ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಮೇತನಹಳ್ಳಿ


ಸಮೇತನಹಳ್ಳಿ ರಾಮರಾಯರು


ಸಮೇತನಹಳ್ಳಿ ರಾಮರಾಯರು ಐತಿಹಾಸಿಕ ಕಾದಂಬರಿಗಳಿಗೆ ಪ್ರಸಿದ್ಧರಾದವರು.

ಸಮೇತನಹಳ್ಳಿ ರಾಮರಾಯರು 1917ರ ನವೆಂಬರ್ 24ರಂದು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸರಾವ್, ತಾಯಿ ರುಕ್ಮಿಣಿಯಮ್ಮ.  ರಾಯರ ಪ್ರಾರಂಭಿಕ ಶಿಕ್ಷಣ ಬೋದನ ಹೊಸಹಳ್ಳಿ, ಮೈಸೂರು, ದೊಡ್ಡಬಳ್ಳಾಪುರಗಳಲ್ಲಿ ನಡೆದು. ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನಿಂದ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದರು.

ಮುಂದೆ ರಾಮರಾಯರು ಉದ್ಯೋಗಕ್ಕಾಗಿ ಕೆಲಕಾಲ ವೈಮಾನಿಕ ಕಚೇರಿ, ಸೈನಿಕ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿ  ನಂತರದಲ್ಲಿ  ಮೈಸೂರು ಸರ್ಕಾರದ  ಆರೋಗ್ಯ ಇಲಾಖೆಯಲ್ಲಿ ಸ್ಯಾನಿಟರಿ ಇನ್‌ಸ್ಪೆಕ್ಟರಾಗಿ ಕಾರ್ಯನಿರ್ವಹಿಸಿದರು. ಬೆಂಗಳೂರು ಪುರಸಭೆ, ಹಾಸನ ಪುರಸಭೆ, ಬ್ಯೂರೊ ಆಫ್ ಮಲೇರಿಯಾಲಜಿ ಮುಂತಾದ ಕಡೆ ಹಿರಿಯ ಆರೋಗ್ಯ ತಪಾಸಣಾಧಿಕಾರಿಯಾಗಿ, ಮಧುಗಿರಿ ಪುರಸಭೆ, ಪಾಂಡವಪುರ ಆರೋಗ್ಯಕೇಂದ್ರ, ನಂಜನಗೂಡು ತಾಲ್ಲೂಕು, ಹೊಸಕೋಟೆ ಆರೋಗ್ಯಕೇಂದ್ರ, ಹೀಗೆ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತರಾದರು.

ರಾಮರಾಯರಿಗೆ ಸಾಹಿತ್ಯದಲ್ಲಿ ಅಪಾರ ಒಲವು.  ಹೀಗೆ ಬೆಳೆದ ಸಾಹಿತ್ಯದ ಒಲವಿನಿಂದ ಅವರು  ಅನೇಕ ಕೃತಿಗಳನ್ನು ರಚಿಸಿದರು. ಭೀಷ್ಮ ಸಂಕಲ್ಪ, ತಲಕಾಡುಗೊಂಡ, ಮಹಾಶ್ವೇತೆ, ಶಿಲ್ಪಸಂಗೀತ, ದ್ರೋಹಾಡಂಬರ, ಶ್ರೀಕೃಷ್ಣ ಮಾನಸ ಮುಂತಾದ ಹತ್ತು ನಾಟಕಗಳು; ಎಲೆ ಮರೆಯ ಹೂ, ಮೊನೆಗಾರ, ನೃತ್ಯ ಸರಸ್ವತಿ, ಯದುವೊಡೆಯ, ಸಿರಿಯಲದೇವಿ ಮೊದಲ್ಗೊಂಡು ಒಂಬತ್ತು ಕಾದಂಬರಿಗಳು;  ಸ್ವರ್ಗ ಸೋಪಾನ, ಪ್ರಾಣವೀಣೆ, ಈಸಬೇಕು ಮುಂತಾದ ಕಥಾ ಸಂಕಲನಗಳು; ರಾಸಲೀಲೆ ಎಂಬ ಗೀತನಾಟಕ; ಶಾಕುಂತಲಾ ಮಹಾಕಾವ್ಯ;   ಟಿಪ್ಪು ಸುಲ್ತಾನ ಎಂಬ ಅನುವಾದ; ಆತ್ಮಕಥೆಯಾದ ಕೋಟೆಮನೆ ಮುಂತಾದ ಸುಮಾರು 30 ಕೃತಿಗಳನ್ನು ಪ್ರಕಟಿಸಿದರು.

ರಾಮರಾಯರ ಎಲೆಮರೆಯ ಹೂ ಪ್ರೌಢಶಾಲಾ ತರಗತಿಗೆ, ತಲಕಾಡುಗೊಂಡ ನಾಟಕ ಬಿ.ಎ, ಬಿ.ಎಸ್‌ಸಿ  ಮತ್ತು ಪಿ.ಯು. ತರಗತಿಗಳಿಗೆ, ಸವತಿ ಗಂಧವಾರಣೆ ಕಾದಂಬರಿ ಬಿಕಾಂ ತರಗತಿಗೆ, ನಾಟ್ಯಮಂದಾರ ನಾಟಕ ಬಿ.ಎ. ತರಗತಿಗೆ ಪಠ್ಯಪುಸ್ತಕಗಳಾಗಿ ಆಯ್ಕೆಯಾಗಿದ್ದವು.

ಸಮೇತನಹಳ್ಳಿ ರಾಮರಾಯರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಶಿಲ್ಪಸಂಗೀತ, ಶ್ರೀಕೃಷ್ಣ ದರ್ಶನ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ  ಪ್ರಶಸ್ತಿ;  ತಲಕಾಡುಗೊಂಡ, ಸ್ವರ್ಗಸೋಪಾನ, ಶಾಕುಂತಲಾ ಕೃತಿಗಳಿಗೆ ಕರ್ನಾಟಕ ಸರಕಾರದಿಂದ ಪ್ರಶಸ್ತಿ;  ಪರಶುರಾಮ ಕಾದಂಬರಿಗೆ ವಿಶ್ವೇಶ್ವರಯ್ಯ ಸ್ಮಾರಕ ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದವು.  1998ರಲ್ಲಿ ಕನ್ನಡ ಸಾಹಿತ್ಯ ಬಂಧುಗಳು ರಾಮರಾಯರಿಗೆ ‘ರಾಸದರ್ಶನ’ ಎಂಬ ಗೌರವ ಗ್ರಂಥವನ್ನು ಅರ್ಪಿಸಿದರು. 

ಸಮೇತನಹಳ್ಳಿ ರಾಮರಾಯರ  ಶ್ರೀಮತಿಯವರ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪನೆ; ರಾಮರಾಯರ  ಹೆಸರಿನಲ್ಲಿ ಬಿ.ಎಂ.ಶ್ರೀ. ಪ್ರತಿಷ್ಠಾನ ಮತ್ತು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ದತ್ತಿನಿಧಿ ಸ್ಥಾಪನೆಗಳು ಸಮೇತನಹಳ್ಳಿ ರಾಮರಾಯರ ಹೆಸರಿನಲ್ಲಿ ಉತ್ತಮ ಕೆಲಸಗಳು ಮುಂದುವರೆಯುವಂತೆ ಮಾಡಿವೆ. 

ಸಮೇತನಹಳ್ಳಿ ರಾಮರಾಯರು 1999ರ ವರ್ಷದಲ್ಲಿ ಈ ಲೋಕವನ್ನಗಲಿದರು.

On the birth anniversary of great novelist Samethanahalli Ramarao 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