ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತ ಕವಲಿ


ವಸಂತ ಕವಲಿ 


ನಾವು ಚಿಕ್ಕಂದಿನಲ್ಲಿ ರೇಡಿಯೋದಲ್ಲಿ ಪದೇ ಪದೇ  ಕೇಳುತ್ತಿದ್ದ ಮುದ ನೀಡುತ್ತಿದ್ದ ಸುಂದರ ಹೆಸರು ವಸಂತ ಕವಲಿ.   ಡಾ. ವಸಂತ ಕವಲಿ ಅವರು ನಾಟಕಕಾರರಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಗಳಾಗಿ, ಆಕಾಶವಾಣಿಯ ಕಲಾವಿದರಾಗಿ, ಕಾರ್ಯಕ್ರಮ ಸಂಯೋಜಕರಾಗಿ, ಕಾರ್ಯನಿರ್ವಾಹಕರಾಗಿ ಹೀಗೆ ಬಹುಮುಖಿ ಪ್ರತಿಭೆಯಾಗಿ ಪ್ರಸಿದ್ಧರು. 

ವಸಂತ ಕವಲಿಯವರು 1931ರ ಅಕ್ಟೊಬರ್ 12 ರಂದು ಬ್ಯಾಡಗಿಯಲ್ಲಿ ಜನಿಸಿದರು.  ತಂದೆ ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ. ತಾಯಿ ಗೌರಮ್ಮ.   ಪ್ರಾರಂಭಿಕ ಶಿಕ್ಷಣವನ್ನು ಹಾವೇರಿಯಲ್ಲಿ ಪೂರೈಸಿದ ವಸಂತ ಕವಲಿ  ಅವರು ಉನ್ನತ ಶಿಕ್ಷಣವನ್ನು  ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ  ಕೈಗೊಂಡರು.  ಕನ್ನಡ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಪದವಿ ಮತ್ತು ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದುದಲ್ಲದೆ 'ಬೂರ್ಝ್ವಾ ಟ್ರಾಜೆಡಿ’ ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗೌರವ ಪಡೆದರು.

ಉದ್ಯೋಗವನ್ನು ಅರಸಿ ಮುಂಬಯಿಗೆ ಬಂದ ವಸಂತ ಕವಲಿ  ಅವರು ಜೈಹಿಂದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ದುಡಿದರು.  ಆದರೆ ಮುಂದೆ ಅವರನ್ನು ಕೂಗಿ ಕರೆದದ್ದು ಆಕಾಶವಾಣಿ ಹುದ್ದೆ. ಬೆಂಗಳೂರು ಆಕಾಶವಾಣಿಯಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ ವಸಂತ ಕವಲಿ, ಭದ್ರಾವತಿಯ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾಗಿ ಸಹಾ ಸೇವೆ ಸಲ್ಲಿಸಿದವರು. 

ವಸಂತ ಕವಲಿ ಅವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಒಲವು. ಅದು ಅವರಿಗೆ ತಂದೆ ಪಂಡಿತ ಕವಲಿಯವರಿಂದ ಬಂದ ಬಳುವಳಿಯಾಗಿತ್ತು.  ಆಕಾಶವಾಣಿಯಲ್ಲಿ ನಟರಾಗಿ, ನಿರ್ದೇಶಕರಾಗಿ, ನಾಟಕ, ಸಾಹಿತ್ಯ ರಚನಕಾರರಾಗಿ ಬಹುಮುಖಿಯಾಗಿ ದುಡಿದರು.  

