ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ಸಿ. ಐರಸಂಗ


 ವಿ. ಸಿ. ಐರಸಂಗ 


ವೀರಭದ್ರಪ್ಪ ಚನ್ನಪ್ಪ ಐರಸಂಗರು ಪ್ರಸಿದ್ಧ ಆಶುಕವಿ. ಇಂದು ಅವರ ಸಂಸ್ಮರಣಾ ದಿನ. 

ಸಾವಿರಾರು ಆಶುಕವಿತೆಗಳನ್ನು ಬರೆದಿದ್ದ  ಐರಸಂಗರು, ಅವುಗಳನ್ನು ಪುಟ್ಟ ಪ್ಯಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟು ಮಾರುತ್ತಿದ್ದರು. ಇವರ ಕವಿತೆಗಳನ್ನು ಧಾರವಾಡ ಆಕಾಶವಾಣಿ ಆಗಾಗ ಪ್ರಸಾರ ಮಾಡುತ್ತಲೇ ಇತ್ತು. ಅತ್ಯಂತ ಸರಳ ಜೀವಿಯಾಗಿದ್ದ ಐರಸಂಗರು ಇಳಿ ವಯಸ್ಸಿನಲ್ಲೂ ಮಲ್ಲಕಂಬ ಪಟುವಾಗಿದ್ದರು, ನಿತ್ಯ ಸೈಕಲ್ ಓಡಿಸುವುದು, ಈಜುವ ಹವ್ಯಾಸ ಹೊಂದಿದ್ದರು. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

ಜೀವನ ಸಾಗಿಸುವುದೇ ಸವಾಲು, ಇನ್ನು ಅದನ್ನು ಪ್ರೀತಿಸುವುದಾದರೂ ಎಂತು? ಬಾನುಲಿ ಕವಿ ಖ್ಯಾತಿಯ ವಿ.ಸಿ ಐರಸಂಗರು ಜೀವನಪ್ರೀತಿಗೊಂದು ನಿದರ್ಶನ ವಾಗಿದ್ದರು.

ಹಳೆಯದೊಂದು ಅಟ್ಲಾಸ್ ಸೈಕಲ್ಲು, ಹೆಗಲಿಗೊಂದು ಜೋಳಿಗೆ, ಅದರಲ್ಲಿ, ಅವರೇ ಬರೆದು ಪ್ರಕಟಿಸಿದ ಕವನ ಸಂಕಲನಗಳು. ಧಾರವಾಡದ ಉಬ್ಬು ತಗ್ಗುಗಳ ರಸ್ತೆಗಳಿಗೆ ಬಗ್ಗದೆ, ಸೈಕಲ್ ತುಳಿಯುತ್ತ ಸಾಗುವ ಸರಳ ವ್ಯಕ್ತಿಯ‍ ಅವರ  ’ಜೀವನ ಪ್ರೀತಿ’ ಅನನ್ಯವಾಗಿತ್ತು.

ಅವರು ಧಾರವಾಡ ಏಲಕ್ಕಿ ಶೆಟ್ಟರ ಕಾಲನಿಯಲ್ಲಿರುವ ಮಗಳ ಮನೆಯಲ್ಲಿ ವಾಸವಿದ್ದರು. ಐರಸಂಗ ಕಾಕಾ ಎಂದೇ ಪರಿಚಿತರಾಗಿದ್ದು  2500ಕ್ಕಿಂತಲೂ ಹೆಚ್ಚು ಕವನಗಳನ್ನು ಬರೆದಿದ್ದ ಅವರೊಬ್ಬ ’ಕಾವ್ಯಸಂತ’ರೆನಿಸಿದ್ದರು. ಮಾರುತಿ ಪ್ರಕಾಶನವೆಂಬ ಸಂಸ್ಥೆಯನ್ನು ಹುಟ್ಟು ಹಾಕಿ 35ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಹೊರ ತಂದ  ಅವರು, 6 ದಶಕಗಳ ಕಾಲ ಕಾವ್ಯಕೃಷಿಯಲ್ಲೇ ಬದುಕು ಸವೆಸಿದ ಅಪರೂಪದ ಜೀವಿ. 

