ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ. ಸುಶೀಲ


 ಪಿ. ಸುಶೀಲ


ನಮ್ಮ ದೇಶದ ಮಹಾನ್ ಗಾಯಕಿಯರಲ್ಲಿ ಪಿ.ಸುಶೀಲ ಪ್ರಮುಖರು. ಕಳೆದ 70 ವರ್ಷಗಳಲ್ಲಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಒರಿಯಾ, ಸಂಸ್ಕೃತ, ತುಳು, ಸಿಂಹಳಿ ಮುಂತಾದ ಅನೇಕ ಭಾಷೆಗಳಲ್ಲಿ ಸಂಗೀತ ಪ್ರಿಯರ ಹೃದಯವನ್ನು ಸೂರೆಗೊಂಡಿದ್ದಾರೆ.  

ಸುಶೀಲ 1935ರ ನವೆಂಬರ್ 13ರಂದು ಆಂಧ್ರ ಪ್ರದೇಶದ ವಿಜಯನಗರಂ ಎಂಬಲ್ಲಿ ಜನಿಸಿದರು.  ಓದಿದ್ದು ಎಂಟನೇ ತರಗತಿಯವರೆಗೆ ಮಾತ್ರ.  ಮುಂದೆ ವಿಜಯನಗರಂನಲ್ಲಿನ  ಸಂಗೀತ ಕಾಲೇಜಿನಲ್ಲಿ   ಡಿಪ್ಲೋಮಾ ಪದವಿಯನ್ನು ಪಡೆದರು.  ನಂತರದಲ್ಲಿ  ಮದರಾಸಿನ ಸಂಗೀತ ಅಕಾಡೆಮಿಯಲ್ಲಿ ಸುಬ್ರಮಣಿ ಅಯ್ಯರ್ ಅವರ ಮಾರ್ಗದರ್ಶನದಲ್ಲಿ ಸಂಗೀತದಲ್ಲಿ ಪದವೀಧರೆ ಕೂಡ ಆದರು.  ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರ ಬಳಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದರು.  

