ಆನಿ ಬೆಸೆಂಟ್
ಆನಿ ಬೆಸೆಂಟ್
ಆನಿ ಬೆಸೆಂಟ್ ಸ್ವಾತಂತ್ರ್ಯಪೂರ್ವ ಭಾರತದ ಮಹತ್ವದ ವ್ಯಕ್ತಿಗಳಲ್ಲೊಬ್ಬರು. ಅಸಾಧಾರಣ ಪ್ರತಿಭಾವಂತರಾಗಿದ್ದ ಆಕೆ ದಿಟ್ಟತನ, ಸಂಘಟನಾ ಶಕ್ತಿ, ಬೆರಗುಗೊಳಿಸುವ ವಾಕ್ಪಟುತ್ವ ಇವೆಲ್ಲವನ್ನೂ ಹೊಂದಿ, ಭಾರತವನ್ನು ತಮ್ಮ ಮಾತೃಭೂಮಿಯನ್ನಾಗಿ ಮಾಡಿಕೊಂಡು, ಅದರ ಭವ್ಯಸಂಸ್ಕೃತಿಯ ಪುನರುಜ್ಜೀವನಕ್ಕೆ, ಭಾರತೀಯರ ದಾಸ್ಯವಿಮೋಚನೆಗೆ, ನಲವತ್ತು ವರ್ಷಕಾಲ ಅವಿಶ್ರಾಂತವಾಗಿ ದುಡಿದ ಐರಿಷ್ ಮಹಿಳೆ.
ಆನಿ ಬೆಸೆಂಟ್ 1847ರ ಅಕ್ಟೋಬರ್ 1ರಂದು ಲಂಡನ್ನಿನಲ್ಲಿ ಜನಿಸಿದರು. ಮನೆಯಲ್ಲೇ ವಿದ್ಯಾಶಿಕ್ಷಣವಾಯಿತು. ಫ್ರೆಂಚ್, ಜರ್ಮನ್ ಮುಂತಾದ ಭಾಷೆಗಳನ್ನೂ ಕಲಿತು, ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ಪಾಂಡಿತ್ಯವನ್ನೂ, ಅಸಾಧಾರಣ ಬುದ್ಧಿಶಕ್ತಿಯನ್ನೂ ಪಡೆದಿದ್ದರು. ಫ್ರಾಂಕ್ ಬೆಸೆಂಟ್ ಎಂಬವರೊಡನೆ ವಿವಾಹವಾಯಿತು. ಆತನೊಬ್ಬ ಆಂಗ್ಲಿಕನ್ ಕ್ರೈಸ್ತಪಾದ್ರಿ. ಮತ ವಿಷಯಗಳಲ್ಲಿ ಅಂಧ ಶ್ರದ್ಧೆಯನ್ನೊಪ್ಪದ ಆನಿ ಬೆಸೆಂಟರಿಗೆ ಗಂಡನ ಅಂಧಾಭಿಮಾನ ಬೇಸರ ತಂತು. ಇವರ ಮತಶ್ರದ್ಧೆಯೂ ಬದಲಾವಣೆ ಹೊಂದಿತು. ದೇವಾಸ್ತಿಕ್ಯವನ್ನೇ ನಂಬದೆ ನಿರೀಶ್ವರವಾದಿಯಾದರು. ಇದು 1873ರಲ್ಲಿ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗಂಡಿತು.
