ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈ. ಕೆ. ಸಂಧ್ಯಾ ಶರ್ಮ



 ವೈ.ಕೆ. ಸಂಧ್ಯಾ ಶರ್ಮ


ವೈ.ಕೆ. ಸಂಧ್ಯಾ ಶರ್ಮ ಅವರು ಕನ್ನಡ ಸಾರಸ್ವತ ಲೋಕದ ಖ್ಯಾತ ಲೇಖಕಿ.  ಕಥೆಗಾರ್ತಿಯಾಗಿ, ರಂಗಕರ್ಮಿಯಾಗಿ, ಅಂಕಣಕಾರ್ತಿಯಾಗಿ,  ಪತ್ರಕರ್ತೆಯಾಗಿ ಮತ್ತು  ನೃತ್ಯ-ನಾಟಕಗಳ ವಿಮರ್ಶಕಿಯಾಗಿ... ಹೀಗೆ ಬಹುಮುಖಿ ಸಾಧಕಿಯಾಗಿ ಹೆಸರಾಗಿದ್ದಾರೆ. 

ಸಂಧ್ಯಾ ಅವರು ವಿಜಯದಶಮಿಯಂದು ಸಂಧ್ಯಾಕಾಲದಲ್ಲಿ ಬೆಂಗಳೂರಿನಲ್ಲಿ ಜನಿಸಿದರು.  ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಗಲವಾಡಿ ಸಂಧ್ಯಾ ಅವರ ಹಿರಿಯರ ಮೂಲಸ್ಥಳ.  ತಂದೆ ವೈ.ಕೆ.ಕೇಶವಮೂರ್ತಿ ಆಗಿನ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಧಾನ ಇಂಜಿನಿಯರಾಗಿದ್ದವರು. ತಾಯಿ ಅಂಬಾಬಾಯಿ.  ಸಂಧ್ಯಾ ಅವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಬಿ.ಎ.ಆನರ್ಸ್ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಎಂ.ಎ. ಪದವಿಗಳನ್ನು ಡಿಸ್ಟಿಂಕ್ಷನ್ ಸಾಧನೆಯಲ್ಲಿ ಪಡೆದ ಪ್ರತಿಭಾವಂತರು. 

ಪ್ರಜಾಮತ, ಪ್ರಜಾಪ್ರಭುತ್ವ ಮತ್ತು ಇಂಚರ ಪತ್ರಿಕೆಗಳಲ್ಲಿ  ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ ಸಂಧ್ಯಾ ಶರ್ಮ ಅವರು ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. 

ಬಾಲ್ಯದಲ್ಲಿ  ಕುಚಿಪುಡಿ ನೃತ್ಯ ಕಲಿತ ಸಂಧ್ಯಾ ಅವರು ‘’ಪ್ರಭಾತ್ ಕಲಾವಿದರು’’ ಕಲಾತಂಡ ಪ್ರದರ್ಶಿಸಿದ ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿದ್ದರು. ಅವರು 8ನೇ ತರಗತಿಯಲ್ಲಿದ್ದಾಗಲೇ ನಾಟಕ ರಚನೆಯ ಮೂಲಕ ಬರವಣಿಗೆಯನ್ನು ಆರಂಭಿಸಿದರು. ಈ ಸಾರಸ್ವತ ಲೋಕದ ಪಯಣ ಹಲವು ದಶಕಗಳನ್ನು ದಾಟಿ ನಿರಂತರವಾಗಿ ಪ್ರವಹಿಸುತ್ತ ಬಂದಿದೆ. 

