ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹುತ್ತರಿ


ಕೊಡಗಿನ ಹುತ್ತರಿ ಸಂಭ್ರಮ


ಹುತ್ತರಿ ಹಬ್ಬ ಕೊಡವರಿಗೆ ದೀಪಾವಳಿ ಇದ್ದಂತೆ. ಇದು ಸುಗ್ಗಿ ಹಬ್ಬ. ಭತ್ತ ಬೆಳೆದ ರೈತರು ಅದನ್ನು ಕೊಯ್ಲು ಮಾಡಿ ಮನೆ ತುಂಬಿಸಿಕೊಳ್ಳುವ ಸಾಂಕೇತಿಕ ಆಚರಣೆ ಹುತ್ತರಿ ಹಬ್ಬದ ವೈಶಿಷ್ಟ್ಯ.  ಕೊಡಗಿನ ಪರಿಸರ ಈಗ ಹಸಿರು ಹಚ್ಚಡ ಹೊದ್ದು ಮಲಗಿದಂತೆ ಕಾಣುತ್ತಿದೆ. ಭತ್ತದ ಪೈರುಗಳು ತೆನೆ ಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತಿವೆ. ಸಣ್ಣಗೆ ಚಳಿಯೂ ಆರಂಭವಾಗಿದೆ.

ಕೊಡವ ಭಾಷೆಯಲ್ಲಿ ಪುತ್ತರಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ ಎಂದರ್ಥ. ರೈತರು ತಾವು ಬೆಳೆದದ್ದನ್ನು ಶಾಸ್ತ್ರೋಕ್ತವಾಗಿ ಕೊಯ್ಲು ಮಾಡಿ ತಂದು ಮನೆ ತುಂಬಿಸಿಕೊಳ್ಳುವುದು ಹುತ್ತರಿಯ ವೈಶಿಷ್ಟ್ಯ. ಹುತ್ತರಿ ಹುಣ್ಣಿಮೆಯಂದು ಆಚರಣೆಯಾಗುತ್ತದೆ. ಹುಣ್ಣಿಮೆ ಚಂದ್ರನ ಉದಯವಾಗುತ್ತಿದ್ದಂತೆ ಹಬ್ಬದ ಆಚರಣೆಗಳು ಆರಂಭವಾಗುತ್ತವೆ. ಯುವಕರು ಪಟಾಕಿ ಸಿಡಿಸುವುದರ ಮೂಲಕ ಹಬ್ಬವನ್ನು ಬರಮಾಡಿಕೊಳ್ಳುತ್ತಾರೆ. ಈ ಮೂಲಕ ಕತ್ತಲು ಹಾಗೂ ನಿಶ್ಶಬ್ದವನ್ನು ಹೊಡೆದೋಡಿಸುತ್ತಾರೆ. ಜತೆಗೆ ಕೋಲಾಟದವರ ದುಡಿಯ ಸದ್ದು ಮಾರ್ದನಿಗೊಳ್ಳುತ್ತದೆ.

ಹಬ್ಬದ ಸಾಂಪ್ರದಾಯಿಕ ಆಚರಣೆಗಳು ಆರಂಭವಾಗುವುದು ನೆಲ್ಲಕ್ಕಿ ಬಾಡೆಯಿಂದ. ಸಾಂಪ್ರದಾಯಿಕ ಉಡುಪು ಧರಿಸಿ ಮೇಲಂಗಿ ತೊಟ್ಟು ಸೊಂಟಕ್ಕೆ ನಡುಪಟ್ಟಿ ಬಿಗಿದು ಅದರಲ್ಲಿ ಪೀಚೆಕತ್ತಿಯನ್ನು ಸಿಕ್ಕಿಸಿಕೊಂಡ ಕುಟುಂಬದ ಮುಖ್ಯಸ್ಥ ನೆಲ್ಲಕ್ಕಿ ಬಾಡೆಯಲ್ಲಿ ಬೆಳಗುತ್ತಿರುವ ತೂಗು ದೀಪದ ಮುಂದೆ ಕೈಜೋಡಿಸಿ ನಿಂತು ಕುಲದೇವರನ್ನು ಪ್ರಾರ್ಥಿಸುತ್ತಾನೆ. 

ಹುತ್ತರಿ ಹಬ್ಬದ ಸಂದರ್ಭದಲ್ಲಿ ಕದಿರು ತೆಗೆಯಲು ಹೋಗುವಾಗ ಪುತ್ತರಿ ಕತ್ತಿಯನ್ನು ತೆಗೆದು ತರುವ ಕಾರ್ಯ ನಿರಾತಂಕವಾಗಿ ನಡೆಸುವ ಜವಾಬ್ದಾರಿ ಕುಲದೈವ ಇಗ್ಗುತ್ತಪ್ಪನಿಗೆ ಸೇರಿದ್ದು ಎಂಬುದು ಪ್ರಾರ್ಥನೆಯ ಆಶಯ. ಬಳಿಕ ಮನೆ ಮಂದಿಯಲ್ಲಾ ಒಟ್ಟುಗೂಡಿ ಭತ್ತದ ಗದ್ದೆಗೆ ಹೋಗುತ್ತಾರೆ. ಮೊದಲೇ ಕೊಯ್ಲಿಗೆಂದು ನಿಗದಿಪಡಿಸಿದ ಗದ್ದೆಯಲ್ಲಿ ಕುಟುಂಬದ ಹಿರಿಯ ಭತ್ತದ ಪೈರುಗಳಿಗೆ ಪೂಜಿಸಿ ಹಣ್ಣು, ಕಾಯಿ, ಹಾಲು, ಜೇನುಗಳನ್ನು ಸಮರ್ಪಿಸುತ್ತಾರೆ. ಆ ಬಳಿಕ ‘ಪೊಲಿ ಪೊಲಿಯೇ ದೇವಾ’ ಎಂದು ಏರು ಧ್ವನಿಯಲ್ಲಿ ಕೂಗುತ್ತಾ ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕೊಯ್ಯುತ್ತಾರೆ. ನಂತರ ಹೊಸ ಬೆಳೆಯನ್ನು ತಂದು ಮನೆ ತುಂಬಿಕೊಳ್ಳುವ ವಿಧಿವತ್ತಾದ ಆಚರಣೆ ನಡೆಯುತ್ತದೆ. ಇದೇ ಹುತ್ತರಿ ಹಬ್ಬದ ಪ್ರಮುಖ ಆಚರಣೆ.

