ವಿಶ್ವ ಅಂಚೆ ದಿನದಂದು
ಭಾವನೆಗಳಿಗೆ ಕನ್ನಡಿ ಹಿಡಿಯಿರಿ - ವಿಶ್ವ ಅಂಚೆ ದಿನದಂದು
ಇಂದು ವಿಶ್ವಅಂಚೆ ದಿನ. ಹಾಗಾಗಿ ಹಿಂದೊಮ್ಮೆ ನಾನು ಓದಿ ಇಷ್ಟಪಟ್ಟಿದ್ದ ಲೇಖನ ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.
ಈ ಸರಳ ಸೂತ್ರ ಈವರೆಗೆ ಎಷ್ಟೋ ಜನರ ಬದುಕನ್ನೇ ಬದಲಿಸಿದೆ. ಸ್ನೇಹ, ಪ್ರೀತಿ, ನೆಮ್ಮದಿ ಮತ್ತು ಸಹಬಾಳ್ವೆಗೆ ನಾಂದಿಯಾಗಿದೆ. ಸೂತ್ರದ ಸಾರಾಂಶ ಇಷ್ಟೇ. ನಿಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಸ್ವಲ್ಪ ಸಮಯವನ್ನು ವಿನಿಯೋಗಿಸಿ ಹೃದಯ ತುಂಬಿ ವಾರಕ್ಕೆ ಕನಿಷ್ಟ ಒಂದು ಪತ್ರ ಬರೆಯಿರಿ. ಪೆನ್ನು ಹಿಡಿದೋ ಅಥವಾ ಕೀಬೋರ್ಡಿನಲ್ಲಿ ಟೈಪ್ ಮಾಡುವ ಮೂಲಕವೋ ಜೀವನದಲ್ಲಿ ಮರೆಯಲಾಗದ ವ್ಯಕ್ತಿಯೊಬ್ಬರಿಗೆ ಪತ್ರವನ್ನು ಬರೆಯಿರಿ. ಹೀಗೆ ಬರೆಯುವ ಮೂಲಕ ನೀವು ಅವರಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಬಹುದು. ಒಮ್ಮೆ ನೀವು ಪತ್ರ ಬರೆಯಬೇಕೆಂದು ನಿರ್ಧರಿಸಿದ ಕೂಡಲೇ ಆಶ್ಚರ್ಯವಾಗುವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಬೇಕಾದವರ ದೊಡ್ಡದೊಂದು ಪಟ್ಟಿ ಕಣ್ಮುಂದೆ ಬಂದು ನಿಲ್ಲುತ್ತದೆ. ಪಟ್ಟಿಯಲ್ಲಿ ಇರುವ ಎಲ್ಲರಿಗೂ ವಾರಕ್ಕೊಂದರಂತೆ ಪತ್ರ ಬರೆಯಲು ಪ್ರಾರಂಭಿಸಿ. ನಂತರ ಬದುಕಿನ ಸಂಧ್ಯಾಕಾಲ ಸನ್ನಿಹಿತವಾದರೂ ಪಟ್ಟಿಯಲ್ಲಿನ ಹೆಸರುಗಳು ಅಂತ್ಯ ಕಾಣುವುದಿಲ್ಲ. ಒಟ್ಟಾರೆ ಅಷ್ಟು ಪತ್ರಗಳನ್ನು ಬರೆಯಬಹುದು. ಪ್ರತಿಯೊಬ್ಬರಿಗೂ ದೊಡ್ಡ ಮಟ್ಟದ ಆತ್ಮೀಯರು ಮತ್ತು ಗೆಳೆಯರು ಇಲ್ಲದಿರಬಹುದು. ಆದರೆ ಬದುಕಿನ ಆರಂಭದಿಂದ ಇಂದಿನವರೆಗೆ ಬಂದು ಹೋಗಿರುವ ಹಾಗೂ ನಿಮ್ಮ ಮೇಲೆ ಗಾಢ ಪರಿಣಾಮ ಬೀರಿರುವ ಅನೇಕ ಸ್ನೇಹಿತರು ಮತ್ತು ಬಂಧು-ಬಾಂಧವರು ನಿಮ್ಮ ಕೃತಜ್ಞತೆಯನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಹಾಗೊಂದು ವೇಳೆ ಅಂತಹ ವ್ಯಕ್ತಿಗಳು ನಿಮಗೆ ದೊರೆಯದಿದ್ದರೂ ಚಿಂತೆಯಿಲ್ಲ. ಅಪರಿಚಿತ ವ್ಯಕ್ತಿಗಳಿಗೂ ಸಹ ಪತ್ರ ಬರೆಯಬಹುದು. ಉದಾಹರಣೆ: ಒಳ್ಳೆಯ ಪುಸ್ತಕ ಬರೆದ ಲೇಖಕ, ಅದ್ಭುತ ಸಾಧನೆ ಮಾಡಿದ ವಿಜ್ಞಾನಿ, ಸಾಮಾಜಿಕ ಚಿಂತಕರಿಗೆ ಪತ್ರ ಬರೆಯಬಹುದು. ವ್ಯಕ್ತಿಯೊಬ್ಬ ಮಾಡಿದ ಒಳ್ಳೆಯ ಕೆಲಸವನ್ನು ಮೆಚ್ಚಿ ಅಂತಹವರಿಗೆ ಪತ್ರ ಬರೆಯಬಹುದು. ಅಂತಹ ವ್ಯಕ್ತಿ ಬದುಕಿದ್ದಿರಬಹುದು ಅಥವಾ ಬದುಕಿಲ್ಲದೆಯೂ ಇರಬಹುದು. ಅಂತಿಮವಾಗಿ ಇದರ ಮೂಲ ಉದ್ದೇಶ ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಕೃತಜ್ಞತಾಭಾವವನ್ನು ಜಾಗೃತಗೊಳಿಸುವುದಷ್ಟೆ. ಪತ್ರ ಬರೆದು ಅದನ್ನು ಕಳುಹಿಸಲಾಗದಿದ್ದರೂ ಚಿಂತೆ ಇಲ್ಲ. ಒಟ್ಟಿನಲ್ಲಿ ಒಂದು ಹೃದಯ ತುಂಬಿ ಒಂದು ಪತ್ರ ಬರೆಯಿರಿ. ಇಂತಹ ಪತ್ರಗಳನ್ನು ಬರೆಯುವುದರ ಹಿಂದಿನ ಉದ್ದೇಶ ಅದರ ಮೂಲಕ ಪ್ರೀತಿ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸುವುದೇ ಆಗಿರುತ್ತದೆ.
