ಮೀರಾಬೆಹನ್
ಮೀರಾಬೆಹನ್
ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಲು ತಮ್ಮ ಜೀವನದ ಸಕಲಭೋಗಗಳನ್ನೂ ತ್ಯಜಿಸಿ ಸಾಮಾನ್ಯರಂತೆ ಬದುಕಿ ಮೀರಾಬೆಹನ್ ಎಂದು ಹೆಸರಾದವರು ಮೆಡಲಿನ್ ಸ್ಲೆಡ್.
ಮೆಡಲಿನ್ ಸ್ಲೆಡ್ 1892ರ ನವೆಂಬರ್ 22ರಂದು ಇಂಗ್ಲೆಂಡಿನ ಸಿರಿವಂತ ಕುಟುಂಬದಲ್ಲಿ ಜನಿಸಿದರು. ತಂದೆ ಸರ್ ಎಡ್ಮಂಡ್ ಸ್ಲೆಡ್ ಅವರು ರಾಯಲ್ ನೌಕಾದಳದಲ್ಲಿ ಅಧಿಕಾರಿಗಳಾಗಿದ್ದು ಈಸ್ಟ್ ಇಂಡೀಸ್ ಭಾಗದಲ್ಲಿನ ಕಮಾಂಡರ್ - ಇನ್ - ಚೀಫ್ ಆಗಿದ್ದರು. ಮುಂದೆ ನೌಕಾ ಬೇಹುಗಾರಿಕಾ ವಿಭಾಗದ ನಿರ್ದೇಶಕರಾದರು. ಮೆಡಲಿನ್ ಸ್ಲೆಡ್ ತನ್ನ ಬಾಲ್ಯದ ಬಹುಸಮಯವನ್ನು ತಾತನ (ತಾಯಿಯ ತಂದೆ) ಮನೆಯಲ್ಲಿ ಕಳೆದಳು. ಅವರಿಗೆ ಬಹುದೊಡ್ಡ ಎಸ್ಟೇಟ್ ಇದ್ದು ಮೆಡಲಿನ್ಗೆ ಪ್ರಕೃತಿ ಸೌಂದರ್ಯ ಮತ್ತು ಪ್ರಾಣಿ ಪ್ರೇಮ ಮೂಡುವುದರಲ್ಲಿ ಬಹುಮುಖ್ಯ ಪಾತ್ರವಹಿಸಿತು. ಮೆಡಲಿನ್ಗೆ ಸಂಗೀತದಲ್ಲೂ ಅಪಾರ ಆಸಕ್ತಿ ಇತ್ತು. ಲುಡ್ವಿನ್ ವಾನ್ ಬೆಥೊವನ್ ಸಂಗೀತ ಆಕೆಗೆ ಬಲು ಇಷ್ಟವಾಗಿತ್ತು. ನುರಿತ ಪಿಯಾನೊ ವಾದಕಿಯಾಗಿ ಲಂಡನ್ ಆರ್ಕೆಸ್ಟ್ರಾ ತಂಡದ ನಾಯಕಿಯಾಗಿ ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ಧಿ ಪಡೆದರು.