ಐರಸಂಗರು ಆಕಾಶವಾಣಿಯ ಭಾವಸಂಗಮದ ಹಾಡುಗಳಿಂದ ಎಲ್ಲರ ಮನೆ ಮಾತಾದರು. 1947ರಲ್ಲಿ ಬರೆದ ’ಸುಪ್ರಭಾತ’ ಅವರ ಮೊದಲ ಕವನ ಸಂಕಲನ. ಅವರ ಮನೆಯಲ್ಲಿ ನಡೆಯುತ್ತಿದ್ದ ಪೂಜೆ, ಭಜನೆಗಳೇ ಅವರ ಕಾವ್ಯಕ್ಕೆ ಸ್ಫೂರ್ತಿಯಾಯ್ತು. ರಾಗ, ಲಯ, ತಾಳಗಳ ಅರಿವಿದ್ದವನು ನೈಜ ಕವಿ. ಕಾವ್ಯ ವ್ಯಾಕರಣವನ್ನು ಒಳಗೊಂಡಿರಬೇಕು. ಕಾವ್ಯಕ್ಕೆ ಸಂಗೀತ ಬೆಸೆದಾಗ ಭಾವ ಸ್ಫುರಣ ಇಮ್ಮಡಿಯಾಗುತ್ತದೆ. ಷಟ್ಪದಿ, ಛಂದಸ್ಸುಗಳ ಪರಿಚಯವಿಲ್ಲದವನು ಉತ್ಕೃಷ್ಟ ಕಾವ್ಯ ರಚಿಸಲಾರ ಎಂಬುದು ಅವರ ಅಭಿಪ್ರಾಯವಾಗಿತ್ತು. ಕಾವ್ಯ ಅನುಭವದ ರಸಪಾಕವಾಗಿರಬೇಕು. ಬರೆಯಬೇಕೆಂದೇ ಬರೆಯಬಾರದು. ಭಾವಗಳು ಜೀವತಳೆದಾಗ ರೂಪುಗೊಳ್ಳುವ ಕಾವ್ಯ ಸತ್ವಯುತವಾಗಿರಲು ಸಾಧ್ಯ. ಒಂದೆರಡು ಸಂಕಲನ ಹೊರತಂದು ಕವಿ ಎಂದು ಬೀಗುವವರಿಗೆ ಕಡಿಮೆ ಏನಿಲ್ಲ. ಆದರೆ ಹೇಳಿಕೊಳ್ಳುವವರೆಲ್ಲ ಕವಿಗಳಲ್ಲ ಎನ್ನುತ್ತಿದ್ದರು ಐರಸಂಗರು.

ದೇಶಭಕ್ತಿ, ನಾಡಗೀತೆ, ಪೌರಾಣಿಕ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ, ಮಕ್ಕಳ ಸಾಹಿತ್ಯ ಹೀಗೇ ವೈವಿಧ್ಯಮಯ ವಿಷಯಗಳ ಕುರಿತು ಕಾವ್ಯ ಸೃಷ್ಟಿಸಿದ್ದು ಐರಸಂಗರ ವೈಶಿಷ್ಟ್ಯ. ಧಾರವಾಡ ಬಾನುಲಿಯಲ್ಲಿ ಇವರ ಕಾವ್ಯಧಾರೆ ಪ್ರಸಿದ್ಧಿ ಪಡೆದಿತ್ತು.

ಪಂ.ಮಾಧವ ಗುಡಿ, ಬಾಲಚಂದ್ರ ನಾಕೋಡ, ಸಂಗೀತಾ ಕಟ್ಟಿ, ಪರಮೇಶ್ವರ ಹೆಗಡೆ ಮುಂತಾದವರು ಐರಸಂಗರ ಕಾವ್ಯಕ್ಕೆ ದ್ವನಿಯಾಗಿದ್ದಾರೆ.

