ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೂಪಾ ಗಂಗೂಲಿ


 ದ್ರೌಪದಿ ಮತ್ತು ರೂಪಾ ಗಂಗೂಲಿ 


ಕೆಲವು ಕಲಾವಿದರು ಅವರು ನಿರ್ವಹಿಸಿದ ಪಾತ್ರಗಳಿಂದ ನಮ್ಮ ಮನಸ್ಸಲ್ಲಿ ನಿಲ್ಲುತ್ತಾರೆ. ಕೆಲವೊಂದು ಪಾತ್ರಗಳೂ ಹಾಗೆಯೇ ನಮ್ಮನ್ನಗಲುಗಾಡಿಸುತ್ತವೆ.  ಅದನ್ನು ಸಮರ್ಥವಾಗಿ ಬಿಂಬಿಸುವ ಕಲಾವಿದರೂ ನಮ್ಮ ಮನಸ್ಸನಾವರಿಸುತ್ತಾರೆ.  ಇದೇ ಕಲೆಯ ಗುಣ.

ಮಹಾಭಾರತದಷ್ಟು ಪ್ರತಿಪಾತ್ರವೂ ವೈಶಿಷ್ಟ್ಯಗಳಿಂದ ತುಂಬಿದ ಭವ್ಯತೆ ಮತ್ತೊಂದಿಲ್ಲ.  ಮಹಾಭಾರತದ ಕಥೆಯು ನಾಟಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ಹಲವು ತೆರನಾಗಿ, ಕೆಲವು  ಭಾಗಗಳಾಗಿ ಇಲ್ಲವೇ ಸಂಪೂರ್ಣತೆಯ ಸಂಕ್ಷಿಪ್ತತೆಗಳಲ್ಲಿ ನಿರಂತರವಾಗಿ ಮೂಡಿಬರುತ್ತಲೇ ಇದೆ.  

ಮಹಾಭಾರತದ ಕಥೆ ದೂರದರ್ಶನದ ಧಾರಾವಾಹಿಯಾಗಿ  ಬಂದಾಗ ಜನಸಾಮಾನ್ಯರಾದ ನಮಗೆ ಅದು ಸಾಕಷ್ಟು ವಿಸ್ತೃತವಾಗಿ ಕಂಡಿತು. ಆ ಧಾರವಾಹಿಯಲ್ಲಿನ ಹಲವು ಪಾತ್ರಧಾರಿಗಳಂತೂ ನಾವು ಕಲ್ಪಿಸಿದ್ದ ಮಹಾಭಾರತದ ಪಾತ್ರಗಳ ಸಮೀಪವಾಗಿ ಕಂಡಿದ್ದರು. ಅವುಗಳಲ್ಲಿ ದ್ರೌಪದಿ ಪಾತ್ರನಿರ್ವಹಣೆ ನನ್ನ ಮನಸ್ಸಿನಲ್ಲಿ ಅಗಾಧವಾಗಿ ನೆಲೆ ನಿಂತಿದೆ.

