ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್‌. ಭೀಮಾಚಾರ್

ಎಲ್‌. ಭೀಮಾಚಾರ್‌ ನಮನ


ಮೋರ್ಚಿಂಗ್‌ “ಭೀಮ" ಎಂದೇ ಖ್ಯಾತರಾಗಿದ್ದು, ಮೋರ್ಚಿಂಗ್‌ನಲ್ಲಿ 'ಭೀಮ ಪ್ರತಿಭೆ' ಹೊಂದಿದ್ದ ವಿದ್ವಾನ್‌ ಎಲ್‌. ಭೀಮಾಚಾರ್‌ ಅವರು ನಿಧನರಾಗಿದ್ದಾರೆ. 

1931ರಲ್ಲಿ ಜನಿಸಿದ ಭೀಮಾಚಾರ್‌ ಅವರು ಚಿನಿವಾರ ಕೆಲಸದಲ್ಲಿ ತೊಡಗಿಕೊಂಡಿದ್ದರು. ತಾಯಿ ಬೆಂಗಳೂರಿನವರು, ತಂದೆಯ ಊರು ಶಿರಾ. ಇವರು ಒಂದೂವರೆ ವರ್ಷದ ಮಗುವಿದ್ದಾಗ ಮನೆಯಲ್ಲಿ ಬಹಳ ಕಷ್ಟ ಇತ್ತಂತೆ. ಹೀಗಾಗಿ ಇವರ ತಂದೆ ಬೆಂಗಳೂರಿಗೆ ಬಂದರು. ಇವರು ಮನೆ ಹತ್ತಿರದ ಮಕ್ಕಳ ಬಸವಣ್ಣ ಬೀದಿಯಲ್ಲಿರುವ ಮಾಡೆಲ್‌ ಸ್ಕೂಲ್‌ನಲ್ಲಿ ನಾಲ್ಕನೇ ಕ್ಲಾಸ್‌ವರೆಗೆ ಓದಿದರು. ಮುಂದೆ ಹೆಸರಾಂತ ಅಕ್ಕಸಾಲಿಗರಾದರು.  ನಗರ್ತಪೇಟೆಯ ಅವರ ಮನೆಯ ನೆಲಮಹಡಿಯಲ್ಲಿ ಆಗಿನಿಂದಲೂ ಚಿನ್ನದ ಅಂಗಡಿ ಇತ್ತು. ಹಿರಿಯ ವಯಸ್ಸಿನಲ್ಲೂ  ಕೈಲಾದ ಕೆಲಸಗಳನ್ನು ಮಾಡುತ್ತಿದ್ದರು.

ಭೀಮಾಚಾರ್ ಅವರಿಗೆ 13 ವರ್ಷ ಇರುವಾಗ ಸಂಗೀತ ಕಲಿಯಬೇಕು ಎಂಬ ಹುಚ್ಚು ಆರಂಭಗೊಂಡಿತು. ಒಂದು ದಿನ ಸಜ್ಜನ್‌ರಾವ್‌ ರಸ್ತೆಯ ಪಾರ್ಕ್‌ನಲ್ಲಿ ಯಾವುದೋ ಛತ್ರದಿಂದ ಮೈಕ್‌ನಲ್ಲಿ ಬರುತ್ತಿದ್ದ ಹಾಡನ್ನು ಕೇಳುತ್ತಾ ಕುಳಿತರು. ಸಂಗೀತ ಕಲಿಯಲೇಬೇಕು ಎಂದು ಅಂದೇ ಬಲವಾಗಿ ತೀರ್ಮಾನಿಸಿಬಿಟ್ಟರು. ತಮ್ಮಹದಿನೈದನೇ ವಯಸ್ಸಿಗೆ ಲಯವಾದ್ಯ ಕಲಿಯಲಾರಂಭಿಸಿದರು. ವಿದ್ವಾನ್‌ ಎಚ್‌. ಪುಟ್ಟಾಚಾರ್‌ ಅವರ ಬಳಿ ಗಾಯನ ಹಾಗೂ ಮೃದಂಗ ಕಲಿತು ಬಳಿಕ ಮೋರ್ಚಿಂಗ್‌ ಅಭ್ಯಾಸ ಮಾಡಿದರು.

