ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರತ್ನಾಕರವರ್ಣಿ


 ರತ್ನಾಕರವರ್ಣಿ


ರತ್ನಾಕರವರ್ಣಿ 16ನೆಯ ಶತಮಾನದ ಮಹಾನ್ ಕವಿ

ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ರತ್ನಾಕರವರ್ಣಿ ಭರತೇಶವೈಭವ, ತ್ರಿಲೋಕಶತಕ, ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರಶತಕ ಎಂಬ ಗ್ರಂಥಗಳನ್ನು ರಚಿಸಿದ. ಇವನಿಗೆ ರತ್ನಾಕರ. ರತ್ನಾಕರಅಣ್ಣ, ರತ್ನಾಕರಸಿದ್ಧ ಎಂಬ ಹೆಸರುಗಳೂ ಇದ್ದು ತನಗೆ ರತ್ನಾಕರಸಿದ್ಧ ಎಂಬ ಹೆಸರು ಅತ್ಯಂತ ಮೆಚ್ಚುಗೆಯಾದುದೆಂದು ಹೇಳಿಕೊಂಡಿದ್ದಾನೆ. ಚಾರುಕೀರ್ತಿ ಆಚಾರ್ಯ ಇವನ ದೀಕ್ಷಾಗುರು. ಹಂಸನಾಥ ಮೋಕ್ಷಗುರು.

ರತ್ನಾಕರವರ್ಣಿ ತನ್ನ ಕಾವ್ಯಗಳಲ್ಲಿ ಸ್ವಂತ ಜೀವಿತಕ್ಕೆ ಸಂಬಂಧಿಸಿದ ಯಾವ ವಿವರಗಳನ್ನೂ ಹೇಳಿಲ್ಲ. ದೇವಚಂದ್ರ (1770-1841) ತನ್ನ ರಾಜಾವಳೀಕಥೆಯಲ್ಲಿ ರತ್ನಾಕರವರ್ಣಿಯ ಬಗ್ಗೆ ಕೆಲವು ವಿವರಗಳನ್ನು ಕೊಟ್ಟಿದ್ದಾನೆ. 
ಆತನ ಹೇಳಿಕೆಯ ಪ್ರಕಾರ ರತ್ನಾಕರವರ್ಣಿ ಸೂರ್ಯವಂಶಕ್ಕೆ ಸೇರಿದವನು. ಕ್ಷತ್ರಿಯ ಕುಲದವನು. ತುಳುನಾಡಿನವನು, ಮೂಡುಬಿದರೆಯವನು, ದೇವರಾಜನ ಮಗ, ರತ್ನಾಕರಾಧೀಶನೆಂದು ಹೆಸರು. ಬಾಲ್ಯದಲ್ಲಿ ಜೈನಾಗಮಗಳ ಶಿಕ್ಷಣವನ್ನು ಪಡೆದಿದ್ದ. ಕವಿಯಾದ ಮೇಲೆ ತೌಳವ ದೇಶದ ಭೈರರಸ ಒಡೆಯರ ಆಸ್ಥಾನ ಕವಿಯಾಗಿ ಶೃಂಗಾರಕವಿಯೆಂಬ ಪ್ರಶಸ್ತಿ ಪಡೆದ. ಇವನು ಯೋಗಶಾಸ್ತ್ರದಲ್ಲೂ ಕಾವ್ಯಶಾಸ್ತ್ರದಷ್ಟೇ ಪ್ರವೇಶ ಪಡೆದಿದ್ದ. ಕೆಲಕಾಲ ತೆಲುಗು ಭಾಷೆಯ ಪ್ರದೇಶಗಳನ್ನು ಸುತ್ತಿದ್ದ.

ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ.

ಭರತೇಶ ಪ್ರಥಮ ತೀರ್ಥೇಶನ ಹಿರಿಯ ಮಗ. ಮೊದಲ ಚಕ್ರಿ. ಭರತೇಶನ ಚರಿತ್ರೆಯೇ ಭರತೇಶ ವೈಭವ. ಇದರ ಗತಿ ಮತಿ ಆಯು ಉಸಿರು ಹೆಸರು ಎಲ್ಲ ಅವನೆ. ಭರತನ ಸಾರ್ಥಕ ಜೀವನದ ಹಲವು ಪ್ರಮುಖ ಮಜಲುಗಳನ್ನು ಕುರಿತು ಮಾಡಿದ ಕಲಾತ್ಮಕವಾದ ಪಕ್ವವಿಮರ್ಶೆಯಂತೆ ಈ ಕೃತಿ ಮೈಪಡೆದಿದೆ. ಕವಿ ಜೈನವಸ್ತುವನ್ನೂ ವೈದಿಕ ಕಾವ್ಯವಿನ್ಯಾಸದ ಜತೆಗೆ ಜಾನಪದ ಸತ್ತ್ವದ ಉತ್ತಮ ಅಂಶಗಳನ್ನೂ ಬೆಸೆದಿದ್ದಾನೆ.