ದ್ರೌಪದಿ ಎಂಬ ಪಾತ್ರಸೃಷ್ಟಿಯೇ ಮನೋಜ್ಞವಾದದ್ದು.  ಎಷ್ಟೊಂದು ಸಂಕೀರ್ಣತೆಗಳನ್ನು ಒಳಗೊಂಡ ಪಾತ್ರವದು. ಒಂದು ರೀತಿ ದ್ರೌಪದಿಯೇ ಸಮಸ್ತ ಮಹಾಭಾರತವನ್ನು ತನ್ನಲ್ಲಿ ಆವಿರ್ಭವಿಸಿಕೊಂಡವಳು.  ಆಕೆ ಚೆಲುವೆ, ಮೋಹಿ, ಬೇಕಿದ್ದು - ಬೇಡದ್ದರ ಕುರಿತು ನಿಷ್ಠುರತೆಯಿಂದ ಸ್ವಯಂ ನಿರ್ಧಾರ ಕೈಗೊಳ್ಳುವ ಸಮರ್ಥೆ, ಧೈರ್ಯವಂತೆ, ದುರಹಂಕಾರಿಗಳ ಕುರಿತು ಮುಖ ಮೂತಿ ನೋಡದೆ ಮಾತಾಡುವವಳು, ಸುಜ್ಞಾನಿ, ಸಾಹಸಿ, ಭಕ್ತೆ; ಅನ್ಯಾಯದ ವಿರುದ್ಧ ರೋಷ - ದ್ವೇಷ - ಸೇಡು ಇವೆಲ್ಲ ಇದ್ದರೂ ಎಲ್ಲ ಪರಿಸ್ಥಿತಿಗಳಲ್ಲಿಯೂ ಅಸಾಮಾನ್ಯ ಸಂಯಮಿ; ತನ್ನ ಪತಿಗಳೈವರಿಗೆ ಬೆನ್ನೆಲುಬಿನ ಶಕ್ತಿ,  ಐದು ವಿಭಿನ್ನ ವ್ಯಕ್ತಿಗಳಿಗೆ ಪತ್ನಿ; ಪತಿಯರು ತನ್ನನ್ನು ಪಣವಾಗಿಟ್ಟು ಮುದುಡಿಕೊಂಡು ಕೂತದ್ದರ ಬಗ್ಗೆ ಜಿಗುಪ್ಸೆ ಇದ್ದರೂ ಪ್ರೀತಿ, ಶಕ್ತಿ, ಸುಖ, ಆಹಾರ ಮತ್ತು ಮಕ್ಕಳ ಕೊಟ್ಟ ವಾತ್ಸಲ್ಯಮಯಿ; ಐವರನ್ನೂ ಸದಾ ಒಂದಾಗಿಟ್ಟ ಮಹತ್ವದ ಕೊಂಡಿ; ಯುದ್ಧದಲ್ಲಿ ಮಕ್ಕಳನ್ನು ಕಳೆದುಕೊಂಡ ದುಃಖಿ ಹೀಗೆ ಆಕೆ ಎಲ್ಲವೂ ಆಗಿದ್ದಳು.  ಆಕೆಯಲ್ ಇಲ್ಲದ್ದನ್ನು ಊಹಿಸುವುದೂ ಕಷ್ಟ. ಆಕೆ ತಾನೇ ಯುದ್ಧ ಮಾಡಲಿಲ್ಲ, ಆದರೆ ಆಕೆಯೇ ಸ್ವಯಂ ದಿವ್ಯಾಸ್ತ್ರವಾಗಿದ್ದಳು.  

ಆಕೆಯ ವಸ್ತ್ರವನ್ನು ಮುಟ್ಟಿದವನನ್ನು ಅವನ ಸಮಸ್ತ ಪರಿವಾರದೊಂದಿಗೆ ಭೀಮಸೇನನ ರೋಷದ ಮೂಲಕ ಇಲ್ಲದಂತೆ ಆಕೆ ಮಾಡಿದ್ದು ಒಂದು ಹಿನ್ನೆಲೆಯ ಶಕ್ತಿಯ ಹಾಗೆ ಕಾಣುತ್ತದೆ.  ಇನ್ನು ನೇರ ಶಕ್ತಿಯಾಗಿ ಆಕೆ ತನ್ನ ವಸ್ತ್ರಾಪಹರಣದ ಸಮಯದಲ್ಲಿ ಅಗ್ನಿಯಾಗಿ ಉರಿದುರಿದು ಹೇಳುತ್ತಾಳೆ, "ನಿಮ್ಮೆಲ್ಲರಿಗೆ ಶಾಪ ನೀಡುತ್ತಿದ್ದೇನೆ ಇಗೋ" ಎಂದು.  ಆಗ ಬೇಡ ಪುತ್ರಿ ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಗಾಂಧಾರಿ ದೈನ್ಯತೆಯಿಂದ, ಭಯದಿಂದ ಬೇಡುತ್ತಾಳೆ. ಹೀಗೆ ಶಾಪ “ನೀಡುತ್ತೇನೆ ಇಗೋ” ಎಂದು ಮಹಾಭಾರತ ಧಾರವಾಹಿಯಲ್ಲಿ ಕಂಪಿಸುತ್ತಾ, ತನ್ನ ಹಿಂದೆ ಮತ್ತೊಂದೆಡೆ  ಬರುವ ದೈನ್ಯತೆಯತ್ತ ತಟಸ್ಥವಾಗುವ ದ್ರೌಪದಿ ಪಾತ್ರಧಾರಿ ರೂಪಾ ಗಂಗೂಲಿ ನನ್ನ ಮನದಲ್ಲಿ ಇನ್ನೂ ಹಾಗೇ ಇದ್ದಾಳೆ.

ಹೀಗೆ ರೂಪಾ ಗಂಗೂಲಿ ಮಹಾಭಾರತದ ಧಾರಾವಾಹಿಯ ದ್ರೌಪದಿ ಪಾತ್ರಧಾರಿಯಾಗಿ ನನ್ನನಾವರಿಸಿದಾಕೆ.  ಇಂದು ಆಕೆಯ ಜನ್ಮದಿನ.  ಹೀಗೆ ಮಹಾಭಾರತದ ಒಂದು ಅದ್ಭುತ ಪಾತ್ರವನ್ನು  ಆಕೆಯ ಹುಟ್ಟುಹಬ್ಬದ ಮೂಲಕ ಸ್ಮರಿಸಿದೆ.  ನಿಜಕ್ಕೂ ರೂಪಾ ಗಂಗೂಲಿಯಲ್ಲಿ ದ್ರೌಪದಿ ಎದ್ದು ಕಾಣುವಂತಿದ್ದಳು.

