ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮೋಲ್ ಪಾಲೇಕರ್


 ಅಮೋಲ್ ಪಾಲೇಕರ್


ಅಮೋಲ್ ಪಾಲೇಕರ್ ಸೃಜನಶೀಲ ಚಿತ್ರಕಾರ, ರಂಗಭೂಮಿ, ಕಿರುತೆರೆ ಮತ್ತು ಚಿತ್ರರಂಗಗಳ ನಟ, ನಿರ್ದೇಶಕ ಮತ್ತು ನಿರ್ಮಾಪಕರು.  

ಅಮೋಲ್ ಪಾಲೇಕರ್ 1944ರ ನವೆಂಬರ್ 24ರಂದು  ಮುಂಬೈನ ಮಧ್ಯಮ ವರ್ಗದ ಕಮಲಾಕರ್ ಮತ್ತು  ಸುಹಾಸಿನಿ ಪಾಲೇಕರ್  ದಂಪತಿಗಳ ಪುತ್ರರಾಗಿ  ಜನಿಸಿದರು. 

ಪ್ರತಿಷ್ಟಿತ ಮುಂಬೈನ ಸರ್ ಜೆ ಜೆ ಕಲಾ ಶಾಲೆಯಿಂದ ಕಲಾವಿದರಾಗಿ ಹೊರಬಂದ ಅಮೋಲ್ ಪಾಲೇಕರ್ ಹಲವಾರು ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ್ದರು.  ಅದೇ ಸಮಯದಲ್ಲಿ ಅವರು ರಂಗಭೂಮಿಯಲ್ಲೂ ತೊಡಗಿಕೊಂಡು ಮರಾಠಿಯಲ್ಲಿ ಸತ್ಯದೇವ್ ದುಬೆಯವರ ರಂಗತಂಡದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.  ಪೂರ್ಣ ಪ್ರಮಾಣದಲ್ಲಿ ಅಭಿನಯಕ್ಕೆ ತೊಡಗಿಕೊಳ್ಳುವುದಕ್ಕೆ ಮುಂಚೆ ಅವರು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದರು. 

ಮುಂದೆ ಅಮೋಲ್ ಪಾಲೇಕರ್ ತಾವೇ  ‘ಅನಿಕೇತ’ ಎನ್ನುವ  ರಂಗತಂಡವೊಂದನ್ನು ಕಟ್ಟಿ ಅನೇಕ ಮರಾಠಿ ನಾಟಕಗಳನ್ನು ಆಡತೊಡಗಿದರು.  ‘ಇಪ್ಟಾ’ ಸಾಂಸ್ಕೃತಿಕ ಸಂಘಟನೆಯ ಪ್ರೇರಣೆಯಿಂದಾಗಿ ಬೀದಿ ನಾಟಕಗಳ ಮೂಲಕ ಜನಜಾಗೃತಿ ಉಂಟುಮಾಡಲು ಶ್ರಮಿಸಿದರು. ಎಡಪಂಥೀಯ ಪ್ರಗತಿಪರ ಚಿಂತಕರಾದ ಅಮೋಲ್ ಪಾಲೇಕರ್ ತಮ್ಮ ನಾಟಕಗಳಲ್ಲೆಲ್ಲಾ ತಮ್ಮ ವಿಚಾರಧಾರೆಯನ್ನು ಭಿತ್ತಿದ್ದಾರೆ.  ಮರಾಠಿ ಹಾಗೂ ಹಿಂದಿ ರಂಗಭೂಮಿಯಲ್ಲಿ  ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ರಂಗಸಂಘಟಕರಾಗಿ ಆಧುನಿಕ   ಭಾರತೀಯ ರಂಗಭೂಮಿಗೆ ಅಮೋಲ್ ಪಾಲೇಕರ್  ನೀಡಿರುವ ಕೊಡುಗೆ ಅಪಾರವಾದದ್ದು.