ಹೀಗೆ ಒಮ್ಮೆ ಯುರೋಪ್ ಪ್ರವಾಸದಲ್ಲಿದ್ದಾಗ ಬೆಥೋವನ್ ಸಂಗೀತದ ಬಗ್ಗೆ ಅಪಾರ ತಿಳುವಳಿಕೆಯಿದ್ದ ರೋಮೈನ್ ರೋಲಾಂಡ್ ಎಂಬ ವ್ಯಕ್ತಿಯನ್ನು ಪ್ರಾನ್ಸ್ ನಲ್ಲಿ ಬೇಟಿ ಮಾಡಿದರು. ಬೇಟಿಯ ಸಂದರ್ಭದಲ್ಲಿ ಗಾಂಧೀಜಿಯವರನ್ನು ಕುರಿತಂತೆ ರೋನಾಲ್ಡ್ ಬರೆದಿದ್ದ ಒಂದು ಪುಟ್ಟ ಕೃತಿಯು ಮೆಡಲಿನ್ ಸ್ಲೆಡ್ ಅವರ ಗಮನ ಸೆಳೆಯಿತು. ಗಾಂಧೀಜಿಯವರನ್ನು ಕುರಿತಂತೆ ಮೆಡಲಿನ್ ವಿಚಾರಿಸಿದಾಗ, ರೋನಾಲ್ಡ್ “ಗಾಂಧೀಜಿಯವರು ಇಪ್ಪತ್ತನೆಯ ಶತಮಾನದ ಏಸು ಕ್ರಿಸ್ತ” ಎಂದು ಬಣ್ಣಿಸಿದರು. ಈ ಮಾತು ಅವರನ್ನು ಗಾಂಧಿ ಕುರಿತು ಹೆಚ್ಚು ಅರಿಯಲು ಪ್ರೇರೇಪಿಸಿತು. ಹೀಗೆ ಗಾಂಧೀಜಿಯವರ ಕುರಿತು ಮೂಡಿದ್ದ ಪುಸ್ತಕಗಳನ್ನು ಒಂದಾದ ಮೇಲೆ ಒಂದು ಓದುತ್ತ ಹೋದಂತೆ ಆಕೆ ಗಾಂಧೀಜಿಗೆ ಪತ್ರ ಬರೆಯಲು ಆರಂಭಿಸಿದರು. ತಮ್ಮಲ್ಲಿದ್ದ ಅಮೂಲ್ಯ ಆಭರಣಗಳನ್ನು ಮಾರಿ ಗಾಂಧೀಜಿ ಆಶ್ರಮಕ್ಕೆ ನಿಧಿ ಕಳಿಸಿಕೊಟ್ಟರು. ಗಾಂಧೀಜಿ ಪ್ರತಿಕ್ರಯಿಸಿದ ರೀತಿ ಆಕೆಗೆ ಗಾಂಧೀಜಿಯ ಅನುಯಾಯಿ ಆಗಬೇಕೆಂಬ ಆಶಯ ಮೂಡಿಸಿತು. "ನಾನು ನಿಮ್ಮ ಅನುಯಾಯಿಯಾಗಿ ಆಶ್ರಮ ಸೇರಲು ಬಯಸಿದ್ದೇನೆ" ಎಂದು ಪ್ರಾರ್ಥನೆ ಸಲ್ಲಿಸಿಯೇ ಬಿಟ್ಟರು. ಯಂಗ್ ಇಂಡಿಯಾ ಪತ್ರಿಕೆಯ ಚಂದಾದಾರರಾದರು. ಭಗವದ್ಗೀತೆ, ಋಗ್ವೇದಗಳನ್ನು ಫ್ರೆಂಚ್ ಭಾಷೆಯಲ್ಲಿ ಓದಿದರು. ಆಶ್ರಮದ ಜೀವನದಲ್ಲಿ ಸೌಕರ್ಯಗಳಿರುವುದಿಲ್ಲ ಎಂದು ಗಾಂಧೀಜಿ ಪತ್ರ ಬರೆದಾಗ ತಾವಿದ್ದ ಜಾಗದಲ್ಲೇ ಸರಳ ಸಸ್ಯಾಹಾರ ಮತ್ತು ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡತೊಡಗಿದರು.
1925ರ ನವಂಬರ್ 6ರಂದು ಮುಂಬೈಗೆ ಬಂದಿಳಿದು ಮಾರನೆಯ ದಿನ ನವೆಂಬರ್ 7ರಂದು ಅಹಮದಾಬಾದ್ ತಲುಪಿದರು.