ಈಗ ವಾಸ್ತವದ ರೂಪಾ ಗಂಗೂಲಿ ಬಳಿಗೆ ಬರುತ್ತೇನೆ.  ಈಕೆ ಪ್ರಧಾನವಾಗಿ ಬಂಗಾಲಿ, ಹಿಂದೀ ಚಲನಚಿತ್ರಗಳು ಮತ್ತು ಕಿರುತೆರೆ ಕಲಾವಿದೆ. ರಬೀಂದ್ರ ಸಂಗೀತ ಮತ್ತು ನೃತ್ಯ ಕಲಾವಿದೆಯಾಗಿಯೂ ಅವರು ಖ್ಯಾತರು. ರಾಜ್ಯಸಭೆಗೆ ನಾಮಾಂಕಿತ ಸದಸ್ಯರಾಗಿದ್ದ ಅವರು  ರಾಜಕಾರಣಿಯೂ ಆಗಿದ್ದಾರೆ. ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿರುವ ಆಕೆ ಬಂಗಾಲಿಯ ಅನೇಕ ಶ್ರೇಷ್ಠಮಟ್ಟದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ರೂಪಾ ಗಂಗೂಲಿ 1966ರ ನವೆಂಬರ್ 25ರಂದು ಕೋಲ್ಕೊತ್ತಾದಲ್ಲಿ ಜನಿಸಿದರು. ತಂದೆ. ಸಮರೇಂದ್ರ ಲಾಲ್ ಗಂಗೂಲಿ. ತಾಯಿ ಜುತಿಕಾ ಗಂಗೂಲಿ.  ರೂಪಾ ಕೊಲ್ಕೊತ್ತಾ ವಿಶ್ವವಿದ್ಯಾಲಯದ ಪದವೀಧರೆಯಾದರು. ಯಾವುದೋ ಮದುವೆ ಸಮಾರಂಭದಲ್ಲಿ 1986ರಲ್ಲಿ ಬಿಜೊಯ್ ಚಟರ್ಜಿ ಅವರ ಕಣ್ಣಿಗೆ ಬಿದ್ದು ರಬೀಂದ್ರರ ಕಥೆ ಆಧರಿಸಿದ ದೂರದರ್ಶನದ 'ನಿರುಪಮಾ' ಎಂಬ ಚಿತ್ರದಲ್ಲಿ ಅಭಿನಯಿಸಿ ಹೆಸರಾದರು.

1986-87 ಅವಧಿಯಲ್ಲಿ, ಅನಿಲ್ ಕಫೂರ್ ನಟಿಸಿದ ಹಿಂದೀ ಚಿತ್ರ ಸಾಹೇಬ್, ಮಲಯಾಳದ ಮುಮ್ಮೂಟಿ ನಟಿಸಿದ  ಇತಿಲೆ ಇನಿಯುಮ್ ವಾರು, ಬಂಗಾಳಿ ಧಾರಾವಾಹಿ 'ಮುಕ್ತಬಂಧ' ಮತ್ತು ಬಂಗಾಲಿ ಚಿತ್ರ 'ಪ್ರತೀಕ್' ಮುಂತಾದವು ರೂಪಾ ಗಂಗೂಲಿ ಅವರ ಇತರ ಪ್ರಾರಂಭಿಕ ಹೆಜ್ಜೆಗಳು.  1988-90 ಅವಧಿಯಲ್ಲಿ ಅವರು ಬಿ. ಆರ್. ಚೋಪ್ರಾ ಅವರ ಮಹಾಭಾರತ ಸರಣಿಯ ದ್ರೌಪದಿ ಪಾತ್ರಧಾರಿಯಾದರು.

ವಿಷ್ಣುವರ್ಧನ್ ನಟಿಸಿದ ಕನ್ನಡ ಮತ್ತು  ಹಿಂದೀ ಎರಡೂ ಭಾಷೆಗಳಲ್ಲಿ ಮೂಡಿದ 'ಪೋಲೀಸ್ ಮತ್ತು ದಾದಾ' ಚಿತ್ರದಲ್ಲೂ ಈಕೆ ಅಭಿನಯಿಸಿದ್ದರು.  'ಈ ಭಾವಗೀತೆಗೆ ನೀನೇ ಸಂಗೀತವು' ಗೀತೆಗೆ ಆಕೆಯ ಅಭಿನಯ ಕೂಡಾ ನನ್ನ ನೆನಪಲ್ಲಿದೆ.  ಅವರ ಮತ್ತೊಂದು ಕನ್ನಡ ಚಿತ್ರ ಅಂಬರೀಷ್ ಜೊತೆಗೆ 'ಕದನ'.  ಅವರು ತೆಲುಗು, ಅಸ್ಸಾಮ್, ಒಡಿಯಾ ಮುಂತಾದ ಹಲವು ಭಾಷೆಗಳಲ್ಲೂ ನಟಿಸಿದ್ದಾರೆ.