ಸಾಂಪ್ರದಾಯಿಕ ಆಚರಣೆಗಳನ್ನು ನಡೆಸುವ ಹೊಣೆ ಪುರುಷರದು. ಮಹಿಳೆಯರು ವೈವಿಧ್ಯಮಯ ಅಡುಗೆ ಮಾಡುವ ಜವಾಬ್ದಾರಿ ಹೊರುತ್ತಾರೆ. ರಾತ್ರಿ ಸಮಯದ ಪರಿವೆ ಇಲ್ಲದೇ ವಿಶೇಷ ಊಟೋಪಚಾರಗಳು ನಡೆಯುತ್ತವೆ. ಹುತ್ತರಿಯ ಅಡುಗೆ ವಿಶೇಷವಾಗಿರುತ್ತದೆ. ಬಾಳೆಹಣ್ಣಿನಿಂದ ತಯಾರಿಸಿದ ತಂಬಿಟ್ಟು, ಘಮಘಮಿಸುವ ಏಲಕ್ಕಿ ಪುಟ್, ಆಗತಾನೇ ಗದ್ದೆಯಿಂದ ಕುಯ್ದು ತಂದ ಭತ್ತದಿಂದ ಅಕ್ಕಿ ಮಾಡಿ ಅದರಿಂದ   ಪಾಯಸ ಇತ್ಯಾದಿ ತಿನಿಸುಗಳನ್ನು ಮಾಡುತ್ತಾರೆ. 

ಪಾಯಸಕ್ಕೆ ಐದಾರು ಅತ್ಯಂತ ಸಣ್ಣ ಕಲ್ಲಿನ ಚೂರುಗಳನ್ನು ಸೇರಿಸುತ್ತಾರೆ. ಅದೂ ಒಂದು ಸಂಪ್ರದಾಯ. ಪಾಯಸ ತಿನ್ನುವಾಗ ಕಲ್ಲಿನ ಹರಳು ಸಿಕ್ಕಿದವರು ಕಲ್ಲಾಯುಷ್ಯ ಅಂದರೆ ದೀರ್ಘ ಆಯುಷ್ಯ ಪಡೆಯುತ್ತಾರೆ ಎಂಬ ನಂಬಿಕೆ ಇದೆ.

ಹಬ್ಬದ ದಿನಗಳಲ್ಲಿ ‘ಮಂದ್’ ಎಂಬ ಹೆಸರಿನಿಂದ ಕರೆಯುವ ಊರ ಆಟದ ಬಯಲಿನಲ್ಲಿ ಜನಪದ ಗೀತೆಗಳನ್ನು ಹಾಡುತ್ತಾ ನರ್ತಿಸುವ ಕಾರ್ಯಕ್ರಮಗಳು ಇಡೀ ಕೊಡಗಿನ ಉದ್ದಗಲದಲ್ಲಿ ನಡೆಯುತ್ತಿದ್ದವು. ಕೈಗಳಲ್ಲಿ ಬೆತ್ತದ ಕೋಲುಗಳನ್ನು ಹಿಡಿದು ವಿವಿಧ ಭಂಗಿಗಳಲ್ಲಿ ಕ್ರಮಬದ್ಧವಾಗಿ ಬೀಸುತ್ತಾ ಕುಣಿಯುವ ಕೋಲಾಟ ‘ಹುತ್ತರಿ ಕೋಲಾಟ’ ಎಂದೇ ಪ್ರಸಿದ್ಧಿ ಪಡೆದಿದೆ. ಕೊಡಗಿನ ನೃತ್ಯಗಳಲ್ಲಿ ಇದು ಅತ್ಯಂತ ಜನಪ್ರಿಯ.‘ಉಮ್ಮತ್ತಾಟ್’ ನೃತ್ಯ ಹುತ್ತರಿ ಸಂದರ್ಭದ ಮತ್ತೊಂದು ಆಕರ್ಷಣೆ.

ಗ್ರಾಮೀಣ ಸಂಸ್ಕೃತಿಯನ್ನು ಸಂಕೇತಿಸುವ  ಸಂಪ್ರದಾಯಗಳು, ಶೌರ್ಯ, ಪರಾಕ್ರಮ, ಸಂಸ್ಕೃತಿಗಳ ಪ್ರತೀಕವಾದ ಪರಿಯಕಳಿ, ಉಮ್ಮತ್ತಾಟ್, ಬೊಳಕಾಟ್, ಹುತ್ತರಿ ಕೋಲಟ್ ಮುಂತಾದ ಕ್ರೀಡೆ, ಕುಣಿತಗಳು ಹುತ್ತರಿ ಸಂಭ್ರಮಗಳಲ್ಲಿ ಸೇರಿವೆ

Tag: Huthari, Puthari

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