ಬೊಂಬೆ ಹಬ್ಬ
ದಸರಾ ಬೊಂಬೆ ಹಬ್ಬದ ಸವಿನೆನಪು
Childhood memories of Dassara festival
ನಮಗೆ ಚಿಕ್ಕಂದಿನಿಂದ ದಸರಾ ಅಂದರೆ, ನಮ್ಮ ಆತ್ಮೀಯ ಬೊಂಬೆಗಳನ್ನು ಎದುರು ನೋಡುವ ಒಂದು ಹಬ್ಬ. ರಾಮಾಯಣದಲ್ಲಿ, ಕುಂಭಕರ್ಣ 6 ತಿಂಗಳು ಮಲಗಿ ಒಂದು ದಿನ ಎದ್ದರೆ, ನಮ್ಮ ಮನೆಗಳಲ್ಲಿ ವರ್ಷವೆಲ್ಲ ಪೆಟ್ಟಿಗೆಗಳಲ್ಲಿ ನಿದ್ರಿಸಿ ವರ್ಷಕ್ಕೆ ದಸರೆಯ ಹಬ್ಬದ ದಿನಕ್ಕೆ 3 ನಾಲ್ಕು ದಿನಕ್ಕೆ ಮುಂಚೆ ಈ ಬೊಂಬೆಗಳು ಎದ್ದು ನಮ್ಮೊಡನಿರಲು ಬರುತ್ತಿದ್ದವು.
ಹಿತ್ತಾಳೆ ಬೊಂಬೆಗಳು ನೀರಿನಲ್ಲಿ ಹುಣಿಸೆಹಣ್ಣು, ಸೀಗೆ ಪುಡಿಗಳಲ್ಲಿ ಅಭ್ಯಂಜನ ಪಡೆದು ತಮ್ಮ ಕೊಳೆಗಳನ್ನು ಕಳೆದುಕೊಳ್ಳಲು ತೊಡಗುತ್ತಿದ್ದವು. ಮರದ ಬೊಂಬೆಗಳು ಹಲವು ಬಣ್ಣದ ತೆಳು ಕಾಗದಗಳಲ್ಲಿನ ವಸ್ತ್ರಗಳಿಗಾಗಿ ಕಾದು ನಿಲ್ಲುತ್ತಿದ್ದವು. ಅವುಗಳಲ್ಲಿ ಪ್ರಮುಖವಾದವು ವಿವಿಧ ಎತ್ತರಗಳ ಹಲವು ಜೋಡಿ ರಾಜಾ ರಾಣಿ ಬೊಂಬೆಗಳು. ಜೊತೆಗೆ ರಾಮ, ಸೀತೆ, ಲಕ್ಷ್ಮಣ, ಅಂಜನೇಯ ಮರದ ಬೊಂಬೆಗಳು ಸರ್ವೇ ಸಾಧಾರಣವಾಗಿರುತ್ತಿದ್ದವು. ಈ ಬೊಂಬೆಗಳನ್ನು ಮದುವೆ ಸಮಯದಲ್ಲಿ ನಮ್ಮಮ್ಮ ಕೊಟ್ಟರು ಅಂತಲೋ, ತಿರುಪತಿಗೆ ಹೋದಾಗ ಕೊಂಡುತಂದೆ ಅಂತಲೋ ಹೆಮ್ಮೆಯಿಂದ ಮನೆಯ ಅಮ್ಮಂದಿರು ಹೇಳುವುದು ಸಾಮಾನ್ಯವಾಗಿತ್ತು.
ಇನ್ನು ಮಣ್ಣಿನ ಬೊಂಬೆಗಳು. ದೊಡ್ಡ, ದೊಡ್ಡ, ರಾಮಾಯಣದ ಪಾತ್ರಗಳು, ಕೃಷ್ಣ, ಲಕ್ಷ್ಮಿ, ಸರಸ್ವತಿ, ಶಿವ, ಪಾರ್ವತಿ, ಶ್ರೀನಿವಾಸ, ಪದ್ಮಾವತಿ ಇವುಗಳಿಗೆಲ್ಲ ಬಣ್ಣ ಹಾಕಲಿಕ್ಕೆಂದು ಚಿತ್ರಕಾರರು ಮನೆಗೆ ಬಂದು ಒಂದು ದಿನ ಪೂರ್ತಿ ಕೆಲಸ ಮಾಡುತ್ತಿದ್ದರು. ಅವರು ತೆಗೆದು ಕೊಳ್ಳುತ್ತಿದ್ದ ಹಣ ಕೂಡ ಸಾಧಾರಣ ಮೊತ್ತವಾಗಿರುತ್ತಿದ್ದುದರಿಂದ ಅದೊಂದು ನಮ್ಮ ಬಡತನಕ್ಕೆ ಭಾರ ಎನಿಸುವ ಭಾವ, ಉಳಿದದ್ದಕ್ಕೆ ಯೋಚಿಸಬೇಕಿದ್ದ ನಮ್ಮ ತಂದೆ ತಾಯಿಗಳಿಗೆ ಇರುತ್ತಿರಲಿಲ್ಲ. ಬಹುಶಃ ಬೊಂಬೆಗಳ ಮೇಲೆ ಅಂತಹ ಅದಮ್ಯ ಪ್ರೀತಿ ಕೂಡ ಅವರಲ್ಲಿ ಅಷ್ಟೊಂದು ಮನೆ ಮಾಡಿತ್ತು ಎನಿಸುತ್ತೆ. ಇನ್ನು ಪುಟ್ಟ ಬೊಂಬೆಗಳಾದ ಜೋಡಿ ಆನೆ, ಕುದುರೆ, ಒಂಟೆ, ಕೋತಿ, ಡುಮ್ಮಣ್ಣ ಹೊಟ್ಟೆಯ ಅಜ್ಜ, ಅಜ್ಜಿ ಇವೆಲ್ಲ, ಹಳೆಯದರ ಜೊತೆಗೆ ಮನೆ ಮುಂದೆ ಮಾರಲು ಬರುತ್ತಿದ್ದವರ ಬಳಿ ಹೊಸದಾಗಿ ಕೊಂಡವುಗಳ ಜೊತೆ ಸೇರಿಕೊಂಡು ಹಳತು ಹೊಸತು ಎಂಬ ಭೇದವಿಲ್ಲದೆ ವೈವಿಧ್ಯತೆಯನ್ನು ಕೂಡಿಸುತ್ತಿದ್ದವು.
ಆ ಬೊಂಬೆಗಳನ್ನು ಇಡುವ ವ್ಯವಸ್ಥೆ ಸಹಾ ವಿಶೇಷವಾದದ್ದು. ಮನೆಯಲ್ಲಿ ಒಂದಿಷ್ಟು ಜಾಗ ಹೆಚ್ಚಿದ್ದರೆ, ಬೊಂಬೆ ಇಡುವ ಜಾಗ ಒಂದು ಪೂರ್ತಿ ಕೋಣೆಯನ್ನೋ, ಇಲ್ಲ ಕಡೇ ಪಕ್ಷ ಮನೆಯ ಹಜಾರದ ಗಣನೀಯ ಪ್ರಮಾಣದ ಜಾಗವನ್ನು ಮೀಸಲು ಪಡೆಯುತ್ತಿತ್ತು. ಬೊಂಬೆಗಳು ವರ್ಷವಿಡೀ ಮಲಗುತ್ತಿದ್ದ ಮರದ, ಇಲ್ಲವೆ ಕಬ್ಬಿಣದ ಮತ್ತು ನಾವು ಅಪರೂಪಕ್ಕೊಮ್ಮೆ ಊರಿಗೆ ಹೋಗುವಾಗ ಬಟ್ಟೆಗಳನ್ನು ಕೊಂಡೊಯ್ಯಲು ಉಪಯೋಗಿಸುತ್ತಿದ್ದ ತಗಡು