ವಸಂತ ಕವಲಿ ಅವರು ಹಲವಾರು ಏಕಾಂಕ ನಾಟಕಗಳು ಮತ್ತು ಮಕ್ಕಳ ಕೃತಿಗಳನ್ನು ಪ್ರಕಟಿಸಿದರು. ಅಲಂಕಾರ, ಕಣ್ವ ಕೇಶನ್, ಘನ ಆನಂದ, ತಾನಸೇನ, ಮದನಲಾಲ್  ಧಿಂಗ್ರ, ಕನ್ನಡದಲ್ಲಿ ಭಾಸನ ಸ್ವಪ್ನವಾಸವದತ್ತ ನಾಟಕ ‘ಕನಸಿನ ರಾಣಿ', 'ಎನ್ನ ಮುದ್ದಿನ ಮುದ್ದಣ' ಮುಂತಾದವು ಅವರ ನಾಟಕ ಕೃತಿಗಳು.   ಧೃತರಾಷ್ಟ್ರೇಯ ಎಂಬುದು ಒಂದು ರೂಪಕ.  'ಭಾರತೀಯ ಸಂಗೀತಕ್ಕೆ ಕರ್ನಾಟಕದ ಕೊಡುಗೆ' ಒಂದು ಸಂಕೀರ್ಣ ಕೃತಿ.  ಯೂರೋಪಿನಲ್ಲಿ ಪ್ರವಾಸ ಕೈಗೊಂಡು ಪ್ಯಾರಿಸಿನಲ್ಲಿ  ಸಂಗೀತ ಕಾರ‍್ಯಕ್ರಮ ಸಂಯೋಜಿಸಿದರಲ್ಲದೆ  ಈ ಮೂಸೆಯಲ್ಲಿ  'ರಾಗ-ತಾನ-ಸೇನ ನದಿಯ ದಡದಲ್ಲಿ' ಕೃತಿಯನ್ನೂ ಅರಳಿಸಿದರು. 

ವಸಂತ ಕವಲಿ ಅವರು ನಿರ್ದೇಶಿಸಿದ ನಾಟಕಗಳಲ್ಲಿ ಅರಿಶಿನ ಅಳಿಸಬೇಡಮ್ಮ, ಏಕಾಂತದ ಸುಖಕ್ಕೆ ಲೋಕಾಂತವದೇಕೆ, ಶಬ್ದಬ್ರಹ್ಮನ ಶಿರ ಹೋಯಿತ್ತು, ಖಂಡವಿದೆಕೋ ಮಾಂಸವಿದೆಕೋ, ನಂಬರು-ನೆಚ್ಚರು, ಜಗದ್ಗುರು ಬಾದಶಾ ಮುಂತಾದ ಅನೇಕವು ನಿರಂತರವಾಗಿ ಜನಮೆಚ್ಚುಗೆ ಪಡೆದಿದ್ದವು. ಸಂಸ್ಕೃತ ನಾಟಕಗಳನ್ನು ಸಂಸ್ಕೃತದಲ್ಲೇ ಪ್ರಸಾರ ಮಾಡಿದ  ಸಾಧನೆ ಕೂಡಾ ಅವರದ್ದಾಗಿತ್ತು.

