ ಸಮಾಧಾನಕ್ಕಾಗಿ ರಾಮನ ಮೇಲೆ ಆಣೆಯಿಟ್ಟು ಅವಳ ಕೋರಿಕೆಯನ್ನು ಈಡೇರಿಸುವುದಾಗಿ ಮಾತುಕೊಟ್ಟನು. ಕೈಕೇಯಿಯು ಹಿಂದೆ ತನಗೆ ದೇವಾಸುರರ ಯುದ್ಧದ ಸಮಯದಲ್ಲಿ ವಾಗ್ದಾನಮಾಡಿದ ಎರಡು ವರಗಳನ್ನು ಕೊಡಬೇಕೆಂದು ಕೇಳಲು ರಾಜನು ಅದಕ್ಕೆ ಒಪ್ಪಿದನು. ಭರತನಿಗೆ ರಾಜ್ಯದ ಪಟ್ಟಕಟ್ಟಬೇಕೆಂದು ಮತ್ತು ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ಕಳುಹಿಸಬೇಕೆಂಬ ಕೈಕೇಯಿಯ ಎರಡೂ ವರಗಳನ್ನು ಕೇಳಿದ ದಶರಥನು ಏನೂ ಹೇಳಲಾರದೆ ದುಃಖದಿಂದ ಕಂಗೆಟ್ಟನು. ರಾಜನು ಎಷ್ಟು ಅಂಗಲಾಚಿದರೂ ಕೈಕೇಯಿಯ ಮನಸ್ಸು ಬದಲಾಗಲಿಲ್ಲ. ಕೂಡಲೆ ಹಠಮಾರಿಯಾದ ಕೈಕೇಯಿಯು ರಾಮನನ್ನು ತನ್ನ ಅಂತಃಪುರಕ್ಕೆ ಕರೆಯಿಸಿಕೊಂಡಳು. ಪ್ರೇಮಪುತ್ರನನ್ನು ಕಂಡ ತಕ್ಷಣ ದಶರಥನಿಗೆ ಮತ್ತಷ್ಟು ವ್ಯಸನವೇರಿ, ಪಜ್ಞೆತಪ್ಪಿ ಮೂಕನಾದನು. ಆಗ ಕೈಕೇಯಿಯು ರಾಮನಿಗೆ ರಾಜನು ತನಗೆ ಕೊಟ್ಟ ವರಗಳ ಸಂಗತಿಯನ್ನು ತಿಳಿಸಿದಳು. ತಂದೆಯ ಮಾತಿನಂತೆ ತಾನು ಅರಣ್ಯಕ್ಕೆ ಹೋಗುವುದಾಗಿಯೂ ಭರತನಿಗೆ ಪಟ್ಟ ಕಟ್ಟುವಂತೆಯೂ ಹೇಳಿ ಅವರಿಗೆ ನಮಸ್ಕರಿಸಿ ರಾಮನು ಹೊರಟನು.
ರಾಮನು ಈ ಸುದ್ಧಿಯನ್ನು ತನ್ನ ಹೆತ್ತ ತಾಯಿಯಾದ ಕೌಸಲ್ಯೆಗೆ ತಿಳಿಸಲು ಆಕೆಯು ಮೂರ್ಛೆಹೋದಳು. ಆ ವೇಳೆಗೆ ಅಲ್ಲಿ ಬಂದ ಲಕ್ಷ್ಮಣನು ಎಲ್ಲ ಸಂಗತಿಯನ್ನು ಕೇಳಿ ಕಿಡಿಕಿಡಿಯಾದನು. ತಾಯಿಯನ್ನು ಸಮಾಧಾನಪಡಿಸಿ, ತಮ್ಮನಿಗೆ ವಿವೇಕ ಹೇಳಿ ರಾಮನು ಸೀತೆಯನ್ನು ಕಾಣಲು ಆಕೆಯ ಅಂತಃಪುರಕ್ಕೆ ಬಂದನು. ಪಟ್ಟಾಭಿಷೇಕದ ಬದಲು ರಾಮನ ವನವಾಸದ ವಾರ್ತೆಯನ್ನು ತಿಳಿದು ಸೀತೆಯು ಕೊರಗಿದಳು. ತಾನೂ ವನವಾಸಕ್ಕೆ ಸಿದ್ಧಳಾಗಿ ಪತಿಯನ್ನು ಹಿಂಬಾಲಿಸಿದಳು. ಲಕ್ಷ್ಮಣನು ಮೊದಲೇ ಹೊರಟು ಸಿದ್ಧವಾಗಿದ್ದನು. ಹೀಗೆ ಸೀತಾ ರಾಮಲಕ್ಷ್ಮಣರು ನಾರುಬಟ್ಟೆಯನ್ನುಟ್ಟು ಅರಮನೆಯನ್ನು ಬಿಟ್ಟು ಹೊರಹೊರಟಾಗ ಎಲ್ಲರೂ ದುಃಖಸಾಗರದಲ್ಲಿ ಮುಳುಗಿದರು. ಮಂತ್ರಿಯಾದ ಸುಮಂತ್ರನು ಸಿದ್ಧಪಡಿಸಿದ ರಥದಲ್ಲಿ ಮೂವರೂ ಕುಳಿತು ಕಾಡಿಗೆ ಹೊರಡಲು ದುಃಖಸಂತಪ್ತರಾದ ಪಟ್ಟಣಿಗರೆಲ್ಲರೂ ಅವರನ್ನು ಹಿಂಬಾಲಿಸಿದರು.