ಪೆಟ್ಟಿಗೆಗಳು, ಹಲವು ಮೇಜು, ಸಣ್ಣ ಮೇಜು, ಟೀಪಾಯಿ ಮುಂತಾದವುಗಳ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ಕೂತು ಬೊಂಬೆಗಳಿಗೆ ಆಸನಗಳಾಗುತ್ತಿದ್ದವು. ಅವುಗಳ ಮೇಲೆ ಹಳೆಯ ಪಂಚೆ, ಸೀರೆಗಳು ಎಲ್ಲೂ ತೇಪೆ ಕಾಣದ ಹಾಗೆ ಮತ್ತು ಪೆಟ್ಟಿಗೆ ಮೇಜುಗಳ ನಿಜ ಸ್ಥಿತಿ ಕಾಣದ ಹಾಗೆ ಮುಚ್ಚುತ್ತಿದ್ದವು. ನಂತರದಲ್ಲಿ ಅದು ಇಲ್ಲಿರಬೇಕು, ಇದು ಅಲ್ಲಿರಬೇಕು ಎಂದು ಎಷ್ಟು ಅದಲು ಬದಲಿಸಿದರೂ ತೃಪ್ತಿ ಇರುತ್ತಿರಲಿಲ್ಲ. ಅದೂ ಅಲ್ಲದೆ ಅವಕ್ಕೆಲ್ಲ ನಾವು ಮಾತ್ರವಲ್ಲದೆ ಉಳಿದ ನಮ್ಮ ಅಣ್ಣ, ಅಕ್ಕ, ತಮ್ಮ, ತಂಗಿಯರು ಸಾಕಷ್ಟು ಇರುತ್ತಿದ್ದುದರಿಂದ ಸಣ್ಣ ಪುಟ್ಟ ವ್ಯಾಜ್ಯ ಅಸಮಾಧಾನಗಳೂ ನಮ್ಮಲ್ಲಿ ಸಾಮಾನ್ಯವಾಗಿರುತ್ತಿತ್ತು. ಕೆಲವೊಮ್ಮೆ ಒಬ್ಬರು ಮಲಗಿದ ಮೇಲೆ ಇನ್ನೊಬ್ಬರು ಅಥವ ಒಬ್ಬರು ಏಳುವ ಮುಂಚೆ ಮತ್ತೊಬ್ಬರು ಎಂದು ಸಿಕ್ಕ ಸಮಯದಲ್ಲೇ ನಮಗಿಷ್ಟವಾದ ರೀತಿ ವ್ಯವಸ್ಥೆಗಳನ್ನು ಸೃಷ್ಟಿಸಿ ಸಾಧ್ಯವಾದ ಸಮಯದಲ್ಲೇ ಸಂತೋಷಿಸುತ್ತಿದ್ದೆವು. ನೋಡಿ, ಮೊದಲ ದಿನ ಹಬ್ಬದ ದಿನ ಆರತಿ ಆದ ಮೇಲೆ ಅವನ್ನೆಲ್ಲ ಮುಟ್ಟುವ ಹಾಗಿಲ್ಲ ಎಂಬ ಹಿರಿಯರ ತಾಕೀತು, ದೇವರ ಕುರಿತಾದ ಭಯ ಇದ್ದದ್ದರಿಂದ ಒಂದಷ್ಟು ಸಂಯಮ ಇದ್ದರೂ ಏನೋ ಒಂದಿಷ್ಟಾದರೂ ಅದಲು ಬದಲು ಕೆಲಸ ನಡೆಯುತ್ತಿತ್ತು. ಜೊತೆಗೆ ನಾವು ಕೂಡ ಒಂದೋ ಎರಡೋ ಪುಟ್ಟ ಬೊಂಬೆಗಳನ್ನು ನಮ್ಮ ಆಟಕ್ಕೆಂದು ಅಪ್ಪ ಅಮ್ಮಂದಿರನ್ನು ಪುಸಲಾಯಿಸಿ ಕೊಳ್ಳುತ್ತಿದ್ದೆವು. ಅವುಗಳನ್ನೂ ಬೇಕಿನಿಸಿದಾಗ ತೆಗೆಯುವುದು, ಇಡುವುದು ಮಾಡುತ್ತಿದ್ದೆವು.