ವಸಂತ ಕವಲಿ ಅವರ ಮತ್ತಷ್ಟು ಮಹತ್ವದ ಕೊಡುಗೆಗಳ ಬಗ್ಗೆ ಅವರ ಸಹೋದರಿ ಡಾ. ವಸುಂಧರ ಅವರು ಹೀಗೆ ಹೇಳುತ್ತಾರೆ: "ಕರ್ನಾಟಕಕ್ಕೆ ಅಣ್ಣ ಕೊಟ್ಟ ಮಹತ್ವದ ಇನ್ನೆರಡು ಕೊಡುಗೆಗಳೆಂದರೆ ಹಂಪೆಗೆ ಹೋಗಿ ವಿಠಲ ದೇವಲಯದಲ್ಲಿನ ಶಿಲಾಸ್ತಂಭಿಕೆಗಳಿಗೆ ಕೈಬೆರಳುಗಳಿಂದ ಮೃದುವಾಗಿ ಬಾರಿಸಿದರೆ ಸಂಗೀತಸ್ವರ ಸಿಗುತ್ತದೆಯೇ ವಿನಃ , ಕಲ್ಲು, ಕಲ್ಲು ಕಟ್ಟಿಗೆಗಳಿಂದಲ್ಲ ಎಂಬ ವಿಷಯವನ್ನು ಶಿಲಾತರಂಗ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಸಾರ ಮಾಡಿದರು.  ಅದನ್ನು ಕೇಳಿದ ಡಾ. ರಾವ್ ಅವರು ಕೂಡಲೆ ಎಎಸ್‌ಐ, ದೆಹಲಿ ಮುಖ್ಯ ಕಚೇರಿಗೆ ಕರೆ ಮಾಡಿ ವಿಜಯ ವಿಠಲ ದೇವಾಲಯದಲ್ಲಿ ಹಗಲೂ ರಾತ್ರಿ ಇಬ್ಬರು ಕಾವಲುಗಾರರು ದೇವಸ್ಥಾನದಲ್ಲಿರಬೇಕು ಮತ್ತು ಕಲ್ಲುಗಳಿಂದ ಅಥವಾ ಮರದಿಂದ ಕಂಬಗಳನ್ನು ಹೊಡೆಯುವುದನ್ನು ನಿಷೇಧಿಸಬೇಕು ಎಂದು ಆಜ್ಞೆ ಹೊರಡಿಸಿದರು.  ಎಎಸ್ಐನ ಅಂದಿನ ಡಿಜಿ ಡಾ. ಎಮ್. ಎನ್. ದೇಶಪಾಂಡೆ ಅವರು ತಕ್ಷಣವೇ ಆದೇಶಗಳನ್ನು ಹೊರಡಿಸಿದರು. ಹೀಗೆ ಅಣ್ಣ ಕರ್ನಾಟಕಕ್ಕೆ ಸೇವೆ ಸಲ್ಲಿಸಿದರು.
ಅವರ ಇನ್ನೊಂದು ಕೊಡುಗೆಯೆಂದರೆ ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತ ಹೇಗೆ ಜನಪ್ರಿಯವಾಯಿತು ಎಂಬುದರ ಕುರಿತು 'ಗಂಗಾಕಾವೇರಿ' ಕಾರ್ಯಕ್ರಮವನ್ನು ಪ್ರಸಾರ ಮಾಡಿದರು. ಅದ್ಭುತ ವಸ್ತು. ಕರ್ನಾಟಕದ ಎಲ್ಲ ಶ್ರೇಷ್ಠ ಸಂಗೀತಗಾರರೂ ಭಾಗವಹಿಸಿದ್ದರು. ಇದು ನೇರ ವೇದಿಕೆಯ ನಾಟಕವಾಗಿತ್ತು. ವಿದುಷಿ ಗಂಗೂಬಾಯಿ ಹನಗಲ್, ಪಂಡಿತ್ ಬಸವರಾಜ ರಾಜಗುರು, ರಾಮರಾವ್ ನಾಯಕ್, ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮುಂತಾದ ಹಿರಿಯ ಸಂಗೀತಗಾರರು ಪಾಲ್ಗೊಂಡಿದ್ದ ಈ ಕಾರ್ಯಕ್ರಮವು ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಅವರ ರಾಗ ಖೋಕರ್ ಮತ್ತು ಹರಿಹರನ ಪಂಪನಗರಿ ನಿವಾಸಜೇಯ -ಜಯರಾಗಳೆ ಗಾಯನದೊಂದಿಗೆ ಮುಕ್ತಾಯ ಕಂಡಿತು. ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತದ ಇಂತಹ ಯಶಸ್ಸಿಗೆ ಕಾರಣರಾದ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಗೌರವ ಸಲ್ಲಿಸಿದರು. ಅದು ನನ್ನ ವಸಂತಣ್ಣ ದಿ ಗ್ರೇಟ್. ವಸಂತಣ್ಣ ಚಿರಾಯುವಾಗಲಿ."

