ಚಂದ್ರಿಕಾ ಗುರುರಾಜ್
ಚಂದ್ರಿಕಾ ಗುರುರಾಜ್
ಚಂದ್ರಿಕಾ ಗುರುರಾಜ್ ಸುಗಮ ಸಂಗೀತ ಮತ್ತು ಚಲನಚಿತ್ರಗಳ ಗಾಯಕಿಯಾಗಿ ಸಾಧನೆ ಮಾಡಿರುವವರು.
ಚಂದ್ರಿಕಾ ಗುರುರಾಜ್ 1959ರ ಅಕ್ಟೋಬರ್ 4ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಕೆ.ಆರ್. ರಂಗರಾವ್. ತಾಯಿ ಲಲಿತಮ್ಮ. ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದ ದೆಸೆಯಿಂದ ಮಗುವಾಗಿದ್ದಾಗಿನಿಂದಲೇ ಅವರಲ್ಲಿ ಗಾಯನದತ್ತ ಆಸಕ್ತಿ ಮೂಡಿತು. ಲತಾಮಂಗೇಶ್ಕರ್ ಅವರ ಹಾಡುಗಾರಿಕೆ ಅವರಿಗೆ ಪ್ರೇರಣೆ. ಓದಿನಲ್ಲೂ ಮುಂದಿದ್ದ ಚಂದ್ರಿಕಾ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಚಂದ್ರಿಕಾ ತುಮಕೂರಿನ ಶಕುಂತಲಮ್ಮನವರಿಂದ ಪ್ರಾರಂಭಿಕ ಸಂಗೀತ ಶಾಸ್ತ್ರೀಯ ಪಾಠ ಪಡೆದರು. ಶ್ಯಾಮಲಾಭಾವೆ ಮತ್ತು ಸುರೇಂದ್ರ ಸಾ ನಾಕೋಡ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿತು ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಗ್ರೇಡ್ ಪಡೆದರು. ಆಕಾಶವಾಣಿಯ ಎ ಶ್ರೇಣಿ ಅರ್ಹತೆ ಸಹಾ ಗಳಿಸಿದರು.
ಚಂದ್ರಿಕಾ ಗುರುರಾಜ್ ನಾಡಿದಾದ್ಯಂತ ಅನೇಕ ಸಾಂಸ್ಕೃತಿಕ ಉತ್ಸವಗಳಲ್ಲಿ ಮತ್ತು ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕೆ. ಜೆ. ಏಸುದಾಸ್ ಅವರೊಂದಿಗೆ ಸಹಾ ಕಾರ್ಯಕ್ರಮ ನೀಡಿದ್ದಾರೆ. ವಿದೇಶಗಳಲ್ಲೂ ಆಹ್ವಾನಿತರಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಭಕ್ತಿಗೀತೆ, ಭಾವಗೀತೆ, ಜನಪದಗೀತೆಗಳ 850ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ ಹಾಡಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕುರಿತು ಹಾಡಿದ ಭಜನೆ, ಆಡುಬಾರಮ್ಮ ಮಹಾಲಕ್ಷ್ಮೀ, ಹರಿನಾಮ ಮಾಲ ಮುಂತಾದವು ಪ್ರಸಿದ್ಧಿ ಪಡೆದಿವೆ.
ಚಂದ್ರಿಕಾ ಗುರುರಾಜ್ 85 ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಹಾಡಿದ್ದಾರೆ. ಬೆಳದಿಂಗಳ ಬಾಲೆ, ಚೈತ್ರದ ಪ್ರೇಮಾಂಜಲಿ, ರಂಜಿತಾ, ಪ್ರೇಮರಾಗ ಹಾಡು ಗೆಳತಿ, ಅನುರಾಗ ಸಂಗಮ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳು ಇವುಗಳಲ್ಲಿ ಸೇರಿವೆ. ಊರ್ವಶಿ ಚಿತ್ರದ 'ಓ ಪ್ರಿಯತಮ' ಗೀತೆಗೆ
ಅವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ ಸಂದಿದೆ.
ರಾಜ್ಯ ಚಲನಚಿತ್ರಪ್ರಶಸ್ತಿಯೇ ಅಲ್ಲದೆ ಇನ್ನೂ ಹಲವಾರು ಗೌರವಗಳು ಅವರಿಗೆ ಸಂದಿವೆ.
ಚಂದ್ರಿಕಾ ಗುರುರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day of singer Chandrika Gururaj

ಕಾಮೆಂಟ್‌ಗಳು