ಹೀಗೆ ಬೊಂಬೆಗಳ ಒಡ್ಡೋಲಗ ಸಿದ್ಧವಾದ ಮೇಲೆ ಹತ್ತು ದಿನಗಳ ಸಂಭ್ರಮ ಹೇಳತೀರದು. ನಮಗಾಗಿ ಮೀಸಲಿಟ್ಟ ಒಂದೊಂದು ಅಲಂಕರಿಸಿದ ಬೊಂಬೆಯನ್ನು ಗೊತ್ತಿರುವ ಮನೆಗಳಿಗೆ ಉತ್ಸವ ಮೂರ್ತಿಯಾಗಿಸಿ ನಮ್ಮ ಕಹಳೆ ಪ್ರಾರಂಭವಾಗುತ್ತಿತ್ತು. ಮನೆಯಲ್ಲಿ ಒಂದು ದಿನ ಬೋಂಡಾ, ಆಂಬೊಡೆ, ಕೋಡುಬಳೆ, ಚಕ್ಕಲಿ, ನಿಪ್ಪಿಟ್ಟು, ಸಣ್ಣ, ಸಣ್ಣ ಸಿಹಿ ಉಂಡೆ, ಪೊಟ್ಟಣವಾಗಿಸಿದ ಸಿಹಿ ಕಡಲೇ ಹಿಟ್ಟು, ಕೊಬ್ಬರೀ ಸಕ್ಕರೆ, ಏನೂ ಇಲ್ಲ ಅಂದ್ರೆ ಅಂಗಡಿಯಲ್ಲಿ ಸಿಗುವ ನಮ್ಮ ಘನತೆಗೆ ಕುಂದು ಬರದಂತೆ ಅತೀ ಚಿಕ್ಕದೂ ಅಲ್ಲದ ದೊಡ್ಡದೂ ಅಲ್ಲದ ಬಿಸ್ಕತ್ತು ಇತ್ಯಾದಿ ಚರ್ಪುಗಳು ಸಂಜೆ ಆದರೆ ಸಿದ್ಧಗೊಳ್ಳಬೇಕಿತ್ತು. ಸಾಮಾನ್ಯವಾಗಿ ನಾವು ಮಕ್ಕಳಾಗಿದ್ದಾಗ ನಮ್ಮನ್ನು ಕರೆಯುತ್ತಿದ್ದರೋ ಅಥವ ಬೊಂಬೆ ಇಟ್ಟಿದ್ದಾರೆ ಅಂದರೆ ಕರೆದಿದ್ದಾರೆ ಎಂದರ್ಥ ಎಂತಲೋ ಗೊತ್ತಿರುವ ಮನೆಗೆಲ್ಲ ಗಂಡು ಮಕ್ಕಳು, ಹೆಣ್ಣು ಮಕ್ಕಳು ಎಂಬ ಭೇದವಿಲ್ಲದೆ ನುಗ್ಗಿ, ಚರ್ಪು ಸಿಗುವವರೆಗೆ ಗೊತ್ತಿರುವ ಪದ್ಯವನ್ನೊ, ಯಾವುದೋ ಪದವನ್ನೋ ನಮಗೆ ಗೊತ್ತಿರುವ ರಾಗದಲ್ಲಿ ಹಾಡಿ ಅಥವಾ ಹಾಡುವವರ ಹಿಂದೆ ಕೂತು, ತಿಂದು, ಚೆಲ್ಲಿ, ಉಂಡಾಡಿ ಗುಂಡರಂತೆ ಅಲೆಯುತ್ತಿದ್ದೆವು.
ಇನ್ನೊಂದು ಮುಖ್ಯ ವಿಚಾರವೆಂದರೆ ನಮ್ಮ ಬಾಲ್ಯದ ಬದುಕೆಲ್ಲ ಹಲವು ಮನೆಗಳ ವಠಾರದ ವ್ಯವಸ್ಥೆಗಳಲ್ಲಿ ಇರುತ್ತಿದ್ದುದರಿಂದ ಹಾಗೂ ಅದಕ್ಕೂ ಮೀರಿದಂತೆ ಬೀದಿ ಬೀದಿಗಳ ಜನರು, ಮಕ್ಕಳು ಮತ್ತು ಕುಟುಂಬಗಳು ಎಲ್ಲರೂ ಒಬ್ಬರಿಗೊಬ್ಬರಿಗೆ ಗೊತ್ತಿರುವ ಪ್ರೀತಿ ಭಾವದಲ್ಲಿ ಬದುಕುತ್ತಿದ್ದುದರಿಂದ ನಮ್ಮ ಮಕ್ಕಳ ಆತ್ಮೀಯ ಕಪಿ ಸೈನ್ಯ ಸಾಕಷ್ಟು ದೊಡ್ದದಾಗೇ ಇರುತ್ತಿದ್ದವು.