1951ರ ವರ್ಷದಲ್ಲಿ ಚಲನಚಿತ್ರರಂಗದಲ್ಲಿ ಪ್ರಸಿದ್ಧರಾದ ಪೆಂಡ್ಯಾಲ ನಾಗೇಶ್ವರರಾಯರು ಹೊಸ ಗಾಯಕಿಯರ ತಲಾಶೆಯಲ್ಲಿದ್ದು ಪಿ.ಸುಶೀಲ ಅವರನ್ನು  ಅಂದಿನ ಪ್ರಖ್ಯಾತ ಗಾಯಕ ಎ. ರಾಜಾ ಅವರೊಡನೆ ‘ಪೆತ್ರ ತಾಯ್’ ಚಿತ್ರಕ್ಕೆ ಯುಗಳ ಗೀತೆ ಹಾಡಲು ಆಯ್ಕೆ ಮಾಡಿದರು.  ಅಂದಿನಿಂದ ಇತ್ತೀಚಿನ ವರ್ಷಗಳವರೆಗೆ ಸುಶೀಲ ಅವರು ತಮ್ಮ  ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದ  ಸಾಧನೆ ಅಮೋಘವಾದದ್ದು.  ಪಿ. ಸುಶೀಲ ಅವರು ಚಿತ್ರರಂಗದ ಗಾಯಕಿಯಾಗಿ ಬಂದಾಗ  ಪಿ. ಲೀಲಾ, ಜಿಕ್ಕಿ, ಎಂ. ಎಸ್. ರಾಜೇಶ್ವರಿ, ಜಮುನಾ ರಾಣಿ, ಎಂ. ಎಲ್. ವಸಂತಕುಮಾರಿ, ಡಿ. ಕೆ. ಪಟ್ಟಮ್ಮಾಳ್, ಟಿ. ವಿ. ರತ್ನಂ, ರಾಧಾ ಜಯಲಕ್ಷ್ಮಿ, ಸೋಲಮಂಗಲಂ ರಾಜಲಕ್ಷ್ಮಿ, ಬಾಲಸರಸ್ವತಿ ದೇವಿ, ಎ. ಪಿ. ಕೋಮಲ, ಕೆ. ರಾಣಿ ಅಂತಹ ಬಹಳಷ್ಟು ಗಾಯಕಿಯರು ಚಿತ್ರರಂಗದಲ್ಲಿದ್ದರು.  ಇಂತಹ ಮಹಾನ್ ಗಾಯಕಿಯರ ಮಧ್ಯೆ ಸಹಾ ತಮ್ಮ ಗಾಯನದ ಮೂಲಕ ವಿಶೇಷ ಛಾಪನ್ನು ಮೂಡಿಸಿ ಏಳು ದಶಕಗಳ ಕಾಲ  ದಕ್ಷಿಣ ಭಾರತದ ಚಲನಚಿತ್ರ ಸಂಗೀತ ಲೋಕದಲ್ಲಿ ಸಾಮ್ರಾಜ್ಞಿಯಾಗಿ ಕಂಗೊಳಿಸಿದ್ದಾರೆ.  ಅಷ್ಟೊಂದು ಬಾಷೆಗಳಲ್ಲಿ ಹಾಡಿದರೂ ಅವರು  ಆಯಾ ಭಾಷೆಗಳಿಗೆ ಬೇಕಾದ ಭಾವ, ಸುಸ್ಪಷ್ಟ ಉಚ್ಚಾರ ಮತ್ತು ಮೂಡಿಸುವ ಜೇನಿನಂತ ಸವಿ ಇಂಪು ಅನನ್ಯ.  ಇದಕ್ಕೆ ಉದಾಹರಣೆಯಾಗಿ ‘ನಿನ್ನ ಕಣ್ಣ ಕನ್ನಡಿಯಲ್ಲಿ ಏನೋ ಏನೋ ಭಾವ’, ‘ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲಿ’, ‘ಹೂವೂ ಚೆಲುವೆಲ್ಲಾ ನಂದೆಂದಿತು’, ‘ದಯವಿಲ್ಲದ ಧರ್ಮವು ಯಾವುದಯ್ಯ’, ‘ವಿರಹಾ ನೂರು ನೂರು ತರಹ’,  ‘ಬಂದೇ ಬರತಾವ ಕಾಲ’  ಅಂತಹ ಅನೇಕ  ಉತ್ಕೃಷ್ಟ ಗೀತೆಗಳು ನೆನಪಿಗೆ ಬರುತ್ತವೆ.

ಈ ಹಾಡುಗಳಷ್ಟೇ ಅಲ್ಲದೆ ಪಿ. ಸುಶೀಲ ಅವರು ಕನ್ನಡದಲ್ಲಿ ಹಾಡಿರುವ ಹಾಡುಗಳನ್ನು ನೆನೆಯುತ್ತಾ ಹೋದಂತೆ ಒಂದಕ್ಕಿಂತ ಒಂದು ಸೊಗಸಾದ ಗಾನಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ.  ‘ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ’, ‘ಮೆಲ್ಲುಸಿರೀ ಸವಿ ಗಾನ’, ‘ಜಲಲ ಜಲಲ ಜಲ ಧಾರೆ’, ’ನುಡಿಮನ ಶಿವಗುಣ ಸಂಕೀರ್ತನ’, ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು’, ‘ಸುರಸುಂದರಾಂಗ ಕೃಷ್ಣ ನೀ ಬಾರೋ’, ‘ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ’, ‘ಇದೇನ ಸಭ್ಯತೆ ಇದೇನ ಸಂಸ್ಕೃತಿ’, ‘ಅಂದದೂರು ಬೆಂಗಳೂರು ಆನಂದದ ತವರೂರು’, ‘ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ’, ’ನೀರಿನಲ್ಲಿ ಅಲೆಯ ಉಂಗುರ’, ‘ನನ್ನವಳು ನನ್ನೆದೆಯ ಹೊನ್ನಾಡನಾಳುವಳು’, ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ‘, ‘ಹಕ್ಕಿ ಹಾಡು ಚಿಲಿಪಿಲಿ ರಾಗ’, ‘ದೋಣಿಯೊಳಗೆ ನೀನು’, ‘ಉಂಡಾಡಬಹುದು ಓಡಿ ಬಾ ಎನ್ನಪ್ಪ’,  ‘ಫಲಿಸಿತು ಒಲವಿನ ಪೂಜಾ ಫಲ’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ’, ‘ವೆಂಕಟಾಚಲವಾಸ ಹೇ ಶ್ರೀನಿವಾಸ’, ‘ತಿರುಪತಿ ಗಿರಿವಾಸ ಶ್ರೀವೆಂಕಟೇಶ’, ‘ನನ್ನ ಪುಟ್ಟ ಸಂಸಾರ ಲೋಕದಿಂದ ಬಹು ದೂರ’, ‘ಕರ್ಪೂರದ ಬೊಂಬೆ ನಾನು’, ‘ಕಥೆ ಹೇಳುವೆ ನನ್ನ ಕಥೆ ಹೇಳುವೆ’, ’ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು’, ‘ಸಂತೋಷ ಆಹಾ ಓಹೋ’, ‘ಅರೆರೆರೆ ಗಿಣಿ ರಾಮ’, ‘ಓ ನಲ್ಲನೆ ಸವಿ ಮಾತೊಂದ ನುಡಿವೆಯಾ’ ಹೀಗೆ ನೂರಾರು ಸಂಖ್ಯೆಯ ಹಾಡುಗಳನ್ನು ಬರೆಯುತ್ತಲೇ ಇರಬಹುದು.