ಸಂಧ್ಯಾ ಅವರು ಶಾಲಾದಿನಗಳಿಂದಲೂ  ನಾಟಕಗಳಲ್ಲಿ ಅಭಿನಯಿಸುತ್ತ, ಕಾಲೇಜಿನಲ್ಲಿಯೂ ಅದನ್ನು ಮುಂದುವರಿಸಿದರು.  ಬೆಂಗಳೂರಿನ ಕೆಲವು ಜನಪ್ರಿಯ ಹವ್ಯಾಸೀ ನಾಟಕ ತಂಡಗಳಲ್ಲಿಯೂ ಪಾತ್ರವಹಿಸಿದ್ದರು. 1977ರಿಂದ ತಮ್ಮ ಪತಿ, ನಾಟಕಕಾರ-ನಟ-ನಿರ್ದೇಶಕ,  ಭಾರತೀಯ ಬಾಹ್ಯಾಕಾಶ ಇಲಾಖೆಯ ಹಿರಿಯ ವಿಜ್ಞಾನಿ-ಇಂಜಿನಿಯರ್ ಎಸ್.ವಿ. ಕೃಷ್ಣಶರ್ಮ ಅವರೊಂದಿಗೆ  'ಸಂಧ್ಯಾ ಕಲಾವಿದರು’ ಹವ್ಯಾಸೀ ನಾಟಕತಂಡವನ್ನು ಸ್ಥಾಪಿಸಿ ವಿಶಿಷ್ಟ ಜನಪ್ರಿಯ ನಾಟಕ ಪ್ರಯೋಗಗಳನ್ನು ಕಳೆದ ನಾಲ್ಕೂವರೆ ದಶಕಗಳಿಂದ ನಿರಂತರ ನಡೆಸುತ್ತಾ ಬಂದಿದ್ದಾರೆ.

ಆಕಾಶವಾಣಿ ಮತ್ತು ದೂರದರ್ಶನದಲ್ಲಿ  ಮಾನ್ಯತೆ ಪಡೆದ (ಆಡಿಶನ್ಡ್)  ಕಲಾವಿದರಾದ ಸಂಧ್ಯಾ ಶರ್ಮ ಅವರು ಈ ಎರಡೂ ಮಾಧ್ಯಮಗಳಲ್ಲಿನ ಅನೇಕ ನಾಟಕಗಳು, ಸಂದರ್ಶನ, ವೈಚಾರಿಕ ಕಾರ್ಯಕ್ರಮಗಳು ಮುಂತಾದವುಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. 

 ಅಸಂಖ್ಯಾತ ನಾಟಕ- ನೃತ್ಯ ವಿಮರ್ಶೆಗಳನ್ನು ಎಲ್ಲ ಪತ್ರಿಕೆಗಳಲ್ಲಿ ಮೂಡಿಸುತ್ತ ಬಂದಿರುವ  ಸಂಧ್ಯಾ ಅವರು ಮೂರು ವರ್ಷಗಳ ಕಾಲ 'ಪ್ರಜಾವಾಣಿ'ಯಲ್ಲಿ ಅಂಕಣಕಾರ್ತಿಯಾಗಿ  ನೃತ್ಯ-ನಾಟಕ ವಿಮರ್ಶೆಗಳನ್ನು ಬರೆದಿದ್ದಾರೆ. 'ಅರಗಿಣಿ' ಪತ್ರಿಕೆಯಲ್ಲಿ ಎರಡು ವರ್ಷಗಳ ಕಾಲ ನೃತ್ಯ ವಿಮರ್ಶೆಯ ಅಂಕಣವನ್ನು ಬರೆದಿದ್ದಾರೆ. ವಿಜಯವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮತ್ತು ಇತರ ಅನೇಕ ನಿಯತಕಾಲಿಕಗಳಲ್ಲೂ ಅವರ ಅಂಕಣಗಳು ಮೂಡಿಬರುತ್ತಿವೆ. ಇವರ ನೂರಾರು  ಸಣ್ಣಕಥೆಗಳು, ನಗೆಲೇಖನಗಳು ಮತ್ತು ಕವನಗಳು ಪ್ರಜಾವಾಣಿ, ಸುಧಾ, ಮಯೂರ, ತರಂಗ, ತುಷಾರ, ಕಸ್ತೂರಿ, ಲಂಕೇಶ್ ಪತ್ರಿಕೆ,  ಉತ್ಥಾನ, ಮಲ್ಲಿಗೆ, ಕರ್ಮವೀರ, ಮಂಗಳ, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ,  ವಿಜಯ ಕರ್ನಾಟಕ, ವಿಜಯವಾಣಿ, ವಿಜಯಾ ನೆಕ್ಸ್ಟ್, ವಿಶ್ವವಾಣಿ, ಹೊಸದಿಗಂತ, ವಿಕ್ರಮ, ಸೇರಿದಂತೆ ಎಲ್ಲ ನಿಯತಕಾಲಿಕಗಳಲ್ಲಿ ಬೆಳಕು ಕಂಡಿದ್ದು, ಕಳೆದ ಹತ್ತು ವರ್ಷಗಳಿಂದ ಇವರ  ಒಟ್ಟು ಸುಮಾರು 1000 ಕ್ಕೂ ಹೆಚ್ಚು ನಾಟಕ ಮತ್ತು ನೃತ್ಯ ವಿಮರ್ಶೆಗಳು ಪ್ರಕಟವಾಗಿವೆ. 

