ತಮ್ಮಣ್ಣ ಬೀಗಾರ
ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ತಮ್ಮಣ್ಣ ಬೀಗಾರ ಅವರು ಸಾಹಿತಿಯಾಗಿ, ಶಿಕ್ಷಕರಾಗಿ, ಚಿತ್ರಕಲಾವಿದರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ಬಹುಮುಖಿ ಸಾಧನೆ ಮಾಡಿದ್ದಾರೆ.
ತಮ್ಮಣ್ಣ ಬೀಗಾರ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆಯಲ್ಲಿ ಹೆಸರಾಗಿರುವ ತಮ್ಮಣ್ಣ ಕೋಮಾರ ಅವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ 1959ರ ನವೆಂಬರ್ 22ರಂದು ಜನಿಸಿದರು. ಪ್ರಸ್ತುತ ಸಿದ್ದಾಪುರದಲ್ಲಿ ನೆಲೆಸಿರುವ ತಮ್ಮಣ್ಣನವರು ಸ್ನಾತಕೋತ್ತರ ಪದವಿ ಗಳಿಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ತಮ್ಮಣ್ಣ ಬೀಗಾರ ಅವರ ಕೃತಿಗಳಲ್ಲಿ ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು, ಖುಷಿಯ ಬೀಜ ಹಾಡಿನ ಹಕ್ಕಿ, ಉಲ್ಟಾ ಅಂಗಿ ಮುಂತಾದ ಮಕ್ಕಳ ಕವನ ಸಂಕಲನಗಳು; ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ಮಲ್ಕಾಡೆ ಮಾತಾಡು, ಅಮ್ಮನ ಚಿತ್ರ ಪುಟ್ಟನ ಕೋಳಿ, ಪುಟ್ಟಿಯೂ ಹಾರುತ್ತಿದ್ದಳು ಮುಂತಾದ ಮಕ್ಕಳ ಕಥಾ ಸಂಕಲನಗಳು; ಮಾತಾಟ ಮಾತೂಟ, ಮರಬಿದ್ದಾಗ ಮುಂತಾದ ಮಕ್ಕಳಿಗಾಗಿನ ಲಲಿತ ಬರಹಗಳು; ಬಾವಲಿ ಗುಹೆ, ಫ್ರಾಗಿ ಮತ್ತು ಗೆಳೆಯರು ಮಕ್ಕಳ ಕಾದಂಬರಿಗಳು ಮುಂತಾದವು ಸೇರಿವೆ.
ತಮ್ಮಣ್ಣ ಬೀಗಾರ ಅವರು ಸಾಹಿತಿ ಮಾತ್ರವಲ್ಲದೆ ಚಿತ್ರಕಲಾವಿದರೂ ವ್ಯಂಗ್ಯ ಚಿತ್ರಕಾರರು ಆಗಿದ್ದಾರೆ.
ತಮ್ಮಣ್ಣ ಬೀಗಾರ ಅವರ “ಬಾವಲಿ ಗುಹೆ’ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿ ಸಂದಿದೆ. ಇದಲ್ಲದೆ ಹಸಿರೂರಿನ ಹುಡುಗ ಕೃತಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿಯ ಮಕ್ಕಳ ಚಂದ್ರ ಪ್ರಶಸ್ತಿ, ರಾಜ್ಯ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ವ್ಯಂಗ್ಯ ಚಿತ್ರ ರಚನೆಗಾಗಿ ರಾಜ್ಯಮಟ್ಟದ ಬಹುಮಾನ, ರಾಜ್ಯಮಟ್ಟದ ವಿಜ್ಞಾನ ಗೋಷ್ಠಿ ಬಹುಮಾನ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದ ಅನೇಕ ಗೌರವಗಳು ಸಂದಿವೆ.
ತಮ್ಮಣ್ಣ ಬೀಗಾರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Tammanna Beegar Sir🌷🙏🌷
ಕಾಮೆಂಟ್‌ಗಳು