ಅಮೋಲ್ ಪಾಲೇಕರ್ ತಮ್ಮ ರಂಗಭೂಮಿಯ ನಂಟಿನಿಂದಲೇ ಸಿನಿಮಾ ಲೋಕಕ್ಕೆ ಬಂದರು. ಸತ್ಯದೇವ್ ದುಬೆ ಅವರು ವಿಜಯ್ ತೆಂಡೂಲ್ಕರರು ರಚಿಸಿ  ಜನಪ್ರಿಯ ಪ್ರದರ್ಶನಗಳನ್ನು ಕಂಡಿದ್ದ  ‘ಶಾಂತತಾ ಕೋರ್ಟ ಚಾಲೂ ಹೈ’  ನಾಟಕವನ್ನು ಚಲನಚಿತ್ರವಾಗಿಸಿದಾಗ ಅಮೋಲ್ ಪಾಲೇಕರ್ ಅದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.  ಅಮೋಲ್ ಪಾಲೇಕರ್ ಅವರಿಗಿದ್ದ ಅಭಿನಯ ಸಾಮರ್ಥ್ಯವನ್ನು ತಿಳಿದಿದ್ದ ಬಸು ಚಟರ್ಜಿ, ಅವರನ್ನು ತಮ್ಮ ‘ರಜನಿಗಂಧ’ ಚಿತ್ರದಲ್ಲಿ ನಾಯಕರನ್ನಾಗಿಸಿದರು. ಕಡಿಮೆ ಖರ್ಚಿನಲ್ಲಿ ತಯಾರಾಗಿದ್ದರೂ ಆ ಚಿತ್ರ ಅಪಾರ ಜನಪ್ರಿಯತೆ ಗಳಿಸಿತು.  ಮುಂದೆ ‘ಚೋಟಿ ಸಿ ಬಾತ್’ ಸಹಾ ಇದೇ ರೀತಿಯಲ್ಲಿ ಜಯಭೇರಿ ಬಾರಿಸಿತು. 'ಚಿತ್ ಚೋರ್' ಚಿತ್ರವಂತೂ  ಚಲನಚಿತ್ರರಂಗದ ಒಂದು ಮೈಲುಗಲ್ಲು.  ಆ ಚಿತ್ರದಲ್ಲಿನ ಅಮೋಲ್ ಪಾಲೇಕರ್, ಜರೀನಾ ವಾಹಬ್, ಅಶೋಕ್ ಕುಮಾರ್ ಮುಂತಾದವರ ಅಭಿನಯ, ರವೀಂದ್ರ ಜೈನ್ ಸಂಗೀತ,  ಏಸುದಾಸ್ - ಹೇಮಲತಾ ಗಾಯನ ಇವೆಲ್ಲಾ ಚಿರಸ್ಮರಣೀಯವಾದದ್ದು. ಮತ್ತೋರ್ವ ಪ್ರಸಿದ್ಧ ಸದಭಿರುಚಿಯ  ಚಿತ್ರ ನಿರ್ದೇಶಕರಾದ  ಹೃಷಿಕೇಶ್ ಮುಖರ್ಜಿ ಅವರು ಅಮೋಲ್ ಪಾಲೇಕರ್ ಅವರ ಅಭಿನಯದಲ್ಲಿ ಮೂಡಿಸಿದ  ‘ಗೋಲ್ ಮಾಲ್’ ಮತ್ತು ‘ನರಂ ಗರಂ’ ಚಿತ್ರಗಳೂ ಅಪಾರ ಜನಪ್ರಿಯತೆ ಕಂಡವು.  ‘ಗೋಲ್ ಮಾಲ್’ ಚಿತ್ರದಲ್ಲಿನ ಅಭಿನಯ ಅಮೋಲ್ ಪಾಲೇಕರ್ ಅವರಿಗೆ ಪ್ರತಿಷ್ಠಿತ ಫಿಲಂ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ತಂದುಕೊಟ್ಟಿತು.  ನೆರೆಮನೆಯ ಹುಡುಗನಂತಿದ್ದ ಅವರ ಪಾತ್ರ ನಿರ್ವಹಣೆಯಿಂದಾಗಿ ಅವರು 1970ರ ದಶಕದಲ್ಲಿ ಒಬ್ಬ ಜನಪ್ರಿಯ ನಟರಾಗಿದ್ದರು.  ನಟನೆಗಾಗಿಯೇ ಅವರು 3 ಫಿಲಂಫೇರ್ ಮತ್ತು 6 ರಾಜ್ಯ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ್ದರು.  ಹಿಂದಿಯಲ್ಲಷ್ಟೇ ಅಲ್ಲದೆ ಮರಾಠಿ, ಬಂಗಾಳಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸಿ ಚಿತ್ರ ವಿಮರ್ಶಕರಿಂದಲೂ ಪ್ರಶಂಸೆಗೆ ಪಾತ್ರರಾದರು. ‘ಗೋಲ್ ಮಾಲ್’, ‘ಘರೋಂಡ’, ‘ಬಾತೋಂ ಬಾತೋಂ ಮೇ’ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಇಂದಿಗೂ ಜನಮನದಲ್ಲಿ ಹಸಿರಾಗಿವೆ. ಕನ್ನಡದಲ್ಲಿ ಅವರು ಎಂ. ಎಸ್. ಸತ್ಯು ನಿರ್ದೇಶನದ ‘ಕನ್ನೇಶ್ವರ ರಾಮ’ ಮತ್ತು ‘ಸಂಸ್ಕಾರ’ ಖ್ಯಾತಿಯ ಪಟ್ಟಾಭಿರಾಮರೆಡ್ಡಿ ಅವರ ‘ಪೇಪರ್ ಬೋಟ್’ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಮುಂದೆ ಅಮೋಲ್ ಪಾಲೇಕರ್ ಚಿತ್ರ ನಿರ್ಮಾಣ ಮತ್ತು ನಿರ್ದೇಶನದತ್ತ ಗಮನ ಹರಿಸಿದರು.  ಅವರ ನಿರ್ದೇಶನದ ಮೊಟ್ಟಮೊದಲ ಮರಾಠಿ ಚಲನಚಿತ್ರ ‘ಅಕ್ರೀತ್’  ಅತ್ಯತ್ತಮ ಚಲನಚಿತ್ರ ಪ್ರಶಸ್ತಿ ಗಳಿಸಿತು.  ನಂತರದಲ್ಲಿ ‘ಅನ್ ಕಹೀ’, ‘ಥೋಡಾಸಾ ರುಮಾನಿ ಹೋ ಜಾಯೆ’, ‘ಬಂಗಾರವಾಡಿ’, ‘ದಾಯರಾ’,  ‘ಅನಹತ್’, ‘ಕಯಿರೀ’, ‘ಧ್ಯಾಸ ಪರ್ವ’, ‘ಪಹೇಲಿ’,  ‘ಕ್ವೆಸ್ಟ್’, ‘ದುಂಕಟ’, ‘ಸಮಾಂತರ್’, ‘ಅಂಡ್ ಒನ್ಸ್ ಎಗೈನ್’, ‘ದೂಸರ್’  ಮುಂತಾದ  ಹದಿನಾಲ್ಕು ಚಲನಚಿತ್ರಗಳನ್ನು ನಿರ್ದೇಶಿಸಿ ಸೃಜನಾತ್ಮಕ ನಿರ್ದೇಶಕರ ಸಾಲಿಗೆ ಸೇರಿದರು. ಅವರ ಧ್ಯಾಸ ಪರ್ವ ಮತ್ತು ಕ್ವೆಸ್ಟ್ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಗಳನ್ನೂ. ದೂಸರ್ ಚಿತ್ರ ಮಹಾರಾಷ್ಟ್ರ ರಾಜ್ಯದ ಚಲನಚಿತ್ರ ಪ್ರಶಸ್ತಿಯನ್ನೂ ಗಳಿಸಿವೆ.  ಅವರ ‘ಪಹೇಲಿ’ ಚಿತ್ರ 2006 ವರ್ಷದಲ್ಲಿ ಆಸ್ಕರ್ ಪ್ರಶಸ್ತಿಗೆ ಸ್ಪರ್ಧೆಗೆ ನಾಮಾಂಕಣಗೊಂಡಿತ್ತು.

