ವಿಜ್ಞಾನ ಪರಿಷತ್ತು
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಸದುದ್ದೇಶದಿಂದ 1980ರಲ್ಲಿ ಸ್ಥಾಪನೆಗೊಂಡಿರುವ ರಾಜ್ಯಮಟ್ಟದ ಸ್ವಾಯತ್ತ ಸಂಸ್ಥೆ. ಅದಕ್ಕೀಗ 44 ವರ್ಷ ತುಂಬಿದೆ.
ಸಮಾಜದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಶ್ರೇಷ್ಠ ಸಾಂಸ್ಥಿಕ ಪ್ರಯತ್ನಕ್ಕೆ ಮೀಸಲಾದ ಭಾರತ ಸರ್ಕಾರದ ಪ್ರಥಮ ರಾಷ್ಟ್ರೀಯ ಪ್ರಶಸ್ತಿಯನ್ನು 1988ರಲ್ಲಿ ಹಾಗೂ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯಿಂದ ನೀಡಲಾಗುವ 2010-11ರ ಪರಿಸರ ಪ್ರಶಸ್ತಿಯನ್ನು ಕರ್ನಾಟಕ ವಿಜ್ಞಾನ ಪರಿಷತ್ತು ತನ್ನದಾಗಿಸಿಕೊಂಡಿದೆ.
ಸಮಾಜದ ವಿವಿಧ ಸ್ಥರಗಳಲ್ಲಿ ವೈಜ್ಞಾನಿಕ ಚಿಂತನೆ, ವಿಜ್ಞಾನ-ಸಾಕ್ಷರತೆ, ಗ್ರಾಮೀಣ ಪ್ರದೇಶಗಳಲ್ಲಿನ ಮೌಢ್ಯಗಳ ನಿವಾರಣೆಗೆ ಶ್ರಮಿಸುವುದು, ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಮುಂತಾದ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಕರ್ನಾಟಕ ವಿಜ್ಞಾನ ಪರಿಷತ್ತು ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಭಾರತರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಧಾನ ಪೋಷಕರಾಗಿದ್ದಾರೆ.
ಕರ್ನಾಟಕ ವಿಜ್ಞಾನ ಪರಿಷತ್ತು ಇದುವರೆವಿಗೂ ಸುಮಾರು 150 ಕೃತಿಗಳನ್ನು ಪ್ರಕಟಿಸಿದೆ. ಪ್ರಾರಂಭದಿಂದ ಪ್ರಕಟಗೊಳ್ಳುತ್ತಿರುವ 'ಬಾಲವಿಜ್ಞಾನ’ ಮಾಸಪತ್ರಿಕೆ ವಿಜ್ಞಾನ ಪರಿಷತ್ತಿನ ಹೆಮ್ಮೆಯ ಮಾಸಪತ್ರಿಕೆಯಾಗಿದೆ. ಅನೇಕ ರೀತಿಯ ಶ್ರವ್ಯ ದೃಶ್ಯ ಸಾಧನಗಳನ್ನು ಸಹಾ ತಯಾರಿಸಿ ವಿತರಿಸುತ್ತಿದೆ. ಅನೇಕ ವಿಜ್ಞಾನ ಕಾರ್ಯಗಾರ, ಸಮಾವೇಶಗಳು ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮುಂತಾದ ಅನೇಕ ಚಟುವಟಿಕೆಗಳನ್ನು ನಿರಂತರ ನಡೆಸುತ್ತಾ ಸಾಗಿದೆ.
ಕನ್ನಡ ನಾಡಿನ ಈ ಹೆಮ್ಮೆಯ ಸಂಸ್ಥೆ ನಿರಂತರವಾಗಿ ಮುನ್ನಡೆಯುತ್ತಿರಲಿ ಎಂದು ಶುಭ ಹಾರೈಸೋಣ.
Karnataka Rajya Vijnana Parishat

ಕಾಮೆಂಟ್‌ಗಳು