ಆಶ್ರಮದ ಪುಟ್ಟದಾದ ಕೈದೋಟದ ನಡುವೆ ಗಾಂಧೀಜಿಯವರ ನಿವಾಸದಲ್ಲಿ ಮಂಡಿಯೂರಿ ಕುಳಿತು ಮಹಾತ್ಮನಿಗೆ ನಮಸ್ಕರಿಸಿದೆರು. ತಮ್ಮ ಎರಡು ಕೈಗಳಿಂದ ಅವರ ಭುಜವನ್ನು ಹಿಡಿದು ಎತ್ತಿ ನಿಲ್ಲಿಸಿದ ಗಾಂಧೀಜಿಯವರು “ನೀನು ಇಂದಿನಿಂದ ಭಾರತದ ಪುತ್ರಿ, ಜೊತೆಗೆ ನನ್ನ ಪುತ್ರಿ” ಎಂದರು. ಮೀರಾಬೆಹನ್ ಆದ ಮೆಡಲಿನ್ ಎಲ್ಲರಂತೆ ಗಾಂಧೀಜಿಯವರನ್ನು “ಬಾಪು” ಎಂದು ಕರೆಯಲಾರಂಭಿಸಿದರು.
ಮೀರಾ ಬೆಹನ್ ಗಾಂಧೀಜಿಯವರ ಜೊತೆ ಇದ್ದು ಅವರ ಆಪ್ತ ಕಾರ್ಯದರ್ಶಿಯಂತೆ ಕೆಲಸ ಮಾಡತೊಡಗಿದರು. ನಿಧಾನವಾಗಿ ಅಡುಗೆ ಮಾಡುವುದು, ತಮ್ಮ ವಸ್ತ್ರಗಳನ್ನು ತಾವೇ ಸ್ವತಃ ಸ್ವಚ್ಛ ಮಾಡಿಕೊಳ್ಳುವುದು ಹೀಗೆ ಕೆಲಸಗಳನ್ನು ಕಲಿಯುತ್ತಾ, ಚರಕ ನೂಲುವುದು, ಕೈ ತೋಟದ ನಿರ್ವಹಣೆ ಇವುಗಳಲ್ಲಿ ಪರಿಣಿತರಾದರು. ಸಣ್ಣ ಸಣ್ಣ ಕುಟಿರಗಳಲ್ಲಿ ವಾಸವಾಗಿದ್ದ ಆಶ್ರಮವಾಸಿಗಳು ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ನೋಡಿ ಸಂತೋಷ ಪಟ್ಟರು. ಗಾಂಧೀಜಿಯವರು ಆಶ್ರಮವಾಸಿಗಳಲ್ಲಿ ಹುಟ್ಟು ಹಾಕುತ್ತಿದ್ದ ಆತ್ಮವಿಶ್ವಾಸದ ಬದುಕು, ಸತ್ಯ ಮತ್ತು ಅಹಿಂಸೆಯ ಪ್ರತಿ ಪಾದನೆ, ನಿಸರ್ಗಕ್ಕೆ ಎರವಾಗದಂತೆ ರೂಢಿಸಿಕೊಂಡಿದ್ದ ಸರಳ ಜೀವನ ಇವೆಲ್ಲವೂ ಮೀರಾ ಬೆಹನ್ ರವರಿಗೆ ಹೊಸ ಲೋಕವೊಂದನ್ನು ತೆರದಿಟ್ಟವು.
1925ರ ಡಿಸಂಬರ್ ಮಾಸದಲ್ಲಿ ಆರಂಭಗೊಂಡಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮೀರಾ ಬೆಹನ್ ಪ್ರಥಮ ಬಾರಿಗೆ ಪಾಲ್ಗೊಂಡರು. ಗಾಂಧೀಜಿಯವರ ಮತ್ತು ಅವರ ಅನುಯಾಯಿಗಳ ಒಡನಾಟದಿಂದ ಪ್ರೇರಿತರಾದ ಮೆಡಲಿನ್ ಮೀರಾ ಬೆಹನ್ ತಮ್ಮ ತಲೆಗೂದಲನ್ನು ತೆಗೆಸಿ ಸನ್ಯಾಸಿನಿಯಂತೆ ಖಾದಿ ವಸ್ತ್ರ ತೊಟ್ಟು ಬದುಕಲು ಆರಂಭಿಸಿದರು.