ಭರತೇಶ‍ವೈಭವದಲ್ಲಿನ ರತ್ನಾಕರನ  ಶಬ್ದಭಂಡಾರ ಅರ್ಥ-ಭಾವ-ನಾದ-ಧ್ವನಿಕೋಶಗಳ ಬೆಡಗಿನಿಂದ ಅಡೆತಡೆಯಿಲ್ಲದೆ ನಿರರ್ಗಳವಾಗಿ ಪುಟಿಯುತ್ತವೆ. ಹಾಗೆಯೇ ಸಾಂಗತ್ಯದ ವಿಲಾಸಮಯ ಸರಳ ಸುಂದರ ಲವಲವಿಕೆಯ ಶೈಲಿ, ದೃಶ್ಯಚಿತ್ರಗಳಿಂದ ಹೃದ್ಯವಾಗಿದೆ.

ಕವಿ ಎಂಥ ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ. ಕಾವ್ಯದಲ್ಲಿ ನೆನಪಿನ ನಾಲಗೆಯ ಮೇಲೆ ಬಹುಕಾಲ ರಸ ಒಸರಿಸುವ ಪರಿಭಾವ್ಯ ಪದ್ಯಗಳು, ಪ್ರಸಂಗಗಳು ಸೂರೆಹೋಗಿವೆ. ಭೋಗವಿಜಯ ಸಂಧಿಗಳು ಭಾವಗೀತೆಗಳಾಗಿ ಮೆಚ್ಚುಗೆಗೆ ಪಾತ್ರವಾಗುತ್ತವೆ. ಲಲಿತ ಶೃಂಗಾರಾದಿ ಕೋಮಲ ಭಾವಗಳು ತಮ್ಮ ಸೂಕ್ಷ್ಮ ಪದರಗಳನ್ನು ಕವಿಯಪಾರದರ್ಶಕ ಶೈಲಿಯಲ್ಲಿ ಸ್ಪುಟವಾಗಿ ತೋರಿಸುತ್ತವೆ.

ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ. ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ. ಭರತೇಶವೈಭವ ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ಮರಾಠಿ ಭಾಷೆಗಳಿಗೆ ಅನುವಾದಗೊಂಡಿರುವುದು ಈ ಕಾವ್ಯದ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. 

ತ್ರಿಲೋಕ ಶತಕ ಜೈನಧರ್ಮಾನುಸಾರವಾಗಿ ಲೋಕಾಕೃತಿಯನ್ನು ತಿಳಿಸುವ ಕೃತಿ. ಅಪರಾಜಿತ ಶತಕ ಮತ್ತು ರತ್ನಾಕರ ಶತಕಗಳು ಭಾವಗೀತಾತ್ಮಕವಾದ ಖಂಡಕಾವ್ಯಗಳು. ಅಚ್ಚಗನ್ನಡದ ಸೊಬಗು ಲಾಲಿತ್ಯಗಳಿಂದ ಭಾವಗೀತೆಯಾಗಿ ಹರಿದ ಇವನ ವೃತ್ತಗಳು ಹೃದಯಸ್ಪರ್ಶೀಯಾಗಿವೆ. ರತ್ನಾಕರ ಶತಕದಲ್ಲಿ 228 ಪದ್ಯಗಳಿದ್ದು ವೈರಾಗ್ಯ, ನೀತಿ, ಆಧ್ಯಾತ್ಮ ವಿಚಾರಗಳು ಬೋಧಪ್ರದವಾಗಿ ಪ್ರತಿಪಾದಿತವಾಗಿವೆ.

ಅಪರಾಜಿತ ಶತಕದಲ್ಲಿ 128 ಪದ್ಯಗಳಿವೆ. ಇದರಲ್ಲಿ ಕವಿಯ ಅಂತರಂಗದಲ್ಲಿ ಸ್ಫುರಿಸಿದ ಭಾವತರಂಗಗಳು ಒಂದರ ಹಿಂದೆ ಒಂದು ಎಂಬಂತೆ ವೀಚಿಗತಿಯಲ್ಲಿ ತೇಲಿಬರುತ್ತವೆ. ಇಲ್ಲಿನ ಲಲಿತವಾದ ಪದಗುಂಫನ ಶ್ರುತಿಮಧುರವಾಗಿದೆ. ವಿಷಯ ನಿರೂಪಣೆ ಸ್ಪುಟವಾಗಿದ್ದು ಅರ್ಥಪೂರ್ಣವಾಗಿದೆ. ಇಲ್ಲಿನ ಬಹುಪಾಲು ಜೀವನವಿವೇಕದ ಮಾತುಗಳು ತನಗೆ ತಾನೆ ಹೇಳಿಕೊಂಡ ಸ್ವಗತಗಳಾಗಿವೆ. 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