ಬರೆಯುವ ಪತ್ರದಲ್ಲಿ ಎಲ್ಲವೂ ಸರಿಯಿರಲೇಬೇಕು. ಅದು ಉತ್ಕೃಷ್ಟ ಮಟ್ಟದಲ್ಲಿರಬೇಕು ಎಂದೇನಿಲ್ಲ. ಕಾರಣ ಅಂತಹ ಪತ್ರಗಳನ್ನು ಯಾವುದೇ ಸ್ಪರ್ಧೆಗಾಗಲಿ ಅಥವಾ ಮೇಲಧಿಕಾರಿಗಳಿಗಾಗಲಿ ಕಳುಹಿಸುವ ಅಗತ್ಯವಿಲ್ಲ. ಅದು ನಿಮ್ಮ ಹೃದಯಾಂತರಾಳದಿಂದ ಮತ್ತೊಬ್ಬರಿಗೆ ನೀವು ನೀಡುವ ಉಡುಗೊರೆ ಅಷ್ಟೆ. ನಿಮಗೆ ಮತ್ತೊಬ್ಬರಿಗೆ ಪತ್ರ ಬರೆಯಲು ಮುಜುಗರವಾದರೆ ಚಿಂತಿಸಬೇಡಿ. ವ್ಯಕ್ತಿಗಳಿಗೆ ಬದಲಾಗಿ ಪ್ರಕೃತಿಯ ಸುಂದರ ಸೊಬಗನ್ನು ಕುರಿತೋ, ಸಮುದ್ರದ ಅಲೆಗಳಿಗೋ, ಆಗಸದಲ್ಲಿ ಹಾರಾಡುವ ಬಾನಾಡಿಗಳಿಗೋ ಅಥವಾ ಕಾನನದಲ್ಲಿ ನಿಂತ ಮಲ್ಲಿಗೆಯ ಹೂವೊಂದಕ್ಕೋ ಸರಳವಾಗಿ ಪತ್ರ ಬರೆಯಿರಿ. ಉದಾಹರಣೆ:
ಪ್ರೀತಿಯ ಜಾಜಿ ಮಲ್ಲಿಗೆ,
ನಿನ್ನ ಸವಿನೆನಪೇ ನನ್ನ ಇಂದಿನ ಸುಪ್ರಭಾತ, ನನ್ನ ಸನಿಹ ನೀನಿರುವೆ ಎಂಬುದನ್ನು ನೆನೆಯುತ್ತಿದ್ದರೆ ಅದೆಷ್ಟು ಸಂತೋಷವಾಗುತ್ತಿದೆ ಗೊತ್ತೆ? ನಿನ್ನ ಬಳಿಯಲ್ಲಿರುವ ನಾನು ಅದೆಷ್ಟು ಸುದೈವಿ! ನಿನ್ನನ್ನು ಗೆಳತಿಯಾಗಿ ಪಡೆದ ನಾನು ನಿಜಕ್ಕೂ ಧನ್ಯ. ನಿನಗೆ ಕೋಟಿ ಕೋಟಿ ನಮನ. ಬದುಕು ಸದಾ ನಿನಗೆ ಉಲ್ಲಾಸ ಮತ್ತು ಉತ್ಸಾಹವನ್ನು ತರಲಿ.
ನಿನ್ನ ಪ್ರೀತಿಯ
ಕೆಂಡಸಂಪಿಗೆ
ಈ ರೀತಿಯ ಪತ್ರಗಳು ನಿಮ್ಮ ಬದುಕಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಎತ್ತಿ ತೋರುತ್ತವೆ. ಜತೆಗೆ ಪತ್ರ ತಲುಪಿದಾಗ ಮತ್ತೊಬ್ಬರಿಗೆ ಆಗುವ ಆನಂದ ಅನಿರ್ವಚನೀಯ. ನಿಜಕ್ಕೂ ಅಂತಹ ಪತ್ರಗಳಲ್ಲಿ ಅಡಗಿರುವ ನಿಮ್ಮ ಪ್ರೀತಿ ಮತ್ತೊಬ್ಬರ ಮನಸ್ಸನ್ನು ಸರಾಗವಾಗಿ ಮುಟ್ಟುತ್ತದೆ ಅವರ ಹೃದಯವನ್ನು ತಟ್ಟುತ್ತವೆ.
ಮೂಲ: ರಿಚರ್ಡ್ ಕಾರ್ಲ್’ಸನ್
ಕನ್ನಡಕ್ಕೆ: ಎಸ್. ಉಮೇಶ್.
ಕೃಪೆ: ಕಸ್ತೂರಿ ಮಾಸ ಪತ್ರಿಕೆ ಹಳೆಯದೊಂದು ಸಂಚಿಕೆ
On world post day
ಕಾಮೆಂಟ್‌ಗಳು