ಮೀರಾ ಬೆಹನ್ ಭಾರತಕ್ಕೆ ಬಂದ ಒಂದು ವರ್ಷದ ತರುವಾಯ ಅವರ ತಂದೆಯವರು ನಿಧನರಾದ ಸುದ್ಧಿ ಅವರ ತಾಯಿಯವರ ಮೂಲಕ ತಲುಪಿತು. ತಾವಿದ್ದ ಭಾರತದ ನೆಲದಲ್ಲಿಯೇ ನಿಂತು ತಂದೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಸಂಸ್ಕೃತಿ ಹಾಗೂ ಭಾಷೆಯನ್ನು ಕಲಿಯುವ ಉದ್ದೇಶದಿಂದ ದೆಹಲಿಯ ಕನ್ಯಾ ಗುರುಕುಲ ಹಾಗೂ ಕಾಂಗ್ರಿಯ ಗುರುಕುಲದಲ್ಲಿ ಸ್ವಲ್ಪ ದಿನ ವಾಸವಾಗಿದ್ದು ಪರಿಣತಿಯನ್ನು ಪಡೆದರು. ಆನಂತರ ಪರಿಪೂರ್ಣ ಸನ್ಯಾಸಿನಿಯಾಗುವ ಹಠ ತೊಟ್ಟು, ರೇವಾರಿಯ ಭಗವತ್ ಭಕ್ತಿ ಆಶ್ರಮದಲ್ಲಿ ಯೋಗ, ಧ್ಯಾನಗಳಲ್ಲಿ ನಿರತರಾದರು, ಗಾಂಧೀಜಿಯವರು ಆಗಾಗ ತಮ್ಮ ಪತ್ರದಲ್ಲಿ ಭಾರತದ ಪುರಾಣಗಳು ಹಾಗೂ ದಾರ್ಶನಿಕರ ಕಥೆಗಳ ಮೂಲಕ ಹೇಗೆ ಬದುಕನ್ನು ಉನ್ನತ ರೀತಿಯಲ್ಲಿ ನಡೆಸಬಹುದು ಎಂದು ವಿವರಿಸುತ್ತಿದ್ದರು.
ಮೀರಾಬೆಹನ್ 1927 ರಲ್ಲಿ ಭಾರತಕ್ಕೆ ಬೇಟಿ ನೀಡಿದ ಸೈಮನ್ ಆಯೋಗದ ವಿರುಧ್ಧದ ಪ್ರತಿಭಟನೆ ಮತ್ತು 1930ರ ದಂಡಿ ಉಪ್ಪಿನ ಸತ್ಯಾಗ್ರಹ ಯಾತ್ರೆಯಲ್ಲಿ ಪಾಲ್ಗೊಂಡರು. 1931ರಲ್ಲಿ ಗಾಂಧೀಜಿ ಜೊತೆಯಲ್ಲಿ ದುಂಡು ಮೇಜಿನ ಪರಿಷತ್ತಿಗಾಗಿ ಇಂಗ್ಲಂಡ್ ಪ್ರವಾಸವನ್ನು ಮಾಡಿದರು. 1942ರಲ್ಲಿ “ಭಾರತ ಬಿಟ್ಟು ತೊಲಗಿ” ಚಳುವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದರು. ಸೆರೆಮನೆವಾಸ ಅನುಭವಿಸಿದರು. ಆಗಾಖಾನ್ ಅರಮನೆಯಲ್ಲಿ ಬಂಧಿಯಾಗಿರುವಾಗ, ಮಹಾದೇವ ದೇಸಾಯಿ ಹಾಗೂ ಕಸ್ತೂರ ಬಾ ಅವರ ಆಕಸ್ಮಿಕ ಸಾವುಗಳಿಗೆ ಸಾಕ್ಷಿಯಾದರು. ಅನೇಕ ಸಂದರ್ಭಗಳಲ್ಲಿ ಗಾಂಧೀಜಿಯವರು ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಅವರ ಪ್ರತಿನಿಧಿಯಾಗಿ, ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರದ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ಬರುತ್ತಿದ್ದರು. ಗಾಂಧೀಜಿಯವರ ಅಪೇಕ್ಷೆಯ ಮೇರೆಗೆ ಇಂಗ್ಲೆಂಡ್, ಅಮೇರಿಕಾ ಪ್ರವಾಸ ಮಾಡಿ, ಅನೇಕ ನಗರಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಮಹತ್ವಗಳನ್ನು ವಿವರಿಸುತ್ತಿದ್ದರು. ಗಾಂಧಿಯವರ ಪ್ರತಿನಿಧಿಯಾಗಿ ಬ್ರಿಟಿಷ್ ಪ್ರಧಾನಿ ಚರ್ಚಿಲ್ ಹಾಗೂ ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್ ಅವರನ್ನು ಭೇಟಿ ಮಾಡಿ ಭಾರತದ ಸ್ವಾತಂತ್ರ್ಯದ ಅಗತ್ಯತೆಯನ್ನು ಚರ್ಚಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟ, ಗಾಂಧೀಜಿ ಚಿಂತನೆಗಳು, ಅಹಿಂಸಾ ತತ್ವ, ಖಾದಿ ಮಹತ್ವ ಕುರಿತಂತೆ ಯಂಗ್ ಇಂಡಿಯ, ಹರಿಜನ್, ಸ್ಟೇಟ್ಸ್ಮನ್, ಹಿಂದೂಸ್ಥಾನ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು.
ಮೀರಾಬೆಹನ್ ಮನಸ್ಸು ವಿಚಲಿತವಾದಾಗ ನಿಗ್ರಹಿಸಲು ಹರಿಯಾಣದ ಸಿಮ್ಲಾ ಹಾಗೂ ಶಿವಾಲಿಕ್ ಹಿಮ ಪರ್ವತಗಳ ಮಧ್ಯೆ ಇದ್ದ ಕೆಲವು ಆಶ್ರಮಗಳಲ್ಲಿ ಒಂದು ವರ್ಷ ಕಾಲ ಮೌನವ್ರತ ಆಚರಿಸಿದರು. ಹಿಮಾಲಯ ತಪ್ಪಲಿನಲ್ಲಿ ಮುಲ್ದಾಸ್‍ಪುರ್ ಎಂಬಲ್ಲಿ ಕಿಸಾನ್ ಆಶ್ರಮವನ್ನು ಸ್ಥಾಪಿಸಿಕೊಂಡು ಬದುಕತೊಡಗಿದರು.
ಮೀರಾಬೆಹನ್ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನ ಭಾರತ ಮತ್ತು ಪಾಕ್ ವಿಭಜನೆ ಕುರಿತಂತೆ ಎದ್ದ ಭಿನ್ನಾಭಿಪ್ರಾಯದಲ್ಲಿ ಗಾಂಧಿ, ನೆಹರೂ, ಜಿನ್ನಾ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡಿದರು. 1947ರಲ್ಲಿ ಹೃಷಿಕೇಶದ ಬಳಿ “ಬಾಪು ಗ್ರಾಮ” ಎಂಬ ಮತ್ತೊಂದು ಆಶ್ರಮವನ್ನು ಸ್ಥಾಪಿಸಿದರು. ದೇಶವಿಭಜನೆಯ ಸಮಯದಲ್ಲಿ ಗಲಭೆಪೀಡಿತ ನೌಕಾಲಿ ಎಂಬಲ್ಲಿಗೆ ತೆರಳಿ ಕೋಮುಗಳ ನಡುವೆ ಸಾಮರಸ್ಯವನ್ನು ಮೂಡಿಸಲು ಶ್ರಮಿಸಿದರು. 