ಅಮೋಲ್ ಪಾಲೇಕರ್ ರಾಷ್ಟ್ರೀಯ ದೂರದರ್ಶನ ಜಾಲಕ್ಕಾಗಿ  ಕಚ್ಚೀ ದೂಪ್, ಮೃಗಯಾನಿ, ನಾಕೂಬ್, ಪಾವೋಲ್ ಕೌನಾ, ಕೃಷ್ಣಾ ಕಲಿ, ಏಕ್ ನಯೀ ಉಮೀದ್ ರೋಷಿನಿ ಮುಂತಾದ ಕಿರುತೆರೆಯ ಧಾರಾವಾಹಿಗಳನ್ನೂ  ನಿರ್ದೇಶಿಸಿದ್ದಾರೆ. 

“ತಮ್ಮ ಚಿತ್ರವೊಂದಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಬಂದ ಹಣವನ್ನು ತಮ್ಮ ಚಿತ್ರದ ಪ್ರತಿಯೊಬ್ಬ ಕಲಾವಿದ ತಂತ್ರಜ್ಞನಿಗೂ ಹಂಚಿದ ಹೃದಯವಂತ ಅಮೋಲ್ ಪಾಲೇಕರ್” ಎಂದು ಕನ್ನಡದ ಪ್ರಸಿದ್ಧ ನಟ ಅನಂತನಾಗ್ ಸಂದರ್ಶನವೊಂದರಲ್ಲಿ ಅವರನ್ನು ಪ್ರಶಂಸಿಸಿದ್ದರು.

ಈ ಮಹಾನ್ ಪ್ರತಿಭಾವಂತರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

On the birth day of great artiste Amol Palekar 

ಕಾಮೆಂಟ್‌ಗಳು

  1. ಅತ್ಯಂತ ಸಭ್ಯ ಸಜ್ಜನ ಪಾತ್ರಗಳಲ್ಲಿ ಜೀವ ತುಂಬಿದ ನಟ. ಸಾಫ್ಟ್ ರೊಮಾಂಟಿಕ್ ಹೀರೊ...ನೈಜ ಅಭಿನಯ ನೀಡಬಲ್ಲವರು.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