ಸಂಧ್ಯಾ ಶರ್ಮ ಅವರು 1978ರ ವರ್ಷದಿಂದ ತಮ್ಮದೇ ಆದ ‘ಅಭಿನವ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ  ಅನೇಕ ಪುಸ್ತಕಗಳ ಪ್ರಕಟಣೆ ಮಾಡಿದ್ದಾರೆ. ಅವರದೇ ಆದ ಅಂತರ್ಜಾಲದ ‘ಸಂಧ್ಯಾ ಪತ್ರಿಕೆ’ಯ  ಪ್ರಧಾನ ಸಂಪಾದಕಿಯಾಗಿದ್ದಾರೆ. ಯುಟ್ಯೂಬ್ ಮಾಧ್ಯಮದಲ್ಲೂ ಅನೇಕ ಸಾಹಿತ್ಯ ಕಾರ್ಯಕ್ರಮ ವೈವಿಧ್ಯಗಳನ್ನು ನಡೆಸಿಕೊಡುತ್ತಿದ್ದಾರೆ. 

ಸಂಧ್ಯಾ ಶರ್ಮ ಅವರ ಪ್ರಕಟಿತ ಕೃತಿಗಳಲ್ಲಿ ಕಿರುಗುಟ್ಟುವ ದನಿಗಳು, ತಾಳ ತಪ್ಪಿದ ಮೇಳ, ಬೆಳಕಿಂಡಿ, ಆಗಂತುಕರು, ಚಿತ್ರವಿಲ್ಲದ ಚೌಕಟ್ಟು ಮುಂತಾದ ಕಥಾ ಸಂಕಲನಗಳು; ಪರಿವೇಷ, ಪರಿಭ್ರಮಣ, ಕವಣೆಗಿಟ್ಟ ಕಲ್ಲು, ಮಧುಸಿಂಚನ, ನೃತ್ಯ ಸರಸ್ವತಿ, ಬೊಗಸೆ ಬೆಳದಿಂಗಳು, ನೆಲೆಗಾಣದ ಹಕ್ಕಿ, ಪ್ರೇಮಚಂದನ, ಚೈತ್ರ ಪಲ್ಲವಿ, ಮಂಜಿನ ಮಹಲು, ಮೋಡದ ನೆರಳು, ಬೆಳ್ಳಿಕಿರಣ, ತಿಳಿಮೋಡ ತೇಲಿತು, ಗುಪ್ತಗಾಮಿನಿ, ಅಗ್ನಿಚುಂಬನ, ಕಾನನದ ನಡುವೆ, ಮನಸೇ ಓ ಮನಸೇ, ಶ್ವೇತ ಮಹಲ್, ಪ್ರೀತಿ ನೂರು ಬಣ್ಣ, ಕನಸಿಗೊಂದು ಕನ್ನಡಿ, ಮೌನ ಗರ್ಭ, ಇರುಳು ಕರಗಿತು, ಬಿಸಿಲ ಮಳೆ, ಕಪ್ಪು ಮೋಡ ಬೆಳ್ಳಿ ಅಂಚು, ಸರಿದ ತೆರೆ, ನಿರ್ಮಾಲ್ಯ, ಕನಸಿನ ಬೆನ್ನೇರಿ, ಅನಾವರಣ, ಪ್ರೇಮ ಚಂದ್ರಮ, ಮಬ್ಬು ಸರಿದಾಗ, ಗುಹಾಂತರ ಮುಂತಾದ ಕಾದಂಬರಿಗಳು; ಉರಿದು ಹೋದ ಕನಸುಗಳು ಕವನ ಸಂಕಲನ; ಅಹಲ್ಯಾಬಾಯಿ ಹೋಳ್ಕರ್ ಜೀವನ ಚರಿತ್ರೆ; ಮಹಿಳೆ ಮತ್ತು ಉದ್ಯೋಗ ವೈಚಾರಿಕ ಕೃತಿ; ನಮ್ಮ ಲೇಖಕಿಯರು, ಸಮುಜ್ವಲಾ ಮತ್ತು ಸಹಕಾರಿ ರತ್ನ ಮುಂತಾದ ಸಂಪಾದನೆಗಳು;   'ರಂಗಾಂತರಂಗ' ಎಂಬ ರಂಗ ವಿಮರ್ಶಾ ಸಂಕಲನ; 'ನಾಟ್ಯಾಂತರಂಗ’  ಮತ್ತು 'ನೂಪುರ ನಾದ'  ನೃತ್ಯ ಪ್ರದರ್ಶನಗಳ ವಿಮರ್ಶಾ ಸಂಕಲನಗಳು , ನೃತ್ಯ ಕಲಾವಿದರ ಪರಿಚಯ ಮಾಲಿಕೆ  ‘ನೃತ್ಯಲೋಕ’  ಮುಂತಾದ ವ್ಯಾಪಕ ವೈವಿಧ್ಯಗಳಿವೆ. 

