ಪುಟ್ಟಸ್ವಾಮಿ ಗುಡಿಗಾರ್
ಪುಟ್ಟಸ್ವಾಮಿ ಗುಡಿಗಾರ್
ಪುಟ್ಟಸ್ವಾಮಿ ಗುಡಿಗಾರ್ ಅವರು ಪ್ರಖ್ಯಾತ ಶಿಲ್ಪಿ, ಪುರಾತತ್ತ್ವ ಶಾಸ್ತ್ರಜ್ಞರು, ಸಂಶೋಧಕರು, ಇತಿಹಾಸ ತಜ್ಞರು ಮತ್ತು ವಿದ್ವಾಂಸರು. ಹಲವು ಕಾಲ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಸಂಶೋಧಕರಾಗಿದ್ದ ಇವರು ಮುಂದೆ ಗೋವಾದಲ್ಲಿನ ಪ್ರಸಿದ್ಧ ‘ಶಿಲ್ಪಲೋಕ’ ಸ್ಟುಡಿಯೋ ನಿರ್ಮಿಸಿ ಕಲಾಲೋಕದಲ್ಲಿ ಮಹತ್ವದ ಸಾಧನೆ ಮಾಡುತ್ತ ಬಂದಿದ್ದಾರೆ.
ಸಾಗರದ ಮೂಲದವರಾದ ಗುಡಿಗಾರ್ ಪುಟ್ಟಸ್ವಾಮಿ ಅವರು 1951ರ ಅಕ್ಟೋಬರ್ 4ರಂದು ಜನಿಸಿದರು. ಅವರದು ಕದಂಬ ರಾಜವಂಶದ ಶಿಲ್ಪಿಗಳ ಪರಂಪರೆಯನ್ನು ಹೊಂದಿರುವ ಅತ್ಯಂತ ಸಾಂಪ್ರದಾಯಿಕ ಮತ್ತು ಐತಿಹಾಸಿಕವಾಗಿ ಮಹತ್ವದ ಕುಟುಂಬ. ಗುಡಿಗಾರ್ ಕುಟುಂಬವು ಕರ್ನಾಟಕದ ನಾಗಲಿ-ತಲೆಗಾವ್ ಗ್ರಾಮದಿಂದ ಬಂದಿದೆ. ಇವರ ತಂದೆ ಗುಡಿಗಾರ್ ಚಿಕ್ಕಣ್ಣ ಪ್ರಖ್ಯಾತ ಶಿಲ್ಪಿಗಳಾಗಿದ್ದರು. ಇವರ ಸಹೋದರರಾದ ಅಶೋಕ್ ಗುಡಿಗಾರ್ ಮತ್ತು ಸುರೇಶ್ ಗುಡಿಗಾರ್ ಅವರೂ ಪ್ರಖ್ಯಾತ ಶಿಲ್ಪಿಗಳು. ಇವರ ಕುಟುಂಬದವರು ಅಪ್ರತಿಮ ಶಿಲ್ಪಕಲೆಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದವರು.
ಸಾಗರದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ ಪುಟ್ಟಸ್ವಾಮಿ ಅವರು ಮೈಸೂರಿನ ಮಹಾರಾಜಾ ಕಾಲೇಜಿನಿಂದ ಬಿಎ, ಇಂಗ್ಲಿಷ್ ಡಿಪ್ಲೊಮಾ ಹಾಗೂ ಮಾನಸಗಂಗೋತ್ರಿಯಿಂದ ಪುರಾತತ್ವ ಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. ಇವರ ಕುಟುಂಬದಲ್ಲಿ ಎಸ್‍ಎಸ್‍ಎಲ್‍ಸಿ ಮುಗಿಸಿದವರೂ ಇವರೇ ಮೊದಲಿಗರು. ಆದರೂ, ಬಡತನದಲ್ಲಿದ್ದರೂ, ಮೈಸೂರಿನಲ್ಲಿ ಓದುವ ಆಸೆ ಬಲವಾಗಿದ್ದು ಶಿಲ್ಪಗಳನ್ನು ಮಾಡಿ, ಮಾರಿ ಎಂ.ಎ.ವರೆಗೆ ಓದು ನಡೆಸಿದರು. ಇವರಿಗೆ ಸಾಹಿತ್ಯದಲ್ಲೂ ಅಪಾರ ಆಸಕ್ತಿ. ಕ್ರಾಂತಿಕಾರಿ ಚಿಂತಕರಾದ ಮಹಾದೇವಪ್ಪ, ಪದವಿ ವ್ಯಾಸಂಗದಲ್ಲಿ ಅಧ್ಯಾಪಕರಾಗಿದ್ದ ಆಲನಹಳ್ಳಿ ಕೃಷ್ಣ, ಡಿಪ್ಲೋಮಾ ಇಂಗ್ಲಿಷ್ ಓದುವಾಗ ಮೇಷ್ಟರಾಗಿದ್ದ ಯು. ಆರ್. ಅನಂತಮೂರ್ತಿ, ದೇವನೂರು ಮಹಾದೇವ, ಕಥೆಗಾರ ಬೆಸಗರಹಳ್ಳಿ ರಾಮಣ್ಣ ಮುಂತಾದ ಅನೇಕರ ಪ್ರಭಾವ ಇವರ ಮೇಲಿತ್ತು. ಓದುವ ದಿನಗಳಲ್ಲಿ ಕವಿಸಮ್ಮೇಳನದಲ್ಲಿ ಇವರ ಕವನಕ್ಕೆ ಬಹುಮಾನ ಕೂಡಾ ಸಂದಿತ್ತು.
ಗುಡಿಗಾರ್ ಪುಟ್ಟಸ್ವಾಮಿ ಅವರು ಮಹಾನ್ ಪುರಾತತ್ವಜ್ಞರಾದ ಎಸ್. ಆರ್. ರಾವ್ ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿಯಲ್ಲಿ ಎರಡು ದಶಕಗಳ ಕಾಲ ಸಂಶೋಧಕರಾಗಿ, ಸೈಂಟಿಫಿಕ್ ಆಫೀಸರ್ ಹುದ್ದೆಯವರೆಗೂ ಏರಿ ಸೇವೆ ಸಲ್ಲಿಸಿದರು.
ಸಂಶೋಧನೆಯ ಜೊತೆಗೆ, ಆಳವಾದ ಓದು, ವಿಶ್ವಪರ್ಯಟಣೆಗಳ ಮೂಲಕ ಅಪಾರ ಜ್ಞಾನ ಸಿದ್ಧಿಸಿಕೊಂಡಿರುವ ಪುಟ್ಟಸ್ವಾಮಿ ಗುಡಿಗಾರ್ ಅವರ ಸಂಶೋಧನಾ ವಿಶ್ಲೇಷಣೆ, ಜಾಗತಿಕ ಇತಿಹಾಸ ಮತ್ತು ನಾಗರಿಕತೆಯ ಬೆಳವಣಿಗೆಯ ಕುರಿತಾದ ಅಪರಿಮಿತ ಜ್ಞಾನ ಬೆರಗು ಹುಟ್ಟಿಸುವಂತದ್ದು.
ಪುಟ್ಟಸ್ವಾಮಿ ಗುಡಿಗಾರ್ ಅವರು, ತಮಗೆ ತಮ್ಮ ಕುಟುಂಬದಲ್ಲಿ ಮೂಡಿದ್ದ ಶಿಲ್ಪಕಲೆಯ ಬಗ್ಗೆ ಬೆಳೆದಿದ್ದ ಅಪರಿಮಿತ ಆಸಕ್ತಿಗಳಿಂದ ಸಂಶೋಧನಾ ಕೆಲಸವನ್ನು ಬಿಟ್ಟು, ಕಲ್ಲುಗಳಲ್ಲಿ ಕಲೆಯನ್ನು ಅರಳಿಸಲು ಮುಂದಾದರು. ಈ ಹಾದಿಯ ಪಯಣದಲ್ಲಿ ಗೋವಾದಲ್ಲಿ ‘ಶಿಲ್ಪಲೋಕ’ ಸ್ಟುಡಿಯೋ ಸ್ಥಾಪಿಸಿದರು. ಇದು ಭಾರತೀಯ ಸಂಪ್ರದಾಯದ ಪ್ರತಿಮಾಶಾಸ್ತ್ರೀಯ ಶಿಲ್ಪಕಲೆ ಕ್ಷೇತ್ರದಲ್ಲಿ ಪ್ರಖ್ಯಾತವಾಗಿದೆ. ಈ ಮೂಲಕ ಪ್ರಾರಂಭದಲ್ಲೇ ದೊಡ್ಡ ರೀತಿಯ ಕದಂಬ ಕಲೆಯ ಕುರಿತಾದ ಕಾರ್ಯಾಗಾರ ನಡೆಸಿದರು.