ರಾತ್ರಿಯಾಗುತ್ತ ಬರಲು ರಾಮನು ನಿದ್ರೆಯಲ್ಲಿದ್ದ ಪಟ್ಟಣಿಗರನ್ನು ತಮಸಾನದೀ ತೀರದಲ್ಲಿ ಬಿಟ್ಟು ಬೆಳಗಾಗುವ ಮೊದಲೇ ಎದ್ದು ಗಂಗಾನದೀ ತೀರಕ್ಕೆ ಬಂದನು. ರಾಮನು ಸುಮಂತ್ರನನ್ನು ಸಮಾಧಾನಪಡಿಸಿ ಹಿಂದಕ್ಕೆ ಕಳುಹಿಸಿ, ಸೀತಾಲಕ್ಷ್ಮಣರೊಡನೆ ಗುಹನ ಸಹಾಯದಿಂದ ಗಂಗೆಯನ್ನು ದಾಟಿದನು. ಅಲ್ಲಿಂದ ಅವರೆಲ್ಲರೂ ಭಾರದ್ವಾಜಾಶ್ರಮಕ್ಕೆ ಬರಲು ಆ ಮಹರ್ಷಿಯು ಇವರನ್ನು ಆದರದಿಂದ ಸತ್ಕರಿಸಿದನು. ಅಲ್ಲಿಂದ ಮುಂದೆ ಸೀತಾರಾಮರು ಸುಂದರವಾದ ಚಿತ್ರಕೂಟ ಪ್ರದೇಶಕ್ಕೆ ಬಂದು ಲಕ್ಮಣನಿಂದ ರಚಿತವಾದ ಪರ್ಣಶಾಲೆಯಲ್ಲಿ ಕೆಲವು ಕಾಲ ಸುಖವಾಗಿ ವಾಸಿಸಿದರು.
ಇತ್ತ ಅಯೋಧ್ಯೆಗೆ ಸುಮಂತ್ರನು ಹಿಂದಿರುಗಿ ದಶರಥನಿಗೆ ಮಕ್ಕಳ ಸಂಗತಿಯನ್ನು ಹೇಳಿದ ಮೇಲೆ ಆತನಿಗೆ ದುಃಖ ಮರುಕಳಿಸಿತು. ಪುತ್ರಶೋಕವನ್ನು ತಾಳಲಾರದೆ ತನ್ನ ಹಿಂದಿನ ಮುನಿಶಾಪವನ್ನು ನೆನೆಸಿಕೊಂಡು ದಶರಥನು ಕಣ್ಮರೆಯಾದನು. ಕೂಡಲೇ ಕುಲಗುರುವಾದ ವಸಿಷ್ಠರು ಭರತ-ಶತ್ರುಘ್ನರನ್ನು ರಾಜಧಾನಿಗೆ ಕರೆಯಿಸಿದರು.
ಭರತನಿಗೆ ಎಲ್ಲ ಸಂಗತಿಯೂ ತಿಳಿದು ತನ್ನ ತಾಯಿಯನ್ನು ಬಹುವಾಗಿ ನಿಂದಿಸಿದನು. ದುಃಖದಿಂದಲೇ ತಂದೆಯ ಉತ್ತರಕ್ರಿಯೆಗಳನ್ನು ಶತ್ರುಘ್ನನೊಡನೆ ನೆರವೇರಿಸಿದ ಭರತನು ತಕ್ಷಣ ಅಡವಿಯಿಂದ ರಾಮನನ್ನು ಹಿಂದಿರುಗಿ ಕರೆತಂದು ಪಟ್ಟಕಟ್ಟಲು ನಿಶ್ಚಯಿಸಿ ಪರಿವಾರದೊಂದಿಗೆ ಅಯೋಧ್ಯೆಯನ್ನು ಬಿಟ್ಟು ಹೊರಟನು.
