ಸಂಧ್ಯಾ ನಾಗರಾಜ್
ಸಂಧ್ಯಾ ನಾಗರಾಜ್
ಆತ್ಮೀಯರಾದ ಸಂಧ್ಯಾ ನಾಗರಾಜ್ ಬಹುಮುಖಿ ಪ್ರತಿಭಾವಂತ ಕಲಾವಿದೆ. ಇಂದು ಅವರ ಜನ್ಮದಿನ.
ಸಂಧ್ಯಾ ನಾಗರಾಜ್ ಬಾಲ್ಯದಿಂದಲೇ ಲಲಿತಕಲೆಗಳಲ್ಲಿ ಆಸಕ್ತಿ ರೂಢಿಸಿಕೊಂಡವರು. ಎಂಟನೇ ವಯಸ್ಸಿನಿದಲೇ ಭರತನಾಟ್ಯವನ್ನು ಕಲಿಯಲಾರಂಭಿಸಿದ ಸಂಧ್ಯಾ, ಮಹತ್ವದ ಕಲಾವಂತೆಯಾಗಿ ರೂಪುಗೊಂಡು ನಾಡಿನಾದ್ಯಂತ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದು ಅನೇಕ ನೃತ್ಯ ರೂಪಕಗಳು ಮತ್ತು ಕಾರ್ಯಕ್ರಮಗಳನ್ನು ಸಂಯೋಜಿಸಿ, ನಿರ್ದೇಶಿಸಿದ್ದಾರೆ. ಕಾರ್ಪೊರೇಟ್ ವಲಯದ ಕಾರ್ಯಕ್ರಮಗಳನ್ನೂ ಶೋಭಾಯಮಾನವಾಗಿ ನಿರ್ವಹಿಸಿದ್ದಾರೆ.
ಸಂಧ್ಯಾ ನಾಗರಾಜ್ ಅವರು 2008ರ ವರ್ಷದಿಂದ 'ಸಂಜ್ಞಾ ನಾಟ್ಯಾಲಯ' ಎಂಬ ತಮ್ಮದೇ ಆದ ನಾಟ್ಯಶಾಲೆಯನ್ನು ನಡೆಸುತ್ತಿದ್ದು ಎಲ್ಲ ವಯಸ್ಸಿನ ಆಸಕ್ತರಿಗೂ ತರಬೇತಿ ನೀಡಿ ಮಹತ್ವದ ಪ್ರತಿಭೆಗಳು ಹೊರಹೊಮ್ಮಲು ಕಾರಣರಾಗಿದ್ದಾರೆ.
ಸಂಧ್ಯಾ ನಾಗರಾಜ್ ಚಿತ್ರಕಲೆ ಮತ್ತು ಕುಶಲ ಕಲೆಗಾರಿಕೆಯಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಅವರು ಗುರು ಶ್ರೀಮತಿ ಶೈಲಾ ಪ್ರಸಾದ್ ಅವರಿಂದ ಪ್ರಾರಂಭಿಕ ವರ್ಣಕಲೆ ಅಭ್ಯಾಸ ಮಾಡಿ, ಮುಂದೆ ಪಿಡಿಲೈಟ್ ಇಂಡಸ್ಟ್ರೀಸ್ ಅವರು ವ್ಯವಸ್ಥಾಪಿಸಿದ ಕಲಾಶಿಕ್ಷಕರ ತರಬೇತಿ ಪಡೆದರು. ಸತತ ಸಾಧನೆಯ ನಂತರದಲ್ಲಿ ಸಂಧ್ಯಾ ಅವರು ತಮ್ಮದೇ ಆದ 'ಸಂಜ್ಞಾ ಕಲಾಶಾಲೆ'(Sangna Arts) ಸಂಸ್ಥೆಯನ್ನೂ ಆರಂಭಿಸಿ ಕಲಾತರಬೇತಿ ನೀಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ರಾಜೇಶ್ ಫೈನ್ ಆರ್ಟ್ ಸಹಯೋಗದಲ್ಲಿ ತಮ್ಮದೇ ಸ್ಟುಡಿಯೋ ಸಹಾ ಹೊಂದಿದ್ದಾರೆ.
ನಾವು ಕಂಡ ಹಾಗೆ ಸಂಧ್ಯಾ ನಾಗರಾಜ್ ಅವರು ನೃತ್ಯ ಮತ್ತು ಚಿತ್ರಕಲೆಗಳಲ್ಲಿ ಮಾತ್ರವಲ್ಲದೆ, ಬೊಂಬೆ ತಯಾರಿಕೆ, ಪೇಪರ್ ಕಟ್ಟಿಂಗ್, ವಸ್ತ್ರ ವಿನ್ಯಾಸೀಕರಣ, ವರ್ಣ ರಂಗೋಲಿ ಹೀಗೆ ಹಲವು ರೀತಿಯಲ್ಲಿ ಆಸಕ್ತಿ ಮತ್ತು ಶ್ರದ್ಧೆ ಉಳ್ಳ ಅಪೂರ್ವ ವ್ಯಕ್ತಿತ್ವವುಳ್ಳವರು. ಅವರ ಮನೆಯಲ್ಲಿ ಗಣಪತಿ ಹಬ್ಬ ಮತ್ತು ದಸರಾ ಬೊಂಬೆ ಹಬ್ಬಗಳ ಸಮಯದಲ್ಲಿ ಅವರು ಮೂಡಿಸುವ ಕಲಾವಂತಿಕೆ ಮತ್ತು ನವನವೀನ ವಿನ್ಯಾಸಗಳು ಅದ್ಭುತವೆಂಬ ಭಾವ ನೀಡುವಂತಹವು. ಇಷ್ಟೆಲ್ಲ ಪ್ರತಿಭೆಗಳ ಜೊತೆಗೆ ಅವರ ಮತ್ತು ಅವರ ಸಮಸ್ತ ಕುಟುಂಬದವರ ಸುಸಂಸ್ಕೃತ ಚಿಂತನೆ, ಸರಳ ನಡವಳಿಕೆ ಇವೆಲ್ಲ ಅತ್ಯಂತ ಆಪ್ತವಾದಂತದ್ದು.
ಆತ್ಮೀಯರೂ ಬಹುಮುಖಿ ಪ್ರತಿಭಾವಂತ ಕಲಾವಿದರೂ ಆದ ಸಂಧ್ಯಾ ನಾಗರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of multifaceted artiste Sandhya Nagaraj
ಕಾಮೆಂಟ್ಗಳು