ಆನಿ ಬೆಸೆಂಟ್ ಮತಧರ್ಮಗಳ ವಿಷಯದಲ್ಲಿ ಸ್ವತಂತ್ರ ವಿಚಾರಿಯಾಗಿದ್ದ ಚಾರಲ್ಸ್‍ಬ್ರಾಡ್ಲ್ ಎಂಬುವರೊಂದಿಗೆ ಕೆಲಸಮಾಡಿ ಸಂತಾನನಿಯಂತ್ರಣ ಚಳವಳಿಯಲ್ಲಿ ಭಾಗವಹಿಸಿದರು. ಸಂತಾನ ದೈವದತ್ತವಾದದ್ದು, ಅದರ ನಿಯಂತ್ರಣ ದೈವದ್ರೋಹ ಎಂದು ನಂಬಿದ್ದ ಕ್ರೈಸ್ತ ಸನಾತನಿಗಳಿಗೆ ಈಕೆಯ ಚಟುವಟಿಕೆಗಳು ಅಸಹನೀಯವಾದುವು. ಈಕೆಗೆ ತುಂಬಾ ಕಿರುಕುಳ ಕೊಟ್ಟರು. ಇವರ ಮೇಲೆ ಕಾನೂನು ಕ್ರಮವೂ ಜರುಗಿ ತಪ್ಪಿತಸ್ಥರಲ್ಲವೆಂದು ತೀರ್ಮಾನವಾಯಿತು. ಈ ಕಾಲಕ್ಕಾಗಲೇ ತಮ್ಮ ಅಸಾಧಾರಣ ಬುದ್ಧಿಶಕ್ತಿ, ನಿರ್ವ್ರಾಜ್ಯ ಮನೋಭಾವ, ಮನಸೆಳೆಯುವ ವಾಕ್ಪಟುತ್ವ, ಸಂಘಟನಾಸಾಮರ್ಥ್ಯನ್ನು ಹೊಂದಿದ್ದ
ಇವರು ಜನಾನುರಾಗವನ್ನು ಸಂಪಾದಿಸಿದ್ದರು. ಇವರ ತೀವ್ರ ಸುಧಾರಣಾ (radical) ಧೋರಣೆ ಕೆಲಕಾಲ ಬರ್ನಾರ್ಡ್‍ಷಾರವರ ಸಂಪರ್ಕದಿಂದಾದ ಪರಿಣಾಮವಾಗಿ, ಯಾವ ಸುಧಾರಣೆಯಾಗಲಿ ಮಂದಗತಿಯಿಂದ ಸಾಗಬೇಕೆಂಬ ಫೇಬಿಯನ್ ಸಮಾಜವಾದದ ಕಡೆ ಒಲಿಯಿತು.
ಮುಂದೆ ಆನಿ ಬೆಸೆಂಟರಿಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿ, ಆಜನ್ಮಪರ್ಯಂತ ಅವುಗಳನ್ನು ಕಾರ್ಯಗತಗೊಳಿಸುವುದಕ್ಕೆ ಪ್ರೇರೇಪಿಸಿದ್ದು, 1889ರಲ್ಲಿ ಥಿಯಾಸಫಿಯ ಮೊದಲನೆಯ ಪ್ರವರ್ತಕರಾದ ಮೆಡಾಂ ಬ್ಲಾವಟ್ಸ್ಕಿ ಅವರೊಂದಿಗೆ ಒದಗಿದ ಸಂಪರ್ಕ. ಅತೀಂದ್ರಿಯ ಸಿದ್ಧಾಂತವನ್ನೊಳಗೊಂಡ ಬ್ಲಾವಟ್ಸ್ಕಿಯ ದಿ ಸೀಕ್ರೆಟ್ ಡಾಕ್ಟ್ರಿನ್ ಎಂಬ ಗ್ರಂಥದ ವಿಚಾರಸರಣಿಗೆ ಮನಸೋತು, ನಾಸ್ತಿಕಳಾಗಿದ್ದ ಆನಿ ಬೆಸೆಂಟ್ ಗಾಢಾನುರಕ್ತ ಆಸ್ತಿಕಳಾದರು. 1891ರಲ್ಲಿ ಬ್ಲಾವಟ್ಸ್ಕಿ ಕಾಲವಾದ ಮೇಲೆ ಬೆಸೆಂಟ್ ಥಿಯಾಸಾಫಿಕಲ್ ಸೊಸೈಟಿಯ ಮುಖಂಡತ್ವವನ್ನು ವಹಿಸಿಕೊಂಡು, ಆಧ್ಯಾತ್ಮಿಕತೆಯ ಜನ್ಮಭೂಮಿಯೆಂದು ತಿಳಿದಿದ್ದ ಭಾರತಕ್ಕೆ 1893ರಲ್ಲಿ ಬಂದರು.