1948ರ ಜನವರಿ 30ರಂದು ಹೃಷಿಕೇಶದ ಆಶ್ರಮದಲ್ಲಿದ್ದಾಗ, ಗಾಂಧೀಜಿಯವರ ಹತ್ಯೆಯಾದ ಸುದ್ಧಿಯನ್ನು ಕೇಳಿದ ಮೀರಾ ಬೆಹನ್ ಸತತ ಏಳುಗಂಟೆಗಳ ಕಾಲ ಮೌನವಾಗಿ ತಮ್ಮೊಳಗಿನ ನೋವು, ದುಃಖ, ಹತಾಶೆಗಳನ್ನು ನುಂಗಿಕೊಂಡರು. ಆನಂತರ ತಮ್ಮ ಸಹವರ್ತಿಗಳ ಜೊತೆ ದೆಹಲಿಗೆ ತೆರಳಿ ಗಾಂಧೀಜಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಗಾಂಧೀಜಿ ಹೇಳಿದ್ದ “ನೀನು ಎಲ್ಲೇ ಇರು ದೇವರ ಮೇಲೆ ನಂಬಿಕೆಯಿಡು. ಆತ್ಮ ವಿಶ್ವಾಸ ಕಳೆದುಕೊಂಡು ಹತಾಶ ಮನೋಭಾವ ತಾಳುವುದರಲ್ಲಿ ಅರ್ಥವಿಲ್ಲ. ಸದಾ ನೀನು ಪ್ರೀತಿಸುವ, ನಿನ್ನೊಳಗಿರುವ ಸ್ಪೂರ್ತಿ ನಿನಗೆ ದಾರಿದೀಪವಾಗಬಲ್ಲದು” ಎಂಬ ಮಾತುಗಳು ಮೀರಾ ಅವರ ಬದುಕಿನ ಮೂಲ ಮಂತ್ರಗಳಾದವು.
1959ರ ವರೆಗೆ ಹೃಷಿಕೇಶದ ಬಳಿ ವಾಸವಿದ್ದ ಮೀರಾಬೆಹನ್ ದೇಶಿ ಹಸುಗಳ ಸಂತಾನ ಅಭಿವೃದ್ಧಿಗಾಗಿ ಗೋಪಾಲ ಆಶ್ರಮವೊಂದನ್ನು ಸ್ಥಾಪಿಸಿದರು. ಹಿಮಾಲಯ ತಪ್ಪಲಿನ ನಿಸರ್ಗದಲ್ಲಿ ವಾಸವಾಗಿದ್ದ ಅವರಿಗೆ ಅಲ್ಲಿನ ಅರಣ್ಯನಾಶ ಕಂಡು ಸುಮ್ಮನಿರಲಾಗಲಿಲ್ಲ. ಪರಿಸರದ ನಾಶ ಮತ್ತು ಅಸಮತೋಲನದ ಕುರಿತು ಸ್ಥಳಿಯ ಜನತೆಯನ್ನು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಇದು ಚಿಪ್ಕೊ ಚಳುವಳಿಗೆ ನಾಂದಿಯಾಯಿತು.
1959ರಲ್ಲಿ ಮೀರಾಬೆಹನ್ ಇಂಗ್ಲೆಂಡಿಗೆ ಹೋದರು. ಅಲ್ಲಿಂದ ಆಸ್ಟ್ರಿಯಾದ ವಿಯೆನ್ನಾಗೆ ಹೋಗಿ ನೆಲೆಸಿದ ಅವರು 1982ರ ಜುಲೈ 20ರಂದು ಈ ಲೋಕವನ್ನಗಲಿದರು. ಅವರ ಕುರಿತು ಚಿಂತಿಸುತ್ತ ಹೋದಂತೆ ಮನದಲ್ಲಿ ಶಾಂತಿಮೂಡುತ್ತಿರುವ ವಿಶಿಷ್ಟ ಭಾವ ಮೂಡುತ್ತಿದೆ. ದೊಡ್ಡ ಜೀವಗಳ ಬದುಕೇ ಹಾಗೆ 🌷🙏🌷
On the birth anniversary of great soul Meerabehn, Meerabehen, Meera Bheem
ಕಾಮೆಂಟ್‌ಗಳು