ಡಾ. ವಸಂತ ಕವಲಿ ಅವರು 1988 ವರ್ಷದ  ನವೆಂಬರ್ 17ರಂದು ಈ ಲೋಕವನ್ನಗಲಿದರು.

ಚಿತ್ರಕೃಪೆ: www.kamat.com

On the birth anniversary of playwright and broadcaster Dr. Vasantha Kavali 

ಕಾಮೆಂಟ್‌ಗಳು

  1. ನಾನು ಡಾ ವಸಂತ ಕವಲಿಯವರನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಮನೆಯ ರಸ್ತೆಯಲ್ಲೇ ಅವರು ವಾಸಿಸುತ್ತಿದ್ದರು ರಾಜಾಜಿನಗರ ಐದನೇ ಬ್ಲಾಕ್ ೬೮ನೇ ಅಡ್ಡರಸ್ತೆಯಲ್ಲಿ. ಹಿಂದೂಸ್ತಾನಿ ಸಂಗೀತದಲ್ಲಿ ಅವರ ಪ್ರೌಢಿಮೆ, ಹಾಗೂ ಸಂಸ್ಕೃತದಲ್ಲಿ ಕೂಡ. ಸಂಸ್ಕೃತ ಪಾಠ ಮಾಡುತ್ತಿದ್ದರು AIR ಬೆಂಗಳೂರಿನಲ್ಲಿ. ಅವರ ನಾಟಕಗಳು ಇಂದಿಗೂ ನನ್ನ ಹೃದಯದಲ್ಲಿ ತುಂಬಿದಂತಿದೆ. ಕಣ್ವಕೇಶನ್ (actually Convocation ನಿನ ತತ್ಸಮ), ಅಲ್ಲಾ ಮತ್ತು ಅಲ್ಲಮ, ಬಡೇ ಗುಲಾಂ ಅಲೀ ಖಾನ್ ರವರ ಬಗ್ಗೆ ರೂಪಕ, ಕಾರಂತರ ಮಹಾಸತಿ ಸರಸಮ್ಮ - ‘ಸರಸಮ್ಮನ ಸಮಾಧಿ’, ಇವೆಲ್ಲವೂ ಅಂದಿಗೆ ಬಹಳ ಜನಪ್ರಿಯವಾಗಿದ್ದಿತು. ಅವರು ಬಹಳ ಬುದ್ಧಿವಂತರು ಎಂದು ಎಲ್ಲರಿಗೂ ಗೊತ್ತಿತ್ತು, ಹೀಗಾಗಿ ಅವರ ಹತ್ತಿರ arguement ಮಾಡುವಾಗ ಬಹಳ ಹುಷಾರಾಗಿ ಮಾಡಬೇಕಿತ್ತು.ಅವರಿಗೆ ವಿಷಯ ಬಹಳ ಡೀಪ್ ಆಗಿ ತಿಳಿದಿತ್ತು. ಮುಂಬೈಯಲ್ಲಿ ಅವರು ಬಸವಣ್ಣನವರ ನಾಟಕ ಮಾಡಿಸಿದ್ದು ನನ್ನ ಅಣ್ಣ ಡಾ ಎಂಜಿ ನಾಗರಾಜ್ ರವರು ಅಲ್ಲಮಪ್ರಭುವಿನ ಪಾತ್ರ ಮಾಡಿದ್ದರು. ರಾಜೇಶ್ ಕೂಡ ಆ ನಾಟಕದಲ್ಲಿ ಪಾತ್ರ ಮಾಡಿದ್ದರು. ಪುರಂದರದಾಸರ ಬಗ್ಗೆಯೂ ರೂಪಕ ಮಾಡಿದ್ದರು. ಅವರ ಪತ್ನಿಯವರಾದ ಲಲಿತಾ ಗೌರಿ ಕವಲಿ ಯವರು ದಾಸರ ಪತ್ನಿ ಸರಸ್ವತಿಯ ಪಾತ್ರ ವಹಿಸಿದ್ದರು.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿತ್ತರ ವಾಯಿತು. ಕರ್ನಾಟಕ ಸಂಗೀತದಲ್ಲಿ ತಮಿಳುನಾಡಿನವರ ಪ್ರಾಬಲ್ಯವಿತ್ತು ಈಗಲೂ ಇರುವ ಹಾಗೆ. ಅವರ ಉಚ್ಚಾರಣೆ ಸರಿಯಾಗಿ ಮಾಡುತ್ತಿರಲಿಲ್ಲ ವಾದ್ದರಿಂದ ಇದೇನು ಕರ್ನಾಟಕ ಸಂಗೀತವೋ ಕೊಂಗಾಟಕಿ ಸಂಗೀತವೋ ಎಂದು ಹೇಳುತ್ತಿದ್ದುದು ನೆನಪಿದೆ !