ಭೀಮಾಚಾರ್  ಅವರು ತಾವು ಪುಟಾಣಿ ವಾದ್ಯ ಮೋರ್ಚಿಂಗ್‍ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದಷ್ಟೇ ಅಲ್ಲದೆ, ತಮ್ಮಮಕ್ಕಳಾದ ಧ್ರುವರಾಜ್‌, ರಾಜಶೇಖರ್‌ ಮತ್ತು ಭಾಗ್ಯಲಕ್ಷ್ಮಿ ಮೂವರನ್ನೂ ಲಯವಾದ್ಯದಲ್ಲಿ ಪರಿಣತರನ್ನಾಗಿಸಿದರು. ಸಿಕ್ಕಿದ ಅಲ್ಪ ಅವಧಿಯನ್ನು ಅತ್ಯಂತ ನವುರಾಗಿ ಬಳಸಿಕೊಂಡು ಕೇಳುಗರಲ್ಲಿ ಮೋರ್ಚಿಂಗ್‌ ನಾದದ ವಿಶಿಷ್ಟ ಅನುಭೂತಿ ಮೂಡಿಸುತ್ತಿದ್ದುದು  ಭೀಮಾಚಾರ್‌ ಅವರ ವಿಶೇಷತೆಯಾಗಿತ್ತು.

1952ರಿಂದ ಭೀಮಾಚಾರ್‌ ಮೋರ್ಚಿಂಗ್‌ ವಾದ್ಯ ನುಡಿಸಾಣಿಕೆಯಲ್ಲಿ ಗಟ್ಟಿಯಾಗಿ ನೆಲೆ ನಿಂತರು. ಪಿಟೀಲು ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಪಿ. ಭುವನೇಶ್ವರಯ್ಯ, ಲಾಲ್ಗುಡಿ ಜಯರಾಮನ್‌,
ಆರ್‌.ಕೆ.ಶ್ರೀಕಂಠನ್‌, ಬಾಲಮುರಳಿಕೃಷ್ಣ ಡಿ.ಕೆ. ಜಯರಾಮನ್‌, ವೀಣೆ ರಾಜಾರಾವ್‌, ಆರ್‌.ಕೆ.ಸೂರ್ಯನಾರಾಯಣ, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಟಿ.ವಿ. ಶಂಕರನಾರಾಯಣ ಸೇರಿದಂತೆ ಬಹುತೇಕ ಮಹಾನ್ ಸಂಗೀತ ದಿಗ್ಗಜರಿಗೆ ಮೋರ್ಚಿಂಗ್‌ ವಾದ್ಯ ಸಹಕಾರ ನೀಡಿದ ಹೆಗ್ಗಳಿಕೆ ಇವರದಾಗಿತ್ತು.

ಲಯವಾದ್ಯ ಪ್ರವೀಣ, ಮೋರ್ಚಿಂಗ್‌ ತರಂಗ್‌ಭೂಷಣ, ಮೋರ್ಚಿಂಗ್‌ ಎಂಪರರ್‌, ಲಯವಾದ್ಯ ಕಲಾನಿಧಿ, ಲಯವಾದ್ಯ ಕಲಾರತ್ನ, ಕರ್ನಾಟಕ ಕಲಾಶ್ರೀ, ಪುರಂದರ ವಿಠಲ ಪ್ರಶಸ್ತಿ, ಗಾನಕಲಾಭೂಷಣ ಬಿರುದು, ಲಯವಾದ್ಯ ನಿಪುಣ, ಕರ್ನಾಟಕ ಸರ್ಕಾರದ ಟಿ. ಚೌಡಯ್ಯ ಪ್ರಶಸ್ತಿ, ಮಲ್ಲೇಶ್ವರದ ನಾದಜ್ಯೋತಿ ಸಂಗೀತ ಸಭಾದ ಜೀವಮಾನ ಸಾಧನೆ ಗೌರವ, ಕಾಂಚನಶ್ರೀ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿದ್ದವು.

ವಿದ್ವಾನ್ ಭೀಮಾಚಾರ್ ಅವರು 2024ರ ಅಕ್ಟೋಬರ್ 1ರಂದು ತಮ್ಮ 94ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.

Respects to departed soul Great Morsing Specialist Vidwan L. Bheemachar 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