ಕೆಲವು ಮನೆಗಳಲ್ಲಿ ದೊಡ್ಡ ಬೊಂಬೆಗಳಿಗೆ ದಿನಕ್ಕೊಂದು ಶ್ರೀಮಂತ ಅಲಂಕಾರ ಕೂಡ ಇರುತ್ತಿತ್ತು. ಅಂದಿನ ದೇವಸ್ಥಾನಗಳಲ್ಲಿ ಕೂಡ ದೇವರ ಚಿತ್ರ ಬಿಡಿಸುವ, ರಂಗೋಲಿ ಬಿಡಿಸುವ ಕಲಾ ಪ್ರದರ್ಶನ ಸ್ಪರ್ಧೆಗಳಿರುತ್ತಿದ್ದವು. ಮನೆಗಳಲ್ಲೂ ದೇವರ ಚಿತ್ರ ಬಿಡಿಸಿ ಬಣ್ಣ ತುಂಬಿ ಕಲೆಗಾರಿಕೆ ಮೆರೆಯುತ್ತಿದುದೂ ಇತ್ತು.
ಹತ್ತು ದಿನಗಳ ಬೊಂಬೆ ಹಬ್ಬದ ಮಧ್ಯದ ಘಟ್ಟವಾದ ಸರಸ್ವತಿ ಪೂಜೆ ನಮಗೆಲ್ಲ ತುಂಬಾ ಇಷ್ಟವಾದದ್ದು. ಕಾರಣ ನಮ್ಮ ಪುಸ್ತಕವನ್ನೆಲ್ಲ ದೇವರ ಬದಿ ಇಟ್ಟು, ಓದುವುದರಿಂದ ಬಿಡುಗಡೆಗೆ ಪರವಾನಗಿ ಪಡೆಯುವ ವಿಶೇಷ ಸಮಯವದು. ಇನ್ನೇನು ಆಯುಧ ಪೂಜೆ ಬಂತು ಅಂದರೆ ಮನೆಯಲ್ಲಿರುವ ಸೂಜಿ, ದಬ್ಬಳ, ಚಾಕು, ಕತ್ತರಿ, ರೇಡಿಯೋ, ಮತ್ತು ಮನೆಯಲ್ಲಿರುವುದಕ್ಕೆಲ್ಲ ಕುಂಕುಮ, ಹೂವು ಇಟ್ಟು, ಕಡಲೆ ಪುರಿ ತಿಂದು ಊರಲ್ಲೆಲ್ಲ ಚೆಲ್ಲಾಡಿ ಅಲೆದಾಡುತ್ತಲೇ, ಅಯ್ಯೋ ಮುಗಿದು ಹೋಗುತ್ತಿದೆಯಲ್ಲ ಹಬ್ಬ ಎಂಬ ಆಂತರಿಕ ಬೇಸರ ಕೂಡ ನಿಧಾನವಾಗಿ ದುಃಖ ಮೂಡಿಸಲು ಪ್ರಾರಂಭಿಸುತ್ತಿದ್ದವು. ವಿಜಯ ದಶಮಿ ದಿನ ಹಬ್ಬದ ಊಟ ಆಗಿ, ದಸರಾ ಮೆರವಣಿಗೆ ನೋಡಿ ಬಂದು ರಾತ್ರಿ ಸಾಧ್ಯವಾದ ಬೊಂಬೆಗಳಿಗೆ ಮಲಗಿಸುವ ವ್ಯವಸ್ಥೆ ಮಾಡುತ್ತಿದ್ದೆವು.