ಸಂಧ್ಯಾ ಶರ್ಮ ಅವರಿಗೆ ಬೆಂಗಳೂರು ಮಹಾನಗರ ಪಾಲಿಕೆಯ  ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ,  ಅತ್ತಿಮಬ್ಬೆ ಪ್ರಶಸ್ತಿ,  ಗೊರೂರು ಸಾಹಿತ್ಯ ಪ್ರಶಸ್ತಿ,  ಕನ್ನಡ ಲೇಖಕಿಯರ ಪರಿಷತ್ತಿನ ಅತ್ಯುತ್ತಮ ಕಥೆಗಾರ್ತಿ ( ಬೆಳಕಿಂಡಿ ಕಥಾ ಸಂಕಲನ) ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಮಹಿಳೆ ಮತ್ತು ಉದ್ಯೋಗ’ ಕೃತಿಗೆ ಪ್ರಶಸ್ತಿ, ಕೆನರಾ ಬ್ಯಾಂಕ್ ಪ್ರಶಸ್ತಿ,  ಪಂಜೆ ಮಂಗೇಶರಾಯರ ಪ್ರಶಸ್ತಿ,  ಅಬ್ದುಲ್ ಕಲಾಮ್ ಪ್ರಶಸ್ತಿ,  ಕನ್ನಡ ಸೇವಾ ರತ್ನ ಪ್ರಶಸ್ತಿ, ,ಲಿಪಿ ಪ್ರಾಜ್ಞೆ ಪ್ರಶಸ್ತಿ, 'ಸಾಹಿತ್ಯ ಭಾರತಿ’  ಮತ್ತು 'ವಾಕ್ ಸರಸ್ವತಿ' ಗೌರವಗಳು,  'ವಿಪ್ರ ಸಾಧಕಿ’ ಪ್ರಶಸ್ತಿ,   ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪ್ರಶಸ್ತಿ’,  ನಾರೀಶಕ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ 'ಪಂಕಜಶ್ರೀ' ಕಾದಂಬರಿಕಾರ್ತಿ ಪ್ರಶಸ್ತಿ,  ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ, ರಾಘವೇಂದ್ರ ಸದ್ಭಾವನಾ ಪ್ರಶಸ್ತಿ, ಗಾರ್ಗಿ ಪ್ರಶಸ್ತಿ, ಕಲಾಭಿಸಾರಿಕೆ ಪ್ರಶಸ್ತಿ, ಸಂಭ್ರಮ ಪ್ರಶಸ್ತಿ ಮತ್ತು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ  ಮುಂತಾದ ಪ್ರಶಸ್ತಿ ಗೌರವಗಳೇ ಅಲ್ಲದೆ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ. ಬೆಂಗಳೂರು ದೂರ ದರ್ಶನದ ನೃತ್ಯ ಕಲಾವಿದರ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 

ಹಿರಿಯ ಸಾಧಕರಾದ ಸಂಧ್ಯಾ ಶರ್ಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Y K Sandhya Sharma Madam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