ಮಕ್ಕಳಿಗೆ ಉಚಿತ ಪಾಠವನ್ನೂ ಐರಸಂಗ ಹೇಳುತ್ತಿದ್ದರು. ಸಂಗೀತ ಸಂಯೋಜನೆ, ತಬಲಾ ವಾದನ, ಸೈಕಲ್ ಹಾಗೂ ಗಡಿಯಾರ ರಿಪೇರಿ ಅವರ ಕಾವ್ಯಬದಿಯ ಹವ್ಯಾಸಗಳು. ಅವರಿಗೆ ಐಷಾರಾಮಿ ಜೀವನದ ಹಂಗಿರಲಿಲ್ಲ. ಕಾವ್ಯ ಶ್ರೀಮಂತಿಕೆ, ಭಾವ ಶ್ರೀಮಂತಿಕೆ, ಹೃದಯ ಶ್ರೀಮಂತಿಕೆಯೇ ಅವರ ಅಮೂಲ್ಯ ಸಂಪತ್ತಾಗಿತ್ತು. ಅಪ್ಪಟ ಸೀದಾ ಸಾದಾ ಮನುಷ್ಯರಾಗಿದ್ದರು.

ದಿವಂಗತ ಶತಾಯುಷಿ ನಾಡೋಜ  ಪಾಟೀಲ್ ಪುಟ್ಟಪ್ಪ ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಲವು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಯಾರ್‍ಯಾರಿಗೋ ಡಾಕ್ಟರೇಟ್ ಕೊಡ್ತೀರಿ. ನೈಜ ಕವಿ ಐರಸಂಗ ಅವರಿಗೆ ಯಾಕೆ ಕೊಡುವುದಿಲ್ಲ? ಕಾವ್ಯದ ಜೀವಾಳವಾದ ಬದ್ಧತೆ ಅವರ ಕಾವ್ಯದಲ್ಲಿ ತುಂಬಿಕೊಂಡಿದೆ. ಅವರನ್ನು ನಿರ್ಲಕ್ಷಿಸುವುದು ತರವಲ್ಲ ಎಂದು ನುಡಿದಿದ್ದರು. ಪಾಪು ಅವರ ಮಾತು ವ್ಯರ್ಥವಾಗಲಿಲ್ಲ. ಐರಸಂಗರಿಗೆ 2017ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಸಂದಿತು.

ಐರಸಂಗರು 2020 ನವೆಂಬರ್ 13ರಂದು  ನಿಧನರಾದರು.‍ 

ಎಲ್ಲವೂ ಬರುತ್ತದೆ.  ಸಾವು ಕೂಡಾ.  ಈ ಕವಿವರ್ಯನನ್ನು ಅರಸಿ ಕಾಲನೂ ಬಂದ.  ಅಲ್ಲಿಯವರೆಗೆ ಬದುಕಿನ ಸೈಕಲ್ ಬಂಡಿಯನ್ನು ಸಮತೋಲನದಲ್ಲಿ ತುಳಿಯುತ್ತ ಸಾಗಬೇಕಷ್ಟೇ.  ಹಾಗೆ ಸಾಗುವಾಗ ಎದುರುಗೊಳ್ಳುವ ತಂಗಾಳಿ ತರುವ ತಂಪಿನ ಬೀಸು ಮತ್ತು ಇಂಪಿನ ಸುಂಯ್‍ಗುಟ್ಟುವಿಕೆಯೇ ಸವಿಬದುಕಿನ ಗುಟ್ಟು.  ಬಹುಶಃ ಇದೇ ಬುವಿಯಲ್ಲಿದ್ದರೂ ಅನಂತತೆಯಲ್ಲಿದ್ದ ಐರಸಂಗರ ಬದುಕಿನ ಪರಸಂಗ.

On Remembrance Day of poet Airasangha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