ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿದಂಬರ ನರೇಂದ್ರ


ಚಿದಂಬರ ನರೇಂದ್ರ

ಚಿದಂಬರ ನರೇಂದ್ರ ಎಂದರೆ ಮೊದಲು ಕಣ್ಮುಂದೆ ಬರುವುದು ಅವರು ನಿರೂಪಿಸುವ ಸುಂದರ, ಹೃದಯದ ಕಣ್ತೆರೆಸುವ ಪುಟಾಣಿ ಕಥೆಗಳು ಮತ್ತು ಕವಿತೆಗಳು.  ಅವರ ಸುಜ್ಞಾನದ ಅರಸುವಿಕೆ ಮತ್ತು ಅದನ್ನು ಸುಲಭಗ್ರಾಹ್ಯವಾಗಿ ಓದುಗನ ಅಂತರಾಳಕ್ಕೆ ತಲುಪಿಸುವುದು, ಈ  ಎರಡರಲ್ಲೂ ಆಳವಾದ ಪರಿಶ್ರಮವಿದೆ. ತಾವು ಮಾಡುವುದನ್ನು ಅನುಭಾವಿಸುವ ಅನುಭೂತಿ ಅವರ ಬರಹಗಳಲ್ಲಿ ಎದ್ದು ತೋರುತ್ತದೆ.

ಚಿದಂಬರ ನರೇಂದ್ರ ಅವರು ಮೂಲತಃ ಧಾರವಾಡದವರು. ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಪ್ರಸ್ತುತ ಬೆಂಗಳೂರಿನ ಅಂತರರಾಷ್ಟ್ರೀಯ ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥರಾಗಿ ಮತ್ತು ಆ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿನಿಮಾ, ಸಾಹಿತ್ಯದ ಓದು-ಬರಹ, ಕಾವ್ಯಾನುವಾದ ಚಿದಂಬರ ನರೇಂದ್ರ ಅವರ ಹವ್ಯಾಸಗಳು. ಝೆನ್, ಸೂಫಿ ಕಾವ್ಯಮಾರ್ಗ ಮತ್ತು ಪಾಶ್ಚಿಮಾತ್ಯ-ಪೌರಸ್ತ್ಯ ಕವಿತೆಗಳ ಅನುವಾದದಲ್ಲಿ ಚಿದಂಬರ ನರೇಂದ್ರರಿಗೆ ಅಪಾರ  ಆಸಕ್ತಿ. ಕನ್ನಡ, ಹಿಂದಿ,ಮರಾಠಿ ಮತ್ತು ಇಂಗ್ಲಿಷ್ ಅವರಿಗೆ ಲೀಲಾಜಾಲ.

ಚುಕ್ಕಿ ತೋರಸ್ತಾವ ಚಾಚಿ ಬೆರಳ, ಗಾಳೀ ಕೆನಿ, ಹೂ ಬಾಣ ಚಿದಂಬರ ನರೇಂದ್ರರ ಪ್ರಕಟಿತ  ಕವಿತಾ ಸಂಕಲನಗಳು.  ಅಂತರಜಾಲ ತಾಣವಾದ ಅರಳೀಮರದ (aralimara.com) ಅವರ ಬರಹಗಳು ವಿಸ್ತೃತವಾಗಿ ತನ್ನ ಶಾಖೋಪಶಾಖೆಗಳನ್ನು ಎಲ್ಲೆಡೆ ಹರಡುವಷ್ಟು ಸಮರ್ಥವಾದಂತಹವು. ಈ ವ್ಯಾಪ್ತಿ ಅನಂತವಾಗಿರಲಿ.

ಒಮ್ಮೆ ಕಣ್ಣಿಗೆ ಬಿದ್ದ ಅವರ ಕೆಲವು ಸಾಲು:

ಪ್ರೀತಿ, ಅಪ್ಪುಗೆಯಲ್ಲಿ  
ಅಂಥ ಮಾಂತ್ರಿಕತೆಯೇನಿಲ್ಲ, 
ಇವೆಲ್ಲ ಶುದ್ಧ 
ರಾಸಾಯನಿಕ ಕ್ರಿಯೆಗಳು
ಎಂಬ ವಿಜ್ಞಾನದ ಶುಷ್ಕ
ತಿಳುವಳಿಕೆಯ ನಡುವೆಯೂ 
ನಡೆದೇ ಇದೆ ಸಂಭ್ರಮಿಸುವುದು,
ಉರಿಯುವುದು.

ಹಲವಾರು ಬಾರಿ ಅನಿಸುತ್ತದೆ
ಇನ್ನವರ ಹಂಗು ಬೇಡವೇ ಬೇಡ,

ಅವರು ಕೊಟ್ಟದ್ದನ್ನೆನೋ
ಮರಳಿಸಬಲ್ಲೆ
ಆದರೆ
ನಾನು ಪಡೆದುದ್ದನ್ನ
ಹೇಗೆ ಹಿಂತಿರುಗಿಸಲಿ ?

ಇಂದು ಚಿದಂಬರ ನರೇಂದ್ರರ ಹುಟ್ಟುಹಬ್ಬ. ಅವರ ಕ್ರಿಯೆ ನಮ್ಮ ನಿರಂತರ ಪ್ರೇರಿಸುತ್ತಿರಲಿ.

On the birthday of poet and narrator Chidambar Narendra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