ಸುಮಾರು 40,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಪಿ. ಸುಶೀಲ ಅವರು ಲತಾ ಮಂಗೇಶ್ಕರ್ ಅವರ ಅಭಿಮಾನಿ ಮತ್ತು ಗೆಳತಿ.  ಪ್ರಾರಂಭದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ಹಾಡಿದರೂ ನಂತರದಲ್ಲಿ ಲತಾ ಅವರು ಇರುವಾಗ ಹಿಂದಿ ಚಿತ್ರರಂಗಕ್ಕೆ ನನ್ನ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಅಲ್ಲಿನ ಅವಕಾಶಗಳ ಹಿಂದೆ ಹೋಗಲಿಲ್ಲ ಎನ್ನುತ್ತಾರೆ.  ಇಂದಿನ ದಿನಗಳ ಬಿರುಸಿನ ಗತಿಯ ಹಾಡುಗಳ ಬಗ್ಗೆ ಕೂಡ, ಕಾಲದ ಬದಲಾವಣೆ ಜೊತೆ ಸಂಗೀತ ಬದಲಾಗುವುದರಲ್ಲಿ ತಪ್ಪೇನಿದೆ ಎಂಬ ವಿಶಾಲ ಮನೋಭಾವನೆ ಅವರಲ್ಲಿದೆ.  ಅವರ ಸೊಸೆ ಸಂಧ್ಯಾ ಅವರು ಚಲನಚಿತ್ರರಂಗದ ಪ್ರಮುಖ ಗಾಯಕಿಯಾಗಿದ್ದಾರೆ.   

ಹಲವು ಬಾರಿ ರಾಷ್ಟ್ರಮಟ್ಟದ, ವಿವಿಧ ರಾಜ್ಯಗಳ ಪ್ರಶಸ್ತಿಗಳನ್ನು ಪಡೆದಿರುವ ಪಿ.ಸುಶೀಲ ಅವರು ಪದ್ಮಭೂಷಣ ಪ್ರಶಸ್ತಿ ಕೂಡ ಪಡೆದಿದ್ದಾರೆ.  ನಮ್ಮ ಕಾಲದ ಮಹಾನ್ ಗಾಯಕರಾದ ಪಿ.ಸುಶೀಲ ಅವರಿಗೆ ನಮ್ಮ ಆತ್ಮೀಯ ಶುಭಾಶಯಗಳನ್ನೂ ಗೌರವಗಳನ್ನೂ ಅರ್ಪಿಸೋಣ.

On the birthday of our great playback singer P. Susheela 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