ಹತ್ತು ದಿನಗಳು ಮುಗಿದು ಮತ್ತೊಮ್ಮೆ ನಿಧಾನವಾಗಿ ಬೊಂಬೆಗಳು ನಮ್ಮ ಹೃದಯದೊಳಗಿನ ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದೇ ಮುಗುಳು ನಗೆಯಿಂದ ಪೆಟ್ಟಿಗೆಯಲ್ಲಿ ಮಲಗುತ್ತಿದ್ದವು. ಅವೆಲ್ಲ ನಮ್ಮನ್ನೇ ನೋಡುತ್ತಿವೆಯೇನೋ ಎಂಬ ಪ್ರೇಮ ಭಾವ ನಮ್ಮೊಳಗೆ. ಅವುಗಳಿಗೆ ಪೆಟ್ಟಾಗದಂತೆ ಮೃದುವಾದ ಬಟ್ಟೆಗಳ ಮೆತ್ತನೆ ಇದೆಯೇ ಎಂದು ಪೂರ್ತಿ ಖಾತರಿ ಮಾಡಿಕೊಂಡು, ಆ ಪೆಟ್ಟಿಗೆಗಳನ್ನು ಮುಚ್ಚಿದ ನಂತರವೇ ಅಲ್ಲಿಂದ ಕಾಲ್ತೆಗೆಯುತ್ತಿದ್ದುದು.
ಅಯ್ಯೋ ಎಲ್ಲ ಸಂತೋಷ ಇಷ್ಟು ಬೇಗ ಹೊರಟು ಹೋಯಿತಲ್ಲ ಎಂದು ಬೇಸರದಲ್ಲಿ, ಆ ಬೇಸರಕ್ಕೆ ಸಾಂತ್ವನ ಹುಡುಕುತ್ತ ಹೊರಗೆ ಹೊರಡುವ ಎಂದುಕೊಳ್ಳುತ್ತಿರುವಾಗಲೇ ಅಮ್ಮನ ಕೂಗು – “ಹದಿನೈದು ದಿನ ಓದೆಲ್ಲ ಮಣ್ಣು ಹುಯ್ಕೊಂಡು ಹೋಯ್ತು, ತೆಗೆಯೋ ಪುಸ್ತಕಾನ!”. ಅಯ್ಯೋ, ವರ್ಷ ಇಡೀ ದಸರಾ, ಸರಸ್ವತಿ ಪೂಜೇನೆ ಇದ್ದಿದ್ರೆ ಅಂತ ಅನ್ಸಿದ್ರೆ ತಪ್ಪಿಲ್ಲ ಅಲ್ವ?
ಆದರೆ ಇದೆಲ್ಲ ನಮ್ಮ ಮಕ್ಕಳಿಗೆ ಸಿಗುವ ಹಾಗಾಗಲಿಲ್ಲ ಎಂಬ ಕೊರೆ ಕಾಡುತ್ತದೆ. ಅವರಿಗೆ ಕೇಳುವುದಕ್ಕೆ ಮುಂಚೆ ಬೊಂಬೆ, ವಿಡಿಯೋ ಗೇಮ್ಸ್, ಸಾಕು ಬೇಕಾಗಿ ಎಸೆಯುವಷ್ಟು ಆಟದ ಸಾಮಾನುಗಳು, ತಿನ್ನುವ ವೈವಿಧ್ಯಮಯ ಪದಾರ್ಥಗಳನ್ನೇನೋ ಕೊಡುತ್ತಿದ್ದೇವೆ. ಆದರೆ, ಆ ಸೊಬಗಿನ ಅನುಭಾವ ನಾವವರಿಗೆ ಉಳಿಸಿದ್ದೇವೆ ಅನಿಸುತ್ತಿಲ್ಲ. ಇನ್ನೊಂದು ರೀತಿಯಲ್ಲಿ, ಎಲ್ಲವೂ ಪ್ರತಿನಿತ್ಯ ಬೇಕೆಂದಾಗ ಸಿಗುವ ನಮ್ಮ ಮಕ್ಕಳಿಗೆ ನಾವೇನು ಕೊಟ್ಟರೂ ವಿಶೇಷ ಎನಿಸುವುದೇ ಇಲ್ಲ!
ಬದುಕಿನಲ್ಲಿ ಎಲ್ಲ ರೀತಿಯ ಸೊಬಗುಗಳು ಮೂಡಲಿ. ಬೊಂಬೆ ಹಬ್ಬ, ದಸರಾ ಹಬ್ಬ ಎಲ್ಲರಿಗೂ ಶುಭ ತರಲಿ.
Photo: At Ramsons Art Gallery, Mysore
ಕಾಮೆಂಟ್‌ಗಳು