ರೂಪಾ ಗಂಗೂಲಿ ಅಭಿನಯಿಸಿದ ಚಿತ್ರಗಳಲ್ಲಿ ಮೃಣಾಲ್ ಸೇನ್ ಅವರ ಏಕ್  ದಿನ್ ಅಚಾನಕ್ (1989), ಗೌತಮ್ ಘೋಷ್‌ರವರ ಪದ್ಮಾ ನಾಡಿರ್ ಮಾಜಿ (1993), ಅಪರ್ಣಾ ಸೇನ್‌ರವರ ಯುಗಾಂತ್ (1995), ಗೌತಮ್ ಘೋಷ್ ಅವರ ಅಕ್ಬರ್ ಆರನ್ಯೇ (2003), ರಿತುಪರ್ಣೋ ಘೋಷ್ ಅವರ ಅಂತರಮಹಲ್ (2006), ಅಂಜನ್ ದತ್ತಾ ಅವರ ತರ್ಪೋರ್ ಭಲೋಬಸ,  ಬೌ ಬ್ಯಾರಕ್ಸ್ ಫಾರ್ಎವರ್ (ಇಂಗ್ಲಿಷ್) ಚಿತ್ರಗಳು ಕೂಡಾ ಸೇರಿದೆ. ಇದಲ್ಲದೆ ಕಾಲೇರ್ ರಕಾಲ್, ಚೌರಾಸ್ತಾ - ದ ಕ್ರಾಸ್ ರೋಡ್ಸ್ ಆಫ್ ಲವ್, ಚೌರಾಹೇನ್, ನಾ ಹನ್ನಾಯ್ತೆ, ದತ್ ವರ್ಸಸ್ ದತ್ತ, ಪುನಶ್ಚ ಸಹಾ ಮುಂತಾದವು ಅವರ ಹೆಸರಾಂತ ಅಭಿನಯದ ಚಿತ್ರಗಳಾಗಿವೆ.

ಕಾನೂನ್, ಚಂದ್ರಕಾಂತ, ಕರಮ್ ಅಪ್ನಾ ಅಪ್ನಾ, ಕಸ್ತೂರಿ, ಅಗ್ಲೇ ಜನಮ್ ಮೊಹೆ ಬಿತಿಯಾ ಹಿ ಕಿಜೊ, ಜನ್ಮಭೂಮಿ, ದ್ರೌಪದಿ, ಇಂಗೀತ್, ತಿಥಿರ್ ಅತಿಥಿ ಮುಂತಾದವು ರೂಪಾ ಗಂಗೂಲಿ ಅವರ ಕೆಲವು ಪ್ರಮುಖ ಕಿರುತೆರೆಯ ಧಾರಾವಾಹಿಗಳು. 

ಸ್ಟಾರ್ ಪ್ಲಸ್ ಜನಪ್ರಿಯ ರಿಯಾಲಿಟಿ ಶೋ ಸಚ್ ಕಾ ಸಾಮ್ನಾ ಮತ್ತು ಬ್ರಿಟಿಷ್ ರಿಯಾಲಿಟಿ ಶೋ ದಿ ಮೂಮೆಂಟ್ ಆಫ್ ಟ್ರೂತ್'ನ  ಭಾರತೀಯ ಅವತರಿಣಿಕೆ ಮುಂತಾದವು ರೂಪಾ ಅವರ ಕಿರುತೆರೆಯ ಹಲವು ಭಾಗವಹಿಕೆಗಳು.

ಅಬೊಶೆಶೆಯ್ ಬಂಗಾಳಿ ಚಿತ್ರದ ಹಿನ್ನೆಲೆ ಗಾಯನಕ್ಕೆ ರಾಷ್ಟ್ರೀಯ ಪುರಸ್ಕಾರ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಕೆಲವು ಪ್ರಶಸ್ತಿಗಳು, ಬಂಗಾಲಿ ಚಲನಚಿತ್ರ ವಿಮರ್ಶಕರ ಪ್ರಶಸ್ತಿ, ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ರೂಪಾ ಗಂಗೂಲಿ ಅವರಿಗೆ ಸಂದಿವೆ.

On the birthday of Mahabharath Draupadi fame Roopa Ganguly

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