ಹೀಗೆ ಭರತ ಶತ್ರುಘ್ನರಿಬ್ಬರೂ ಪರಿವಾರ ಸಮೇತರಾಗಿ ಗಂಗಾನದಿಯನ್ನು ದಾಟಿ ಭಾರದ್ವಾಜಾಶ್ರಮಕ್ಕೆ ಬಂದು ಅಲ್ಲಿಂದ ಚಿತ್ರಕೂಟವನ್ನು ತಲುಪಿದರು. ರಾಮನು ತನ್ನ ಕಾಲಮೇಲೆ ಬಿದ್ದು ಗೋಳಾಡಿದ ಭರತನನ್ನು ಆಲಂಗಿಸಿಕೊಂಡು, ಕುಶಲಪ್ರಶ್ನೆ ಮಾಡಿದನು. ಭರತನಿಂದ ತಂದೆಯ ಸಾವನ್ನು ಕೇಳಿದ ರಾಮಲಕ್ಷ್ಮಣರು ವ್ಯಸನಾಕ್ರಾಂತರಾಗಿ ತಂದೆಗೆ ತರ್ಪಣ ಕೊಟ್ಟರು. ಬಳಿಕ ಭರತನು ರಾಮನನ್ನು ರಾಜ್ಯಾಭಿಷೇಕ ಮಾಡಿಕೊಳ್ಳುವಂತೆ ಎಷ್ಟು ಬೇಡಿಕೊಂಡರೂ ಕೇಳದೆ, ರಾಮನು ತಾನು ತಂದೆಯ ಮಾತಿನಂತೆ ಹದಿನಾಲ್ಕು ವರ್ಷ ವನವಾಸವನ್ನು ಅನುಭವಿಸುವುದಾಗಿಯೂ ಭರತನೇ ರಾಜ್ಯವಾಳಬೇಕೆಂದು ತಿಳಿಸಿದನು. ಕಡೆಗೆ ಭರತನು ಶ್ರೀರಾಮನ ಪಾದಗಳಿಗೆ ಸುವರ್ಣಪಾದುಕೆಗಳನ್ನು ತೊಡಿಸಿ ಅದನ್ನು ತನ್ನ ತಲೆಯ ಮೇಲಿಟ್ಟುಕೊಂಡು ತಾನು ರಾಮನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷ ಮಾತ್ರ ರಾಜ್ಯವನ್ನಾಳುವುದಾಗಿಯೂ ಅನಂತರ ರಾಘವನು ರಾಜ್ಯ ವಹಿಸಿಕೊಳ್ಳಲು ಬಾರದಿದ್ದರೆ ತಾನು ಅಗ್ನಿಪ್ರವೇಶ ಮಾಡುವುದಾಗಿಯೂ ಶಪಥಮಾಡಿ ಅಲ್ಲಿಂದ ಹೊರಟನು. ಮುಂದೆ ಭರತನು ಆಯೋಧ್ಯೆಗೆ ಹೋಗಲಾರದೆ ನಂದಿಗ್ರಾಮದಲ್ಲಿಯೇ ನಿಂತು, ವನವಾಸದಲಿದ್ದ ರಾಮಾನಂತೆಯೇ ಜಟಾವಲ್ಕಲಧಾರಿಯಾಗಿ, ಶ್ರೀರಾಮನ ಪಾದುಕಾಪಟ್ಟಾಭಿಷೇಕವನ್ನು ನಡೆಯಿಸಿ ಆ ರಾಮಚಂದ್ರನ ಪಾದಾರವಿಂದಗಳನ್ನೇ ನಂಬಿ ರಾಜ್ಯಭಾರ ನಡೆಯಿಸುತ್ತಿದ್ದನು.
ಇತ್ತ ರಾಮಲಕ್ಷ್ಮಣರು ಚಿತ್ರಕೂಟವನ್ನು ಬಿಟ್ಟು ಮುಂದೆ ಸಾಗಿ, ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬಂದರು. ಅಲ್ಲಿ ಅತ್ರಿಋಷಿಗಳಿಂದಲೂ ಅವರ ಮಹಾಸತಿಯರಾದ ಅನುಸೂಯಾದೇವಿಯರಿಂದಲೂ ಸತ್ಕಾರಹೊಂದಿದ ಶೀ ಸೀತಾರಾಮಲಕ್ಷ್ಮಣರು ಮುಂದೆ ದಂಡಕಾರಣ್ಯವನ್ನು ಪವೇಶಿಸಿದರು.
(ನಾಳೆ ಮುಂದುವರೆಯುವುದು)
ಕಾಮೆಂಟ್‌ಗಳು