ಪಟ್ಟಸ್ವಾಮಿ ಗುಡಿಗಾರ್ ಅವರು ಗೋವಾದ ರಾಜಭವನದ ಅಂಗಳದಲ್ಲಿರುವ ಏಳು ಅಡಿಗಳ ಭಗವಾನ್ ನಟರಾಜನ ಪ್ರತಿಮೆಯನ್ನು ಒಳಗೊಂಡಂತೆ ಅನೇಕ ಭವ್ಯವಾದ ಮೇರುಕೃತಿಗಳನ್ನು ರೂಪಿಸಲು ತಮ್ಮ ಮಾಂತ್ರಿಕ ಶಿಲ್ಪಕಲೆ ಕೌಶಲ್ಯಗಳನ್ನು ಬಳಸಿದ್ದಾರೆ. ವೆರ್ನಾದ ಮಹಾಲಸಾ ದೇಗುಲಗಳು, ಮಾಪುಸಾದ ಗಣೇಶಪುರಿ ದೇವಸ್ಥಾನ, ಡೋನ ಪೌಲದಲ್ಲಿನ ವರಸಿದ್ಧಿವಿನಾಯಕ ದೇವಸ್ಥಾನ, ಕಪಿಲೇಶ್ವರಿ ಪಾಂಡಾದಲ್ಲಿನ ಕದಂಬ - ಹೊಯ್ಸಳ ಶೈಲಿಯ ಬೃಹತ್ ಶಿಲ್ಪಗೋಡೆ, ದಾಮೋದರ ದೇವಸ್ಥಾನ ಜಾಂಬಾವಳಿ ಮತ್ತು ಮಲ್ಲಿಕಾರ್ಜುನ್ ಮುಂತಾದವುಗಳಲ್ಲಿನ ಶಿಲ್ಪಗಳು ಮುಂತಾದವು ಇವರ ಪ್ರಸಿದ್ಧ ಕಲಾಸಾಮರ್ಥ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.
ಕದಂಬ, ಚೋಳ, ರಾಷ್ಟ್ರಕೂಟ ಮುಂತಾದ ಪ್ರಾಚೀನ ಭಾರತೀಯ ಶಿಲ್ಪಕಲೆಯ ಬಳಕೆಯ ಸದಾಶಯ ಹೊಂದಿರುವ ಪುಟ್ಟಸ್ವಾಮಿ ಅವರ ಶಿಲ್ಪಲೋಕದಲ್ಲಿ, ಕಪ್ಪು ಕಲ್ಲು, ಅಮೃತಶಿಲೆ, ಮರ ಮತ್ತು ಕಂಚಿನಂತಹ ವಿವಿಧ ಮಾಧ್ಯಮಗಳಲ್ಲಿ ಸಹಾ ಮೇರುಕೃತಿಗಳನ್ನು ಮೂಡಿಸಲಾಗುತ್ತಿದೆ.
ಪಟ್ಟಸ್ವಾಮಿ ಗುಡಿಗಾರ್ ಅವರ ಮಹಾನ್ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಹಿರಿಯ ಜ್ಞಾನಿಗಳೂ ಕಲಾವಿದರೂ ಆದ ಪಟ್ಟಸ್ವಾಮಿ ಗುಡಿಗಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day of great sculptor and archaeologist Gudigar Puttaswamy
ಕಾಮೆಂಟ್‌ಗಳು