    ಅವರ ಮನೆಗೆ ವಿ ಮಲ್ಲಿಕಾರ್ಜುನ ಮನಸೂರರು ಬೆಂಗಳೂರಿಗೆ ಬಂದಾಗ ಇಳಿದುಕೊಳ್ಳುತ್ತಿದ್ದರು. ನಾನು ನಿಮ್ಮ ಮನೆಯಲ್ಲಿ ಊಟ ಮಾಡಬೇಕಾದರೆ ತತ್ತಿ ತಿನ್ನಕೂಡದಪ್ಪಎಂದು ಹೇಳುತ್ತಿದ್ದರಂತೆ. ಬಹಳ ತಮಾಷೆ ಹಾಗೂ ವ್ಯಂಗ್ಯಪೂರಿತ ಹಾಸ್ಯ ಅವರ ಮಾತುಕತೆಯಲ್ಲಿ ಹಾಸುಹೊಕ್ಕಿತ್ತು. ನನ್ನಸಂಗೀತ ಗುರುಗಳಾದ ವಿ ಶಾರದಾ ವಿ ಶಚೀದೇವಿಯವರನ್ನೂ ಪುರಂದರದಾಸ ನಮನ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಒಳ್ಳೆಯ ಪಾಂಡಿತ್ಯ, ಜ್ಞಾನ, ವಿಮರ್ಶಾತ್ಮಕ ಮನೋಭಾವ ಇತ್ತು. ಹಿಂದೂಸ್ತಾನಿ ಸಂಗೀತ ಹಾಡಬೇಕಾದರೆ ತಮ್ಮನ್ನೇ ತುಂಬಾ ತೊಡಗಿಸಿಕೊಳ್ಳುತ್ತಿದ್ದರು. ಬಹಳ involve ಆಗುತ್ತಿದ್ದರು. ಅವರು ಹೋಗಿದ್ದು ನಮಗೆ ಗೊತ್ತೇ ಆಗಲಿಲ್ಲ.ಆಗ ನಾನು ಕ್ಯಾಲಿಫೋರ್ನಿಯಾದಲ್ಲಿದ್ದೆ. ಅವರೆಲ್ಲಿದ್ದರೂ ಅವರನ್ನು ನೆನೆಯುವ ಸಹೃದಯಿಗಳು ಇಂದಿಗೂ ಆ ರೇಡಿಯೋ ಕ್ರಾರ್ಯಕ್ರಮಗಳನ್ನು ಕೇಳಿರುವವರು ಇದ್ದಾರೆ.ಅದರಲ್ಲಿ ನಾನೂ ಸೇರಿದ್ದೇನೆಂಬ ಭಾವನೆಯಿಂದ ಈ ಪತ್ರ ಬರೆದಿದ್ದೇನೆ.
    Dr MG Chandrakanth, Director, ISED (Retd), Bangalore

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. nanu ade raste le idde sir.. from 1969 to 1974.... avara maney yedurige idde ramdas parichaya... kavali avara sodari.. vanamala...avara french husband...avara makkalu... avra pakkada maneli Mr.SaaThe anta iddru...

      ಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