1893ರಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಸಿದ್ಧಿ ತಂದ ಚಿಕಾಗೋದಾ ವಿಶ್ವಧರ್ಮ ಸಮ್ಮೇಳನದಲ್ಲಿ ಆನಿ ಬೆಸೆಂಟರು ಥಿಯಾಸಾಫಿಕಲ್ ಸೊಸೈಟಿಯ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಪೂರ್ವಜನ್ಮಗಳಲ್ಲಿ ತಾನು ಹಿಂದೂ ಆಗಿದ್ದೆನೆಂಬ ಭಾವನೆ ತಳೆದ ಆನಿ ಬೆಸೆಂಟರು, ಹಿಂದೂ ಧಾರ್ಮಿಕ ತತ್ವಗಳಲ್ಲಿ ಅಚಲವಿಶ್ವಾಸ, ನಂಬಿಕೆಗಳನ್ನು ಹೊಂದಿ, ಅವಕ್ಕೆ ಅನುಸಾರವಾಗಿ ಜೀವಿಸತೊಡಗಿದರು. ಪರದಾಸ್ಯ, ಅದರಿಂದ ಉಂಟಾಗಿದ್ದ ದಟ್ಟ ದಾರಿದ್ರ್ಯಗಳ ಪರಿಣಾಮವಾಗಿ ಭಾರತೀಯರಲ್ಲಿ ಬೆಳೆದುಬಂದಿದ್ದ ವಿಷಣ್ಣತೆ, ನಿರುತ್ಸಾಹಗಳನ್ನು ಹೋಗಲಾಡಿಸಿ, ಅವರು ತಮ್ಮ ಭವ್ಯಸಂಸ್ಕೃತಿಯ ಹಿರಿಮೆಯನ್ನರಿತು ಅದಕ್ಕನುಸಾರವಾದ ಹೊಸಹುಟ್ಟನ್ನು ರೂಪಿಸಿಕೊಂಡು, ಪ್ರಪಂಚಕ್ಕೆ ಮಾರ್ಗದರ್ಶಿಗಳಾಗುವಂತೆ ಮಾಡಬೇಕೆಂಬ ಉದ್ದೇಶದಿಂದ, ವಿದ್ವತ್‍ಪೂರ್ಣ ಗ್ರಂಥಗಳನ್ನು ಬರೆದರು. ದೇಶದ ನಾನಾ ಕಡೆ ಸಂಚರಿಸಿ ಭಾಷಣ ಮಾಡಿದರು. ಆಡ್ಯಾರಿನಲ್ಲಿ ತಾವೇ ಸ್ಥಾಪಿಸಿದ ಥಿಯಾಸಫಿ ಕೇಂದ್ರವನ್ನು ವಿದ್ವಾಂಸರ ವಿಚಾರವಿನಿಮಯ ಕ್ಷೇತ್ರವನ್ನಾಗಿ ಮಾಡಿದರು. ವಾರಣಾಸಿಯಲ್ಲಿ ಸೆಂಟ್ರಲ್ ಹಿಂದೂ ಕಾಲೇಜ್ ಎಂಬ ಉಚ್ಚಶಿಕ್ಷಣ ವಿದ್ಯಾಶಾಲೆಯನ್ನು ಸ್ಥಾಪಿಸಿದರು. ರಾಜಕೀಯ ಸ್ವಾತಂತ್ರ್ಯವಿಲ್ಲದೆ ಭಾರತೀಯ ಏಳಿಗೆ ಸಾಧ್ಯವಿಲ್ಲವೆಂಬುದನ್ನರಿತು, ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಹೊರಡಿಸಿ ಅದರಲ್ಲಿ ಪ್ರಚಾರ ನಡೆಸಿದರು. ಹೋಂ ರೂಲ್ ಚಳವಳಿ ಪ್ರಾರಂಭವಾಯಿತು. 1917ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಚುನಾಯಿತರಾದರು.
ಮುಂದೆ ಗಾಂಧೀಜಿಯವರು ಪ್ರಾರಂಭಿಸಿದ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಗಳ ಕುರಿತು ಆನಿ ಬೆಸೆಂಟರಿಗೆ ಒಲವಿರಲಿಲ್ಲ. ಅಶಿಕ್ಷಿತ ಜನರ ಕೈಯ್ಯಲ್ಲಿ ಆ ಚಳವಳಿಗಳಿಂದ ರಾಷ್ಟ್ರಘಾತಕ ಕೃತ್ಯಗಳು ನಡೆಯಬಹುದೆಂದು ಅವರು ವಾದಿಸಿದ್ದರು. ಇದರಿಂದ ರಾಜಕೀಯ ರಂಗದಲ್ಲಿ ಅವರ ಪ್ರಭಾವ ಕುಗ್ಗಿತು.
ಇವೆಲ್ಲದರ ನಡುವಸ ಆನಿ ಬೆಸೆಂಟರು ಪರಕೀಯರಾಗಿದ್ದೂ ಭಾರತೀಯ ಸಂಸ್ಕೃತಿಗೆ ನೀಡಿದ ಆದರ ಮತ್ತು ಭಾರತೀಯ ಸಮಾಜದ ಏಳಿಗೆಗೆ ನಡೆಸಿದ ಕಾರ್ಯಗಳು ಮಹತ್ವದ್ದಾಗಿವೆ.
ಆನಿ ಬೆಸೆಂಟರು 1933ರ ಸೆಪ್ಟೆಂಬರ್ 20ರಂದು ಚೆನ್ನೈನ ಆಡ್ಯಾರ್‍ನಲ್ಲಿ ನಿಧನರಾದರು.
On the birth anniversary of theosophist, writer and philanthropist Annie Besant
ಕಾಮೆಂಟ್‌ಗಳು